ಶುಕ್ರವಾರ, ಮೇ 29, 2020
27 °C

Explainer | ವಿನಾಶಕ್ಕೆ ಮನುಷ್ಯನೇ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಅನಿಲ ದುರಂತವು ಕೈಗಾರಿಕಾ ಭದ್ರತಾ ಮಾನದಂಡಗಳನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ಕೈಗಾರಿಕೆಗಳು ದೇಶವ್ಯಾಪಿ ವಿಸ್ತರಿಸಿದಂತೆಲ್ಲಾ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಕೆಲವು ದುರ್ಘಟನೆಗಳಿಗೆ ದೇಶ ಸಾಕ್ಷಿಯಾಗಿದೆ. ಜನರು ತಮ್ಮ ಅಮೂಲ್ಯ ಜೀವ ಹಾಗೂ ಜೀವನ ಕಳೆದುಕೊಂಡಿದ್ದಾರೆ.

ದುರಂತಗಳು ಯಾವಾಗಲೂ ದುರದೃಷ್ಟಕರವೇ. ಸಾವು ನೋವು ಮತ್ತು ವರ್ಷಗಳ ಕಠಿಣ ದುಡಿಮೆಯ ಮೂಲಕ ಸೃಷ್ಟಿಯಾದ ಸೊತ್ತಿನ ನಾಶಕ್ಕೆ ಇವು ಕಾರಣವಾಗುತ್ತವೆ. ದಿಢೀರ್‌ ಮತ್ತು ನಾವು ಊಹಿಸದೇ ಇದ್ದ ಸ್ಥಳದಲ್ಲಿ ಘಟಿಸುತ್ತವೆ. ಭೂಕಂಪ, ಪ್ರವಾಹ, ಭೂಕುಸಿತ, ಚಂಡಮಾರುತ, ಅತಿವೃಷ್ಟಿ, ಸುನಾಮಿಯಂತಹ ದುರಂತಗಳು ಇತಿಹಾಸಪೂರ್ವದಿಂದಲೂ ಇದ್ದೇ ಇದ್ದವು. ಇವು ನೈಸರ್ಗಿಕ ಪ್ರಕೋಪಗಳು. ಮನುಷ್ಯ ಕೈಗಾರಿಕೆಯನ್ನು ಶೋಧಿಸುವುದರೊಂದಿಗೆ ಮಾನವ ನಿರ್ಮಿತ ದುರಂತಗಳೂ ಇದಕ್ಕೆ ಸೇರ್ಪಡೆಯಾದವು. ನೈಸರ್ಗಿಕ ದುರಂತಗಳನ್ನು ಮೀರಿಸುವ ರೀತಿಯಲ್ಲಿ ಮಾನವ ನಿರ್ಮಿತ ದುರಂತಗಳು ಜೀವ ಬಲಿ ಪಡೆದಿವೆ. ಮಾನವ ಕುಲವು ಮರೆಯಲು ಸಾಧ್ಯವಾಗದ ರೀತಿಯ ನೋವಿನ ಗುರುತನ್ನು ಉಳಿಸಿ ಹೋಗಿವೆ.

ನೈಸರ್ಗಿಕ ವಿಕೋಪಗಳು ಮನುಷ್ಯನ ನಿಯಂತ್ರಣದಲ್ಲಿ ಇಲ್ಲ. ಹಠಾತ್‌ ಎರಗುವ ಇವುಗಳ ಪರಿಣಾಮವನ್ನು ಅನುಭವಿಸುವುದೊಂದೇ ಮನುಷ್ಯನಿಗೆ ಇರುವ ದಾರಿ. ಮಾನವ ನಿರ್ಮಿತ ದುರಂತಗಳನ್ನು ಕೂಡ ಮೊದಲೇ ಅಂದಾಜಿಸಿ ಸಿದ್ಧರಾಗುವುದಕ್ಕೆ ಅವಕಾಶ ಸಿಗುವುದಿಲ್ಲ. ಹಾಗಿದ್ದರೂ ಇವುಗಳನ್ನು ತಡೆಯಲು ಸಾಧ್ಯ. ಜಾಗರೂಕತೆ ವಹಿಸಿದರೆ ಈ ದುರಂತಗಳನ್ನು ತಪ್ಪಿಸಬಹುದು. ಇಂತಹ ದುರಂತಗಳನ್ನು ತಪ್ಪಿಸಬೇಕು ಕೂಡ. ಯಾಕೆಂದರೆ, ಮಾನವ ನಿರ್ಮಿತ ದುರಂತಗಳು ನೈಸರ್ಗಿಕ ದುರಂತಗಳಂತೆ ಅಲ್ಲ. ಇವು ಹತ್ತಾರು ವರ್ಷ ಮನುಷ್ಯನನ್ನು ಕಾಡುತ್ತಲೇ ಇರಬಲ್ಲವು. ಹಿರೋಷಿಮಾ ನಾಗಾಸಾಕಿಯ ಅಣು ದುರಂತ, ಚೆರ್ನೊಬಿಲ್ ದುರಂತ ಮತ್ತು ನಮ್ಮದೇ ಭೋಪಾಲ್‌ನಲ್ಲಿ ನಡೆದ ವಿಷಾನಿಲ ದುರಂತಗಳು ಇದಕ್ಕೆ ನಿದರ್ಶನಗಳು.

ವಿಷವಾಗುವ ಅನಿಲ
ಮಾನವ ನಿರ್ಮಿತ ಕೈಗಾರಿಕಾ ದುರಂತಗಳಲ್ಲಿ ವಿಷಾನಿಲ ಸೋರಿಕೆಯೇ ಅತಿ ಹೆಚ್ಚು ಅಪಾಯಕಾರಿಯಾದುದು. ಏನಾದರೂ ಮಾಡುವುದಕ್ಕೆ ಇರುವ ಸಮಯ ಮೀರಿದ ಮೇಲೆಯೇ ಇದು ಗಮನಕ್ಕೆ ಬರುತ್ತದೆ ಎಂಬುದೇ ಇದರ ಬಹುದೊಡ್ಡ ಅಪಾಯ. ವಾತಾವರಣದ ಮೂಲಕವೇ ಹರಡುವ ಅನಿಲವು ನೇರವಾಗಿ ಮತ್ತು ಪರೋಕ್ಷವಾಗಿ ಜನರಿಗೆ ವಿಷ ಉಣಿಸುತ್ತದೆ. ವಿಸ್ತಾರ ಪ್ರದೇಶಕ್ಕೆ ಬಹುಬೇಗ ವ್ಯಾಪಿಸಿಬಿಡುತ್ತದೆ. ಆದರೆ, ಕಣ್ಣಿಗೆ ಕಾಣಿಸದೆಯೇ ವ್ಯಾಪಿಸಿ ಬಿಡುವ ಇದು ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಬಹುದು. ಜನರ ಉಸಿರಾಟಕ್ಕೆ ಅಡ್ಡಿ ಮಾಡಿ ಅವರನ್ನು ಸಾಯಿಸಬಲ್ಲುದು. ಅನಿಲದ ಮೇಲಿನ ಜಗತ್ತಿನ ಅವಲಂಬನೆ ಹೆಚ್ಚುತ್ತಲೇ ಇದೆ. ಅನಿಲ ಬಳಕೆಯ ಸಂದರ್ಭದಲ್ಲಿ ಅತಿ ಎಚ್ಚರಿಕೆ ವಹಿಸದೇ ಇದ್ದರೆ ದುರಂತ ಕಟ್ಟಿಟ್ಟ ಬುತ್ತಿ. ಅನಿಲವು ವಿಷಾನಿಲವಾಗುವ ಅಪಾಯದ ಅರಿವು ಇದ್ದರೂ ಜಗತ್ತಿನಲ್ಲಿ ನಡೆದ ಅನಿಲ ದುರಂತಗಳು ಕಡಿಮೆ ಏನಲ್ಲ.

ತೈಲ ಸೋರಿಕೆ
ತೈಲ ಸೋರಿಕೆ ಎಂಬುದು ನಾವು ಆಗೀಗ ಕೇಳುತ್ತಲೇ ಇರುವ ವಿಚಾರ. ಇದು ಜನರಿಗೆ ಮಾತ್ರವಲ್ಲ, ಪ‍ರಿಸರಕ್ಕೂ ಭಾರಿ ಹಾನಿಕಾರಕ. ಪ್ರಾಣಿಗಳೂ ಇದರ ತೊಂದರೆ ಅನುಭವಿಸಬೇಕಾಗುತ್ತದೆ. ಜಾಗತಿಕ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನೂ ಇದು ಬದಲಿಸಬಲ್ಲುದು.

2010ರಲ್ಲಿ ಮೆಕ್ಸಿಕೊ ಕೊಲ್ಲಿಯಲ್ಲಿ ನಡೆದ ತೈಲ ಸೋರಿಕೆಯೇ ಈ ವರೆಗಿನ ಅತಿದೊಡ್ಡ ದುರಂತ. ಬಿ.ಪಿ ತೈಲ ಬಾವಿಯಲ್ಲಿ ನಡೆದ ಈ ತೈಲ ಸ್ಫೋಟವು ತೈಲ ಸಾಗಾಟದ ಕೊಳವೆಯನ್ನು ಒಡೆಯಿತು. ತೈಲ ಬಾವಿಯ ಮೇಲೆ ಮನುಷ್ಯನಿಗೆ ಇದ್ದ ನಿಯಂತ್ರಣ ತಪ್ಪಿ ಹೋಯಿತು. ಸ್ಫೋಟದಲ್ಲಿ 11 ಜನರು ಬಲಿಯಾದರು ಮತ್ತು 17 ಮಂದಿ ಗಾಯಗೊಂಡರು. ಬಾವಿಯಿಂದ ತೈಲವು ನಿರಂತರವಾಗಿ ಸೋರಿಕೆ ಆಗುತ್ತಲೇ ಇತ್ತು. ದಿನವೊಂದಕ್ಕೆ 40 ಸಾವಿರದಿಂದ 1,62,000ದಷ್ಟು ಬ್ಯಾರಲ್‌ನಷ್ಟು ತೈಲವು ಸಮುದ್ರದ ನೀರು ಸೇರುತ್ತಿತ್ತು. ತೈಲ ಬಾವಿಯ ಬಾಯಿ ಮುಚ್ಚಲು ತಂತ್ರಜ್ಞರಿಗೆ ಪೂರ್ತಿ 89 ದಿನಗಳು ಬೇಕಾದವು. ಈ ದುರಂತವು ಪರಿಸರಕ್ಕೆ ಮಾಡಿದ ಹಾನಿ ಎಷ್ಟು ಎಂಬುದನ್ನು ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲ. ಆದರೆ, ಈ ಹಾನಿ ವ್ಯಾಪಕ ಎಂದಷ್ಟೇ ಹೇಳಬಹುದು. ತೈಲ ಸೋರಿಕೆಯಾದ ಕೊಲ್ಲಿಯಲ್ಲಿ ಮೀನುಗಾರಿಕೆ ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಸುತ್ತಲಿನ ಪರಿಸರದಲ್ಲಿ ನಾಶವಾದ ಜೀವಿಗಳಿಗೆ ಲೆಕ್ಕ ಇಲ್ಲ. ಈಗಲೂ ಇಲ್ಲಿನ ನೀರಿನಲ್ಲಿ ತೈಲದ ಅಂಶ ಇದೆ ಎನ್ನಲಾಗುತ್ತಿದೆ. ತೈಲದ ಜತೆ ಸಂಪರ್ಕಕ್ಕೆ ಬಂದ 3,500ಕ್ಕೂ ಹೆಚ್ಚು ಸ್ವಯಂ ಸೇವಕರು ಯಕೃತ್‌ ಮತ್ತು ಮೂತ್ರಕೋಶದ ಸಮಸ್ಯೆಗಳಿಗೆ ಈಡಾಗಿದ್ದಾರೆ.

ಅಣುಸ್ಥಾವರ ಸೋರಿಕೆ
ಅಣು ವಿದ್ಯುತ್‌ ಸ್ವಚ್ಛ ಮತ್ತು ಸುಸ್ಥಿರ ಎಂದು ಹೇಳಲಾಗುತ್ತಿದೆ. ಆದರೆ, ಅಣು ಸ್ಥಾವರವು ಸೋರಿಕೆಯಾದರೆ ಉಂಟಾಗಬಹುದಾದ ಅನಾಹುತ ಮಾತ್ರ ಊಹಾತೀತ, ವ್ಯಾಪಕ.

ಉಕ್ರೇನ್‌ನ ಚೆರ್ನೊಬಿಲ್‌ನಲ್ಲಿ 1986ರಲ್ಲಿ ನಡೆದ ಅಣು ಸ್ಥಾವರ ಸ್ಫೋಟವೇ ಈ ವರೆಗಿನ ಅತಿ ಭೀಕರ ದುರಂತ. ಹಿರೋಷಿಮಾ, ನಾಗಾಸಾಕಿಯಲ್ಲಿ ಅಣುಬಾಂಬ್‌ ಮಾಡಿದ್ದ ಒಟ್ಟು ಅನಾಹುತಕ್ಕಿಂತ ಹೆಚ್ಚಿನದಕ್ಕೆ ಚೆರ್ನೊಬಿಲ್‌ ಸಾಕ್ಷಿಯಾಗಿದೆ. ಸುತ್ತಲಿನ ಪ್ರದೇಶದಿಂದ 3.5 ಲಕ್ಷ ಜನರನ್ನು ತೆರವು ಮಾಡಲಾಗಿತ್ತು. ಸೋರಿಕೆ ನಿಲ್ಲಿಸಲು ಐದು ಲಕ್ಷ ಕಾರ್ಮಿಕರು ಕೆಲಸ ಮಾಡಿದ್ದರು. ಈ ಯತ್ನದಲ್ಲಿ 31 ಮಂದಿ ಜೀವವನ್ನೂ ತೆತ್ತಿದ್ದಾರೆ. ನಿಜವಾದ ವಿನಾಶ ಉಂಟಾಗಿದ್ದು ಸೋರಿಕೆ ನಿಂತ ಬಳಿಕ. ವಿಕಿರಣಕ್ಕೆ ತೆರೆದುಕೊಂಡ ನಾಲ್ಕು ಸಾವಿರ ಜನರು ಪ್ರಾಣ ಬಿಟ್ಟರು. ವಿವಿಧ ರೀತಿಯ ಅನಾರೋಗ್ಯಕ್ಕೆ ತುತ್ತಾದ ಜನರು ಎಷ್ಟು ಎಂಬುದು ಲೆಕ್ಕಕ್ಕೇ ಸಿಕ್ಕಿಲ್ಲ.

ಅಮೆರಿಕದ ಥ್ರೀ ಮೈಲ್‌ ಐಲ್ಯಾಂಡ್‌ ಅಣು ಇಂಧನ ಘಟಕವು 1979ರಲ್ಲಿ ಭಾಗಶಃ ಹಾನಿಯಾಗಿತ್ತು. ಹೆಚ್ಚಿನ ವಿಕಿರಣ ವಾತಾವರಣ ಸೇರದಂತೆ ತಡೆಯುವುದು ಆಗ ಸಾಧ್ಯವಾಗಿತ್ತು. ಸೋಂಕು ತಡೆ ವ್ಯವಸ್ಥೆಯು ಪರಿಣಾಮಕಾರಿಯಾಗಿ ಇದ್ದ ಕಾರಣ ಸೋರಿಕೆಯನ್ನು ಬಹುಬೇಗನೆ ತಡೆಯುವಲ್ಲಿ ತಂತ್ರಜ್ಞರು ಯಶಸ್ವಿಯಾದರು. ಆದರೆ, ಆಗಲೇ ಆಗಿದ್ದ ಸೋರಿಕೆಯ ಪರಿಣಾಮ ಹಲವು ವರ್ಷ ಅಲ್ಲಿ ಕಾಣಿಸಿದೆ. 

ಬೆಂಕಿ ಅವಘಡ
ಅಗ್ನಿ ಆಕಸ್ಮಿಕವು ನೈಸರ್ಗಿಕ ಅಥವಾ ಮನುಷ್ಯನ ಕಾರಣಕ್ಕೆ ಆಗಬಹುದು. ಆದರೆ, ಅನಿಲ ಸೋರಿಕೆಯ ಬೆಂಕಿ ಅಥವಾ ತಾಂತ್ರಿಕ ಸಾಧನಗಳ ಲೋಪದಿಂದ ಆಗುವ ಬೆಂಕಿ ನೈಸರ್ಗಿಕ ಬೆಂಕಿಗಿಂತ ಹೆಚ್ಚಿನ ಅನಾಹುತ ಉಂಟು ಮಾಡಬಲ್ಲುದು. ‌

ಅಮೆರಿಕದ ಕ್ಲೀವ್‌ಲ್ಯಾಂಡ್‌ನಲ್ಲಿ 1944ರಲ್ಲಿ ಅನಿಲ ಸೋರಿಕೆಯಾಗಿ ಭಾರಿ ಬೆಂಕಿಗೆ ಕಾರಣವಾಗಿತ್ತು. ಸೋರಿಕೆಯಾದ ಅನಿಲವು ಒಳಚರಂಡಿಯನ್ನು ಸೇರಿಕೊಂಡಿತ್ತು. ಅಲ್ಲಿ ಅದಕ್ಕೆ ಬೆಂಕಿ ತಗುಲಿತ್ತು. ಪರಿಣಾಮವಾಗಿ, ಮ್ಯಾನ್‌ಹೋಲ್‌ಗಳು ಆಕಾಶದೆತ್ತರಕ್ಕೆ ಸಿಡಿದವು. ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಚಾಚಿಕೊಂಡಿತು. ಮನೆಗಳು ಅಗ್ನಿಗೋಳಗಳಾಗಿ ಪರಿವರ್ತನೆಯಾದವು. 130 ಮಂದಿ ಸತ್ತರು. ಮನೆಯನ್ನೂ ಸೇರಿಸಿ ಇದ್ದಬದ್ದದ್ದನ್ನೆಲ್ಲ ಕಳೆದುಕೊಂಡವರು ಅದೆಷ್ಟೋ ಮಂದಿ.

ಭಾರತದಲ್ಲಿ ಬೆಂಕಿ ಅವಘಡ ಸಾಮಾನ್ಯವಾದ ದುರಂತ. ಆರಿಸದೆ ಬಿಸಾಕಿದ ಸಿಗರೇಟ್‌ ತುಂಡು, ವಿದ್ಯುತ್‌ ಶಾರ್ಟ್‌ ಸರ್ಕಿಟ್‌, ಕೈಗಾರಿಕಾ ಅವಘಡ, ಸಿಲಿಂಡರ್‌ ಸ್ಫೋಟಗಳೆಲ್ಲವೂ ಇಲ್ಲಿ ಘಟಿಸುತ್ತವೆ. ದೆಹಲಿಯ ಉಪಹಾರ್‌ ಸಿನಿಮಾ ಮಂದಿರಲ್ಲಿ 1997ರ ಜೂನ್‌ 13ರಂದು ನಡೆದ ಅಗ್ನಿ ಆಕಸ್ಮಿಕ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಸಿನಿಮಾ ಮಂದಿರದ ಕಟ್ಟಡದ ನೆಲ ಅಂತಸ್ತಿನಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಬೆಂಕಿ ಹೊತ್ತಿ, ಇಡೀ ಕಟ್ಟಡವನ್ನು ವ್ಯಾಪಿಸಿತ್ತು. ‘ಬಾರ್ಡರ್‌’ ಸಿನಿಮಾ ವೀಕ್ಷಿಸುತ್ತಿದ್ದ 59 ಮಂದಿ ಉಸಿರುಗಟ್ಟಿ ಮೃತಪಟ್ಟರೆ 103 ಮಂದಿ ಗಂಭೀರವಾಗಿ ಗಾಯಗೊಂಡರು. ನಿರ್ವಹಣೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ.

ಅಗ್ನಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂಬ ನಿಯಮ ಭಾರತದಲ್ಲಿ ಇದೆ. ಆದರೆ, ಇಂತಹ ಕ್ರಮಗಳನ್ನು ಅನುಸರಿಸದ, ಪ್ರಮಾಣಪತ್ರ ಪಡೆಯದ ದೊಡ್ಡ ಕಟ್ಟಡಗಳು, ಕೈಗಾರಿಕೆಗಳು ನಮ್ಮಲ್ಲಿ ಬಹಳಷ್ಟಿವೆ ಎಂಬುದು ಅವಘಡ ನಡೆದಾಗಲೇ ನಮ್ಮ ಗಮನಕ್ಕೆ ಬರುತ್ತದೆ.

ಉಪಕರಣಗಳ ಸಮರ್ಪಕ ನಿರ್ವಹಣೆ, ಯೋಜಿತ ಕಾರ್ಯನಿರ್ವಹಣೆ, ಕರಾರುವಾಕ್‌ ಸಿದ್ಧತೆ, ಅನಾಹುತ ತಡೆ ಕ್ರಮಗಳ ಕಟ್ಟುನಿಟ್ಟಿನ ಅನುಸರಣೆಯಿಂದ ಬಹುಪಾಲು ದುರಂತಗಳನ್ನು ತಡೆಯಬಹುದು. ಮಾನವ ನಿರ್ಮಿತ ಅವಘಡಗಳಿಗೆ ಈಗ ಕಾರಣಗಳು ಹಲವು. ಹಾಗಾಗಿ, ಮುನ್ನೆಚ್ಚರಿಕೆ ಮಾತ್ರ ಇವುಗಳನ್ನು ತಡೆಯುವುದಕ್ಕೆ ಇರುವ ಏಕೈಕ ದಾರಿ.

ಭೋಪಾಲ್‌ ದುರಂತ: ಇನ್ನೂ ಮಾಸಿಲ್ಲ ನೋವು
ಭೋಪಾಲ್ ಅನಿಲ ದುರಂತಕ್ಕೆ 2020ರ ಡಿಸೆಂಬರ್‌ನಲ್ಲಿ 36 ವರ್ಷ ತುಂಬಲಿದೆ. ಜಗತ್ತಿನ ಅತ್ಯಂತ ದೊಡ್ಡ ಕೈಗಾರಿಕಾ ದುರಂತ ಎನಿಸಿರುವ, ಈ ಅವಘಡ ಸಂಭವಿಸಿ 36 ವರ್ಷವಾಗುತ್ತಿದೆ. ಆದರೆ, ಅದರ ಪರಿಣಾಮಗಳು ಈಗಲೂ ತೀವ್ರವಾಗಿವೆ.

1960ರ ದಶಕದಲ್ಲಿ ಹಸಿರುಕ್ರಾಂತಿಯ ಸಲುವಾಗಿ ದೇಶದಲ್ಲಿ ಕೃಷಿಗೆ ಭಾರಿ ಪ್ರಮಾಣದ ಕೀಟನಾಶಕಗಳ ಅವಶ್ಯಕತೆ ಇತ್ತು. ಇದರ ಲಾಭ ಪಡೆದದ್ದು ಅಮೆರಿಕದ ಯುಸಿಸಿ ಕಂಪನಿ. ಅಮೆರಿಕದ ವೆಸ್ಟ್ ವರ್ಜೀನಿಯಾದಲ್ಲಿ ಭಾರಿ ದೊಡ್ಡ ಘಟಕ ಹೊಂದಿದ್ದ ಯುಸಿಸಿ, ಭಾರತದ ಭೋಪಾಲ್‌ನಲ್ಲೂ ಒಂದು ಘಟಕ ಸ್ಥಾಪಿಸಿತ್ತು. ಭೋಪಾಲ್‌ನ ‘ಯುನೈಟೆಡ್ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್’, ಯುಸಿಸಿಯ ಸಹಕಂಪನಿ ಆಗಿತ್ತು.

ಯುನೈಟೆಡ್ ಕಾರ್ಬೈಡ್ ತಯಾರಿಸುತ್ತಿದ್ದ ಎರಡು ಪ್ರಮುಖ ಕೀಟನಾಶಕಗಳಿಗೆ ಮಿಥಿಲ್ ಐಸೋಸೈನೇಟ್‌ (ಎಂಐಸಿ) ಅನಿಲದ ಅವಶ್ಯಕತೆ ಇತ್ತು. ಅತ್ಯಂತ ವಿಷಕಾರಿಯಾಗಿದ್ದ ಈ ಅನಿಲವನ್ನು 1980ರವರೆಗೂ ಆಮದು ಮಾಡಿಕೊಳ್ಳಲಾಗುತ್ತಿತ್ತು. 1980ರ ನಂತರ ಈ ಅನಿಲವನ್ನು ಭೋಪಾಲ್‌ ಘಟಕದಲ್ಲೇ ತಯಾರಿಸಲಾಗುತ್ತಿತ್ತು. ಎಂಐಸಿ ಅನಿಲವನ್ನು ದೊಡ್ಡದೊಡ್ಡ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿತ್ತು. ಸಾಮಾನ್ಯ ಉಷ್ಣಾಂಶದಲ್ಲಿ ಈ ಅನಿಲ ಬಿಸಿಯಾಗಿ, ಟ್ಯಾಂಕ್‌ಗಳ ಒಳಗೆ ಒತ್ತಡ ಹೆಚ್ಚುತ್ತಿತ್ತು. ಹೀಗಾಗಿ ಅನಿಲವನ್ನು ತಂಪಾಗಿಸುವ ರೆಫ್ರಿಜರೇಟರ್ ವ್ಯವಸ್ಥೆ ಇತ್ತು.

1984ರ ಕೊನೆ ಭಾಗದಲ್ಲಿ ಕೆಲವು ತಿಂಗಳ ಕಾಲ ರೆಫ್ರಿಜರೇಟರ್‌ ಸ್ಥಗಿತಗೊಳಿಸಲಾಗಿತ್ತು. ಅನಿಲದ ಒತ್ತಡ ಹೆಚ್ಚಾದ ಕಾರಣ, 1984ರ ಡಿಸೆಂಬರ್ 2ರ ರಾತ್ರಿ 11.30ರ ಸುಮಾರಿನಲ್ಲಿ ಅನಿಲವು ವಾತಾವರಣಕ್ಕೆ ಸೋರಿಕೆಯಾಗಿತ್ತು. ಕಂಪನಿಯ ಎಚ್ಚರಿಕೆ ವ್ಯವಸ್ಥೆಯೂ ಕೆಲಸ ಮಾಡದ ಕಾರಣ, ರಾತ್ರಿಯಲ್ಲಿ ನಿದ್ದೆಯಲ್ಲಿದ್ದ ಭೋಪಾಲ್‌ ವಾಸಿಗಳು ಈ ವಿಷಾನಿಲವನ್ನು ಉಸಿರಾಡಿದರು. ದುರಂತ ನಡೆದು ಕೆಲವೇ ದಿನಗಳಲ್ಲಿ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಆದರೆ, ಈ ವಿಷಾನಿಲ ಉಸಿರಾಡಿದ ಲಕ್ಷಾಂತರ ಮಂದಿ ಈಗಲೂ ಅದರ ಪರಿಣಾಮ ಎದುರಿಸುತ್ತಿದ್ದಾರೆ.

ಪರಿಣಾಮಗಳು

*ತೀವ್ರ ಉಸಿರಾಟದ ತೊಂದರೆ, ಕಣ್ಣು ಮತ್ತು ಗಂಟಲು ಉರಿ ವಿಷಾನಿಲ ಉಸಿರಾಟದ ತಕ್ಷಣದ ಪರಿಣಾಮಗಳಾಗಿತ್ತು. ಅನಿಲ ಉಸಿರಾಡಿದ್ದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದರು

*ಈ ಅನಿಲ ಉಸಿರಾಡಿದ್ದ ಹಲವರು ಬೇರೆ–ಬೇರೆ ಸ್ವರೂಪದ ಆರೋಗ್ಯದ ಸಮಸ್ಯೆ ಎದುರಿಸಿದ್ದಾರೆ. ಚರ್ಮ, ಗಂಟಲು, ಬಾಯಿ, ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಭೋಪಾಲ್‌ನ ಬೇರೆಲ್ಲಾ ಜನರಿಗಿಂತ ಈ ಅನಿಲ ಉಸಿರಾಡಿದ್ದ ಸಮುದಾಯಗಳಲ್ಲಿ ಕ್ಯಾನ್ಸರ್‌ ಪ್ರಮಾಣ 10 ಪಟ್ಟು ಹೆಚ್ಚು

*ಈ ಅನಿಲ ಉಸಿರಾಡಿದ್ದ ಜನರಿಗೆ ಜನಿಸಿದ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ, ವಿವಿಧ ಕ್ಯಾನ್ಸರ್‌, ಅಂಗವೈಕಲ್ಯ, ಮಂದಬುದ್ಧಿ, ಮಾತು ಬರದಿರುವುದು ಮತ್ತು ಜನಿಸಿದ ಏಳು–ಎಂಟು ವರ್ಷಗಳ ನಂತರ ಮಾತನಾಡಲು ಆರಂಭಿಸುವ ಸಮಸ್ಯೆ ಈಗಲೂ ಇದೆ

ದುರಂತದ ಸಂದರ್ಭದಲ್ಲಿ...

ರಾಸಾಯನಿಕ/ಕೈಗಾರಿಕಾ ದುರಂತಗಳು ನಡೆದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

*ಭೀತಿಗೆ ಒಳಗಾಗದೆ ಶಾಂತಿಚಿತ್ತರಾಗಿರಬೇಕು. ಗೊತ್ತುಪಡಿಸಿದ ಮಾರ್ಗದಲ್ಲಿ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ತ್ವರಿತವಾಗಿ ಜನರನ್ನು ತೆರವು ಮಾಡಬೇಕು

*ಜನರನ್ನು ತೆರವುಗೊಳಿಸುವ ಸಮಯದಲ್ಲಿ ಮುಖದ ಮೇಲೆ ಒದ್ದೆ ಕರವಸ್ತ್ರ ಅಥವಾ ಬಟ್ಟೆ ಹಾಕಿಕೊಳ್ಳಬೇಕು

*ರೋಗಿಗಳು, ದುರ್ಬಲರು, ಅಂಗವಿಕಲರು, ವಯಸ್ಸಾದವರು ಮನೆಯಿಂದ ಹೊರಬರಲು ಸಾಧ್ಯವಾಗದಿದ್ದಲ್ಲಿ, ಮನೆಯ ಎಲ್ಲ ಬಾಗಿಲು ಹಾಗೂ ಕಿಟಕಿಗಳನ್ನು ಭದ್ರವಾಗಿ ಮುಚ್ಚಬೇಕು

*ಗಾಳಿಗೆ ತೆರೆದಿಟ್ಟಿರುವ ಆಹಾರ, ನೀರು ಮೊದಲಾದವನ್ನು ಸೇವಿಸಬಾರದು. ಬಾಟಲಿಯ ನೀರು ಕುಡಿಯುವುದು ಸೂಕ್ತ

*ಸುರಕ್ಷಿತ ಜಾಗ ತಲುಪಿದೇ ಕೂಡಲೇ ಕೈಗಳನ್ನು ಚೆನ್ನಾಗಿ ತೊಳೆದು, ಬಟ್ಟೆ ಬದಲಿಸಬೇಕು

*ಸುರಕ್ಷಿತ ಸ್ಥಳ ತಲುಪಿದ ಕೂಡಲೇ ತುರ್ತುಸೇವೆಗಳಾದ ಅಗ್ನಿಶಾಮದಳ, ಪೊಲೀಸ್ ಹಾಗೂ ವೈದ್ಯಕೀಯ ಸೇವೆಗಳಿಗೆ ಕರೆ ಮಾಡಬೇಕು

*ಕಾರ್ಖಾನೆಯಲ್ಲಿ ತುರ್ತು ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಬೇಕು. ಜಿಲ್ಲಾಡಳಿತ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಅಥವಾ ಪೊಲೀಸರು ಸ್ಥಳೀಯ ರೇಡಿಯೊ, ಟಿ.ವಿ ವಾಹಿನಿ ಮೂಲಕ ನೀಡುವ ಸಲಹೆಗಳನ್ನು ಪಾಲಿಸಬೇಕು

*ಸರ್ಕಾರಿ ಅಧಿಕಾರಿಗಳಿಗೆ ನೈಜ ಹಾಗೂ ಖಚಿತ ಮಾಹಿತಿ ನೀಡಬೇಕು

*ಸಮೀಪದ ಶಾಲೆ, ವಾಣಿಜ್ಯ ಕೇಂದ್ರ, ಚಿತ್ರಮಂದಿರ ಮೊದಲಾದ ಕಡೆ ಸೇರಿರುವ ಜನರಿಗೆ ಆಗಿರುವ ಘಟನೆಯ ಮಾಹಿತಿ ನೀಡಬೇಕು

*ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಅವುಗಳನ್ನು ಹಬ್ಬಿಸಬಾರದು

ಸ್ಮಾರಕ ಪ್ರೀತಿ, ವಿಲೇವಾರಿಯಾಗದ ವಿಷ
ಭೋಪಾಲ್‌ ದುರಂತಕ್ಕೆ ಕಾರಣವಾದ ಯುನೈಟೆಡ್ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್‌ನ ಘಟಕವನ್ನು ದೊಡ್ಡ ಸ್ಮಾರಕವನ್ನಾಗಿಸಬೇಕು ಎಂಬುದು ಇಲ್ಲಿನ ಕೆಲವು ರಾಜಕಾರಣಿಗಳ ಒತ್ತಾಸೆ. ಘಟಕದ ಆವರಣದ ಹೊಂಡಗಳಲ್ಲಿ ಈಗಲೂ ವಿಷಕಾರಿ ವಸ್ತುಗಳು ಇವೆ. ಘಟಕ ಸ್ಥಗಿತವಾದ ನಂತರ, ಯುಸಿಸಿ ಕಂಪನಿಯನ್ನು ಅಮೆರಿಕದ ಡೌ ಕೆಮಿಕಲ್ಸ್ ಕಂಪನಿ ಖರೀದಿಸಿತ್ತು. ಆದರೆ, ‘ಭೋಪಾಲ್ ದುರಂತಕ್ಕೆ ಕಾರಣವಾಗಿದ್ದು ಯುನೈಟೆಡ್ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್. ದುರಂತದ ಎಲ್ಲ ಹಾನಿಯನ್ನು ಆ ಕಂಪನಿಯೇ ಭರಿಸಬೇಕು’ ಎಂದು ಡೌ ಕೆಮಿಕಲ್ಸ್ ಜವಾಬ್ದಾರಿಯಿಂದ ನುಣುಚಿಕೊಂಡಿತು.

ದುರಂತದಲ್ಲಿ ಮೃತಪಟ್ಟಿದ್ದವರ ಕುಟುಂಬಗಳಿಗೆ ₹ 25,000 ಪರಿಹಾರವನ್ನು ನೀಡಿ, ಯುನೈಟೆಡ್ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್ ಸಹ ಕೈತೊಳೆದುಕೊಂಡಿತು. ದುರಂತದ ದೀರ್ಘಾವಧಿ ಪರಿಣಾಮಗಳಿಗೆ ತುತ್ತಾಗಿದ್ದವರನ್ನು ಕಡೆಗಣಿಸಲಾಗಿದೆ. ವಿಷಕಾರಿ ತ್ಯಾಜ್ಯವನ್ನು ಹೊಂಡಗಳಲ್ಲಿ ತುಂಬಿರುವ ಕಾರಣ, ಪ್ರತಿವರ್ಷ ಮಳೆ ಬಂದಾಗಲೆಲ್ಲಾ ಆ ವಿಷ ಅಂತರ್ಜಲಕ್ಕೆ ಇಳಿಯುತ್ತಿದೆ. ಘಟಕದ ಸುತ್ತ 3 ಕಿ.ಮೀ. ವ್ಯಾಪ್ತಿಯ ಅಂತರ್ಜಲ ಮತ್ತು ಮಣ್ಣಿನಲ್ಲಿ ಈ ವಿಷ ಇರುವುದು ದೃಢಪಟ್ಟಿದೆ. ಈ ವ್ಯಾಪ್ತಿಯಲ್ಲಿರುವ ನಿವಾಸಿಗಳಲ್ಲಿ ಕೆಲವರಿಗಷ್ಟೇ ನರ್ಮದಾ ನದಿಯಿಂದ ನೀರು ಪೂರೈಸಲಾಗುತ್ತಿದೆ. ಉಳಿದವರು ಕೊಳವೆಬಾವಿಯನ್ನೇ ಅವಲಂಬಿಸಿದ್ದಾರೆ.

ಈ ವಿಷವನ್ನು ವೈಜ್ಞಾನಿಕವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ತಂತ್ರಜ್ಞಾನ ನಮ್ಮಲ್ಲಿಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಚೆಲ್ಲಿವೆ. ಆದರೆ, ಇಲ್ಲಿನ ಜನ ಈಗಲೂ ವಿಷ ನೀರು ಕುಡಿಯುತ್ತಿದ್ದಾರೆ.

ಕೈಗಾರಿಕೀಕರಣ ಹಾಗೂ ವಿಷಾನಿಲ ದುರಂತ

* ಗೇಲ್ ಪೈಪ್‌ಲೈನ್ ಸ್ಫೋಟ: ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನೆಲದಡಿಯ ಅನಿಲ ಪೈಪ್‌ಲೈನ್ ಸ್ಫೋಟಗೊಂಡಿತ್ತು. 2014ರ ಜೂನ್ 27ರಂದು ನಡೆದ ಈ ಘಟನೆಯಲ್ಲಿ 15 ಜನರು ಮೃತಪಟ್ಟು, 40 ಜನರು ಗಾಯಗೊಂಡಿದ್ದರು. ಅನಿಲ ಸೋರಿಕೆ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅದನ್ನು ನಿರ್ಲಕ್ಷಿಸಲಾಗಿತ್ತು ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಗಳು, ತೆಂಗಿನ ಮರಗಳು, ವಾಹನಗಳು ಸುಟ್ಟು ಬೂದಿಯಾದವು. ನೆಲದಡಿಯ ಸುರಂಗದಲ್ಲಿ ಸ್ಫೋಟ ನಡೆದಿದ್ದರಿಂದ ದೊಡ್ಡ ಕುಳಿ ನಿರ್ಮಾಣವಾಗಿತ್ತು. 

* ಭಿಲಾಯಿ ಉಕ್ಕು ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 2014ರ ಜೂನ್‌ನಲ್ಲಿ ಛತ್ತೀಸಗಡದ ಭಿಲಾಯಿ ಉಕ್ಕು ಕಾರ್ಖಾನೆಯ ಮಿಥೇನ್
ಅನಿಲ ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾಗಿತ್ತು. ಈ ಅವಘಡದಲ್ಲಿ 6 ಜನರು ಮೃತಪಟ್ಟು, 40ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದರು. ಮೃತಪಟ್ಟವರು ಭಾರತೀಯ ಉಕ್ಕು ಪ್ರಾಧಿಕಾರದ ಒಡೆತನದ ಕಾರ್ಖಾನೆಯ ಉದ್ಯೋಗಿಗಳು.

* ದೆಹಲಿ ಅನಿಲ ದುರಂತ: 2017ರಲ್ಲಿ ದೆಹಲಿಯ ತುಘಲಕಾಬಾದ್‌ನ ಕಂಟೇನರ್ ಡಿಪೋದಲ್ಲಿ ರಾಸಾಯನಿಕ ಸೋರಿಕೆಯಾಗಿತ್ತು. ಇದರಿಂದ ಉಂಟಾದ ವಿಷಕಾರಿ ಹೊಗೆಯುನ್ನು ಸೇವಿಸಿದ ಸಮೀಪದ ಶಾಲೆಗಳ ಸುಮಾರು 470 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ವಿದ್ಯಾರ್ಥಿಗಳಲ್ಲಿ ತೀವ್ರತರವಾದ ಕಣ್ಣುರಿ, ಉಸಿರಾಟದ ಸಮಸ್ಯೆ, ತಲೆನೋವು ಕಾಣಿಸಿಕೊಂಡು ಅವರು ಅಸ್ವಸ್ಥಗೊಂಡಿದ್ದರು.

ಉಕ್ಕು ಕಾರ್ಖಾನೆಯಲ್ಲಿ ಸ್ಫೋಟ: ಭಾರತೀಯ ಉಕ್ಕು ಪ್ರಾಧಿಕಾರದ ಒಡೆತನದ (SAI*) ಭಿಲಾಯಿ ಉಕ್ಕು ಕಾರ್ಖಾನೆಯಲ್ಲಿ 2018ರಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತು. ಒಂಭತ್ತು ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. 14 ಜನರು ಗಾಯಗೊಂಡಿದ್ದರು. ಅನಿಲ ಪೈಪ್‌ಲೈನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ನಡೆದಿತ್ತು.

ಆಧಾರ: ಈಸ್ಟರ್ನ್‌ ಕೆಂಟಕಿ ವಿ.ವಿ. ವೆಬ್‌ಸೈಟ್‌, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ

***
ಮಾಲೀಕರೇ ಹೊಣೆ
ನಮ್ಮಲ್ಲಿ ಸಾರ್ವಜನಿಕ ಹೊಣೆಗಾರಿಕೆ ವಿಮೆ ಎಂಬ ಕಾಯ್ದೆ ಇದೆ. ಭೋಪಾಲ್‌ ಅನಿಲ ದುರಂತ ಪ್ರಕರಣದಲ್ಲಿ, ಸಂಪೂರ್ಣ ಹೊಣೆಗಾರಿಕೆ ಎಂಬ ಸಿದ್ಧಾಂತದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದರ ಪ್ರಕಾರ, ಉದ್ದೇಶಪೂರ್ವಕ ಆಗಿರಲಿ ಅಲ್ಲದಿರಲಿ, ಯಾವುದೇ ಅವಘಡ ಸಂಭವಿಸಿದರೆ, ಕಾರ್ಖಾನೆಯ ಮಾಲೀಕ ಸಂಪೂರ್ಣ ಹೊಣೆಗಾರ. ಹಾಗಾಗಿ, ವಿಶಾಖಪಟ್ಟಣದಲ್ಲಿ ನಡೆದಿರುವ ಈ ಅನಿಲ ಸೋರಿಕೆಯ ದುರಂತಕ್ಕೆ ಕಾರ್ಖಾನೆಯ ಆಡಳಿತವೇ ಹೊಣೆ.
-ಡಾ. ಎನ್.ಸತೀಶ್ ಗೌಡ, ಕಾನೂನು ಹಿರಿಯ ಸಹಾಯಕ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು