ಶನಿವಾರ, ಸೆಪ್ಟೆಂಬರ್ 26, 2020
26 °C
ಅಪಾಯಕಾರಿ ಸ್ಫೋಟಕ

Explainer | ಅಮೋನಿಯಂ ನೈಟ್ರೇಟ್ ಎಂದರೇನು? ಬೈರೂತ್‌ನ ಮಹಾಸ್ಫೋಟಕ್ಕೆ ಏನು ಕಾರಣ?

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೈರೂತ್‌ನಲ್ಲಿ ಸಂಭವಿಸಿದ ಮಹಾಸ್ಫೋಟಕ್ಕೆ ಕಾರಣವಾದ ರಾಸಾಯನಿಕ ಯಾವುದು? ಅದನ್ನು ಎಲ್ಲೆಲ್ಲಿ ಹೇಗೆಲ್ಲಾ ಬಳಸುತ್ತಾರೆ? ಅಪಾಯಗಳೇನು? ಭಾರತದಲ್ಲಿ ಅಮೋನಿಯಂ ನೈಟ್ರೇಟ್ ಬಳಕೆಗೆ ಸಂಬಂಧಿಸಿದಂತೆ ಇರುವ ನಿಯಮಗಳೇನು? ಇಲ್ಲಿದೆ ಮಾಹಿತಿ...

ಲೆಬನಾನ್ ರಾಜಧಾನಿ ಬಂದರು ನಗರಿ ಬೈರೂತ್‌ನಲ್ಲಿ ಮಂಗಳವಾರ ಸಂಜೆ (ಆಗಸ್ಟ್‌ 4) ಸಂಭವಿಸಿದ ಮಹಾಸ್ಟೋಟದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸುಮಾರು 4000 ಮಂದಿ ಗಾಯಗೊಂಡರು. ಅವಶೇಷಗಳಡಿ ಸಿಲುಕಿರುವವರ ಸಂಖ್ಯೆಯನ್ನು ಈವರೆಗೆ ಅಂದಾಜಿಸಲು ಸಾಧ್ಯವಾಗಿಲ್ಲ. ಕಳೆದ 6 ವರ್ಷಗಳಿಂದ ದಾಸ್ತಾನು ಇರಿಸಿದ್ದ 2,700 ಟನ್‌ಗಳಷ್ಟು ಅಮೋನಿಯಂ ನೈಟ್ರೇಟ್ ಈ ಮಹಾಸ್ಫೋಟಕ್ಕೆ ಕಾರಣ ಎನ್ನುವುದು ಲೆಬನಾನ್ ಸರ್ಕಾರ ನೀಡಿರುವ ಮಾಹಿತಿ.

ಕೃಷಿ ಚಟುವಟಿಕೆಗಳಿಗೆ ಬಳಸುವ ರಾಸಾಯನಿಕ ಗೊಬ್ಬರಗಳಿಗೆ ಬೇಕಾದ ಪ್ರಮುಖ ವಸ್ತು ಇದು. ಸಾರಜನಕ (ನೈಟ್ರೊಜನ್) ಮೈದುಂಬಿಕೊಂಡಿರುವ ಇದೇ ವಸ್ತು ಅಮೋನಿಯಂ ನೈಟ್ರೇಟ್ ಫ್ಯೂಯೆಲ್ ಆಯಿಲ್ (ಎಎನ್‌ಎಫ್‌ಒ) ರೂಪದಲ್ಲಿ ಸ್ಫೋಟಕದ ಮಿಶ್ರಣವೂ ಆಗಬಲ್ಲದು.

ಶುದ್ಧ ರೂಪದಲ್ಲಿ ಅಮೋನಿಯಂ ನೈಟ್ರೇಟ್ (NH4NO3) ಬಿಳಿ ಹರಳು ರೂಪದ, ನೀರಿನಲ್ಲಿ ಕರಗಬಲ್ಲ ರಾಸಾಯನಿಕ. ಗಣಿ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ಬಳಸುವ ಸ್ಫೋಟಕಗಳ ತಯಾರಿಕೆಗೆ ಇದು ಮೂಲ ಕಚ್ಚಾವಸ್ತು.

ಸ್ಫೋಟಕ ಕಾಯ್ದೆಯ (1884) ಅಡಿ 2012ರಲ್ಲಿ ಅಮೋನಿಯಂ ನೈಟ್ರೇಟ್ ನಿಯಮಗಳನ್ನು ಭಾರತದಲ್ಲಿ ರೂಪಿಸಲಾಗಿದೆ. ಈ ನಿಯಮಗಳು ಅಮೋನಿಯಂ ನೈಟ್ರೇಟ್ ಎಂದರೆ ಏನು ಎಂಬ ಬಗ್ಗೆ ಶಾಸನಬದ್ಧ ಮಾಹಿತಿ ಒದಗಿಸುತ್ತದೆ.

ಆ ಪ್ರಕಾರ, NH4NO3 ಧಾತು ಸಂಯುಕ್ತಗಳನ್ನು ಶೇ 45ರಷ್ಟು ಹೊಂದಿರುವ ಯಾವುದೇ ಮಿಶ್ರಣ ಅಮೋನಿಯಂ ನೈಟ್ರೇಟ್ ಎನಿಸಿಕೊಳ್ಳುತ್ತದೆ. ಶುದ್ಧರೂಪದಲ್ಲಿ ಅಮೋನಿಯಂ ನೈಟ್ರೇಟ್ ಸ್ಫೋಟಕ ವಸ್ತು ಅಲ್ಲ. ಆದರೆ ಯಾವುದರೊಂದಿಗೆ ಅದನ್ನು ಬೆರೆಸಲಾಗುತ್ತದೆ ಎಂಬುದರ ಆಧಾರದ ಮೇಲೆ ಅದರ ಗುಣಸ್ವಭಾವಗಳು ಬದಲಾಗುತ್ತದೆ. ಇಂಧನ ಅಥವಾ ಇತರ ಕೆಲ ಧಾತುಗಳೊಂದಿಗೆ ಬೆರೆತರೆ ಅದು ಸ್ಫೋಟಕವಾಗಿ ಪರಿವರ್ತನೆಯಾಗುತ್ತದೆ.

ಪುಲ್ವಾಮಾ, ವಾರಣಾಸಿ, ಮಾಲೆಗಾಂವ್, ಪುಣೆ, ದೆಹಲಿ, ಹೈದರಾಬಾದ್ ಮತ್ತು ಮುಂಬೈ ಸೇರಿದಂತೆ ಭಾರತದಲ್ಲಿ ವಿವಿಧೆಡೆ ನಡೆದ ಬಾಂಬ್ ಸ್ಫೋಟಗಳಲ್ಲಿ ಅಮೋನಿಯಂ ನೈಟ್ರೇಟ್ ಬಳಕೆಯಾಗಿತ್ತು. ಅಮೋನಿಯಂ ನೈಟ್ರೇಟ್‌ ಸಾಮಾನ್ಯವಾಗಿ ತನ್ನಿಂತಾನೆ ಸ್ಫೋಟಿಸುವುದಿಲ್ಲ. ಅದು ಸ್ಫೋಟಗೊಳ್ಳಲು ಕಾರಣವಾಗುವ ಟ್ರಿಗರ್‌ಗಳು ಸಾಮಾನ್ಯವಾಗಿ ಬಾಹ್ಯ ವಸ್ತುಗಳು ಆಗಿರುತ್ತವೆ. ಭಯೋತ್ಪಾದಕರು ಆರ್‌ಡಿಎಕ್ಸ್‌ ಅಥವಾ ಟಿಎನ್‌ಟಿಯನ್ನು ಟ್ರಿಗರ್‌ ಆಗಿ, ಅಮೋನಿಯಂ ನೈಟ್ರೇಟ್ ಅನ್ನು ಮುಖ್ಯ ಸ್ಫೋಟಕವಾಗಿ ಬಳಸಿ, ವ್ಯಾಪಕ ಹಾನಿ ಮಾಡಲು ಯತ್ನಿಸುತ್ತಾರೆ.

ಭಯೋತ್ಪಾದಕರು ವ್ಯಾಪಕವಾಗಿ ಅಮೋನಿಯಂ ನೈಟ್ರೇಟ್ ಬಳಸುತ್ತಿರುವ ಕಾರಣದಿಂದಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಬೈರೂತ್‌ನ ಸ್ಫೋಟವು ಭಯೋತ್ಪಾದಕ ಕೃತ್ಯ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲೆಬೆನಾನ್ ರಾಜಧಾನಿಯಲ್ಲಿ ಸ್ಫೋಟಿಸಿದ್ದು 2,750 ಟನ್ ಅಮೋನಿಯಂ ನೈಟ್ರೇಟ್

ಅಮೋನಿಯಂ ನೈಟ್ರೇಟ್ ದಾಸ್ತಾನು: ಸೆರಗಿನ ಕೆಂಡ

ಅಮೋನಿಯಂ ನೈಟ್ರೇಟ್ ದಾಸ್ತಾನು ಇಡುವುದು ಅತ್ಯಂತ ಅಪಾಯಕಾರಿ ಕೆಲಸ. ಜಗತ್ತಿನ ಹಲವೆಡೆ ಇಂಥ ದಾಸ್ತಾನುಗಳು ಸ್ಫೋಟಗೊಂಡಿವೆ. ಬಹುತೇಕ ಸಂದರ್ಭಗಳಲ್ಲಿ ಈ ದಾಸ್ತಾನು ಸ್ಫೋಟಿಸಲು ಎರಡು ಮುಖ್ಯ ಕಾರಣಗಳಿರುತ್ತವೆ.

1) ಯಾವುದೋ ಕಾರಣದಿಂದ ಸ್ಫೋಟಕಗಳ ಮಿಶ್ರಣದೊಂದಿಗೆ (ಟ್ರಿಗರ್) ಈ ದಾಸ್ತಾನು (ಅಮೋನಿಯಂ ನೈಟ್ರೇಟ್) ಸಂಪರ್ಕಕ್ಕೆ ಬರುವುದು. ಆ ಸ್ಫೋಟಕವೇ ಡಿಟೊನೇಶನ್ ಅಥವಾ ಟ್ರಿಗರ್ ಆಗಿ ಅಮೋನಿಯಂ ನೈಟ್ರೇಟ್ ದಾಸ್ತಾನು ಸ್ಫೋಟಗೊಳ್ಳುವಂತೆ ಮಾಡುತ್ತದೆ.

2) ಅಮೋನಿಯಂ ನೈಟ್ರೇಟ್ ದಾಸ್ತಾನು ಇರಿಸಿರುವ ಜಾಗದಲ್ಲಿ ಆಕ್ಸಿಡೇಶನ್ ಪ್ರಕ್ರಿಯೆಯಿಂದ ಬಿಸಿ ಉತ್ಪಾದನೆಯಾಗುತ್ತದೆ. ಒಂದು ಮಿತಿ ದಾಟಿದ ನಂತರ ಇದೂ ಸಹ ಅಮೋನಿಯಂ ನೈಟ್ರೇಟ್ ಸ್ಫೋಟಗೊಳ್ಳಲು ಕಾರಣವಾಗಬಹುದು.

ಬೈರೂತ್ ನಗರದ ಸ್ಫೋಟಕ್ಕೆ ಎರಡನೆಯದು ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಕೆಲ ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಸ್ಫೋಟಗೊಂಡ ಪಟಾಕಿಗಳ ಕಿಡಿ ತಾಕಿ, ಅಮೋನಿಯಂ ನೈಟ್ರೇಟ್ ದಾಸ್ತಾನು ಸ್ಫೋಟಗೊಂಡಿರಬಹುದು ಎಂದು ಹೇಳುತ್ತಿದ್ದಾರೆ. 

2015ರಲ್ಲಿ ಚೀನಾ ಮತ್ತು 1947ರಲ್ಲಿ ಅಮೆರಿಕದ ಟೆಕ್ಸಾಸ್ ನಗರದಲ್ಲಿಯೂ ದೊಡ್ಡಮಟ್ಟದಲ್ಲಿ ಅಮೋನಿಯಂ ನೈಟ್ರೇಟ್ ದಾಸ್ತಾನು ಸ್ಫೋಟಿಸಿತ್ತು.

ಇದನ್ನೂ ಓದಿ: ಬೈರೂತ್‌ ಸ್ಫೋಟ ಉದ್ದೇಶಪೂರ್ವಕ ದಾಳಿಯೇ? ಡೊನಾಲ್ಡ್ ಟ್ರಂಪ್ ಶಂಕೆ

ಅಮೋನಿಯಂ ನೈಟ್ರೇಟ್ ಬಳಸಲು ಭಾರತದಲ್ಲಿರುವ ನಿಯಮಗಳೇನು?

ಕೈಗಾರಿಕಾ ಸ್ಫೋಟಕಗಳು, ಮತ್ತುಬರಿಸುವ ಅನಿಲಗಳು, ರಸಗೊಬ್ಬರಗಳು, ಕೋಲ್ಡ್‌ಪ್ಯಾಕ್ಸ್ ತಯಾರಿಕೆಗೆ ಬಳಸುವ ಈ ರಾಸಾಯನಿಕ ದುರ್ಬಳಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಅಮೋನಿಯಂ ನೈಟ್ರೇಟ್ ಬಳಕೆಗೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.

ಅಮೋನಿಯಂ ನೈಟ್ರೇಟ್‌ನ ಉತ್ಪಾದನೆ, ಪರಿವರ್ತನೆ, ಪ್ಯಾಕಿಂಗ್, ಆಮದು, ರಫ್ತು, ಸಾಗಣೆ, ದಾಸ್ತಾನು, ಮಾರಾಟಗಳು 2012ರ ಅಮೋನಿಯಂ ನೈಟ್ರೇಟ್ ನಿಯಮಗಳ ಅಡಿ ಬರುತ್ತವೆ. ಜನದಟ್ಟಣೆ ಹೆಚ್ಚಾಗಿರುವ ಪ್ರದೇಶದಲ್ಲಿ ಅಮೋನಿಯಂ ನೈಟ್ರೇಟ್‌ನ ದೊಡ್ಡಮಟ್ಟದ ದಾಸ್ತಾನನ್ನು ಈ ನಿಯಮ ನಿಷೇಧಿಸುತ್ತದೆ.

ಇದನ್ನೂ ಓದಿ: ಬೈರೂತ್ ಸ್ಫೋಟ- ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು