ಸೋಮವಾರ, ಜನವರಿ 18, 2021
15 °C

ಆಳ–ಅಗಲ | ಹಕ್ಕಿಜ್ವರ: ಭೀತಿ ಬೇಡ, ಎಚ್ಚರ ಇರಲಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಸಾವಿರಾರು ಹಕ್ಕಿಗಳು, ಕೋಳಿಗಳು ಸತ್ತಿವೆ. ಈ ಸೋಂಕು ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಹಿಂದೆಯೂ ಕಾಣಿಸಿಕೊಂಡು ಮತ್ತೆ ನಿಯಂತ್ರಣಕ್ಕೆ ಬಂದಿತ್ತು. ಜೊತೆಗೆ, ಇದು ಮನುಷ್ಯನಿಗೆ ಅಪಾಯಕಾರಿಯೂ ಅಲ್ಲ. ಹಾಗಾಗಿ, ಭೀತಿಯ ಅಗತ್ಯ ಇಲ್ಲ, ಆದರೆ ಮುನ್ನೆಚ್ಚರಿಕೆ ಖಂಡಿತಾ ಬೇಕು ಎಂದು ವೈದ್ಯರು ಹೇಳುತ್ತಾರೆ.

2006ರ ಫೆಬ್ರುವರಿ ತಿಂಗಳು. ಮಹಾರಾಷ್ಟ್ರದ ನಂದುರ್‌ಬಾರ್‌ ಜಿಲ್ಲೆಯ ನವಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋಳಿ ಸೇರಿದಂತೆ ಬೇರೆಬೇರೆ ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಸತ್ತು ಬೀಳಲಾರಂಭಿಸಿದ್ದವು. ಈ ಹಳ್ಳಿಗಳು ಕುಕ್ಕುಟೋದ್ಯಮವನ್ನೇ ನೆಚ್ಚಿಕೊಂಡವುಗಳಾದ್ದರಿಂದ ಸಹಜವಾಗಿ ಆತಂಕ ಮೂಡಿತು. 10 ದಿನಗಳಲ್ಲಿ 25 ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತವು.

ಹಕ್ಕಿಗಳ ಸಾವಿಗೆ ಕಾರಣ ತಿಳಿಯಲು ಪಶು ಸಂಗೋಪನಾ ಇಲಾಖೆ ಕ್ರಮ ಕೈಗೊಂಡಿತು. ಹಕ್ಕಿ ಜ್ವರವೇ ಕಾರಣ ಎಂಬುದು ಪರೀಕ್ಷೆಯಿಂದ ಖಚಿತವಾಯಿತು. ದೇಶದಲ್ಲಿ ಹಕ್ಕಿ ಜ್ವರದ ಮೊದಲ ಪ್ರಕರಣ ಅದಾಗಿತ್ತು. ಇದರ ನಿಯಂತ್ರಣಕ್ಕೆ ಒಂದು ವಾರದ ಅವಧಿಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಕೋಳಿ, ಬಾತುಕೋಳಿಗಳನ್ನು ಕೊಲ್ಲಲಾಯಿತು. ಕೋಳಿ ಮೊಟ್ಟೆಗಳನ್ನು ನಾಶಪಡಿಸಲಾಯಿತು. ನೆಗಡಿ, ಕೆಮ್ಮಿನ ಲಕ್ಷಣ ಇರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಯಿತು. ಸರ್ಕಾರ ತಪ್ಪಾಗಿ ರೋಗವನ್ನು ಗುರುತಿಸಿದೆ, ಅಗತ್ಯಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನೀಡುತ್ತಿದೆ ಎಂದೆಲ್ಲ ಸ್ಥಳೀಯರು ದೂರಿದರು. ಅಂತೂ ಹಕ್ಕಿ ಜ್ವರವನ್ನು ನಿಯಂತ್ರಣಕ್ಕೆ ತರಲಾಯಿತು. ಸರಿಸುಮಾರು ಇದೇ ಸಮಯದಲ್ಲಿ ಗುಜರಾತ್‌ನಲ್ಲೂ ಹಕ್ಕಿಜ್ವರ ಕಾಣಿಸಿತ್ತು.

ಅದಾದ ನಂತರವೂ ಅಲ್ಲಿ– ಇಲ್ಲಿ ಹಕ್ಕಿಜ್ವರ ಕಾಣಿಸಿಕೊಂಡದ್ದಿದೆ. 2006ರಿಂದ 2015ರೊಳಗಿನ ಅವಧಿಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ದೇಶದ 15 ರಾಜ್ಯಗಳಲ್ಲಿ ಹಕ್ಕಿಜ್ವರದ 25 ಪ್ರಕರಣಗಳು ಪತ್ತೆಯಾಗಿದ್ದವು. ಕೇರಳದ ಕೋಟ್ಟಯಂ ಹಾಗೂ ಆಲಪ್ಪುಳ ಜಿಲ್ಲೆಗಳಲ್ಲೇ 2014ರಲ್ಲೂ ಒಮ್ಮೆ ಹಕ್ಕಿಜ್ವರ ಕಾಣಿಸಿ ಸಾವಿರಾರು ಹಕ್ಕಿಗಳು ಸತ್ತಿದ್ದವು.

ಹಕ್ಕಿಜ್ವರದ ಕೇಂದ್ರ ಬಿಂದುಗಳು

* ಹಿಮಾಚಲಪ್ರದೇಶದಲ್ಲಿ 1,800 ವಲಸೆ ಹಕ್ಕಿಗಳು ಸತ್ತಿವೆ

* ಕೇರಳದಲ್ಲಿ 50 ಸಾವಿರಕ್ಕೂ ಹೆಚ್ಚು ಕೋಳಿ, ಬಾತುಕೋಳಿಗಳನ್ನು ಕೊಲ್ಲಲಾಗಿದೆ

* ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿಯೂ ಹಕ್ಕಿಗಳು ಸತ್ತಿವೆ

ಏನೀ ಕಾಯಿಲೆ; ನಿಯಂತ್ರಣ ಹೇಗೆ?

ಇದು ಇನ್‌ಫ್ಲುಯೆನ್ಜ ಮಾದರಿಯ ‘ಟೈಪ್‌–ಎ’ ವರ್ಗದ ವೈರಸ್‌ನಿಂದ (ಎಚ್‌5ಎನ್‌1, ಎಚ್‌5ಎನ್‌6, ಎಚ್‌5ಎನ್‌8) ಬರುವ, ಅತಿ ವೇಗದಲ್ಲಿ ಪ್ರಸರಣ ಕಾಣುವ ಸಾಂಕ್ರಾಮಿಕ. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಒಂದು ಕೋಳಿಗೆ ಸೋಂಕು ತಗುಲಿತೆಂದರೆ, ಕೆಲವೇ ದಿನಗಳಲ್ಲಿ ಕೋಳಿಗಳ ಮಾರಣಹೋಮವೇ ನಡೆದುಬಿಡುತ್ತದೆ. ಈ ರೋಗ ಕಾಣಿಸಿದ ಪ್ರದೇಶ ಹಾಗೂ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲಾ ಕೊಲ್ಲುವುದೇ ಇದರ ನಿಯಂತ್ರಣಕ್ಕೆ ಅನುಸರಿಸುವ ಕ್ರಮವಾಗಿದೆ.

ಸಾಮಾನ್ಯವಾಗಿ ಕಾಡಿನ ಜಲಪಕ್ಷಿಗಳು ಈ ವೈರಸ್‌ನ ವಾಹಕಗಳಂತೆ ಕೆಲಸ ಮಾಡುತ್ತವೆ. ವಲಸೆ ಹಕ್ಕಿಗಳ ಮೂಲಕ ಇವು ಸುಲಭವಾಗಿ ಪ್ರಸರಣ ಕಾಣುತ್ತವೆ. ಒಮ್ಮೆ ಕೋಳಿಫಾರಂ ಒಳಗೆ ಈ ವೈರಸ್‌ ಪ್ರವೇಶಿಸಿತೆಂದರೆ ನಿಯಂತ್ರಣ ಕಷ್ಟ. ಸಾಮಾನ್ಯವಾಗಿ ಕೆರೆಗಳಲ್ಲಿ ಕಾಣಿಸುವ ಬಾತುಕೋಳಿಗಳು ಹಾಗೂ ಇತರ ಪಕ್ಷಿಗಳೂ ಬೇಗನೆ ಈ ಸೋಂಕಿಗೆ ಒಳಗಾಗುತ್ತವೆ.

ಕೆಲವು ಹಕ್ಕಿಗಳಲ್ಲಿ ಜ್ವರದ ಲಕ್ಷಣಗಳಿಲ್ಲದಿದ್ದರೂ ಅವು ರೋಗ ವಾಹಕಗಳಾಗಿ ಕೆಲಸ ಮಾಡುತ್ತವೆ. ತಮ್ಮ ಮಲ ಮೂತ್ರದ ಮೂಲಕ ವೈರಸ್‌ ಅನ್ನು ಉದುರಿಸುತ್ತವೆ. ಹಕ್ಕಿಗಳು ಆಕಾಶದಲ್ಲಿ ಹಾರುತ್ತಿರುವಾಗಲೇ ವಿಸರ್ಜನೆ ಮಾಡುವುದರಿಂದ ವೈರಸ್‌ ಅತಿ ವೇಗದಲ್ಲಿ ಪ್ರಸರಣ ಕಾಣುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮೊದಲು ಕಾಣಿಸಿದ್ದೆಲ್ಲಿ?

ಭಾರತ ಮಾತ್ರವಲ್ಲ, ಆಫ್ರಿಕಾ, ಏಷ್ಯಾ, ಯುರೋಪ್‌ ಹಾಗೂ ಮಧ್ಯಪ್ರಾಚ್ಯದ 50ಕ್ಕೂ ಹೆಚ್ಚು ದೇಶಗಳಲ್ಲಿ ಈ ವೈರಸ್‌ ಹಬ್ಬಿದೆ. ಲಕ್ಷಾಂತರ ಕೋಳಿ ಹಾಗೂ ಹಕ್ಕಿಗಳನ್ನು ಕೊಲ್ಲಲಾಗಿದೆ. ಕೊರೊನಾದಂತೆ ಈ ವೈರಸ್‌ನ ಮೂಲವೂ ಚೀನಾ ದೇಶವೇ ಆಗಿದೆ.

ಚೀನಾದ ಹೆಬ್ಬಾತುಕೋಳಿಗಳಲ್ಲಿ 1996ರಲ್ಲಿ ಮೊದಲಿಗೆ ಈ ವೈರಸ್‌ ಪತ್ತೆಯಾಗಿತ್ತು. 1997ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಮಾನವರಲ್ಲೂ ಈ ವೈರಸ್‌ ಕಾಣಿಸಿಕೊಂಡಿತು. ಆದರೆ ಮಾನವರಿಂದ ಮಾನವರಿಗೆ ಇದು ಹರಡಿದ ದಾಖಲೆಗಳಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಹಕ್ಕಿಜ್ವರದ ಕೇಂದ್ರಬಿಂದುಗಳು

* ಹಿಮಾಚಲಪ್ರದೇಶ– ಪಾಂಗ್‌ ಡಾಂ ಜಲಾಶಯ– 1,800 ವಲಸೆ ಹಕ್ಕಿಗಳು ಸತ್ತಿವೆ

* ಕೇರಳದ ಕೋಟ್ಟಯಂ ಹಾಗೂ ಆಲಪ್ಪುಳ ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಕೋಳಿ, ಬಾತುಕೋಳಿಗಳನ್ನು ಕೊಲ್ಲಲಾಗಿದೆ

* ರಾಜಸ್ಥಾನದ ಬಾರನ್‌, ಕೋಟ ಹಾಗೂ ಝಲಾವರ್‌ ಜಿಲ್ಲೆಗಳಲ್ಲಿ 250ಕ್ಕೂ ಹೆಚ್ಚು ಕಾಗೆಗಳು ಸತ್ತಿವೆ

* ಮಧ್ಯಪ್ರದೇಶದ ಮಂದಸೌರ್‌, ಇಂದೋರ್‌ ಹಾಗೂ ಮಾಲ್ವಾ ಜಿಲ್ಲೆಗಳಲ್ಲಿ ಕಾಗೆಗಳು ಸತ್ತಿವೆ

ಕುಕ್ಕುಟೋದ್ಯಮಕ್ಕೆ ಹೊಡೆತ

ಹಕ್ಕಿಜ್ವರದಿಂದ ದೇಶದ ಕುಕ್ಕುಟೋದ್ಯಮಕ್ಕೆ ಭಾರಿ ಹೊಡೆತ ಬೀಳುವ ಅಪಾಯವಿದೆ.

ಹಕ್ಕಿಜ್ವರ ತಗುಲಿರುವ ಕಾರಣ ಹರಿಯಾಣ, ಕೇರಳದಲ್ಲಿ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಕೋಳಿಗಳನ್ನು ಕೊಲ್ಲಲಾಗಿದೆ. ರೋಗ ಹರಡಿರುವ ಪ್ರದೇಶದಲ್ಲಿನ ಎಲ್ಲಾ ಕೋಳಿಗಳು, ಬಾತುಕೋಳಿಗಳನ್ನು ಕೊಲ್ಲಲು ಆದೇಶಿಸಲಾಗಿದೆ. ಹಕ್ಕಿಜ್ವರ ಕಾಣಿಸಿಕೊಂಡರೆ ಕೋಳಿಗಳನ್ನು ಕೊಲ್ಲಬೇಕು ಎಂದು ಪಂಜಾಬ್‌ ಸರ್ಕಾರ ಆದೇಶಿಸಿದೆ. ಮಧ್ಯಪ್ರದೇಶ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಂದ ಕೋಳಿ ಮತ್ತು ಕೋಳಿ ಮಾಂಸ ತರಿಸಿಕೊಳ್ಳುವುದನ್ನು 10 ದಿನಗಳವರೆಗೆ ನಿಷೇಧಿಸಿದೆ.

ಕೋಳಿಗಳನ್ನು ತಿನ್ನುವುದರಿಂದ ಮನುಷ್ಯರಿಗೆ ಈ ರೋಗ ಬರುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಕೋಳಿಗಳಿಂದ ಈ ರೋಗವು ಕ್ಷಿಪ್ರವಾಗಿ ಬೇರೆ ಪ್ರದೇಶಗಳಿಗೆ ಹರಡುವ ಅಪಾಯವಿದೆ. ಈ ಕಾರಣದಿಂದ ರೋಗ ಕಾಣಿಸಿಕೊಂಡ ಪ್ರದೇಶಗಳಲ್ಲಿ ಇರುವ ಕೋಳಿಗಳನ್ನು ಕೊಲ್ಲಲೇಬೇಕಾಗುತ್ತದೆ. ಇದರಿಂದ ಕೋಳಿ ಸಾಕಣೆದಾರರಿಗೆ ಭಾರಿ ನಷ್ಟವಾಗಲಿದೆ. ಕೋಳಿ ಸಾಕಣೆ ಕೇಂದ್ರಗಳಲ್ಲಿ ದುಡಿಯುವವರು, ಈ ರೋಗ ಹೋಗುವವರೆಗೂ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.

ಕೋಳಿಗಳ ಅಭಾವದಿಂದ ಕೋಳಿ ಮಾಂಸದ ಕೊರತೆ ಉಂಟಾಗಲಿದೆ. ಕೋಳಿಯಿಂದ ರೋಗ ಹರಡಬಹುದು ಎಂಬ ಭೀತಿಯಿಂದ ಕೋಳಿ ಮಾಂಸ ಮತ್ತು ಮೊಟ್ಟೆಗೆ ಬೇಡಿಕೆ ಕುಸಿಯುವ ಅಪಾಯವಿದೆ.

ಈ ವೈರಸ್ ಮನುಷ್ಯನಿಗೆ ಹರಡುತ್ತದೆಯೇ?

ಹಕ್ಕಿ ಜ್ವರಕ್ಕೆ ಕಾರಣವಾಗುವ ಎಚ್‌5ಎನ್‌8 ವೈರಸ್‌ ಮನುಷ್ಯನಿಗೆ ಹರಡುವ ಶಕ್ತಿ ಹೊಂದಿದೆ. ಈ ವೈರಸ್ ತಗುಲಿದ ಪಕ್ಷಿಗಳನ್ನು (ಕೋಳಿ, ಟರ್ಕಿ, ಬಾತುಕೋಳಿ) ತಿನ್ನುವುದರಿಂದ ಇದು ಮನುಷ್ಯನಿಗೆ ಹರಡುವುದಿಲ್ಲ. ಬದಲಿಗೆ ಈ ವೈರಸ್‌ನಿಂದ ಸತ್ತ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ ಹರಡುವ ಸಾಧ್ಯತೆ ಇದೆ. ಆದರೆ ಈ ಸಾಧ್ಯತೆಯ ಪ್ರಮಾಣ ಅತ್ಯಂತ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ 2015ರಲ್ಲೇ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಹೇಳಿದೆ. ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯು ಸಹ ತನ್ನ ಆದೇಶದಲ್ಲಿ ಇದನ್ನು ಉಲ್ಲೇಖಿಸಿದೆ.

ಹಕ್ಕಿಜ್ವರದಿಂದ ಮೃತಪಟ್ಟಿರುವ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ, ಸಿಬ್ಬಂದಿಯು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಇಲಾಖೆಯು ಜನವರಿ 3ರಂದೇ ಹೊರಡಿಸಿದೆ. ಈಗ ಅದೇ ಮಾರ್ಗಸೂಚಿಗಳನ್ನು ಮತ್ತೆ ಹೊರಡಿಸಿದೆ.

* ಮೃತ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ ರಬ್ಬರ್ ಕೈಗವಸು, ಫೇಸ್‌ಶೀಲ್ಡ್‌, ರಕ್ಷಣಾ ಕೋಟ್‌ ಮತ್ತು ಕನ್ನಡಕಗಳನ್ನು ಕಡ್ಡಾಯವಾಗಿ ಬಳಸಬೇಕು

* ವೈರಸ್ ಹರಡಿರುವ ಪ್ರದೇಶಗಳಿಂದ ಹೊರಬಂದ ನಂತರ ಸೋಪು ಮತ್ತು ನೀರು ಬಳಸಿ ಕೈಗಳನ್ನು ಚೆನ್ನಾಗಿ ತೊಳೆಯಬೇಕು

* ಮೃತ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ ನೀರು, ಆಹಾರ ಮತ್ತು ತಿಂಡಿ-ತಿನಿಸುಗಳನ್ನು ಸೇವಿಸಬಾರದು

* ಪಕ್ಷಿಯ ಹಿಕ್ಕೆ ಮತ್ತು ಮಣ್ಣಿನಲ್ಲಿ ಈ ವೈರಸ್‌ ಹೆಚ್ಚು ಸಕ್ರಿಯವಾಗುತ್ತದೆ. ಒಮ್ಮೆ ಮಣ್ಣು ಸೇರಿದರೆ, ನಿಯಂತ್ರಣ ಕಷ್ಟವಾಗುತ್ತದೆ. ಹೀಗಾಗಿ ಮೃತ ಪಕ್ಷಿ ಮತ್ತು ಹಿಕ್ಕೆಯನ್ನು ವಿಲೇವಾರಿ ಮಾಡುವಾಗ ಡಿಟರ್ಜೆಂಟ್‌ಗಳನ್ನು ಬಳಸುವುದು ಅತ್ಯವಶ್ಯಕ

* ಈ ಕಾರ್ಯಾಚರಣೆಯಲ್ಲಿ ಇರುವ ಎಲ್ಲಾ ದಿನವೂ ‘ಇನ್‌ಫ್ಲುಯೆಂಜಾ ನಿರೋಧಕ ಔಷಧ’ವನ್ನು ಕಡ್ಡಾಯವಾಗಿ
ತೆಗೆದುಕೊಳ್ಳಬೇಕು


ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳಿಗೂ (ಹೆಬ್ಬಕ)

ಹೆಬ್ಬಕಗಳಿಗೆ ಅಪಾಯವೇ?

ಎಚ್‌5ಎನ್‌8 ವೈರಸ್ ಇರುವ ಅಥವಾ ಹಕ್ಕಿಜ್ವರದಿಂದ ಬಳಲುತ್ತಿರುವ ಪಕ್ಷಿಗಳ ಸಂಪರ್ಕಕ್ಕೆ ಬರುವ ಎಲ್ಲಾ ಸ್ವರೂಪದ ಪಕ್ಷಿಗಳಿಗೂ ಇದು ಹರಡುತ್ತದೆ. ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇರುವ ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳಿಗೂ (ಹೆಬ್ಬಕ) ಇದು ಹರಡುವ ಅಪಾಯವಿದೆ.

ದೇಶದಲ್ಲಿ ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಮಾತ್ರ ಹೆಬ್ಬಕಗಳು ಉಳಿದಿವೆ. ರಾಜಸ್ಥಾನದಲ್ಲಿ ಈಗಾಗಲೇ ಹಕ್ಕಿಜ್ವರ ಹರಡಿದೆ, ಕ್ಷಿಪ್ರವಾಗಿ ಹರಡುತ್ತಿದೆ. ಒಂದೊಮ್ಮೆ ಹಕ್ಕಿಜ್ವರವು ಹೆಬ್ಬಕಗಳಿಗೆ ಹರಡಿದರೆ, ಅವು ಸಂಪೂರ್ಣವಾಗಿ ನಾಶವಾಗುವ ಅಪಾಯವಿದೆ.

ಆದರೆ, ಹಕ್ಕಿಜ್ವರವು ಹರಡದಂತೆ ತೆಗೆದುಕೊಳ್ಳಬಹುದಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ಅನುಮಾನಾಸ್ಪದವಾಗಿ ಒಂದು ಪಕ್ಷಿ ಮೃತಪಟ್ಟರೂ, ಅದನ್ನು ತಮಗೆ ವರದಿ ಮಾಡಬೇಕು. ಮೃತ ಪಕ್ಷಿಗಳನ್ನು ವೈಜ್ಞಾನಿಕವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಈ ರೋಗ ಹರಡಿರುವುದನ್ನು ಪತ್ತೆ ಮಾಡಲು ಪಕ್ಷಿಧಾಮಗಳು, ಅರಣ್ಯಗಳು, ಅಭಯಾರಣ್ಯಗಳು, ಜೌಗು ಪ್ರದೇಶಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಸರ್ವೇಕ್ಷಣೆ ನಡೆಸಬೇಕು. ಸಾಕು ಪಕ್ಷಿಗಳು, ಕೋಳಿಗಳು, ವನ್ಯಪಕ್ಷಿಗಳು ಮತ್ತು ವಲಸೆ ಪಕ್ಷಿಗಳಲ್ಲಿ ಈ ರೋಗ ಹರಡಿದೆಯೇ ಎಂಬ ಬಗ್ಗೆ ಸರ್ವೇಕ್ಷಣೆ ನಡೆಸಬೇಕು. ಇದರಿಂದ ದೇಶದ ಪಕ್ಷಿ ಸಂಕುಲಕ್ಕೆ ಅಪಾಯ ಬಂದೊದಗುವುದನ್ನು ತಡೆಯಬಹುದು ಎಂದು ಸಚಿವಾಲಯವು ತನ್ನ ಆದೇಶದಲ್ಲಿ ಸೂಚಿಸಿದೆ.

ಅನಗತ್ಯ ಆತಂಕ ಬೇಡ

ಹಕ್ಕಿಜ್ವರದಿಂದ ಮನುಷ್ಯ ಸಾವನ್ನಪ್ಪಿದ ಘಟನೆ ದೇಶದಲ್ಲಿ ಈತನಕ ಸಂಭವಿಸಿಲ್ಲ. ಈ ಬಗ್ಗೆ ಅನಗತ್ಯ ಆತಂಕ ಬೇಡ. ಹಕ್ಕಿಗಳ ವಲಸೆ ಸಂದರ್ಭದಲ್ಲಿ ಜಲವಾಸಿ ಹಕ್ಕಿಗಳಲ್ಲಿ ಈ‌ ರೋಗ ಕಾಣಿಸಿಕೊಳ್ಳುತ್ತದೆ. ಈಚೆಗೆ ವರದಿ ಆಗಿರುವ ‘ಎಚ್‌5ಎನ್‌8’ ವೈರಸ್ ಈ ಹಿಂದಿನ ‘ಎಚ್‌5ಎನ್1’ನಷ್ಟೂ ಅಪಾಯಕಾರಿ ಅಲ್ಲ. ಉಷ್ಣ ವಲಯದಲ್ಲಿ ಈ ವೈರಸ್‌ಗಳ ಜೀವಿತಾವಧಿಯೂ ಕಡಿಮೆ.


ಡಾ.ವಸಂತ ಶೆಟ್ಟಿ

ಹಕ್ಕಿಜ್ವರಕ್ಕಾಗಿ ಸಾರ್ವಜನಿಕರು ಭಯ ಪಡಬೇಕಾಗಿಲ್ಲ. ಅದು ಹಕ್ಕಿ ಅಥವಾ ಕೋಳಿಗಳ ಸಮೀಪ (ಸಾಕಾಣಿಕೆ) ಇರುವವರಿಗೆ ಮೊದಲು ಬರಬೇಕು. ಅದೂ ವಿರಳ. ಅಲ್ಲಿನ ವ್ಯಕ್ತಿಗಳು ಶ್ವಾಸಕೋಶದ ಸಮಸ್ಯೆ ಹೊಂದಿದ್ದರೆ ಮಾತ್ರ ಸ್ವಲ್ಪ ಎಚ್ಚರ ವಹಿಸಬೇಕು. ಸ್ವಚ್ಛತೆ ಹಾಗೂ ಸತ್ತ ಕೋಳಿ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಮಣ್ಣಿನಲ್ಲಿ ಆಡಿ ಬೆಳೆದವರಿಗೆ ಇಂತಹ ವೈರಲ್‌ ರೋಗಗಳು ಬರುವುದೇ ಕಡಿಮೆ. ನಿರೋಧಕತೆ ಹೆಚ್ಚಿರುತ್ತದೆ. ಯಾವುದಕ್ಕೂ ಕೈ ಮತ್ತು ಮೂಗಿನ ಸಂಪರ್ಕ ಕಡಿಮೆ ಮಾಡಿ. ಸ್ವಚ್ಛತೆ ಕಾಪಾಡಿ. ಆತಂಕ ಬಿಡಿ.

-ಡಾ.ವಸಂತ ಶೆಟ್ಟಿ, ಪಶುರೋಗ ತನಿಖಾ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾ ಅಧಿಕಾರಿ, ಮಂಗಳೂರು

ಹಕ್ಕಿ ಜ್ವರದ ತೀವ್ರತೆ ಕಡಿಮೆ

ಹಕ್ಕಿ ಜ್ವರವು ಹೊಸ ಕಾಯಿಲೆಯಲ್ಲ. ಸೋಂಕಿಗೆ ಒಳಗಾದ ಹಕ್ಕಿಯ ಮಲ, ಮೂತ್ರ, ಸಿಂಬಳ ಮತ್ತು ಉಸಿರು ರೋಗಾಣುಗಳಿಂದ ತುಂಬಿರುತ್ತದೆ. ಈ ವೈರಾಣು ಮನುಷ್ಯನ ದೇಹ ಸೇರಿದಲ್ಲಿ 2-3 ದಿನಗಳ ಬಳಿಕ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಜ್ವರ, ಕೆಮ್ಮು, ತಲೆನೋವು, ಉಸಿರಾಟ ಸಮಸ್ಯೆಯಂತಹ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈ ಜ್ವರದಿಂದ ಜೀವಕ್ಕೆ ಅಪಾಯ ಕಡಿಮೆ. ರೋಗಿಯ ಮೂಗು ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ವೈರಾಣು ತಗುಲಿದೆಯೇ ಎನ್ನುವುದು ಪತ್ತೆಯಾಗುತ್ತದೆ‌.


ಡಾ. ಅನ್ಸಾರ್ ಅಹಮದ್

‌ಇದು ಸಾಮಾನ್ಯವಾದ ಜ್ವರ. ಸೋಂಕಿತ ಕೋಳಿ ಅಥವಾ ಪಕ್ಷಿಯನ್ನು ಸ್ಪರ್ಶಿಸಿದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಮೂಗು, ಕಣ್ಣು, ಬಾಯಿಯನ್ನು ಮುಟ್ಟಬಾರದು. ಕೋಳಿಯನ್ನು ಸ್ವಚ್ಛಗೊಳಿಸಿ, ಚೆನ್ನಾಗಿ ಬೇಯಿಸಿ ತಿಂದಲ್ಲಿ ಅಪಾಯ ಇರುವುದಿಲ್ಲ. ಕೋಳಿ ಮಾರುವವರಿಗೆ, ಸಾಕುವವರಿಗೆ ಸೋಂಕು ತಗಲುವ ಅಪಾಯ ಇದೆ. ಅವರು ಸ್ವಚ್ಛತೆಗೆ ಆದ್ಯತೆ ನೀಡಿ, ಮುನ್ನೆಚ್ಚರಿಕೆ ವಹಿಸಬೇಕು. ಭಯದ ಅಗತ್ಯ ಇಲ್ಲ.

– ಡಾ. ಅನ್ಸಾರ್ ಅಹಮದ್, ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು