ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಆಸ್ಕರ್‌ ರೇಸ್‌ನಲ್ಲಿದ್ದ ಭಾರತದ 13 ಸಿನಿಮಾಗಳು ಯಾವುವು? ಏನ್‌ ಕತೆ?

Last Updated 22 ಸೆಪ್ಟೆಂಬರ್ 2022, 9:38 IST
ಅಕ್ಷರ ಗಾತ್ರ

ಬೆಂಗಳೂರು:ಆಸ್ಕರ್‌ ಪ್ರಶಸ್ತಿಯ ‘ವಿದೇಶಿ ಭಾಷೆ ಫೀಚರ್ ಫಿಲ್ಮ್’ ವಿಭಾಗದಲ್ಲಿನ ಸ್ಪರ್ಧೆಗೆ ಭಾರತದಿಂದ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ಸಿನಿಮಾ ಆಯ್ಕೆಯಾಗಿದೆ.

ಪ್ರತಿ ವರ್ಷ ಆಸ್ಕರ್ ಪ್ರಶಸ್ತಿ ಕಣಕ್ಕೆ ಭಾರತದಿಂದ ಒಂದು ಸಿನಿಮಾವನ್ನು ಆಧಿಕೃತವಾಗಿ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ಸಲ‘ಚೆಲ್ಲೋ ಶೋ’ ಚಿತ್ರವನ್ನು ಕಳುಹಿಸಲಾಗುತ್ತಿದೆ. ‘ವಿದೇಶಿ ಭಾಷೆಯ ಫೀಚರ್ ಫಿಲ್ಮ್’ ವಿಭಾಗದಲ್ಲಿ ಈ ಚಿತ್ರ ಹಲವಾರು ವಿದೇಶಿ ಸಿನಿಮಾಗಳಿಗೆ ಪೈಪೋಟಿ ನೀಡಲಿದೆ.

ಭಾರತೀಯ ಸಿನಿಮಾ ಲೋಕದಲ್ಲಿ ದಾಖಲೆ ಬರೆದಿದ್ದ ತೆಲುಗಿನ ‘ಆರ್‌ಆರ್‌ಆರ್‌’ ಹಾಗೂ ಹಿಂದಿಯ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗಳು ಆಸ್ಕರ್‌ ಸ್ಪರ್ಧೆಗೆ ಆಯ್ಕೆಯಾಗಲಿವೆ ಎಂಬುದುಅಭಿಮಾನಿಗಳನಿರೀಕ್ಷೆಯಾಗಿತ್ತು. ಇದು ಹುಸಿಯಾಗಿದೆ.

ಭಾರತೀಯ ಚಲನಚಿತ್ರ ಫೆಡರೇಷನ್‌ (ಎಫ್‌ಎಫ್‌ಐ) ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ಒಂದು ಸಿನಿಮಾವನ್ನು ಆಯ್ಕೆ ಮಾಡಿ ಕಳುಹಿಸುತ್ತದೆ. ಇದಕ್ಕಾಗಿ ಎಫ್‌ಎಫ್‌ಐಆಯ್ಕೆ ಸಮಿತಿ ರಚನೆ ಮಾಡುತ್ತದೆ. ಈ ಸಲ 17 ಸದಸ್ಯರಿದ್ದ ಆಯ್ಕೆ ಸಮಿತಿಯನ್ನು ರಚನೆ ಮಾಡಿತ್ತು.

ಈ ಭಾರಿ ಕನ್ನಡದ ಖ್ಯಾತ ನಿರ್ದೇಶಕ ಟಿ.ಎಸ್‌. ನಾಗಾಭರಣ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದು ವಿಶೇಷ. ಆಯ್ಕೆ ಸಮಿತಿ ಸದಸ್ಯರು ಕತೆಯನ್ನು ಮುಖ್ಯವಾಗಿಟ್ಟುಕೊಂಡು,ಪ್ರಶಸ್ತಿ ಗೆಲ್ಲುವಂತಹ ಗುಣಗಳಿರುವ ಚಿತ್ರವನ್ನು ಆಯ್ಕೆ ಮಾಡಬೇಕಾದ ಕಠಿಣ ಸವಾಲು ಅವರ ಮುಂದಿತ್ತು.

ಒಟ್ಟು 14 ಚಿತ್ರಗಳಲ್ಲಿ ಯಾವ ಸಿನಿಮಾ ವಿದೇಶಿ ಚಿತ್ರಗಳಿಗೆ ಪೈಪೋಟಿ ನೀಡಲಿದೆ ಎಂಬುದನ್ನು ನಿರ್ಣಯ ಮಾಡಿ, ಒಂದು ಸಿನಿಮಾವನ್ನು ಆಯ್ಕೆ ಮಾಡಬೇಕು. ಈ ಸಲ‘ಚೆಲ್ಲೋ ಶೋ’ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆ ಸಮಿತಿ ಮುಂದೆ ಇದ್ದ 13 ಸಿನಿಮಾಗಳು...

ಭಾರತದ ವಿವಿಧ ಭಾಷೆಗಳ 13 ಸಿನಿಮಾಗಳುಆಯ್ಕೆ ಸಮಿತಿ ಮುಂದೆ ಇದ್ದವು. ಈ ಎಲ್ಲ ಸಿನಿಮಾಗಳು ಉತ್ತಮವಾಗಿದ್ದವು. ಇವುಗಳಲ್ಲಿ ಒಂದು ಸಿನಿಮಾವನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. 13 ಸಿನಿಮಾಗಳಲ್ಲಿ 5 ಹಿಂದಿ, ತಮಿಳು, ತೆಲುಗು ತಲಾ 2 ಹಾಗೂ ಮಲಯಾಳಂ, ಗುಜರಾತಿ, ಬಂಗಾಳಿ, ದಿಮಾಸ ಭಾಷೆಯ ತಲಾ ಒಂದು ಸಿನಿಮಾಗಳು ಆಯ್ಕೆಯಾಗಿದ್ದವು. ಕನ್ನಡದ ಯಾವುದೇ ಸಿನಿಮಾ ಆಯ್ಕೆಯಾಗಿರಲಿಲ್ಲ.

1)ಇರವಿನ್ ನಿಳಲ್

ಇದೇ ವರ್ಷ ಬಿಡುಗಡೆಯಾದತಮಿಳಿನ 'ಇರವಿನ್ ನಿಳಲ್' ಸಿನಿಮಾ ಆಸ್ಕರ್‌ ಸ್ಪರ್ಧೆಯಲ್ಲಿ ಇತ್ತು. ತುಸು ಭಿನ್ನ ಕತೆಯನ್ನು ಹೊಂದಿದ್ದ ಈ ಚಿತ್ರವನ್ನು ಆರ್ ಪಾರ್ತಿಭನ್ ನಟಿಸಿ ನಿರ್ದೇಶನ ಮಾಡಿದ್ದರು. ವ್ಯಕ್ತಿಯೊಬ್ಬರು ತಾವು ಮಾಡಿದ ಅಪರಾಧಗಳು, ಕೃತ್ಯಕ್ಕೆ ಕಾರಣದ ಜನರು ಮತ್ತು ಪರಿಸರ. ನಂತರ ವಿಮೋಚನೆಯ ಕಡೆ ಸಾಗುವ ಕಥಾ ಹಂದರವನ್ನು ಹೊಂದಿದೆ. ಇದಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದು ವಿಶೇಷ.

2) ರಾಕೆಟ್ರಿ: ದಿ ನಂಬಿ ಎಫೆಕ್ಟ್

ವಿಜ್ಞಾನಿಯೊಬ್ಬರ ಕಥೆಯನ್ನು ಮುಖ್ಯವಾಗಿಟ್ಟುಕೊಂಡುಆರ್.ಮಾಧವನ್ ನಟಿಸಿ, ನಿರ್ದೇಶನ ಮಾಡಿದ್ದ'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಚಿತ್ರ ಕೂಡ ಜ್ಯೂರಿಗಳ ಮುಂದೆ ಇತ್ತು. ಆದರೆ ಸಿನಿಮಾ ಜ್ಯೂರಿಗಳನ್ನು ಇಂಪ್ರೆಸ್‌ ಮಾಡುವಲ್ಲಿ ವಿಫಲವಾಯಿತು. ವಿಮರ್ಶಕರಿಂದ ಉತ್ತಮ ಪ್ರಶಂಸೆಪಡೆದಿತ್ತು. ಆದರೆ ಕೆಲ ವಿಜ್ಞಾನಿಗಳು ಈ ಸಿನಿಮಾದಲ್ಲಿ ತೋರಿಸಿರುವುದು ಸುಳ್ಳು ಎಂದು ಆರೋಪ ಮಾಡಿದರು.

3) ಆರ್‌ಆರ್‌ಆರ್‌

ರಾಜಮೌಳಿ ನಿರ್ದೇಶನ ಮಾಡಿದ್ದ ‘ಆರ್‌ಆರ್‌ಆರ್‌‘ ಸಿನಿಮಾ ಕೂಡ ಆಸ್ಕರ್‌ ಪೈಪೋಟಿಗೆ ಹೋಗುವಲ್ಲಿವಿಫಲವಾಗಿದೆ. ನಟರಾದ ರಾಮ್‌ ಚರಣ್‌, ಜ್ಯೂ.ಎನ್‌ಟಿಆರ್‌ ಅಭಿನಯ ಮಾಡಿದ್ದ ಈ ಸಿನಿಮಾ ಭಾರತ ಸೇರಿದಂತೆ ವಿದೇಶಗಳಲ್ಲೂ ಈ ಸಿನಿಮಾ ದಾಖಲೆ ಮಾಡಿತ್ತು. ಬ್ರಿಟಿಷರ ವಿರುದ್ಧ ಇಬ್ಬರು ಗೆಳೆಯರು ಹೋರಾಟ ಮಾಡುವ ರೋಚಕ ಕತೆಯನ್ನು ಈ ಚಿತ್ರ ಹೊಂದಿದೆ. ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿರುವುದು ಪ್ರೇಕ್ಷಕರಿಗೆ ಇಷ್ಟವಾಗಿತ್ತು.

4) ಸ್ಥಳಂ

ನಿವೇಶನ (ಜಾಗ) ಕುರಿತು ಹೋರಾಟ ನಡೆಸುವ ಕತೆಯನ್ನು ಒಳಗೊಂಡಿರುವ ‘ಸ್ಥಳಂ‘ ಸಿನಿಮಾ ಕೂಡ ಆಸ್ಕರ್‌ ಆಯ್ಕೆಯಿಂದ ಹೊರ ಬಿದ್ದಿದೆ. ಈ ಸಿನಿಮಾ ಕುರಿತಂತೆ ಹೆಚ್ಚಿನ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

5) ದಿ ಕಾಶ್ಮೀರ್ ಫೈಲ್ಸ್

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಕೂಡ ಆಸ್ಕರ್‌ ರೇಸ್‌ನಿಂದ ಹೊರ ಬಂದಿದೆ.ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸೆಯ ಚಿತ್ರಣದ ಕತೆಯನ್ನು ಹೊಂದಿದ್ದ ಈ ಸಿನಿಮಾ ಆಸ್ಕರ್‌ಗೆ ಹೋಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಸಿನಿಮಾ ಜ್ಯೂರಿಗಳನ್ನು ಇಂಪ್ರೆಸ್‌ ಮಾಡುವಲ್ಲಿ ವಿಫಲವಾಗಿದೆ.

ಸಿನಿಮಾ ಬಿಡುಗಡೆಯಾದ ದಿನಗಳಲ್ಲಿ ಭಾರತದಲ್ಲಿ ಚಿತ್ರದ ಬಗ್ಗೆ ಪರ–ವಿರೋಧದ ವ್ಯಾಪಕ ಚರ್ಚೆಗಳು ನಡೆದಿದ್ದವು. ಬಾಕ್ಸ್‌ಆಫೀಸ್‌ನಲ್ಲಿ ಈ ಸಿನಿಮಾ ಉತ್ತಮ ಗಳಿಕೆ ಕಂಡಿತ್ತು. ಮಿಥುನ್‌ ಚಕ್ರವರ್ತಿ ಮತ್ತು ಅನುಪಮ್‌ ಖೇರ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ.

6) ಝುಂಡ್

ಬಾಲಿವುಡ್‌ ಸ್ಟಾರ್‌ ನಟ ಅಮಿತಾಭ್‌ಬಚ್ಚನ್ ಅಭಿನಯದ ‘ಝಂಡ್‌‘ ಸಿನಿಮಾ ಕೂಡ ಆಸ್ಕರ್‌ ಸ್ಪರ್ಧೆಗೆ ಹೋಗುವಲ್ಲಿ ವಿಫಲವಾಗಿದೆ. ಬೀದಿ ಮಕ್ಕಳ ಫುಟ್‌ಬಾಲ್‌ ಕತೆಯನ್ನು ಆಧರಿಸಿದ ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಮರಾಠಿಯನಾಗರಾಜ್ ಮಂಜುಳೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.

7) ಬದಾಯಿ ಹೊ

ಇಳಿವಯಸ್ಸಿನಲ್ಲಿ ಮಗು ಪಡೆಯುವ ದಂಪತಿ ಕತೆ ಹೊಂದಿರುವ ಹಾಸ್ಯ ಪ್ರಧಾನ 'ಬದಾಯಿ ಹೊ'ಸಿನಿಮಾ ಸಹ ರೇಸ್‌ನಲ್ಲಿತ್ತು. ಹಾಸ್ಯಮಯ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇಳಿವಯಸ್ಸಿನಲ್ಲಿರುವ ತವಕ–ತಲ್ಲಣಗಳು, ಗೊಂದಲಗಳು ಹಾಗೂ ಮಗುವಿನ ಮೇಲಿನ ಪ್ರೀತಿ, ಸಮಾಜದಿಂದ ಎದುರುಗಾಗುವ ಸಂಕಷ್ಟಗಳ ಚಿತ್ರವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.ರಾಜ್‌ಕುಮಾರ್‌ ರಾವ್‌ ಅಭಿನಯದ ಈ ಸಿನಿಮಾವನ್ನು ಹರ್ಷವರ್ಧನ್‌ ಕುಲಕರ್ಣಿ ನಿರ್ದೇಶನ ಮಾಡಿದ್ದರು.

8) ಬ್ರಹ್ಮಾಸ್ತ್ರ

ಇತ್ತೀಚೆಗಷ್ಟೆ ಬಿಡುಗಡೆಯಾದ ರಣಬೀರ್‌ ಕಪೂರ್-ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಕೂಡ ಆಯ್ಕೆ ಸಮಿತಿಯ ಮುಂದಿತ್ತು. ಆಯಾನ್‌ ಮುಖರ್ಜಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಸಹ ಆಯ್ಕೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಉತ್ತಮ ಬಾಲಿವುಡ್‌ ಸಿನಿಮಾ ಎಂಬ ಪ್ರಶಂಸೆಗೆ ಈ ಸಿನಿಮಾ ಪಾತ್ರವಾಗಿದೆ.

ಸರಳ ವ್ಯಕ್ತಿಯ ಸುತ್ತ ಹೆಣೆಯಲಾದ ಫ್ಯಾಂಟಸಿ ಚಿತ್ರವಾಗಿದೆ. ಅಮಿತಾಬ್ ಬಚ್ಚನ್, ನಟ ನಾಗಾರ್ಜುನ ಮತ್ತು ನಟಿ ಮೌನಿ ರಾಯ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

9) ಅನೇಕ್‌

ಅನುಭವ್ ಸಿನ್ಹಾ ನಿರ್ದೇಶನ ಮಾಡಿದ್ದ ‘ಅನೇಕ್‌‘ ಸಿನಿಮಾ ಈಶಾನ್ಯ ಭಾರತದ ಭೌಗೋಳಿಕ, ರಾಜಕೀಯ ಹಿನ್ನೆಲೆ ಕಥೆಯನ್ನು ಒಳಗೊಂಡಿದೆ. ಆಯುಷ್ಮಾನ್ ಖುರಾನಾ ಅಭಿನಯ ಮಾಡಿದ್ದ ಈ ಸಿನಿಮಾ ಕೂಡ ಜ್ಯೂರಿಗಳ ಮನ ಗೆಲ್ಲುವಲ್ಲಿ ವಿಫಲವಾಗಿದೆ. ವಿಮರ್ಶಕರಿಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

10)ಅಪಾರಜಿತೊ

ಬಂಗಾಳಿ ಭಾಷೆಯ ‘ಅಪಾರಜಿತೊ‘ ಸಿನಿಮಾ ಕೂಡ ಆಸ್ಕರ್‌ ಸ್ಪರ್ಧೆಯ ಕಣದಲ್ಲಿತ್ತು. ಯುವ ಸಿನಿಮಾ ವೃತ್ತಿಪರನ ಕತೆಯನ್ನು ಆಧರಿಸಿದ ಈ ಸಿನಿಮಾ ಪಶ್ಚಿಮ ಬಂಗಾಳದಲ್ಲಿ ಹಿಟ್‌ ಆಗಿದೆ. ಅನಿಕ್ ದತ್ತ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಜೀತು ಕಮಾಲ್‌ ನಟಿಸಿದ್ದಾರೆ.

11) ಸೆಮ್‌ಕೋರ್

ದಿಮಾಸ ಭಾಷೆಯ 'ಸೆಮ್‌ಕೋರ್' ಸಿನಿಮಾ ಕೂಡ ಆಸ್ಕರ್‌ ಸ್ಪರ್ಧೆಯಲ್ಲಿತ್ತು. ಈಶಾನ್ಯ ಭಾರತದ ಅಸ್ಸಾ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ದಿಮಾಸ ಭಾಷೆಯನ್ನು ಮಾತನಾಡಲಾಗುತ್ತದೆ. ಹಳ್ಳಿಯ ಮಹಿಳೆಯೊಬ್ಬರ ಜೀವನಗಾಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಅಮೀ ಬರುಹಾ ನಟಿಸಿ, ನಿರ್ದೇಶನ ಮಾಡಿದ್ದಾರೆ.

12) ಆರಿಯಿಪ್ಪು

ಮಲಯಾಳಂ ಸಿನಿಮಾ 'ಅರಿಯಿಪ್ಪು' ಸಹ ಆಸ್ಕರ್‌ಗೆ ಆಯ್ಕೆ ಆಗಲೆಂದು ಸ್ಪರ್ಧೆಗೆ ಕಳಿಸಲ್ಪಟ್ಟಿತ್ತು. ಮಹೇಶ್ ನಾರಾಯಣ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಕೊಂಚೊಕೊ ಬೋಬನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಗಂಡ-ಹೆಂಡತಿ ಕೆಲಸ ಮಾಡುವ ಪ್ಯಾಕ್ಟರಿಯಲ್ಲಿ ವಿಡಿಯೊ ಹರಿದಾಡುತ್ತದೆ. ಅದು ಅವರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಕತೆಯನ್ನು ಈ ಸಿನಿಮಾ ಹೊಂದಿದೆ.

13) ಚೆಲ್ಲೊ ಶೋ

ಗುಜರಾತಿ ಚಲನಚಿತ್ರ ‘ಚೆಲ್ಲೊ ಶೋ’ 95ನೇ ಅಕಾಡೆಮಿ ಪ್ರಶಸ್ತಿಗೆ (2023ರ ಆಸ್ಕರ್‌ ಪ್ರಶಸ್ತಿ) ಅಧಿಕೃತ ಪ್ರವೇಶ ಪಡೆದಿರುವ ಭಾರತೀಯ ಚಲನಚಿತ್ರವಾಗಿದೆ.ಮುಖ್ಯಪಾತ್ರಗಳಲ್ಲಿ ಭವಿನ್‌ ರಾಬರಿ, ಭವೇಶ್‌ ಶ್ರೀಮಲಿ, ರಿಚಾ ಮೀನಾ, ದಿಪೇನ್‌ ರಾವಲ್‌ ಮತ್ತು ಪರೇಶ್‌ ಮೆಹ್ತಾ ಕಾಣಿಸಿಕೊಂಡಿದ್ದಾರೆ. ಗುಜರಾತ್‌ನ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ಕಳೆವ ವೇಳೆ ತಾವು ಚಲನಚಿತ್ರಗಳಿಗೆ ಮನಸೋಲುತ್ತಿದ್ದ ನೆನಪುಗಳನ್ನೇ ಸ್ಫೂರ್ತಿಯಾಗಿಸಿಕೊಂಡು ನಿರ್ದೇಶಕ ಪಾನ್‌ ನಳಿನ್‌ ಅವರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಆಸ್ಕರ್‌ ಸ್ಪರ್ಧೆಗೆ ಆಯ್ಕೆಯಾಗಲು ಸಿನಿಮಾದ ಮನರಂಜನೆ, ಮಾಸ್ ಗುಣ, ತಂತ್ರಜ್ಞಾನ, ಅದ್ದೂರಿ ನಿರ್ಮಾಣ, ಪ್ರಚಾರ ಹಾಗೂ ಆದಾಯ ಮುಖ್ಯವಾಗುವುದಿಲ್ಲ. ಬದಲಿಗೆ ಕಥೆ ಮುಖ್ಯವಾಗುತ್ತದೆ. ಆಸ್ಕರ್‌ಗೆ ಆಯ್ಕೆಯಾಗುವ ಸಿನಿಮಾ ತುಂಬಾ ವಿಶೇಷವಾಗಿರಬೇಕು ಹಾಗೂ ಪ್ರಶಸ್ತಿಯನ್ನು ಗೆಲ್ಲುವ ಗುಣಮಟ್ಟ ಹೊಂದಿರಬೇಕು ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ನಾಗಾಭರಣ ಹೇಳಿದ್ದಾರೆ ಎಂದು ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT