ಭಾನುವಾರ, ಜುಲೈ 3, 2022
27 °C

ಸಾರ ಹೀರುವ ಚಿಟ್ಟೆಗಳು..

ಎಂ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಮಳೆಗಾಲ ಮುಗಿದು ಸುಮಾರು ಒಂದು ತಿಂಗಳಾಗಿತ್ತು, ಎಲೆ ಉದುರುವ ಕಾಡಾದ ದೇವರಾಯನ ದುರ್ಗ ರಕ್ಷಿತಾರಣ್ಯದಲ್ಲಿ ತೊರೆಗಳು ಬತ್ತಲು ಶುರುವಾಗಿದ್ದವು. ನಾನು ಹೀಗೆ ಒಂದು ದಿನ ಕಾಡಿನಲ್ಲಿ ತಿರುಗಾಡುತ್ತಿರಬೇಕಾದರೆ ಒಂದು Common Rose ಚಿಟ್ಟೆ ಒದ್ದೆಯಾಗಿದ್ದ ನೆಲದಮೇಲೆ ಕೂತು ನೀರು ಹೀರುತ್ತಿತ್ತು. ನನ್ನ ಚಲನೆಯಿಂದ ವಿಚಲಿತವಾದ ಚಿಟ್ಟೆ, ಹಾರಿ ಹೋಗಿ ಮತ್ತೆ ಅದೇ ಜಾಗದಲ್ಲಿ ಬಂದು ಕುಳಿತುಕೊಂಡಿತು. ಸ್ವಲ್ಪವೂ ಅಲುಗಾಡದೆ ಕೂತಿದ್ದ ನನ್ನ ಇರುವಿಕೆ ಅದರ ಅರಿವಿಗೆ ಬರಲಿಲ್ಲವೆಂದು ಕಾಣುತ್ತದೆ. ಎರಡು ನಿಮಿಷಗಳ ನಂತರ ಅದರ ಹೊಟ್ಟೆಯ ಕೆಳಭಾಗದಿಂದ ಒಂದೊಂದು ತೊಟ್ಟು ನೀರು ಬೀಳಲು ಶುರುವಾಯ್ತು. ಸೊಂಡಿಲಿನಂಥ ಬಾಯಿಯಿಂದ ನೀರು ಹೀರಿ ಹಾಗೆಯೇ ಹೊಟ್ಟೆಯ ಕೆಳಭಾಗದಿಂದ ನೀರನ್ನು ಹೊರಬಿಡುತ್ತಿತ್ತು. ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿದು, ಚಿಟ್ಟೆಗೆ ಗೊತ್ತಾಗದ ಹಾಗೆ ನಿಧಾನವಾಗಿ ಹಿಂದೆ ಸರಿದೆ.

ಒದ್ದೆ ನೆಲದ ಮೇಲೆ ನೀರು ಹೀರುವುದನ್ನು ಆಂಗ್ಲ ಭಾಷೆಯಲ್ಲಿ ಮಡ್‌ಪಡ್ಲಿಂಗ್ (Mudpuddling) ಎನ್ನುತ್ತಾರೆ. ಕನ್ನಡದಲ್ಲಿ ಸಾರಹೀರಿಕೆ ಎನ್ನಬಹುದು. ಸಾರಹೀರಿಕೆಯ ಹಿಂದೆ ಅಡಗಿರುವ ಭೌತ, ರಸಾಯನ ಮತ್ತು ಜೀವ ಶಾಸ್ತ್ರಗಳನ್ನು ಈ ಚಿಟ್ಟೆಗಳು ಅರ್ಥ ಮಾಡಿಕೊಂಡು ತಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಚಿಟ್ಟೆಗಳು ಸಾರಹೀರಿಕೆಯಲ್ಲಿ ತೊಡಗಿಕೊಳ್ಳಲು ಕಾರಣ, ಅವುಗಳಲ್ಲಿ ಉಂಟಾಗುವ ಲವಣಾಂಶದ ಕೊರತೆ. ಸಾರಹೀರಿಕೆಯಲ್ಲಿ ತೊಡಗುವ ಚಿಟ್ಟೆಗಳು ಸಾಮಾನ್ಯವಾಗಿ ಗಂಡು ಮಾತ್ರ ಎನ್ನುವುದು ಗಮನಿಸಬೇಕಾದ ವಿಷಯ. ಮಿಲನವಾಗುವ ಸಮಯದಲ್ಲಿ ಗಂಡಿನಲ್ಲಿದ್ದ ಸೋಡಿಯಂ ಮತ್ತು ಇತರ ಲವಣಾಂಶಗಳು ಹೆಣ್ಣಿಗೆ ವರ್ಗಾವಣೆಯಾಗುತ್ತವೆ, ಈ ಕಾರಣದಿಂದ ಲವಣಾಂಶದ ಸಮತೋಲನ ಕಾಪಾಡಿಕೊಳ್ಳಲು ಗಂಡು ಚಿಟ್ಟೆಗಳು ಈ ಪ್ರಕ್ರಿಯೆಯಲ್ಲಿ ತೊಡಗುತ್ತವೆ.

ಚಿಟ್ಟೆಗಳದ್ದು ಎರಡು ಜನ್ಮ ಎನ್ನಬಹುದು. ಒಂದು ಮೊಟ್ಟೆ ಒಡೆದು ಬಂದ ಕಂಬಳಿ ಹುಳುವಿನ ಜನ್ಮ, ಕಂಬಳಿ ಹುಳು ಗೂಡು ಸೇರಿ ಚಿಟ್ಟೆಯಾಗಿ ರೂಪಾಂತರಗೊಳ್ಳುವುದು ಎರಡನೇ ಜನ್ಮ. ಕಂಬಳಿಹುಳುವಾಗಿದ್ದಾಗ ದಿನ ರಾತ್ರಿ ಎನ್ನದೆ ಒಂದೇ ಸಮನೆ ಎಲೆ ಹೂಗಳನ್ನು ಜಗಿದು ತಿನ್ನುತ್ತವೆ. ಚಿಟ್ಟೆಯಾಗಿ ರೂಪಾಂತರಗೊಂಡ ಮೇಲೆ ಬಾಯಿ ಸೊಂಡಲಿನಂಥ ಕೊಳವೆಯಾಕಾರ ಪಡೆದುಕೊಳ್ಳುತ್ತದೆ. ಈ ಕಾರಣದಿಂದ ಚಿಟ್ಟೆಗಳು ಪ್ರೌಢಾವಸ್ತೆಯಲ್ಲಿ ದ್ರವ ರೂಪದ ಆಹಾರ ಮಾತ್ರ ಸೇವಿಸಬಲ್ಲವು. ಊಟಕ್ಕಾಗಿ ಹಣ್ಣಿನ ರಸ, ಹೂವುಗಳಿಂದ ಮಕರಂದ, ಕೊಳೆಯುತ್ತಿರುವ ಜೀವಿಗಳಿಂದ ಒಸರುವ ದ್ರವನ್ನು ಹೀರುತ್ತವೆ. ಹಾಗೆಯೆ ಲವಣಾಂಶಕ್ಕಾಗಿ ಸಾರಹೀರಿಕೆ ಮೇಲೆ ಅವಲಂಬಿತವಾಗಿವೆ.

ಚಿಟ್ಟೆಗಳು ಸಾರಹೀರಿಕೊಳ್ಳುವ ಜಾಗಗಳೆಂದರೆ ತೊರೆಯ ಅಂಚಿನಲ್ಲಿ ಒದ್ದೆಯಾದ ಮರಳು, ಪ್ರಾಣಿಗಳು ಮೂತ್ರ ವಿಸರ್ಜಿಸಿದ ಜಾಗಗಳು ಮತ್ತು ಕಡಿಮೆ ನೀರಿನ ಕೆರೆ ಕಟ್ಟೆಯ ಅಂಗಳ.

ನೀರಿನ ಮೇಲ್ಮೈ ಒತ್ತಡದ (Surface Tension) ಬಗ್ಗೆ ಅರಿತುಕೊಂಡು, ನೀರನ್ನು ಹೀರಲು ಭೌತ ಶಾಸ್ತ್ರದಲ್ಲಿ ಉಲ್ಲೇಖವಾಗುವ ಲೋಮ ಏರಿಕೆ(Capillary Rise) ತತ್ವ ಉಪಯೋಗಿಸಿಕೊಳ್ಳುವ ಚಿಟ್ಟೆಗಳು, ಒದ್ದೆ ಜಾಗದಲ್ಲಿ ಸೋಡಿಯಂ ಇರುವಿಕೆಯನ್ನು ದೂರದಿಂದಲೇ ಸೋಡಿಯಂ ಅಯಾನುಗಳಿಂದ ಗುರುತುಹಿಡಿಯುತ್ತವೆ. ಹೀರಿಕೊಂಡ ನೀರಿನಿಂದ ಲವಣವನ್ನು ಸೋಸಿ, ಬರೀ ನೀರನ್ನು ರಿವರ್ಸ್ ಆಸ್ಮೋಸಿಸ್ ರೀತಿಯಲ್ಲಿ ಹೊರಹಾಕಿಬಿಡುತ್ತವೆ. ಮನುಷ್ಯ ಸುಮಾರು ಇನ್ನೂರು ಮುನ್ನೂರು ವರ್ಷಗಳ ಮುಂಚೆಯಷ್ಟೆ ಅರ್ಥಮಾಡಿಕೊಂಡ ಭೌತ, ರಸಾಯನ ಮತ್ತು ಜೀವ ಶಾಸ್ತ್ರಗಳನ್ನು ಚಿಟ್ಟೆಗಳು ಸಾವಿರಾರು ವರ್ಷಗಳಿಂದ ಅಭ್ಯಸಿಸುತ್ತಿವೆ!!

ಸಾರಹೀರಿಕೊಳ್ಳುವಾಗ ಬೇರೆ ಬೇರೆ ಜಾತಿಯ ಚಿಟ್ಟೆಗಳು ಕೂಡ ಒಟ್ಟಾಗಿ ನೀರು ಹೀರುತ್ತವೆ. ಒಂದು ಚಿಟ್ಟೆ ತನಗೆ ಬೇಡದ ಇನ್ನೊಂದು ಜಾತಿಯ ಚಿಟ್ಟೆಯನ್ನು ಸಾರಹೀರಿಕೊಳ್ಳಲು ಬಿಡದೆ ಅಟ್ಟಾಡಿಸುವುದನ್ನು ಕೂಡ ಗಮನಿಸಬಹುದು. ಪ್ರಶಾಂತವಾಗಿರುವ ಕಾಡಿನ ಮಧ್ಯೆ ಬಣ್ಣಬಣ್ಣದ ಚಿಟ್ಟೆಗಳು ಮೀಟಿಂಗ್ ಮಾಡುತ್ತಿರುವ ಹಾಗೆ ಕೂತು ನೀರು ಹೀರುವುದನ್ನು ನೋಡುವ ಆನಂದಕ್ಕೆ ಸಾಟಿಯೇ ಇಲ್ಲ ಎನಿಸುತ್ತದೆ.

(ಚಿತ್ರಗಳು : ಲೇಖಕರವು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು