ಗುರುವಾರ , ಜೂನ್ 4, 2020
27 °C

ಬಾಂದ್ರಾ| ಬೀದಿಗಿಳಿದ ವಲಸೆಕಾರ್ಮಿಕರು; ಘಟನೆ ಬಗ್ಗೆ ಹರಿದಾಡಿದ ಸುಳ್ಳು ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

factcheck

ಮುಂಬೈ: 2020 ಏಪ್ರಿಲ್ 14ರಂದು ಸಂಜೆ ಮುಂಬೈಯ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಮಂದಿ ವಲಸೆ ಕಾರ್ಮಿಕರು ಸೇರಿದ್ದರು. ಊರಿಗೆ ಹೋಗಲು ರೈಲು ವ್ಯವಸ್ಥೆ ಇದೆ ಎಂಬ ಸುದ್ದಿ ಕೇಳಿ ರೈಲ್ವೆ ನಿಲ್ದಾಣಕ್ಕೆ ಬಂದವರಾಗಿದ್ದರು ಅವರು. ಲಾಕ್‍ಡೌನ್ ಉಲ್ಲಂಘಿಸಿ ಬೀದಿಗಿಳಿದ ಈ ವಲಸೆ ಕಾರ್ಮಿಕರು ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದಾಗ ಪೊಲೀಸ್ ಲಾಠಿ ಪ್ರಹಾರ ನಡೆಸಿದ್ದರು. 

ಈ ಘಟನೆ ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ಧರ್ಮದ ಲೇಪ ನೀಡಿ ಹಲವಾರು ಪೋಸ್ಟ್‌ಗಳು ಹರಿದಾಡಿದವು. ಕೆಲವೊಂದು ಸುದ್ದಿ ಮಾಧ್ಯಮಗಳೂ ಇದೇ ರೀತಿ ಬಿಂಬಿಸಿದವು. ಇಂಡಿಯಾ ಟಿವಿಯ ಮುಖ್ಯ ಸಂಪಾದಕ ರಜತ್ ಶರ್ಮಾ ಅವರು ಜನರು ಮಸೀದಿ ಬಳಿ ಗುಂಪು ಸೇರಿದ್ದಾರೆ ಎಂಬುದನ್ನೇ ಹೈಲೈಟ್ ಮಾಡಿ ಟ್ವೀಟಿಸಿದ್ದರು.

ವಲಸೆ ಕಾರ್ಮಿಕರು ಈ ರೀತಿ ಗುಂಪು ಸೇರಲು ಕಾರಣ ಏನೆಂದು ತಿಳಿಯಲು ಫ್ಯಾಕ್ಟ್‌ಚೆಕಿಂಗ್ ವೆಬ್‌ಸೈಟ್  ಬೂಮ್‌ಲೈವ್ ಮುಂಬೈ ಪೊಲೀಸ್ ಮತ್ತು ಸ್ಥಳೀಯ ವರದಿಗಾರರನ್ನು ಮಾತನಾಡಿಸಿದ್ದು, ವದಂತಿ ಕೇಳಿ ಜನರು ಅಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ರೈಲ್ವೆ ನಿಲ್ದಾಣದ ಬಳಿಯೇ ಮುಸ್ಲಿಮರ ಪ್ರದೇಶವಿದೆ. ಅಲ್ಲಿನ ಸ್ಥಳೀಯರು ಬಂದಾಗ ಜನರ ಗುಂಪು ಮತ್ತಷ್ಟು ಜಾಸ್ತಿಯಾಗಿದೆ ಎಂದು ಸ್ಥಳೀಯ ವರದಿಗಾರರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ಅವಧಿಯನ್ನು ಮೇ.3ರವರೆಗೆ ವಿಸ್ತರಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಸಂಜೆ ವೇಳೆ ವಲಸೆ ಕಾರ್ಮಿಕರೆಲ್ಲರೂ ಬಾಂದ್ರಾದಲ್ಲಿ ಬಂದು ಸೇರಿದ್ದರು. ಬಾಂದ್ರಾದಲ್ಲಿ ಈ ಘಟನೆ ನಡೆಯುತ್ತಿರುವಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮಸೀದಿ ಬಳಿ ಜನರು ಗುಂಪು ಸೇರಿರುವ ಫೋಟೊವೊಂದು ವೈರಲ್ ಆಗಿದೆ.

ಇಷ್ಟೇ ಅಲ್ಲದೆ ರಿಪಬ್ಲಿಕ್, ಇಂಡಿಯಾ ಟಿವಿ, ನ್ಯೂಸ್  ನೇಷನ್ ಮತ್ತು ಎಬಿಪಿ ನ್ಯೂಸ್ ವಾಹಿನಿಗಳು ಜನರು ಮಸೀದಿ  ಮುಂದೆ ಗುಂಪು ಸೇರಿರುವುದನ್ನೇ ಹೈಲೈಟ್ ಮಾಡಿದ್ದವು.

 ಈ  ಸುದ್ದಿಗೆ 'ಮುಂಬೈ ಕೇ ಲಾಕ್‌ಡೌನ್ ಕಾ ದುಶ್ಮನ್ ಕೌನ್' ಎಂಬ ತಲೆಬರಹ  ನೀಡಿತ್ತು ರಿಪಬ್ಲಿಕ್ ಭಾರತ್.

ಎಬಿಪಿ ಹಿಂದಿ ವಾಹಿನಿಯು ಈ ಜನರು ಗುಂಪು ಸೇರುವುದಕ್ಕೆ ಮಸೀದಿ ಕಾರಣವೇ? ಎಂಬ ಪ್ರಶ್ನೆ ಕೇಳಿತ್ತು. ಮುಂಬೈಯ ಜಮಾ ಮಸೀದಿ ಮುಂದೆ 1500 ಮಂದಿ ಗುಂಪು ಸೇರುವಂತೆ ಮಾಡಿದ್ದು ಯಾರು? ಎಂಬ ಸ್ಕ್ರಾಲ್ ಹಾಕಿತ್ತು ಇಂಡಿಯಾ ಟಿವಿ.

ವಲಸೆ ಕಾರ್ಮಿಕರು ಗುಂಪು ಸೇರಲು ವದಂತಿಗಳೇ ಕಾರಣ:  ಮುಂಬೈ ಪೊಲೀಸ್
ಈ ಘಟನೆಯ ಸತ್ಯಾಸತ್ಯತೆ ತಿಳಿಯಲು ಬೂಮ್ ತಂಡ  ಮುಂಬೈ ವಲಯದ ಡಿಸಿಪಿ ಅಭಿಷೇಕ್ ತ್ರಿಮುಖೆ ಅವರಲ್ಲಿ ಮಾತನಾಡಿದಾಗ, ಅಲ್ಲಿ ಸೇರಿರುವ ಬಹುತೇಕ ಜನರು ವಲಸೆ ಕಾರ್ಮಿಕರು ಎಂದು ಅವರು ಹೇಳಿದ್ದಾರೆ. ಈ ವಲಸೆ ಕಾರ್ಮಿಕರು ಹತ್ತಿರದಲ್ಲಿರುವ ಪಟೇಲ್ ನಗರದಲ್ಲಿ ವಾಸವಾಗಿದ್ದಾರೆ. ವದಂತಿ ಕೇಳಿ ಜನರು ಇಲ್ಲಿ ಸೇರಿದ್ದಾರೆ. ಪ್ರಾಥಮಿಕ ಹಂತದ ತನಿಖೆ ಪ್ರಕಾರ ಇವರ ಊರುಗಳಿಗೆ ರೈಲು ವ್ಯವಸ್ಥೆ ಮಾಡಲಾಗಿದೆ ಮತ್ತು ಆಹಾರ ವಿತರಣೆ ಮಾಡಲಾಗುತ್ತಿದೆ ಎಂಬ ಎರಡು ವದಂತಿಗಳನ್ನು ನಂಬಿ ಜನರು ಇಲ್ಲಿ ಬಂದಿದ್ದಾರೆ ಎಂದಿದ್ದಾರೆ.

ಸಂಜೆ ಸರಿಸುಮಾರು  3- 3.30ರ ಹೊತ್ತಿಗೆ ಲಾಕ್‌ಡೌನ್ ಉಲ್ಲಂಘಿಸಿ ಜನರು ರೈಲು ನಿಲ್ದಾಣದ ಬಳಿ ಸೇರಿದರು. ಊರಿಗೆ ಹೋಗಲು ರೈಲು ಇದೆ ಎಂಬ ಸುದ್ದಿ ಕೇಳಿ ಬಂದವರನ್ನು ಪೊಲೀಸ್ ಸಿಬ್ಬಂದಿ  ತಡೆದು ನಿಲ್ಲಿಸಿದಾಗ ಅವರು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ಮುಂಬೈ ಪೊಲೀಸ್ ವಕ್ತಾರ ವಿಡಿಯೊ ಹೇಳಿಕೆಯನ್ನೂ ನೀಡಿದ್ದಾರೆ.

ಖ್ಯಾತ ಸುದ್ದಿ ಪತ್ರಿಕೆಯ ಸ್ಥಳೀಯ ವರದಿಗಾರರಲ್ಲಿಯೂ ಬೂಮ್  ತಂಡ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ: ನಾನು ಘಟನಾ ಸ್ಥಳಕ್ಕೆ ತಲುಪಿದಾಗ ಪೊಲೀಸರು ಮತ್ತು ಸಮುದಾಯದ ಸ್ಥಳೀಯ ಮುಖಂಡರು ಸೇರಿ ಅಲ್ಲಿ ಪರಿಸ್ಥಿತಿ ನಿಯಂತ್ರಣ ಮಾಡುತ್ತಿದ್ದರು. ಅಲ್ಲಿದ್ದ ಕೆಲವರಲ್ಲಿ  ಮಾತನಾಡಿಸಿದಾಗ ರೈಲು ವ್ಯವಸ್ಥೆ ಇದೆ ಎಂದು ಸುದ್ದಿ ಕೇಳಿ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ. ಕೈಯಲ್ಲಿ  ಹಣ ಕಡಿಮೆ ಇದೆ, ಆಹಾರ ವಸ್ತುಗಳೂ ಇಲ್ಲ. ಹೀಗಿರುವಾಗ ಇಲ್ಲಿ ಆಹಾರ ಕೊಡುತ್ತಿದ್ದಾರೆ. ಅದನ್ನು ಸಂಗ್ರಹಿಸಲು ನಾವು ಬಂದಿದ್ದೇವೆ ಎಂದು ಕೆಲವರು ಹೇಳಿದ್ದಾರೆ.

ವದಂತಿಗಳು ಹರಡಿದ್ದು ನಿಜ ಎಂದು ಮುಂಬೈಯ ಹಿರಿಯ ಪೊಲೀಸ್ ಅಧಿಕಾರಿಗಳು  ಹೇಳಿದ್ದಾರೆ. ಲಾಕ್‌ಡೌನ್ ವಿಸ್ತರಣೆ ಆದ ಕೂಡಲೇ ಮುಂದಿನ ದಿನಗಳನ್ನು ಇಲ್ಲಿ ಕಳೆಯುವುದು ಹೇಗೆ ಎಂದು ಅವರು ಆತಂಕಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಜರಿ/ಎಂಬ್ರಾಯಿಡರಿ ಕೆಲಸ ಮಾಡುವವರಾಗಿದ್ದು, ಕಂಪನಿಯಲ್ಲಿಯೇ ಇರುವ ಪುಟ್ಟ  ಕೋಣೆಗಳಲ್ಲಿ ವಾಸ ಮಾಡುವವರಾಗಿದ್ದಾರೆ. ರೈಲು ಸಂಚಾರ ಆರಂಭವಾಗಲಿದೆ ಎಂದು ವದಂತಿ ಕೇಳಿ ಅವರು ರೈಲು ನಿಲ್ದಾಣಕ್ಕೆ ಬಂದಿದ್ದು  ವಾಪಸ್ ಹೋಗಲು ನಿರಾಕರಿಸಿದ್ದಾರೆ. ಎಲ್ಲರಿಗೂ ಆಹಾರ ನೀಡುವುದಾಗಿ ಪೊಲೀಸರು ಹೇಳಿದರೂ ಅವರು ಒಪ್ಪಲಿಲ್ಲ. ಆಹಾರ ವಿತರಣೆ ಮಾಡುತ್ತಾರೆ ಎಂಬ ಸುದ್ದಿ ಕೇಳಿ ಬಂದವರೂ ಇದ್ದರು. ನಾವು ಆಹಾರ ಪೊಟ್ಟಣ ವಿತರಿಸಿದಾಗ ಕೆಲವರು ಅದನ್ನು ಸ್ವೀಕರಿಸಿಲ್ಲ. ನಮ್ಮನ್ನು ಹೇಗಾದರೂ ಮಾಡಿ ಮನೆಗೆ ತಲುಪಿಸಿ ಎಂದು ಅವರು ಮನವಿ ಮಾಡಿದರು. ಇನ್ನೆರಡು ವಾರಗಳ ಕಾಲ ಇಲ್ಲಿರಲು ಸಾಧ್ಯವಿಲ್ಲ ಎಂದು ಅವರು ಪಟ್ಟು ಹಿಡಿದು ಅಲ್ಲಿಂದ ಚದುರದೇ ಇದ್ದಾಗ ಲಾಠಿ ಪ್ರಹಾರ ಮಾಡಿದೆವು ಎಂದಿದ್ದಾರೆ.

ಈ ಘಟನೆಗೂ ಧರ್ಮಕ್ಕೂ ಸಂಬಂಧವೇ ಇಲ್ಲ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಫೋಟೊ ಮತ್ತು ವಿಡಿಯೊಗಳನ್ನು ಬೂಮ್  ವಿಶ್ಲೇಷಿಸಿದ್ದು ಬಾಂದ್ರಾದಲ್ಲಿ ನಡೆದ ಘಟನೆ ಯಾವುದೇ ಧರ್ಮಕ್ಕೆ ತಳುಕು ಹಾಕಿಕೊಂಡಿಲ್ಲ ಎಂದು ಹೇಳಿದೆ. ಗೂಗಲ್ ಮ್ಯಾಪ್ ಬಳಸಿ ರೈಲು  ನಿಲ್ದಾಣ ಮತ್ತು ಮಸೀದಿಯಿರುವ ಜಾಗ ನೋಡಿದರೆ ಇವೆರಡು ಅಕ್ಕಪಕ್ಕದಲ್ಲೇ ಇರುವುದು ತಿಳಿಯುತ್ತದೆ.  

ಮಸೀದಿ ಬಳಿ ಜನ ಸೇರಿದ್ದಾರೆ ಎಂದು ಟ್ವಿಟರ್‌ನಲ್ಲಿನ ವಾದದ ಬಗ್ಗೆ ಮುಂಬೈ ಪೊಲೀಸರಲ್ಲಿ  ಮಾತನಾಡಿದಾಗ, ಅಲ್ಲಿ  ಪಕ್ಕದಲ್ಲಿ ಮಸೀದಿ ಇರುವುದು ನಿಜ. ಆದರೆ ಅಲ್ಲಿ ಸೇರಿರುವ ಜನರ ಗುಂಪಿಗೂ ಮಸೀದಿಗೂ ಯಾವುದೇ ಸಂಬಂಧ ಇಲ್ಲ. ಇಂಥಾ ಪ್ರಕರಣಗಳಲ್ಲಿ  ಗುಂಪು ಸೇರಿದ ಜನರ ಧರ್ಮ ಯಾವುದು ಎಂದು ನಾವು ನೋಡುವುದಿಲ್ಲ ಎಂದು ಹಿರಿಯ  ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು