ಬುಧವಾರ, ಜೂನ್ 23, 2021
22 °C

70 ವರ್ಷಗಳಲ್ಲಿ ಕಾಂಗ್ರೆಸ್ ಎನೂ ಮಾಡಿಲ್ಲ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದರೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘70 ವರ್ಷಗಳಲ್ಲಿ ಕಾಂಗ್ರೆಸ್ ಎನನ್ನೂ ಮಾಡಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ ಎಂಬ ಬರಹ ಇರುವ ಪೋಸ್ಟ್‌ಗಳು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ. ಈ ಪೋಸ್ಟ್‌ಗಳ ಜತೆ ರಾಹುಲ್ ಗಾಂಧಿ ಅವರ ವಿಡಿಯೊ ಸಹ ಪೋಸ್ಟ್‌ ಆಗಿದೆ. ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು, ‘70 ವರ್ಷದಲ್ಲಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ದೇಶದ ಎಲ್ಲಾ ವ್ಯವಸ್ಥೆ ಹಾಳಾಗಿದೆ’ ಎಂದು ಹೇಳುತ್ತಿರುವುದು ದಾಖಲಾಗಿದೆ. ಕಾಂಗ್ರೆಸ್‌ನ ವೈಫಲ್ಯವನ್ನು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಈ ಪೋಸ್ಟ್‌ಗಳಲ್ಲಿ ಬರೆಯಲಾಗಿದೆ. ಫೇಸ್‌ಬುಕ್‌ನಲ್ಲಿ ನಮೋ ಹೆಸರಿನ ಪುಟದಲ್ಲಿ ಮೊದಲು ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಆನಂತರ ನೂರಾರು ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಆದರೆ, ಇದು ತಿರುಚಿದ ವಿಡಿಯೊ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. 2019ರ ಅಕ್ಟೋಬರ್ 13ರಂದು ರಾಹುಲ್ ಗಾಂಧಿ ಅವರು ಮುಂಬೈನ ಧಾರಾವಿಯಲ್ಲಿ ಮಾಡಿದ ಭಾಷಣದ ವಿಡಿಯೊವನ್ನು ತಿರುಚಿ, ಈ ವಿಡಿಯೊವನ್ನು ಸಿದ್ಧಪಡಿಸಲಾಗಿದೆ. ಮೂಲ ವಿಡಿಯೊದಲ್ಲಿ ರಾಹುಲ್ ಅವರು, ‘70 ವರ್ಷಗಳಲ್ಲಿ ಕಾಂಗ್ರೆಸ್‌ ಏನೂ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುತ್ತಾರೆ’ ಎಂದು ಹೇಳಿದ್ದರು. ಈ ವಾಕ್ಯವನ್ನು ತುಂಡರಿಸಿ, ‘70 ವರ್ಷಗಳಲ್ಲಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ’ ಎಂಬ ವಾಕ್ಯವನ್ನಷ್ಟೇ ಉಳಿಸಿಕೊಳ್ಳಲಾಗಿದೆ. ‘70 ವರ್ಷದಲ್ಲಿ ಆಗದೇ ಇದ್ದ ಕೆಲಸ ಈಗ ಆಗಿದೆ. ದೇಶದ ಎಲ್ಲಾ ವ್ಯವಸ್ಥೆ ಹಾಳಾಗಿದೆ’ ಎಂಬ ವಾಕ್ಯದಲ್ಲಿ, ‘ದೇಶದ ಎಲ್ಲಾ ವ್ಯವಸ್ಥೆ ಹಾಳಾಗಿದೆ’ ಎಂಬುದನ್ನಷ್ಟೇ ಉಳಿಸಿಕೊಳ್ಳಲಾಗಿದೆ. ತಪ್ಪು ಅರ್ಥ ಬರುವಂತೆ ವಿಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಲಾಜಿಕಲ್ ಇಂಡಿಯನ್ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು