ಬುಧವಾರ, ಜೂನ್ 3, 2020
27 °C

ಸಮೋಸಕ್ಕೂ ಉಂಟು ಚಿಕನ್ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕನ್‌ನ ಉಪಯೋಗಗಳು ಅನಂತ. ಅದು ಸ್ನಾಯುಗಳನ್ನು ಬಲಪಡಿಸುತ್ತದೆ. ಹಸಿವನ್ನು ಉತ್ತೇಜಿಸುತ್ತದೆ. ಮಾತ್ರವಲ್ಲ ಸುಸ್ತನ್ನು ಹೋಗಲಾಡಿಸುತ್ತದೆ. ಹೀಗೆ ಚಿಕನ್ ಆರೋಗ್ಯಕ್ಕೆ ಪೂರಕವಾದ ಅನೇಕ ಗುಣಗಳನ್ನು ಹೊಂದಿದೆ. ನೀವು ನಾನ್‌ವೆಜ್‌ ಪ್ರಿಯರಾದರೆ ವೀಕೆಂಡ್‌ನಲ್ಲಿ ಚಿಕನ್‌ ಇದ್ದೇ ಇರುತ್ತದೆ ಅಲ್ಲವೆ? ಪ್ರತಿ ಬಾರಿ ಒಂದೇ ರೀತಿಯ ಚಿಕನ್ ಖಾದ್ಯಗಳನ್ನು ತಯಾರಿಸುವ ಬದಲು ಈ ವೀಕೆಂಡ್‌ಗೆ ಹೊಸ ರೆಸಿಪಿಗಳನ್ನು ಟ್ರೈ ಮಾಡಿ. ಮನೆಯಲ್ಲೇ ಮಾಡಿ ಸವಿಯಬಹುದಾದ ರುಚಿಕರ ಚಿಕನ್ ರೆಸಿಪಿಗಳನ್ನು ಪರಿಚಯಿಸಿದ್ದಾರೆ ಪ್ರದೀಪ.ಟಿ.ಕೆ.

ಚಿಕನ್ ಮೆಜೆಸ್ಟಿಕ್

ಬೇಕಾಗುವ ಸಾಮಗ್ರಿಗಳು:

ಮಿಶ್ರಣ ತಯಾರಿಸಲು: ಮೂಳೆಯಿಲ್ಲದ ಚಿಕನ್–300 ಗ್ರಾಂ, ಮಜ್ಜಿಗೆ–1 ಕಪ್, ಕಾರ್ನ್ ಪ್ಲೋರ್–1 1/2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್– 1 ಚಮಚ, ಅರಿಸಿನ ಪುಡಿ–1 ಚಮಚ, ಕೆಂಪು ಮೆಣಸಿನಕಾಯಿ ಪುಡಿ–1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಕರಿಯಲು: ಎಣ್ಣೆ, 1 ಗಡ್ಡೆ ಹೆಚ್ಚಿದ ಬೆಳ್ಳುಳ್ಳಿ, ಹಸಿ ಮೆಣಸು 2, ಕರಿಬೇವು ಒಗ್ಗರಣೆಗೆ ತಕ್ಕಷ್ಟು, ಪುದೀನ 1 ಕಟ್ಟು, ಸೋಯಾ ಸಾಸ್ 1 ಚಮಚ, ಕೆಂಪು ಮೆಣಸಿನ ಪುಡಿ 1/4 ಚಮಚ, ಗರಮ್ ಮಸಾಲ 1/2 ಚಮಚ, ಗಟ್ಟಿ ಮೊಸರು - 3 ಚಮಚ.

ತಯಾರಿಸುವ ವಿಧಾನ: ಚಿಕನ್ ಪೀಸುಗಳನ್ನು 2–3 ಇಂಚು ಉದ್ದದಷ್ಟು ಕತ್ತರಿಸಬೇಕು. ಕತ್ತರಿಸಿದ ಪೀಸುಗಳನ್ನು ದೊಡ್ಡ ಪಾತ್ರೆಯಲ್ಲಿ ಇಪ್ಪತ್ತು ನಿಮಿಷಗಳ ಕಾಲ ಮಜ್ಜಿಗೆಯ ಜೊತೆ ಸೇರಿಸಿ ನೆನೆಸಿಡಬೇಕು. ನಂತರ ಮಜ್ಜಿಗೆಯನ್ನು ಬಸಿದು ಪೀಸುಗಳನ್ನು ಬೇರ್ಪಡಿಸಿ ಇಟ್ಟುಕೊಳ್ಳಬೇಕು.

ಮತ್ತೊಂದು ಪಾತ್ರೆಯಲ್ಲಿ ಬೇರ್ಪಡಿಸಿದ ಪೀಸಿಗೆ ಕೆಂಪು ಮೆಣಸಿನ ಪುಡಿ, ಕಾರ್ನ್ ಪ್ಲೋರ್, ಅರಿಸಿನ ಪುಡಿ , ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹತ್ತು ನಿಮಿಷಗಳ ಕಾಲ ಬಿಡಬೇಕು. ನಂತರ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಂದವಾದ ಉರಿಯಲ್ಲಿ ಬಿಸಿ ಮಾಡಿ ಕಾದ ಎಣ್ಣೆಗೆ ಮಜ್ಜಿಗೆಯಲ್ಲಿ ನೆನೆಸಿದ ಚಿಕನ್ ಪೀಸುಗಳನ್ನು ಹಾಕಿ ಎರಡೂ ಕಡೆಗಳಲ್ಲೂ ಹೊಂಬಣ್ಣ ಬರುವವರೆಗೂ ಹುರಿದು ಇಟ್ಟುಕೊಳ್ಳಿ.

ಮತ್ತೊಂದು ‍ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಪರಿಮಳ ಬರುವರೆಗೂ ಹುರಿಯಿರಿ. ಬೆಳ್ಳುಳ್ಳಿ ಪರಿಮಳ ಬರುತ್ತಿರುವಾಗ ಹೆಚ್ಚಿಕೊಂಡ ಹಸಿ ಮೆಣಸು, ಕರಿಬೇವು ಹಾಕಿ ಕೈಯಾಡಿಸಿ. ಸ್ವಲ್ಪ ಸಮಯದ ನಂತರ ಪುದೀನ ಮತ್ತು ಗರಂ ಮಸಾಲ ಪುಡಿ ಸೇರಿಸಿ ಎರಡು ನಿಮಿಷಗಳ ಕಾಲ ತಿರುವುತ್ತಿರಿ. ನಂತರ ಹುಳಿಯಿರುವ ಗಟ್ಟಿ ಮೊಸರನ್ನು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಸೋಯಾ ಸಾಸ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಹುರಿದುಕೊಂಡ ಚಿಕನ್ ಪೀಸುಗಳನ್ನು ಸೇರಿಸಿ ತಿರುವಿ. ಚಿಕನ್ ಪೀಸುಗಳು ಎಲ್ಲಾ ದ್ರಾವಣಗಳನ್ನು ಚೆನ್ನಾಗಿ ಹೀರಿಕೊಳ್ಳುವಂತೆ ಕೈಯಾಡಿಸುತ್ತಿರಬೇಕು. ಪೀಸುಗಳು ಮಿಶ್ರಣವನ್ನು ಸರಿಯಾಗಿ ಹೀರಿಕೊಂಡಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ಪಾತ್ರೆಯನ್ನು ಉರಿಯಿಂದ ಕೆಳಗಿಳಿಸಿ. ರುಚಿಯಾದ ಚಿಕನ್ ಮೆಜೆಸ್ಟಿಕ್ ಸವಿಯಲು ಸಿದ್ದ.

ಚಿಕನ್ ಟಿಕ್ಕಾ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಬಾಸುಮತಿ ಅಕ್ಕಿ 500 ಗ್ರಾಂ, ಈರುಳ್ಳಿ 200 ಗ್ರಾಂ, ಮೊಸರು, ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಲವಂಗ, ಮರಾಠ ಮೊಗ್ಗು, ಗರಂ ಮಸಾಲ, ಎಣ್ಣೆ, ನಿಂಬೆರಸ, ಚಿಕನ್ 500 ಗ್ರಾಂ, ಹಸಿಮೆಣಸಿನಕಾಯಿ, ಜೀರಾ ಪುಡಿ, ಧನಿಯಾ ಪೌಡರ್, ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ತುಪ್ಪ, ಉಪ್ಪು.

ತಯಾರಿಸುವ ವಿಧಾನ: ಒಂದು ಬಟ್ಟಲಿನಲ್ಲಿ ಚಿಕನ್ ಪೀಸುಗಳನ್ನು ಹಾಕಿ ಅದಕ್ಕೆ ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು, ಗರಂ ಮಸಾಲ, ಎಣ್ಣೆ, ನಿಂಬೆರಸ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿಡಿ. ನಂತರ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಮಿಶ್ರಣ ಮಾಡಿಟ್ಟುಕೊಂಡ ಪೀಸುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಎರಡೂ ಕಡೆ ಹುರಿದು ತೆಗೆದಿಟ್ಟುಕೋಳ್ಳಿ.

ನಂತರ ಒಂದು ಲೀಟರ್ ನೀರಿಗೆ ಪಲಾವ್ ಎಲೆ, ಏಲಕ್ಕಿ, ಲವಂಗ, ಮರಾಠ ಮೊಗ್ಗು ಹಾಕಿ ಒಲೆಯ ಮೇಲಿಡಿ. ಅದಕ್ಕೆ ತೊಳೆದಿಟ್ಟುಕೊಂಡ ಅಕ್ಕಿಯನ್ನು ಹಾಕಿ ಬೇಯಿಸಿ. ಬೆಂದ ಅನ್ನವನ್ನು ಅರ್ಧದಷ್ಟು ತೆಗೆದಿಟ್ಟುಕೊಳ್ಳಿ. ಉಳಿದರ್ಧ ಅನ್ನಕ್ಕೆ ಫ್ರೈ ಮಾಡಿಟ್ಟುಕೊಂಡ ಕೆಲವು ಚಿಕನ್ ಪೀಸ್ ಸೇರಿಸಿ. ಅದರ ಮೇಲೆ ಉಳಿದರ್ಧ ಅನ್ನವನ್ನು ಹಾಕಿ. ಅನ್ನದ ಮೇಲೆ ಉಳಿದಿರುವ ಎಲ್ಲಾ ಚಿಕನ್ ಫ್ರೈ ಹರಡಿ ಮುಚ್ಚಳವನ್ನು ಮುಚ್ಚಿ. ಐದು ನಿಮಿಷಗಳ ನಂತರ ಮುಚ್ಚಳ ತೆಗೆದು ಅನ್ನ ಮತ್ತು ಚಿಕನ್ ಫ್ರೈ ಎಲ್ಲವನ್ನೂ ಸಂಪೂರ್ಣ ಬೆರೆಯುವಂತೆ ಮಿಶ್ರಣ ಮಾಡಿದರೆ ಚಿಕನ್ ಟಿಕ್ಕಾ ಬಿರಿಯಾನಿ ರೆಡಿ.

ಚಿಕನ್ ಸಮೋಸ

ಬೇಕಾಗುವ ಸಾಮಗ್ರಿಗಳು: ಹಿಟ್ಟಿನ ಮಿಶ್ರಣಕ್ಕೆ: ಮೈದಾ 1 ½ ಕಪ್, ಅಜ್ವೇನ್/ಕಾರಮ್ ½ ಟೇಬಲ್ ಸ್ಪೂನ್, ತುಪ್ಪ 3 ಟೇಬಲ್ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು, ಕರಿಯಲು ಎಣ್ಣೆ

ಚಿಕನ್ ಮಿಶ್ರಣಕ್ಕೆ: ಎಣ್ಣೆ 3 ಟೇಬಲ್ ಸ್ಪೂನ್, ಕತ್ತರಿಸಿದ ಈರುಳ್ಳಿ 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ½ ಟೇಬಲ್ ಸ್ಪೂನ್, ಸಣ್ಣಗೆ ಬಿಡಿಬಿಡಿಯಾಗಿ ಕತ್ತರಿಸಿದ ಮೂಳೆಯಿಲ್ಲದ ಚಿಕನ್ 200 ಗ್ರಾಂ, ಅರಿಸಿನ ಪುಡಿ ¼ ಟೇಬಲ್ ಸ್ಪೂನ್, ಕೆಂಪು ಮೆಣಸಿನಕಾಯಿ ಪುಡಿ 1 ½ , ಧನಿಯಾ ಪುಡಿ ½ ಟೇಬಲ್ ಸ್ಪೂನ್, ಗರಂ ಮಸಾಲ ಪುಡಿ ½ ಟೇಬಲ್ ಸ್ಪೂನ್, ಜೀರಿಗೆ ಪುಡಿ ½ ಟೇಬಲ್ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಒಂದು ಬಟ್ಟಲಿಗೆ ಮೈದಾ, ಉಪ್ಪು, ಅಜ್ವೇನ್, ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಹತ್ತು ನಿಮಿಷ ಇಡಬೇಕು.

ಒಂದು ಪ್ಯಾನ್‌ಗೆ ಮೂರು ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಬೇಕು. ಬಿಸಿಯಾದ ಎಣ್ಣೆಗೆ ಕತ್ತರಿಸಿದ ಈರುಳ್ಳಿ, ಮೆಣಸಿನಕಾಯಿ ಹಾಕಿ ಹುರಿಯಬೇಕು. ನಂತರ ½ ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಿ. ಸ್ವಲ್ಪ ಸಮಯದ ನಂತರ 200 ಗ್ರಾಂ ಚಿಕನ್ ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಅರಿಸಿನ ಪುಡಿ, ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಬೆಂದ ಮಿಶ್ರಣಕ್ಕೆ ಜೀರಿಗೆ ಪುಡಿ ಸೇರಿಸಿ ಕೈಯಾಡಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಕೆಳಗಿಳಿಸಿ, ತಣ್ಣಗಾಗಲು ಬಿಡಿ.

ನಂತರ ಕಲಸಿದ ಹಿಟ್ಟನ್ನು ಉದ್ದುದ್ದಕ್ಕೆ ಲಟ್ಟಿಸಿಕೊಂಡು ಅದನ್ನು ಅರ್ಧಕ್ಕೆ ಕತ್ತರಿಸಿ. ಕತ್ತರಿಸಿದ ಅರ್ಧ ಭಾಗಕ್ಕೆ ನೀರು ಸವರಿ ಶಂಖುವಿನ ಆಕಾರಕ್ಕೆ ಮಡಚಿಕೊಳ್ಳಿ. ಅದರೊಳಗೆ ತಯಾರಿಸಿದ ಚಿಕನ್ ಮಿಶ್ರಣವನ್ನು ತುಂಬಿ ಹಿಟ್ಟಿನ ತುದಿಯನ್ನು ಅಂಟಿಸಿ. ಅದನ್ನು ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೂ ಕರಿದು ತೆಗೆದರೆ ಗರಿಗರಿಯಾದ ಚಿಕನ್ ಸಮೋಸಾ ರೆಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು