ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈಕಲ್‌ ಮಳಿಗೆ’ಯಲ್ಲಿ ವಿದೇಶಿ ಪಿಜಾ ಸವಿ

ಆಸ್ವಾದ ಆಹಾರ ಪುಟ
Last Updated 16 ಆಗಸ್ಟ್ 2018, 7:44 IST
ಅಕ್ಷರ ಗಾತ್ರ

ಆ ಕೆಫೆಯ ಮುಂದಿರುವ ಆಳೆತ್ತರದ ಚಕ್ರ, ಅದರ ಬೆನ್ನಿಗೆ ಬಾಲಂಗೋಚಿಯಂತಹ ಪುಟಾಣಿ ಚಕ್ರ ಹಾದಿಹೋಕರ ಗಮನ ಹಿಡಿದಿಡುತ್ತದೆ. ನುರಿತ ಕಲಾವಿದನ ಕೈಯಲ್ಲಿ ಅರಳಿದ ಇನ್‌ಸ್ಟಾಲೇಶನ್‌ನಂತೆ ಕಾಣುವ, ಸೈಕಲ್‌ನ ಆ ಚಕ್ರಗಳು ಸಹಜವಾಗಿಯೇ ಕೆಫೆಯ ಹೆಸರು ಹುಡುಕುವಂತೆ ಪ್ರೇರೇಪಿಸುತ್ತವೆ.

ಇಂದಿರಾನಗರದ ಅಪ್ಪಾರೆಡ್ಡಿಪಾಳ್ಯದಲ್ಲಿರುವ ‘ಸೀಕ್ಲೊ ಕೆಫೆ ಬಾರ್’ನ ಬಾಹ್ಯನೋಟವಿದು. ಕೆಫೆಯ ಒಳಗೆ ಬಗೆ ಬಗೆ ಬ್ರ್ಯಾಂಡ್‌ನ ಸೈಕಲ್‌ಗಳುಗಾಜಿನ ಗೋಡೆಗೆ ನೇತುಬಿದ್ದಿವೆ. ಬಿಡಿಭಾಗ, ಹೆಲ್ಮೆಟ್‌, ಕೈಗವಸು, ಸಾಕ್ಸ್‌ ಹೀಗೆ ವಿವಿಧ ಆಕ್ಸೆಸರಿಗಳ ಮಾರಾಟ ವಿಭಾಗವಿದೆ.

ನಿಮ್ಮ ಊಹೆ ನಿಜ. ‘ಸೀಕ್ಲೊ’, ಸೈಕಲ್‌‍ಪರಿಕಲ್ಪನೆಯ ಕೆಫೆ ಹಾಗೂ ಮಾರಾಟ ಮಳಿಗೆ. ಮದ್ಯಪ್ರಿಯರಿಗೆ ಇಲ್ಲಿ ಯಥೇಚ್ಛ ಆಯ್ಕೆಗಳಿರುವ ಕಾರಣ ‘ಬಾರ್’. ಸೈಕಲ್‌ ವ್ಯಾಮೋಹಿಗಳು ಇಲ್ಲಿ ಆಗಾಗ ಒಟ್ಟುಸೇರುತ್ತಾರೆ, ಸೈಕಲ್‌ ಖರೀದಿ, ರಿಪೇರಿ, ರ‍್ಯಾಲಿ, ಮಾರುಕಟ್ಟೆಗೆ ಬಂದ ಹೊಸ ಮಾದರಿಗಳ ಬಗ್ಗೆ ಚರ್ಚಿಸುತ್ತಾರೆ. ಇದ್ಯಾವುದರ ಅರಿವಿಲ್ಲದೆ, ಹೊರಗಿರುವ ಎರಡು ಚಕ್ರಗಳನ್ನು ನೋಡಿ ಹಾಗೇ ಸುಮ್ಮನೆ ಬಂದವರು ವಿಶಿಷ್ಟ ಸೈಕಲ್‌ಗಳನ್ನು ಕಂಡು ಪುಳಕಿತರಾಗುತ್ತಾರೆ.

ಈ ಕೆಫೆಯಲ್ಲಿ ರಾತ್ರಿ 12 ಕಳೆದರೂ ಪಿಜಾಪ್ರಿಯರ ಗದ್ದಲ. ಹಂಗೇರಿ, ಜಪಾನ್‌, ಟರ್ಕಿ ಮತ್ತು ಇಟಾಲಿ ಶೈಲಿಯ ಪಿಜಾಗಳ ಉತ್ಸವ ನಡೆದಿರುವುದು ಇದಕ್ಕೆ ಕಾರಣ. ಅಲ್ಲಿನ ಪಿಜಾಗಳಿಗೆ ಇಲ್ಲಿನ ಗ್ರಾಹಕರ ಬಾಯಿಚಪಲಕ್ಕೆ ಒಗ್ಗುವಂತೆ ‘ಸೀಕ್ಲೊ’ ಸ್ವಾದ ನೀಡುತ್ತಾರೆ, ಶೆಫ್‌ ಮೃಣ್ಮಯ್.

ನಾನು ಮತ್ತು ಇಬ್ಬರು ಸ್ನೇಹಿತರು ಬೋನ್‌ಲೆಸ್‌ ಚಿಕನ್‌ ವಿಂಗ್ಸ್‌, ಗ್ರಿಲ್ಡ್‌ ಜಾಕೂನ್‌ ಚಿಕನ್‌, ಹಂಗೇರಿಯನ್‌ ಲಾಂಗೊಸ್‌ ಪಿಜಾ ಮತ್ತು ಜಪಾನೀಸ್‌ ಒಕೊನೊಮಿಯಾಕಿ ಪಿಜಾ, ಮಾಕ್‌ಟೇಲ್‌ ಮತ್ತು ಎರಡು ಡೆಸರ್ಟ್‌ಗಳನ್ನು ಹಂಚಿ ತಿಂದೆವು.

ಮೂಳೆ ಇಲ್ಲದ ಕೋಳಿ ರೆಕ್ಕೆ

ಊಟದ ಶುಭಾರಂಭಕ್ಕೆ (ಸ್ಟಾರ್ಟರ್‌) ಏನು ತಗೋತೀರಿ ಅಂದ ವೇಟರ್ ಆ್ಯಂಡ್ರಿಯನ್‌, ಬೋನ್‌ಲೆಸ್‌ ಚಿಕನ್‌ ವಿಂಗ್ಸ್‌ ಮತ್ತು ಗ್ರಿಲ್ಡ್‌ ಜಾಕೂನ್‌ ಚಿಕನ್‌ ಸಖತ್ತಾಗಿರುತ್ತದೆ ಅಂದರು. 10 ನಿಮಿಷ ಬಿಟ್ಟು ತಂದಿಟ್ಟರು. ಖಾರ, ಹುಳಿ ಮತ್ತು ಸ್ವಲ್ಪ ಸಿಹಿಯಾಗಿತ್ತು. ಖಾರದ್ದು ಮೇಲುಗೈ.

ಹರಿತವಾದ ಚಾಕುವಿನಿಂದ ನಾಜೂಕಾಗಿ ಮೂಳೆಯಿಂದ ಬೇರ್ಪಡಿಸಿದ ಡೆಬನ್‌ ಶೈಲಿಯ ಕೋಳಿ ಮಾಂಸವನ್ನು ಬಾರ್ಬೆಕ್ಯೂ ಸಾಸ್‌, ಬ್ರೌನ್‌ ಸುಗರ್‌, ಸಾಸಿವೆ ಪುಡಿ ಮತ್ತು ಶುಂಠಿ ಪೇಸ್ಟ್‌ ಹಚ್ಚಿ ನೆನೆಯಲು ಬಿಡುತ್ತಾರೆ. ಆಮೇಲೆ ಅದನ್ನು ತವಾದಲ್ಲಿ ಬೇಯಿಸಿ ಒಂದಿಂಚು ಚೌಕಾಕಾರದಲ್ಲಿ ಕತ್ತರಿಸಿ ಸ್ವಲ್ಪ ಗ್ರೇವಿ ಇರುವಂತೆಯೇ ಉಣಬಡಿಸುತ್ತಾರೆ. ಅಲಂಕಾರಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಕೋಡು. ಬಾಯಿಗಿಡುತ್ತಿದ್ದಂತೆಖಡಕ್‌ ಮಸಾಲೆ ಪಂಚೇಂದ್ರಿಯಗಳನ್ನೂ ಜಾಗೃತಗೊಳಿಸುತ್ತದೆ.

ಕಾಜೂನ್‌ ಚಿಕನ್‌ ಸಲಾಡ್‌

ಮೆಣಸಿನ ಪುಡಿ, ಚಿಗುರೆಲೆಯುಳ್ಳ ಮೆಕ್ಸಿಕನ್‌ ಸೋಂಪು, ನಿಂಬೆ ರಸ, ಬೆಳ್ಳುಳ್ಳಿ ಪೇಸ್ಟ್‌, ಕತ್ತರಿಸಿ ಹಸಿ ಮೆಣಸು, ಸೆಲರಿ ದಂಟು ಮತ್ತು ಕಾರ್ನ್‌ಫ್ಲೋರ್‌, ಉಪ್ಪಿನ ಮಿಶ್ರಣದಲ್ಲಿ ನೆನೆಸಿಟ್ಟ ಕೋಳಿ ಮಾಂಸ. ಈ ಮಸಾಲೆಯನ್ನು ಕಾಜೂನ್‌ ಮಸಾಲೆ ಎಂದು ಕರೆಯುತ್ತಾರೆ.‘ಡೆಬನ್‌ ಶೈಲಿಯಲ್ಲಿಯೇ ಮೂಳೆ ಬಿಡಿಸಿ ಚೌಕಾಕಾರವಾಗಿ ಕತ್ತರಿಸಿದ ಕೋಳಿ ಮಾಂಸ ಚೆನ್ನಾಗಿ ಮಸಾಲೆ ಹೀರಿಕೊಂಡ ನಂತರ ಗ್ರಿಲ್‌ ಮಾಡುತ್ತೇವೆ’ ಎಂದು ವಿವರಿಸಿದರು ಆ್ಯಂಡ್ರಿಯನ್‌.

ಕಾಜೂನ್‌ ಚಿಕನ್ ತುಂಡುಗಳ ಮೇಲೆ ಹೆಚ್ಚಿದ ಸೆಲರಿಯಿಂದಲೇ ಅಲಂಕಾರ ಮಾದ್ದರು. ರುಚಿಯಲ್ಲಿ ಚಿಕನ್‌ ವಿಂಗ್ಸ್‌ಗಿಂತಲೂ ಒಂದು ತೂಕ ಹೆಚ್ಚು ಎನ್ನುವಂತಿತ್ತು. ಈ ಎರಡೂ ಸ್ಟಾರ್ಟರ್‌ಗಳ ಖಾರಕ್ಕೆ ನಾಲಿಗೆಯಲ್ಲಿ ಚುರ್‌ ಅಂತ ಜೊಲ್ಲುರಸ ಸುರಿಯುತ್ತಲೇ ಇತ್ತು. ಹಾಗಾಗಿ, ತಮೀನಾಳ ಸಲಹೆಯಂತೆ ಮಾಕ್‌ಟೇಲ್‌ ಕುಡಿದು ನಾಲಿಗೆಯನ್ನು ಸಂತೈಸಬೇಕಾಯಿತು.

ಕಲ್ಲಂಗಡಿ ಹಣ್ಣಿನ ತಿರುಳಿನ ರಸಕ್ಕೆ ತುಳಸಿ ರಸ ಬೆರೆಸಿ ‘ವಾಟರ್‌ಮೆಲನ್‌ ಆ್ಯಂಡ್‌ ಬೇಸಿಲ್‌ ಬ್ರಾಂಬಲ್‌’ ಎಂದು ಹೆಸರಿಟ್ಟಿದ್ದರು. ಇದರ ಬೆಲೆ ₹230! ನನ್ನ ಸ್ನೇಹಿತರು, ‘ಪೊಮ್ಮ ಡ್ರಾಮ’ ಎಂಬ ಹೆಸರಿಗೆ ಫಿದಾ ಆಗಿದ್ದರು. ಅದು ದಾಳಿಂಬೆ ಹಣ್ಣಿನ ರಸ. ಪುದೀನಾ ಸೊಪ್ಪು ಮತ್ತು ನಿಂಬೆ ರಸ ಬೆರೆಸಿ ಪುದೀನಾ ಸೊಪ್ಪಿನಿಂದ ಅಲಂಕರಿಸಿ ಕೊಟ್ಟಿದ್ದರು.

ಮುಂದಿನ ಸರದಿ ಹಂಗೇರಿಯನ್‌ ಲಾಂಗೊಸ್‌ ಪಿಜಾದ್ದು. ಪಿಜಾದ ಬೇಸ್‌ಗೆ ಸಾಮಾನ್ಯವಾಗಿ ಮೈದಾದ್ದಾಗಿರುತ್ತದೆ. ಆದರೆ ಇಲ್ಲಿ ಇಡೀ ಗೋಧಿಯ ಹಿಟ್ಟು ಬಳಸಿ ಪಿಜಾವನ್ನೂ ಆರೋಗ್ಯಕರವಾಗಿಸುವ ಪ್ರಯತ್ನ ಮಾಡಿದ್ದಾರೆ. ರೋಸ್ಟ್‌ ಆದ ಬೇಸ್‌ನ ಮೇಲೆ ಗಾರ್ಲಿಕ್‌ ಬಟರ್‌, ಹುಳಿಮಿಶ್ರಿತ ಕ್ರೀಮ್‌, ಚೀಸ್‌ ಮತ್ತು ಕಾಜೂನ್‌ ಚಿಕನ್‌ ತುಣುಕುಗಳು ಸೇರಿ ಅತ್ಯುತ್ತಮ ರುಚಿ ನೀಡುತ್ತದೆ. ಹಂದಿ ಮಾಂಸ, ಸಿಗಡಿ ಮತ್ತು ಎಳೆಗರುವಿನ ಮಾಂಸದ ಕಾಂಬಿನೇಶನ್‌ ಕೂಡಾ ಲಭ್ಯ. ಸಸ್ಯಾಹಾರಿಗಳಿಗೆ ಇದೇ ಪಿಜಾವನ್ನು ಬೇರೆ ಬೇರೆ ತರಕಾರಿಗಳಿಂದ ಅಲಂಕರಿಸಿ ಕೊಡುತ್ತಾರೆ.

ಜಪಾನೀಸ್‌ ಪಿಜಾದಲ್ಲಿ ಇಂಡಿಯನ್‌ ಮತ್ತು ಜಪಾನಿ ಕ್ಯಾಬೇಜ್‌, ಈರುಳ್ಳಿ ಕೋಡು ಮತ್ತು ಚಿಕನ್‌ ಮಾಂಸದ ತುಣುಕು ಪ್ರಮುಖ ಹೂರಣ. ಸಿಗಡಿ, ಹಂದಿ, ಎಳೆಗರುವಿನ ಮಾಂಸದ ಕಾಂಬಿನೇಷನ್‌
ಕೂಡಾ ಇದೆ.

ಮಧ್ಯಾಹ್ನವಾಗುತ್ತಿದ್ದಂತೆ‘ಸೀಕ್ಲೊ ಕೆಫೆ ಬಾರ್‌’ ಕಾರ್ಪೊರೇಟ್‌ ಸಿಬ್ಬಂದಿಯಿಂದ ತುಂಬಿಕೊಂಡಿತು. ಪಿಜಾ ಫೆಸ್ಟಿವಲ್‌ ನಡೆದಿರುವ ಕಾರಣ ಈಗ ಬಹುತೇಕ ಗ್ರಾಹಕರ ಆಯ್ಕೆ ಅದುವೇ ಆಗಿತ್ತು. ಇತರ ದಿನಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ ಹಲವು ವಿಧದ ಚಾಟ್‌ಗಳು ಹಾಗೂ ಖಾದ್ಯಗಳು ಇಲ್ಲಿ ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT