ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಳೆ ಹಾಕದೇ ಬಿಸಿಬೇಳೆಭಾತ್‌

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಕಾಲೇಜು ದಿನಗಳಲ್ಲಿ ಓದಿಗೆ ತೊಂದರೆ ಆಗದೆ ಇರಲಿ, ಮುದ್ದಿನ ಮಗಳು ಸುಖವಾಗಿರಲಿ ಎಂದು ನನ್ನ ತಾಯಿ ನನಗೆ ಅಡುಗೆ ಮನೆ ಕೆಲಸ ಹೇಳುತ್ತಿರಲಿಲ್ಲ. ನಾನೂ ಅಷ್ಟೇ ಮನೆ ಕೆಲಸದ ಉಸಾಬರಿಗೆ ಹೋಗುತ್ತಿರಲಿಲ್ಲ. ಅಮ್ಮ ಮಾಡಿದ ರುಚಿ ರುಚಿ ಅಡುಗೆ ತಿಂದು, ಆಕೆಗೆ ಶಹಬ್ಬಾಸ್‌ ಹೇಳುತ್ತಿದ್ದೆ.

ಆದರೆ ಮದುವೆಯಾದ ಮೇಲೆ ಅಡುಗೆ ಮಾಡುವ ಕೆಲಸ ಹಂಚಿಕೊಳ್ಳಲೇಬೇಕಾಯಿತು. ಮದುವೆಯಾದ ಹೊಸತರಲ್ಲಿ ಅತ್ತೆಯವರನ್ನು ಮೆಚ್ಚಿಸಲು ಬಿಸಿಬೇಳೇಭಾತ್ ಮಾಡಲು ತರಕಾರಿ ಎಲ್ಲಾ ಹೆಚ್ಚಿಟ್ಟುಕೊಂಡು ಒಂದು ಕುಕ್ಕರ್ ಅಲ್ಲಿ ಬೇಯಿಸಿ, ಇನ್ನೊಂದು ಕುಕ್ಕರ್ ಅಲ್ಲಿ ಅನ್ನ ಬೇಯಿಸಿದೆ.

ಮಿಕ್ಸಿಯಲ್ಲಿ ಹುರಿದ ಮೆಣಮೆಣಸಿನಕಾಯಿ, ಧನಿಯಾ, ಕಡ್ಲೆಬೇಳೆ,ಉದ್ದಿನಬೇಳೆ, ಚಕ್ಕೆ, ಲವಂಗ, ಜಾಯಿಕಾಯಿ ಎಲ್ಲ ರುಬ್ಬಿಟ್ಟು, ಒಟ್ಟಿಗೆ ಬೆರೆಸಿ ಒಗ್ಗರಣೆ ಕೊಡೊ ವೇಳೆಗೆ ನನ್ನ ಸಂಭ್ರಮ ನೋಡಲು ಅತ್ತೆ ಅಡುಗೆಮನೆಗೆ ಬಂದರು. ನನ್ನ ಬಿಸಿಬೇಳೆಭಾತ್‌ ತಯಾರಿ ನೋಡಿ, ಹಾಗೇ ಪಾತ್ರೆ ಮುಚ್ಚಳ ತೆಗೆದು ಕಣ್ಹಾಯಿಸಿದರು. ಅವರು ಅಡುಗೆಯಲ್ಲಿ ಪಳಗಿದವರು.

ನೋಡಿದ ತಕ್ಷಣ ಏನೋ ಮಿಸ್‌ ಆಗಿದೆ ಎಂದು ಅವರಿಗೆ ಅನಿಸಿತು. ನಾನು ತಯಾರು ಮಾಡಿಕೊಂಡಿದ್ದ ಪಾತ್ರೆಯಲ್ಲಿದ್ದ ‘ನೀರು ಸಾಂಬಾರ್‌’, ಬಿಸಿಬೇಳೆಭಾತ್‌ಗೆ ಬೇಳೆನೇ ಹಾಕಿಲ್ಲ ಎಂಬುದನ್ನು ಅವರಿಗೆ ಮೊದಲ ನೋಟಕ್ಕೆ ಗೊತ್ತು ಮಾಡಿತು.

ಎಲ್ಲರಿಗೂ ಎಲ್ಲಿಲ್ಲದ ನಗು. ಅನಂತರ ಬೇಳೆ ಬೇಯಿಸಿ ಹೇಗೋ ಬಿಸಿಬೇಳೆಭಾತ್‌ ಮಾಡಿ ಮನೆಯವರಿಗೆ ಬಡಿಸಿದೆ. ಈಗಲೂ ಒಮ್ಮೊಮ್ಮೆ ನೆನಪಿಸ್ಕೊಂಡ್ರೆ ನಗು ಬರುತ್ತೆ.
–ಚೈತ್ರಾ ಚೇತನ್‌, ತಾವರೆಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT