ಗುರುವಾರ , ಏಪ್ರಿಲ್ 2, 2020
19 °C

ಮೊಟ್ಟೆ ತೊಕ್ಕು, ಸ್ಟರ್ ಫ್ರೈಡ್‌ ಅಣಬೆ

ಸವಿ Updated:

ಅಕ್ಷರ ಗಾತ್ರ : | |

ಸಸ್ಯಾಹಾರಿಗಳ ಮನೆಯಲ್ಲಿ ತರಕಾರಿ ಸದಾ ಇರುವಂತೆ ಮಾಂಸಾಹಾರಿಗಳ ಮನೆಯ ಅಡುಗೆಮನೆಯಲ್ಲಿ ಮೊಟ್ಟೆ ಇಲ್ಲದೇ ಇರುವುದಿಲ್ಲ. ಮೊಟ್ಟೆಯಿಂದ ತರಕಾರಿಯಲ್ಲಿ ಮಾಡುವಂತೆ ವೈವಿಧ್ಯ ಪದಾರ್ಥಗಳನ್ನು ಮಾಡಬಹುದು. ತೊಕ್ಕು, ಕರಿ, ಕುರ್ಮ ಹೀಗೆ ವಿವಿಧ ಖಾದ್ಯಗಳನ್ನು ಮಾಡಿ ಸವಿಯಬಹುದು. ವಿಧಾನವೂ ಒಂದೇ. ಇದನ್ನೆಲ್ಲಾ ಸುಲಭವಾಗಿ ಹೇಗೆ ಮಾಡಬಹುದು ಎಂದು ತಿಳಿಸಿದ್ದಾರೆ ಸವಿ.

ಪನೀರ್‌ ಮೊಟ್ಟೆ ಬಟಾಣಿ ಕುರ್ಮ

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ– 4, ಇದಕ್ಕೆ ಫೋರ್ಕ್‌ನಿಂದ ಚುಚ್ಚಿ. ಹಸಿರು ಬಟಾಣಿ– 1 ಕಪ್‌, ಪನೀರ್‌– 1 ಕಪ್‌, ಸಣ್ಣ ಸಾಂಬಾರ್‌ ಈರುಳ್ಳಿ– ಕಾಲು ಕಪ್‌, ಟೊಮೆಟೊ– 2 ಹೆಚ್ಚಿದ್ದು, ರುಬ್ಬಿದ ತೆಂಗಿನ ತುರಿ– 1 ಕಪ್‌, ಕೆಂಪು ಮೆಣಸಿನ ಕಾಯಿ– 2, ಹಸಿ ಮೆಣಸಿನಕಾಯಿ– 2, ಶುಂಠಿ– ಒಂದಿಂಚು, ಬೆಳ್ಳುಳ್ಳಿ– 5 ಎಸಳು, ಲವಂಗ– 2, ಚಕ್ಕೆ– ಒಂದಿಂಚಿನ ಕಡ್ಡಿ 2, ಗಸಗಸೆ– ಅರ್ಧ ಟೀ ಚಮಚ, ಜೀರಿಗೆ– ಕಾಲು ಟೀ ಚಮಚ, ಸೋಂಪು– ಅರ್ಧ ಟೀ ಚಮಚ, ಮೆಣಸಿನ ಕಾಳು– ಕಾಲು ಟೀ ಚಮಚ, ಕೊತ್ತಂಬರಿ ಬೀಜ– ಅರ್ಧ ಟೀ ಚಮಚ, ಕಡಲೆ ಬೇಳೆ– ಅರ್ಧ ಟೀ ಚಮಚ, ಅರಿಸಿನ ಪುಡಿ– ಕಾಲು ಟೀ ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ಎಣ್ಣೆ– 4 ಟೀ ಚಮಚ, ಸಾಸಿವೆ– ಕಾಲು ಟೀ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು– ಒಂದು ಹಿಡಿ, ಕರಿಬೇವು– ಸ್ವಲ್ಪ.

ತಯಾರಿಸುವ ವಿಧಾನ: ಪ್ಯಾನ್‌ನಲ್ಲಿ ಒಂದು ಟೀ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಸೋಂಪು, ಜೀರಿಗೆ, ಕಾಳು ಮೆಣಸು, ಕೊತ್ತಂಬರಿ ಬೀಜ, ಕಡಲೆ ಬೇಳೆ, ಗಸಗಸೆ, ಲವಂಗ, ಚಕ್ಕೆ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ಎಲ್ಲವನ್ನೂ ಹಾಕಿ ಒಂದೆರಡು ನಿಮಿಷಗಳ ಕಾಲ ಹುರಿಯಿರಿ. ನಂತರ ಅದನ್ನು ರುಬ್ಬಿ ನುಣ್ಣನೆ ಪೇಸ್ಟ್‌ ಮಾಡಿ.

ಪ್ಯಾನ್‌ನಲ್ಲಿ 2 ಟೀ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಸೋಂಪು, ಕರಿಬೇವು ಹಾಕಿ ಹುರಿಯಿರಿ. ನಂತರ ಹಸಿರು ಬಟಾಣಿ ಹಾಕಿ ಅರ್ಧ ಬೇಯಿಸಿ. ಇದಕ್ಕೆ ಪನೀರ್‌, ರುಬ್ಬಿದ ಮಸಾಲೆ, ಅರಿಸಿನ ಪುಡಿ, ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿದ ನಂತರ ಎರಡು ಕಪ್‌ ನೀರು ಹಾಕಿ ಕುದಿಸಿ. ಬಟಾಣಿ ಬೆಂದ ನಂತರ ರುಬ್ಬಿಕೊಂಡ ತೆಂಗಿನ ತುರಿ ಪೇಸ್ಟ್‌ ಸೇರಿಸಿ. ಹಾಗೆಯೇ ಬೇಯಿಸಿದ ಮೊಟ್ಟೆ ಹಾಕಿ ಕುರ್ಮ ಗಟ್ಟಿಯಾಗುವವರೆಗೆ ಬೇಯಿಸಿ. ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

ಚೆಟ್ಟಿನಾಡು ಮೊಟ್ಟೆ ಕರಿ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ– 6–8, ಸಾಂಬಾರ್‌ ಈರುಳ್ಳಿ– 200 ಗ್ರಾಂ, ಹಸಿ ಮೆಣಸಿನಕಾಯಿ– 5–6, ಟೊಮೆಟೊ– 6, ಶುಂಠಿ ಬೆಳ್ಳುಳ್ಳಿ ಪೇಸ್ಟ್‌– 1 ಟೀ ಚಮಚ, ಕಾಳು ಮೆಣಸಿನ ಪುಡಿ– 1 ಟೀ ಚಮಚ, ಕೊತ್ತಂಬರಿ ಬೀಜದ ಪುಡಿ– 3 ಟೀ ಚಮಚ, ಅರಿಸಿನ ಪುಡಿ– ಅರ್ಧ ಟೀ ಚಮಚ, ಕೆಂಪು ಮೆಣಸಿನ ಪುಡಿ– 2 ಟೀ ಚಮಚ, ಸೋಂಪು– 1 ಟೀ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು– ಒಂದು ಹಿಡಿ, ಎಣ್ಣೆ– 2 ಟೀ ಚಮಚ, ಉಪ್ಪು– ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊಟ್ಟೆಗಳನ್ನು ಬೇಯಿಸಿ, ಮೇಲಿನ ಚಿಪ್ಪು ತೆಗೆದು ಹಾಕಿ. ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಸೋಂಪು, ಸಾಂಬಾರ್‌ ಈರುಳ್ಳಿಯನ್ನು ಹಾಕಿ ಹುರಿಯಿರಿ. ಹೆಚ್ಚಿದ ಹಸಿ ಮೆಣಸಿನಕಾಯಿ, ಟೊಮೆಟೊ ಹಾಗೂ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ಚೆನ್ನಾಗಿ ಹುರಿದ ನಂತರ ಕೆಲವು ನಿಮಿಷ ಎಣ್ಣೆಯಲ್ಲಿ ಬೇಯಲು ಬಿಡಿ. ನಂತರ ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ ಮಿಶ್ರ ಮಾಡಿ. ಇದಕ್ಕೆ ನೀರು ಸೇರಿಸಿ ಕುದಿಸಿ. ಈ ಮಿಶ್ರಣಕ್ಕೆ ಬೇಯಿಸಿಟ್ಟುಕೊಂಡ ಮೊಟ್ಟೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ ಅಲಂಕರಿಸಿ. ಇನ್ನೊಂದು ವಿಧಾನದಲ್ಲಿ ಕೊನೆಯ ಹಂತದಲ್ಲಿ ಮೊಟ್ಟೆಗಳನ್ನು ಚೂರು ಚೂರು ಮಾಡಿ ಸಾಂಬಾರ್‌ಗೆ ಹಾಕಿ ಕುದಿಸಿ.

ಮೊಟ್ಟೆ ತೊಕ್ಕು

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ– 3, ಹೆಚ್ಚಿದ ಈರುಳ್ಳಿ– 1 ಕಪ್‌, ಹೆಚ್ಚಿದ ಟೊಮೆಟೊ– 1 ಕಪ್‌, ಹೆಚ್ಚಿದ ಹಸಿ ಮೆಣಸಿನಕಾಯಿ– 1, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌– 1 ಟೀ ಚಮಚ, ಕೆಂಪು ಮೆಣಸಿನ ಪುಡಿ– 1 ಟೀ ಚಮಚ, ಅರಿಸಿನ ಪುಡಿ– 1 ಟೀ ಚಮಚ, ಕೊತ್ತಂಬರಿ ಪುಡಿ– 1 ಟೀ ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ಕಾಳು ಮೆಣಸಿನ ಪುಡಿ– ರುಚಿಗೆ ತಕ್ಕಷ್ಟು, ಎಣ್ಣೆ– 2 ಟೀ ಚಮಚ, ಸಾಸಿವೆ– 1 ಟೀ ಚಮಚ, ಕರಿಬೇವು ಸ್ವಲ್ಪ.

ತಯಾರಿಸುವ ವಿಧಾನ: ಬೇಯಿಸಿದ ಮೊಟ್ಟೆಯಲ್ಲಿ ಫೋರ್ಕ್‌ನಿಂದ ತೂತು ಮಾಡಿ. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸಿವೆ, ಕರಿಬೇವು, ಹೆಚ್ಚಿದ ಈರುಳ್ಳಿ ಹಾಕಿ. ಈರುಳ್ಳಿ ಮೆತ್ತಗಾಗುವವರೆಗೆ ಬೇಯಿಸಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಹುರಿಯಿರಿ. ಹೆಚ್ಚಿದ ಟೊಮೆಟೊ, ಅರಿಸಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ. ಚೆನ್ನಾಗಿ ಮಿಶ್ರ ಮಾಡಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಬೆರೆಸಿ. ಮಿಶ್ರಣ ಮಂದವಾದಾಗ ಮೊಟ್ಟೆಗಳನ್ನು ಹಾಕಿ ಇದಕ್ಕೆ ಕಾಳು ಮೆಣಸಿನ ಪುಡಿ ಚಿಮುಕಿಸಿ. ಮಸಾಲೆ ಮೊಟ್ಟೆಗೆ ಚೆನ್ನಾಗಿ ಲೇಪಿಸಿದ ನಂತರ ಗ್ಯಾಸ್‌ ಬಂದ್‌ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪಿನ ಚೂರನ್ನು ಹಾಕಿ. ಇದು ಅನ್ನ ಅಥವಾ ಚಪಾತಿ ಜೊತೆ ತಿನ್ನಲು ಬಲು ರುಚಿ.

ಸ್ಟರ್‌ ಫ್ರೈಡ್‌ ಮೊಟ್ಟೆ– ಅಣಬೆ

ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿದ ಬಟನ್‌ ಅಣಬೆ– 300 ಗ್ರಾಂ, ಬೀಟ್‌ ಮಾಡಿದ ಮೊಟ್ಟೆ– 3, ಹೆಚ್ಚಿದ ಬೆಳ್ಳುಳ್ಳಿ– 3–4, ಹೆಚ್ಚಿದ ಮೆಣಸಿನಕಾಯಿ– 3, ಎಣ್ಣೆ– 1 ಟೀ ಚಮಚ, ಸೋಯಾ ಸಾಸ್‌– 1 ಟೀ ಚಮಚ, ಉಪ್ಪು– ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಅಣಬೆ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಬೆಳ್ಳುಳ್ಳಿ ಮತ್ತು ಸೋಯಾ ಸಾಸ್‌ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಬೀಟ್‌ ಮಾಡಿದ ಮೊಟ್ಟೆ ಹಾಗೂ ಉಪ್ಪು ಸೇರಿಸಿ ಮಿಶ್ರ ಮಾಡಿ. ಎಲ್ಲವೂ ಸರಿಯಾಗಿ ಮಿಶ್ರವಾದ ನಂತರ ಸ್ಟವ್‌ನಿಂದ ಕೆಳಗಿಳಿಸಿ. ಇದನ್ನು ಅನ್ನ ಅಥವಾ ರೊಟ್ಟಿ ಜೊತೆ ಬಡಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು