ಶುಕ್ರವಾರ, ಆಗಸ್ಟ್ 19, 2022
25 °C

ಥಟ್ಟಂತ ಮಾಡಿ ತಿನ್ನಿ ಎಗ್‌ 65, ಘೀ ರೋಸ್ಟ್‌

ಪವಿತ್ರಾ ರಾಘವೇಂದ್ರ ಶೆಟ್ಟಿ Updated:

ಅಕ್ಷರ ಗಾತ್ರ : | |

ನೀವು ಮೊಟ್ಟೆ ಪ್ರಿಯರೇ? ಮೊಟ್ಟೆಯಿಂದ ರುಚಿಕರವಾದ ಖಾದ್ಯಗಳನ್ನು ಮಾಡಿಕೊಂಡು ತಿನ್ನುವ ಮನಸ್ಸಾಗುತ್ತಿದೆಯೇ? ಹಾಗಾದರೆ ಮೊಟ್ಟೆಯಿಂದ ಹೇಗೆಲ್ಲಾ ರುಚಿಕರವಾದ ಅಡುಗೆ ಮಾಡಿಕೊಂಡು ಸವಿಯಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ರೆಸಿಪಿಗಳಿವೆ. ಸುಲಭವಾಗಿಯೂ ಮಾಡಬಹುದು, ಹಾಗೆಯೇ ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಥಟ್ಟಂತ ಮಾಡಿ ಬಿಡಬಹುದು ಎನ್ನುತ್ತಾರೆ ಪವಿತ್ರಾ ರಾಘವೇಂದ್ರ ಶೆಟ್ಟಿ.

**
ಎಗ್ 65

ಬೇಕಾಗುವ ಸಾಮಗ್ರಿಗಳು: ಮೊಟ್ಟೆ-3, ಉಪ್ಪು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಕಾರ್ನ್ ಫ್ಲೋರ್, ಗರಂಮಸಾಲ, ಬ್ರೆಡ್ ಕ್ರಂಬ್ಸ್, ಎಣ್ಣೆ, ಹಸಿಮೆಣಸು, ಕರಿಬೇವು, ಖಾರದ ಪುಡಿ, ಚಿಲ್ಲಿ ಸಾಸ್, ಕೊತ್ತಂಬರಿ ಸೊಪ್ಪು, ಎಣ್ಣೆ-ಕರಿಯಲು ಬೇಕಾಗುವಷ್ಟು.

ತಯಾರಿಸುವ ವಿಧಾನ: ಮೊಟ್ಟೆಯನ್ನು ಬೇಯಿಸಿಕೊಂಡು ಅದರ ಸಿಪ್ಪೆ ತೆಗೆದು ಒಳಗಿನ ಹಳದಿ ಭಾಗವನ್ನು ಬೇರ್ಪಡಿಸಿ ಬಿಳಿ ಭಾಗವನ್ನು ಮಾತ್ರ ಚಿಕ್ಕದಾಗಿ ಕತ್ತರಿಸಿಕೊಂಡು ಬೌಲ್‌ಗೆ ಹಾಕಿಕೊಳ್ಳಿ. ನಿಮಗೆ ಬೇಕಾದಷ್ಟು ಖಾರದಪುಡಿ, ಉಪ್ಪು, 1 ಟೀ ಚಮಚ ಶುಂಠಿ–ಬೆಳ್ಳುಳ್ಳಿ ಪೇಸ್ಟ್, 1 ಟೀ ಚಮಚ ಗರಂ ಮಸಾಲ, 3 ಟೀ ಚಮಚ ಕಾರ್ನ್ ಫ್ಲೋರ್, 2 ಟೀ ಚಮಚ ಬ್ರೆಡ್ ಕ್ರಂಬ್ಸ್ ಹಾಕಿ ನಂತರ ಒಂದು ಮೊಟ್ಟೆಯನ್ನು ಒಡೆದು ಅದರ ಬಿಳಿಭಾಗ ಹಾಗೂ 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪಾತ್ರೆಯಲ್ಲಿ ಎಣ್ಣೆ ಕಾಯಲು ಇಟ್ಟು ಬಿಸಿಯಾದ ಮೇಲೆ ಮಾಡಿಟ್ಟುಕೊಂಡ ಮಿಶ್ರಣವನ್ನು ಚಿಕ್ಕಚಿಕ್ಕ ಉಂಡೆ ಮಾಡಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಬಿಸಿಯಾದ ಮೇಲೆ 1 ಚಮಚ ಎಣ್ಣೆ ಹಾಕಿ. ನಂತರ ಅದಕ್ಕೆ 3 ಹಸಿಮೆಣಸು, 8 ಎಸಳು ಕರಿಬೇವು, 1 ಟೀ ಚಮಚ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ 1 ಟೀ ಚಮಚ ಗರಂಮಸಾಲ, ½ ಟೀ ಚಮಚ ಖಾರದ ಪುಡಿ, ಸ್ವಲ್ಪ ಉಪ್ಪು,1 ಟೀ ಚಮಚ ಚಿಲ್ಲಿ ಸಾಸ್ ಸೇರಿಸಿ. 3 ಟೇಬಲ್ ಚಮಚ ನೀರು ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ. ಇದಕ್ಕೆ ಕರಿದಿಟ್ಟುಕೊಂಡ ಎಗ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ಮೇಲೆ ಕೊತ್ತಂಬರಿಸೊಪ್ಪು ಉದುರಿಸಿ ಬಿಸಿ ಬಿಸಿ ಇರುವಾಗಲೇ ತಿನ್ನಿ. 

**

ಪೆಪ್ಪರ್ ಫ್ರೈ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 4, ಕಾಳುಮೆಣಸಿನ ಪುಡಿ, ಎಣ್ಣೆ, ಅರಿಸಿನ, ಕಲ್ಲುಪ್ಪು

ತಯಾರಿಸುವ ವಿಧಾನ: 4 ಮೊಟ್ಟೆಯನ್ನು ಬೇಯಿಸಿಕೊಂಡು ಸಿಪ್ಪೆ ತೆಗೆದು ಅದನ್ನು ಉದ್ದಕ್ಕೆ ಎರಡು ಭಾಗವಾಗಿ ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ 3 ಚಮಚ ಎಣ್ಣೆ ಹಾಕಿ ಕತ್ತರಿಸಿಟ್ಟುಕೊಂಡ ಮೊಟ್ಟೆಯನ್ನು ಹಳದಿ ಭಾಗ ಕೆಳಗೆ ಬರುವಂತೆ ಇಟ್ಟು ಎರಡು ಕಡೆ ಚೆನ್ನಾಗಿ ಹುರಿದುಕೊಳ್ಳಿ. ಇದರ ಮೇಲೆ ಚಿಟಿಕೆ ಅರಿಸಿನವನ್ನು ಎಲ್ಲಾ ಮೊಟ್ಟೆಗೂ ತಾಕುವಂತೆ ಹಾಕಿ. ನಂತರ 1 ಚಮಚದಷ್ಟು ಕಾಳುಮೆಣಸು, 1 ಟೀ ಸ್ಪೂನ್ ಕಲ್ಲುಪ್ಪನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ತವಾದ ಮೇಲಿರುವ ಮೊಟ್ಟೆಯ ಮೇಲೆ ಸಿಂಪಡಿಸಿ. ನಂತರ ಮೊಟ್ಟೆಯನ್ನು ಮತ್ತೊಮ್ಮೆ ತಿರುವಿ ಹಾಕಿ ಮೇಲ್ಭಾಗಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯ ಮಿಶ್ರಣವನ್ನು ಸಿಂಪಡಿಸಿ ಚೆನ್ನಾಗಿ ಮೊಟ್ಟೆಯನ್ನು ಹುರಿದುಕೊಳ್ಳಿ. ಕೊತ್ತಂಬರಿಸೊಪ್ಪು ಅದರ ಮೇಲೆ ಹಾಕಿ ಬಡಿಸಿ. 

**

ಘೀ ರೋಸ್ಟ್
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 4, ಬೆಳ್ಳುಳ್ಳಿ – 4 ಎಸಳು, ಬ್ಯಾಡಗಿ ಮೆಣಸು – 8 ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯೆ, ಅರಿಸಿನ, ಶುಂಠಿ, ಹುಣಸೆಹಣ್ಣು– ನಿಂಬೆಹಣ್ಣಿನ ಗಾತ್ರದ್ದು, ಕರಿಬೇವು – 10, ತುಪ್ಪ – 4 ಚಮಚ, ಬೆಲ್ಲ, ನೀರು. 

ತಯಾರಿಸುವ ವಿಧಾನ: ಪ್ಯಾನ್ ಬಿಸಿಯಾದ ಮೇಲೆ ಅದಕ್ಕೆ 4 ಎಸಳು ಬೆಳ್ಳುಳ್ಳಿ, 8 ಬ್ಯಾಡಗಿ ಮೆಣಸು, 1 ಟೇಬಲ್ ಚಮಚ ಕೊತ್ತಂಬರಿ ಬೀಜ, 1 ಟೀ ಚಮಚ ಜೀರಿಗೆ, 5 ಕಾಳು ಮೆಂತ್ಯೆ ಹಾಕಿ ಎಣ್ಣೆ ಸೇರಿಸದೆ ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಈ ಹುರಿದ ಮಿಶ್ರಣವನ್ನು ಹಾಕಿ ಅದಕ್ಕೆ ಚಿಟಿಕೆ ಅರಿಶಿನ, ½ ಇಂಚು ಶುಂಠಿ, 1 ನೆಲ್ಲಿಕಾಯಿ ಗಾತ್ರದಷ್ಟು ಹುಣಸೆಹಣ್ಣು, ಒಂದು ಸಣ್ಣ ತುಂಡು ಬೆಲ್ಲ, ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಕಡಾಯಿ ಇಟ್ಟು ಅದಕ್ಕೆ 3 ಚಮಚದಷ್ಟು ತುಪ್ಪ ಹಾಕಿ, 10 ಎಸಳು ಕರಿಬೇವು ಸೇರಿಸಿ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿಟ್ಟುಕೊಂಡ 4 ಮೊಟ್ಟೆಗಳನ್ನು ಚಾಕುವಿನ ಸಹಾಯದಿಂದ ಸ್ವಲ್ಪ ಗೀರಿಕೊಂಡು ಅದನ್ನು ಈ ಮಸಾಲಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಎಗ್ ಘೀ ರೋಸ್ಟ್ ಸವಿಯಲು ಸಿದ್ಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು