ಶನಿವಾರ, ಸೆಪ್ಟೆಂಬರ್ 18, 2021
28 °C

ಮಳೆಗಾಲದ ಶೀತಕ್ಕೆ ಬಿಸಿ ಬಿಸಿ ಗೊಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳೆಗಾಲ ಬಂತೆಂದರೆ ಸಾಕು, ಶೀತ– ಜ್ವರ ಜಾಸ್ತಿ. ಒಂದೇ ಸಮನೆ ಸುರಿಯುವ ಮಳೆಯೇ ಆಗಬೇಕಾಗಿಲ್ಲ ಇಂತಹ ವರ್ಷ ಋತುಮಾನದ ಕಾಯಿಲೆ ಹೊತ್ತು ತರಲು, ಮೋಡ ಕಟ್ಟಿದ ವಾತಾವರಣವೂ ದೈಹಿಕ ಆರೋಗ್ಯದಲ್ಲಿ ಏರುಪೇರು ಉಂಟು ಮಾಡಬಹುದು. ಇಂತಹ ಕಿರಿಕಿರಿಯಿಂದ ಪಾರಾಗಲು ಸೇವಿಸುವ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳಿತು.

ಇಂತಹ ಆಹಾರದ ವಿವರಣೆಗೆ ಬಹಳ ಹಿಂದೆ ಹೋಗಬೇಕಾಗಿಲ್ಲ, ಈಗಲೂ ಧೋ ಎಂದು ಸುರಿಯುವ ಮಳೆಯ ನಡುವೆ ಬದುಕುವ ಮಲೆನಾಡಿನ ಜನ ಬಿಸಿ ಬಿಸಿ ಗೊಜ್ಜು, ಕಷಾಯದಿಂದ ಆರೋಗ್ಯ ಕಾಪಾಡಿಕೊಳ್ಳುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ತಣ್ಣನೆಯ ಆಹಾರ ಪದಾರ್ಥಗಳು, ಫ್ರಿಜ್‌ನಲ್ಲಿಟ್ಟ ತಿನಿಸುಗಳು ಈ ಶೀತ, ಜ್ವರ ಬಾಧೆಗೆ ಕಾರಣ ಎಂಬುದು ವೈದ್ಯರ ಅಭಿಪ್ರಾಯ ಕೂಡ.

ಮಳೆಗಾಲದ ಪದಾರ್ಥಗಳಲ್ಲಿ ಬಿಸಿಬಿಸಿಯಾದ ಗೊಜ್ಜಿಗೆ ಆದ್ಯತೆ. ಅರಿಸಿನ ಕೊಂಬು, ಹೇರಳೆಕಾಯಿ, ಕಾಳು ಮೆಣಸು, ದಿಂಡು ಮಾವಿನ ಕಾಯಿ ಅಥವಾ ಕೋಸಗಾಯಿ (ಉಪ್ಪಿನ ನೀರಿನಲ್ಲಿ ಹಾಕಿಟ್ಟ ಬೇಯಿಸಿದ ಮಾವಿನಕಾಯಿ), ಅನಾನಸ್‌, ಕೆಸುವಿನ ಎಲೆ, ಚಕ್ರಮುನಿ ಸೊಪ್ಪು, ಕನ್ನೆಕುಡಿ, ಬಸಳೆ.. ಹೀಗೆ ಯಾವುದೇ ತರಕಾರಿ, ಸೊಪ್ಪು, ಸಂಬಾರು ಪದಾರ್ಥ ಸಿಕ್ಕರೂ ಅದರಿಂದ ಬಿಸಿ ಬಿಸಿ ಗೊಜ್ಜನ್ನು ಮಾಡಿ ಬಿಸಿ ಅನ್ನಕ್ಕೆ ಕಲೆಸಿಕೊಂಡು ಸವಿಯಬಹುದು. ಚಪಾತಿಯ ಜೊತೆಗೂ ಸೈಡ್‌ಡಿಷ್‌ ಆಗಬಹುದು.


ಬಸಳೆಸೊಪ್ಪಿನ ಚಟ್ನಿ

ಸೀಮೀತ ಸಾಮಗ್ರಿ

ಈ ಗೊಜ್ಜಿಗೆ ಬೇಕಾಗುವ ಸಾಮಗ್ರಿಗಳೂ ಸೀಮಿತ. ಹಸಿ ಅರಿಸಿನ ಕೊಂಬು, ಹೇರಳೆಕಾಯಿ, ಕೆಸುವಿನ ಎಲೆ, ಬಸಳೆ ಮೊದಲಾದವುಗಳನ್ನು ಚೂರೇ ಚೂರು ಎಣ್ಣೆಯಲ್ಲಿ ಹುರಿದುಕೊಂಡರಾಯಿತು. ಕಡಲೆಬೇಳೆ, ಉದ್ದಿನ ಬೇಳೆ ಸ್ವಲ್ಪ, ಅಳತೆಗೆ ತಕ್ಕಂತೆ ಹಸಿ ತೆಂಗಿನ ತುರಿ (ಎರಡಿಂಚು ಅರಿಸಿನ ಕೊಂಬಿದ್ದರೆ ಒಂದು ಕಪ್‌ ತೆಂಗಿನ ತುರಿ), ಒಣ ಮೆಣಸಿನ ಕಾಯಿ, ಬೆಲ್ಲ, ಉಪ್ಪು ಮತ್ತು ಹುಣಸೆಹಣ್ಣು (ಹೇರಳೆಕಾಯಿಯಂತ ಹುಳಿ ಪದಾರ್ಥವಿದ್ದರೆ ಬೇಡ!) ಸೇರಿಸಿ ರುಬ್ಬಿ. ಇದನ್ನು ಸಣ್ಣ ಉರಿಯಲ್ಲಿ ಕುದಿಸಿ. ನಂತರ ಸಾಸಿವೆ, ಕರಿಬೇವು, ಉದ್ದಿನಬೇಳೆ ಹಾಕಿ ಒಗ್ಗರಣೆ ಕೊಟರೆಟೆ ಬಿಸಿ ಬಿಸಿ ಗೊಜ್ಜು ಸಿದ್ಧ.

ಬಸಳೆ ಅಥವಾ ಕೆಸುವಿನ ಎಲೆ, ಕನ್ನೆಕುಡಿ ಅಥವಾ ಸ್ವಾರ್ಲೆ (ಮಲೆನಾಡಿನಲ್ಲಿ ಖಾಲಿ ಜಾಗದಲ್ಲಿ ಬೆಳೆಯುವ ಸೊಪ್ಪು) ಸೊಪ್ಪು, ಚಕ್ರಮುನಿ ಸೊಪ್ಪಿನ ಗೊಜ್ಜಿಗೆ ಹಸಿ ಮೆಣಸಿನಕಾಯಿ ಹಾಕಿ ರುಬ್ಬಿದರೆ ಸ್ವಾದ ಹೆಚ್ಚು. ಒಗ್ಗರಣೆಗೆ ಒಂದು ಇಡೀ ಬೆಳ್ಳುಳ್ಳಿ ಗಡ್ಡೆ ಬೇಕು. ಇದು ರುಚಿಯನ್ನು ಹೆಚ್ಚಿಸುವುದಲ್ಲದೇ, ಮಳೆಗಾಲದ ಶೀತವನ್ನು ಓಡಿಸುತ್ತದೆ. ಇಂತಹ ಸೊಪ್ಪಿನ ಗೊಜ್ಜಿಗೆ ಮೇಲೆ ಲಿಂಬೆ ರಸ ಹಿಂಡಿಕೊಂಡರೆ ಒಂದೆರಡು ತುತ್ತು ಅನ್ನ ಜಾಸ್ತಿಯೇ ಸೇರುತ್ತದೆ.

ಈ ಗೊಜ್ಜಿಗೆ ಎಣ್ಣೆ ಕಡಿಮೆ ಬಳಸುವುದರಿಂದ ಕ್ಯಾಲೊರಿ ಕಾಳಜಿಯುಳ್ಳವರಿಗೂ ಪ್ರಿಯವಾಗಬಹುದು. ಅರಿಸಿನ ಗೊಜ್ಜಿಗೆ, ಕಾಳು ಮೆಣಸಿನ ಗೊಜ್ಜಿಗೆ ತುಪ್ಪ ಹಾಕಿಕೊಂಡರೆ ಜಾಸ್ತಿ ಉಷ್ಣ ಆಗುವುದು ತಪ್ಪುತ್ತದೆ. ಅರಿಸಿನ, ಹೇರಳೆಕಾಯಿ, ಕಾಳು ಮೆಣಸಿನ ಗೊಜ್ಜನ್ನು ಚೆನ್ನಾಗಿ ಕುದಿಸಿ ಬಾಟಲ್‌ನಲ್ಲಿ ತುಂಬಿಸಿಟ್ಟುಕೊಂಡರೆ 15 ದಿನಗಳಾದರೂ ಕೆಡುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು