ಶುಕ್ರವಾರ, ಮೇ 20, 2022
21 °C

ನಳಪಾಕ | ನಾಟಿಶೈಲಿಯ ಚಿಂತಾಮಣಿ ಚಿಕನ್

ದೀಪಕ್‌ ಗೌಡ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ ಚಿಕನ್

ಬೇಕಾಗುವ ಸಾಮಗ್ರಿಗಳು:
ಚಿಕನ್‌- 1/2 ಕೆ.ಜಿ, ಗುಂಟೂರು ಮೆಣಸಿನಕಾಯಿ –20, ನಾಟಿ ಈರುಳ್ಳಿ- 1/2 ಕೆ.ಜಿ, ಉಪ್ಪು- 2 ಚಮಚದಷ್ಟು, ಅಡುಗೆ ಎಣ್ಣೆ- 1 ಟೇಬಲ್‌ ಚಮಚ, ಕೊತ್ತಂಬರಿ- 2 ಟೇಬಲ್‌ ಚಮಚ, ಸೊಂಪ್ಪು- ಅರ್ಧ ಚಮಚ, ಸಾಸಿವೆ- ಅರ್ಧ ಚಮಚ, ಅರಿಸಿನ- ಅರ್ಧ ಚಮಚ, ಬೆಳ್ಳುಳ್ಳಿ- 4/5 ಎಸಳು, ಶುಂಠಿ- ಸಣ್ಣ 1 ತುಂಡು, ಲವಂಗ- 4-5, ಚಕ್ಕೆ- ಸಣ್ಣ 1 ತುಂಡು/ಎಲೆಯಾದರೆ ಪೂರ್ತಿ ಒಂದು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ:
ಒಂದು ಅಗಲವಾದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಉದ್ದುದ್ದು ಹೆಚ್ಚಿದ ಅರ್ಧ ಈರುಳ್ಳಿ, ಸ್ವಲ್ಪ ಕರಿಬೇವಿನ ಸೊಪ್ಪು, ಕಾಲು ಚಮಚ ಸಾಸಿವೆ ಹಾಕಿ. ಈರುಳ್ಳಿ ಬೆಂದು ಕೆಂಪಾದ ಮೇಲೆ ಚಿಕನ್‌ ಹಾಕಿ. ಕಾಲು ಚಮಚ ಅರಿಸಿನ, 2 ಚಮಚದಷ್ಟು ಉಪ್ಪು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಬೇಯಲು ಬಿಡಿ.

ಮಸಾಲೆಗೆ: ಮೊದಲಿಗೆ ಗೊಜ್ಜು ಸಿದ್ಧಪಡಿಸಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಸ್ಟೌವ್‌ ಸಣ್ಣ ಉರಿಯಲ್ಲಿರಲಿ. ಸ್ವಲ್ಪ ಕರಿಬೇವು, ಸಾಸಿವೆ, ಕೊತ್ತಂಬರಿ, ಚಕ್ಕೆ, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿಕೊಡಿ. ಸಣ್ಣ ಗಾತ್ರದಲ್ಲಿ ಕತ್ತರಿಸಿದ ಚಿಕನ್‌ ಅದರಲ್ಲಿ ಹಾಕಿ, ಕುದಿಯಲು ಬಿಡಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಘಮ ಘಮ ಚಿಂತಾಮಣಿ ಚಿಕನ್‌ ಸಿದ್ಧ.

ಮಟನ್ ಕರಿ

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ – 2 ದೊಡ್ಡದು ಹೆಚ್ಚಿದ್ದು, ಟೊಮೆಟೊ – 2 ದೊಡ್ಡದು ಹೆಚ್ಚಿದ್ದು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 3 ಚಮಚ, ಗರಂ ಮಸಾಲೆ – 2 ಚಮಚ, ಕೊತ್ತಂಬರಿ ಪುಡಿ – 2 ಚಮಚ, ಜೀರಿಗೆ ಪುಡಿ – 2 ಚಮಚ, ಅರಿಸಿನ – ಅರ್ಧ ಚಮಚ, ಖಾರದಪುಡಿ – ಅರ್ಧ ಚಮಚ, ಕುರಿ ಮಾಂಸ – ಅರ್ಧ ಕೆ.ಜಿ, ಉಪ್ಪು – ರುಚಿಗೆ, ಎಣ್ಣೆ– ಸ್ವಲ್ಪ, ಕೊತ್ತಂಬರಿ ಸೊಪ್ಪು – ಹೆಚ್ಚಿದ್ದು 2 ಚಮಚ.

ತಯಾರಿಸುವ ವಿಧಾನ:
ಕುಕರ್‌ನಲ್ಲಿ 1 ಕೆ.ಜಿ ಮಟನ್‌, 2 ಕಪ್‌ ನೀರು ಅದಕ್ಕೆ ಸ್ವಲ್ಪ ಉಪ್ಪು ಮತ್ತು ಅರಿಸಿನ ಪುಡಿ ಹಾಕಿ ಬೇಯಿಸಿ ಇಟ್ಟುಕೊಳ್ಳಿ. ಪಕ್ಕದಲ್ಲಿ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬೆರೆಸಿ ಹುರಿದುಕೊಳ್ಳಿ. ಇದಕ್ಕೆ ಯಾವುದೇ ರೀತಿಯ ಮಸಾಲೆ ರುಬ್ಬುವ ಅಗತ್ಯ ಇರುವುದಿಲ್ಲ.

ಅದಕ್ಕೆ ಅರ್ಧ ಚಮಚ ಅರಿಸಿನ ಪುಡಿ, 1 ಚಮಚ ದನಿಯಾ ಪುಡಿ, 2 ಚಮಚ ಕಾರದ ಪುಡಿ, ಅರ್ಧ ಚಮಚ ಗರಂ ಮಸಾಲೆ, ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆ ಬಿಡುವವರೆಗೂ ಕುದಿಸಿ. ಕುರಿ ಮಾಂಸವನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆ ಹೋಳುಗಳಿಗೆ ಹಿಡಿಯುವವರೆಗೆ ಕೈಯಾಡಿಸಿ. ನಂತರ ಒಂದು ಕಪ್ ನೀರು ಹಾಕಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಕುರಿ ಮಾಂಸ ಬೇಯುವವರೆಗೆ ಬೇಯಿಸಿ. ಚೆನ್ನಾಗಿ ಕುದಿದು, ಮಾಂಸ ಬೆಂದು ಮಂದ ಆಗುವವರೆಗೂ ಕುದಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಕೊತ್ತಂಬರಿ ಸೊಪ್ಪನ್ನು ಉದುರಿಸಿ.

ಚಪ್ಪಾತಿ, ದೋಸೆ, ಮುದ್ದೆ, ಅನ್ನದ ಜೊತೆಗೆ ಗ್ರೇವಿ ಬೆರೆಸಿಕೊಳ್ಳಬೇಕಾದರೆ ಮಾತ್ರ 2 ಕಪ್‌ ಮಟನ್ ಬೇಯಿಸಿದ ನೀರನ್ನು ಹಾಕಿಕೊಂಡು ಕುದಿಸಬೇಕು. ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಬೇಕು.

ಮಟನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು:
ಕುರಿ ಮಾಂಸ – ಅರ್ಧ ಕೆ.ಜಿ, ಬಾಸುಮತಿ ಅಕ್ಕಿ – 1/2 ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಕೊತ್ತಂಬರಿಸೊಪ್ಪು, ಪುದಿನಸೊಪ್ಪು, ಹಸಿಮೆಣಸಿನಕಾಯಿ – 15, ಮೊಸರು – 2 ಚಮಚ, ಖಾರದಪುಡಿ – 2 ಚಮಚ, ಕೊತ್ತಂಬರಿಪುಡಿ – 1 ಚಮಚ, ಅರಿಸಿನ ಪುಡಿ – ಸ್ವಲ್ಪ, ಬಿರಿಯಾನಿ ಮಸಾಲೆ – 2 ಚಮಚ, ಪತ್ರೆ – 2 ಎಸಳು, ಗೋಡಂಬಿ – 10, ಕಾಳುಮೆಣಸು – 20, ಏಲಕ್ಕಿ – 2, ಲವಂಗ – 5, ಚಕ್ಕೆ – 2 ಇಂಚು ಉದ್ದದ್ದು, ಪಲಾವ್ ಎಲೆ – 2, ಮೊರಾಠಿ ಮೊಗ್ಗು – 2, ಈರುಳ್ಳಿ – 5, ಟೊಮೆಟೊ – 3, ಎಣ್ಣೆ, ತುಪ್ಪ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:
ಚೆನ್ನಾಗಿ ತೊಳೆದ ಮಾಂಸಕ್ಕೆ, ನೀರು, ಅರಿಸಿನ ಪುಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಕುಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಕೊತ್ತಂಬರಿ ಮತ್ತು ಪುದಿನ ಕತ್ತರಿಸಿಟ್ಟುಕೊಳ್ಳಿ. ಅಗಲವಾದ ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ. ಅದು ಬಿಸಿಯಾದ (ಕಾದ) ನಂತರ ಸಾಸಿವೆ ಸಿಡಿಸಿ ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಮರಾಠಿ ಮೊಗ್ಗು, ಹಸಿಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಳ್ಳಿ. ನಂತರ ಬೇಯಿಸಿದ ಮಾಂಸ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, 2 ಕಪ್‌ ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ. ನಂತರ ಟೊಮೆಟೊ ಹಾಕಿ ಮತ್ತೆ ಹುರಿಯಿರಿ. ಎಣ್ಣೆ ಬಿಡುವವರೆಗೂ ಕುದಿಸಿ. ಅಗತ್ಯಕ್ಕೆ ತಕ್ಕಷ್ಟು ಮಾಂಸ ಬೇಯಿಸಿದ ನೀರನ್ನೇ ಬಳಸಿಕೊಳ್ಳಿ. ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಉಪ್ಪು, ಖಾರ ಕಡಿಮೆಯಿದ್ದನ್ನು ಸೇರಿಸಿ. ಅಕ್ಕಿ ಮುಕ್ಕಾಲು ಭಾಗ ಬೆಂದಾಗ (ನೀರು ಕಡಿಮೆಯಾದಾಗ) ಕತ್ತರಿಸಿದ ಕೊತ್ತಂಬರಿ ಮತ್ತು ಪುದಿನವನ್ನು ಉದುರಿಸಿ, ಮುಚ್ಚಳ ಮುಚ್ಚಿ. ಕುಕರ್‌ ಅನ್ನು ಬೇಯಲು ಇಡಿ. 15ರಿಂದ 20 ನಿಮಿಷದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಶ್ರಣ ಮಾಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು