ಹಪ್ಪಳದ ಸಪ್ಪಳ ಮೆಲ್ಲಗೆ ಶುರುವಾಗುತ್ತಿದೆ. ಮಾಗಿಯ ಚಳಿ ತುಸು ಕಡಿಮೆಯಾಗುತ್ತಿದ್ದಂತೆ ಗ್ರಾಮೀಣ ಭಾಗದ ಮನೆ ಮನೆಗಳಲ್ಲಿ ಹಪ್ಪಳವೆಂಬೋ ಘಮ ಏಳುತ್ತದೆ. ವರ್ಷಕ್ಕಾಗುವಷ್ಟು ತರಹೇವಾರಿ ಹಪ್ಪಳಗಳು ತಯಾರಾಗುತ್ತವೆ.

ಒತ್ತಡದ ಈ ದಿನಗಳಲ್ಲಿ ಹಪ್ಪಳ ಮಾಡುವಷ್ಟು ಸಮಯವೆಲ್ಲಿದೆ ಎಂದು ಮೂಗು ಮುರಿಯುವವರೇ ಹೆಚ್ಚು. ಅಂತಹವರು ಅಂಗಡಿಯಲ್ಲಿ ಸಿಗುವ ಹಪ್ಪಳಗಳನ್ನೇ ಅಷ್ಟೋ ಇಷ್ಟೋ ತಂದು ಎಣ್ಣೆಯಲ್ಲಿ ಮುಳುಗೇಳಿಸಿ ತೃಪ್ತಿಪಟ್ಟುಕೊಳ್ಳುತ್ತಾರೆ. ಆಗ, ಅಮ್ಮ ಮಾಡುತ್ತಿದ್ದ ಡಬ್ಬಗಟ್ಟಲೆ ಹಪ್ಪಳದ ನೆನಪಿನ ಸುರುಳಿ ಬಿಚ್ಚಿಕೊಳ್ಳದೇ ಇರಲಾರದು.

ಮೂರ್ನಾಲ್ಕು ದಿನ ಅಕ್ಕಿ ನೆನೆ ಹಾಕಿ, ತೊಳೆದು, ಬಸಿದು, ರುಬ್ಬಿ ಮಾಡುತ್ತಿದ್ದ ಹಪ್ಪಳ ಮಾಡಲು ಸಮಯವಿಲ್ಲವೇ? ಯೋಚಿಸಬೇಡಿ, ಇನ್ಸ್ಟಂಟ್ ಆಗಿ ಕಡಿಮೆ ಸಮಯದಲ್ಲೇ ಮಾಡಿ ರುಚಿಕರ ಹಪ್ಪಳ ಎನ್ನುತ್ತಾರೆ ‘ಶ್ರಾವಣಿ ಅಡುಗೆ ಮನೆ’ ಯೂಟ್ಯೂಬ್ ಚಾನೆಲ್ನ ರಶ್ಮಿ ಆನಂದ್ ಚೊಳಚಗುಡ್ಡ.

‘ನಾದೋದು ಬ್ಯಾಡ, ಲಟ್ಟಿಸೋದ್ ಬ್ಯಾಡ. ಅಗ್ದಿ ಹಗೂರಕ್ಕೆ ಮಾಡಿ ಈ ಹಪ್ಳ’ ಎನ್ನುತ್ತಾ ಉತ್ತರ ಕರ್ನಾಟಕ ಭಾಷೆಯಲ್ಲಿ ತಮ್ಮ ಅಡುಗೆ ಮನೆಗೆ ಆಹ್ವಾನವೀಯುವ ರಶ್ಮಿ, ಕಡಿಮೆ ಅಳತೆಯಲ್ಲಿ, ಸುಲಭವಾಗಿ ಹಪ್ಪಳ ಮಾಡುವುದನ್ನು ಕಲಿಸುತ್ತಾರೆ. ಆಧುನಿಕ ಜೀವನಶೈಲಿಯಲ್ಲಿ ಹಿಂದಿನಂತೆ ವರ್ಷಕ್ಕಾಗುವಷ್ಟು ಹಪ್ಪಳ ಮಾಡಿಟ್ಟುಕೊಳ್ಳುವಷ್ಟು ಸಮಯ ಇಲ್ಲವೇ ಇಲ್ಲ. ಅಲ್ಲದೆ ಹಪ್ಪಳ ಮಾಡಿದರೂ ಒಣಗಿಸಲು ಜಾಗವಿಲ್ಲ. ಇದನ್ನರಿತ ರಶ್ಮಿ ಉದ್ಯೋಗಸ್ಥ ಮಹಿಳೆಯರಿಗೆ, ನಗರ ಪ್ರದೇಶದ ಗೃಹಿಣಿಯರಿಗೆ ಬಿಸಿಲು ಇಲ್ಲದಿದ್ದರೂ ಅತಿ ಸುಲಭದಲ್ಲಿ ಒಣಗುವ, ಒಲೆ ಹಚ್ಚದೆ ಮಾಡುವ, 10 ನಿಮಿಷದಲ್ಲೇ ತಯಾರಾಗುವ ಬಗೆಬಗೆಯ ಹಪ್ಪಳದ ವಿಧಾನಗಳನ್ನು ಹೇಳಿಕೊಡುತ್ತಾರೆ.

ಮೂರು ವರ್ಷಗಳ ಹಿಂದೆ ಬೇಸಿಗೆಯಲ್ಲಿ ಹಾಕಿದ್ದ ಹುರುಳಿ ಹಪ್ಪಳದ ರೆಸಿಪಿಯನ್ನು ಹಪ್ಪಳಪ್ರಿಯರು ಮೆಚ್ಚಿಕೊಂಡರು. ಇದರಿಂದ ಪ್ರೇರಣೆಗೊಂಡ ರಶ್ಮಿ, ಬಗೆಬಗೆ ಹಪ್ಪಳ ತಯಾರಿಯ ಬೆನ್ನು ಹತ್ತಿದರು. ಅಮ್ಮ ತಯಾರಿಸುತ್ತಿದ್ದ ಹಪ್ಪಳದ ಬಗೆಯನ್ನೇ ಮೂಲವಾಗಿರಿಸಿಕೊಂಡು ಹಲವು ಪ್ರಯೋಗಗಳನ್ನು ಮಾಡುತ್ತಾ ಬಂದರು.

ಉಳಿದ ಅಡುಗೆಯಲ್ಲೇ ಬಗೆ ಬಗೆಯ ಖಾದ್ಯ ತಯಾರಿಸುವುದು ರಶ್ಮಿ ಅವರ ಮತ್ತೊಂದು ವಿಶೇಷ. ಉಳಿದ ಇಡ್ಲಿಹಿಟ್ಟಿನಿಂದ ಮಾಡಿದ ಚಕ್ಕುಲಿ, ಉಳಿದ ಚಪಾತಿಯಲ್ಲಿ ಬಗೆ ಬಗೆ ಸ್ನ್ಯಾಕ್ಸ್ ತಯಾರಿಯಲ್ಲಿ ಅವರು ಸಿದ್ಧಹಸ್ತರು.

ಖಿಚಿಯಾ ಪಾಪಡ್

ರಾಜಸ್ಥಾನದ ಜನಪ್ರಿಯ ಹಪ್ಪಳ ‘ಖಿಚಿಯಾ ಪಾಪಡ್’ ಅನ್ನು ಪರ್ಫೆಕ್ಟ್ ಆಗಿ ಬರುವಂತೆ ಹೇಳಿಕೊಟ್ಟಿದ್ದಾರೆ ರಶ್ಮಿ. ಈ ಬೇಸಿಗೆಯಲ್ಲಿ ನೀವೂ ಮಾಡಿ ಸವಿಯಬಹುದು.

ಏನೇನು ಬೇಕು?

ಎರಡು ಕಪ್ ಅಕ್ಕಿಹಿಟ್ಟು, ಒಂದು ಚಮಚ ಜೀರಿಗೆ, ಖಾರಕ್ಕೆ ಅಗತ್ಯದಷ್ಟು ಹಸಿಮೆಣಸಿನಕಾಯಿ ಜಜ್ಜಿದ್ದು ಅಥವಾ ಒಣಮೆಣಸಿನಕಾಯಿ, 1 ಚಮಚ ಹಪ್ಪಳದ ಖಾರ, 1 ಚಮಚ ಅಜ್ವಾನ, ರುಚಿಗೆ ಉಪ್ಪು.

ಹೀಗೆ ಮಾಡಿ: ದಪ್ಪ ತಳದ ದೊಡ್ಡ ಪಾತ್ರೆಯಲ್ಲಿ ನಾಲ್ಕು ಲೋಟ ನೀರು ಹಾಕಿ ಬಿಸಿ ಮಾಡಿ (ಅಕ್ಕಿಹಿಟ್ಟು ತೆಗೆದುಕೊಂಡ ಅಳತೆಯ ಕಪ್ನಲ್ಲೇ ನೀರು ತೆಗೆದುಕೊಳ್ಳಬೇಕು). ಕುದಿ ಬಂದ ಬಳಿಕ ಅದಕ್ಕೆ ಜೀರಿಗೆ, ಹಸಿಮೆಣಸಿನಕಾಯಿ, ಹಪ್ಪಳದ ಖಾರ, ಅಜ್ವಾನ, ಉಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಕುದಿ ಕುದಿಸಬೇಕು. ಬಳಿಕ ಕುದಿಯುತ್ತಿರುವ ನೀರನ್ನು ಸೌಟಿನಿಂದ ಅಥವಾ ಕೋಲಿನಿಂದ ತಿರುಗಿಸುತ್ತ ಮತ್ತೊಂದು ಕೈಯಲ್ಲಿ ಅಕ್ಕಿಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತ ಕಲೆಸಬೇಕು. ಕಡಿಮೆ ಉರಿ ಇಟ್ಟುಕೊಂಡು ಗಂಟಾಗದಂತೆ ಹಿಟ್ಟು ಕೂಡಿಸಬೇಕು. ನಂತರ ತಾಟು ಮುಚ್ಚಿ ಹಿಟ್ಟನ್ನು ಅರ್ಧ ನಿಮಿಷ ಬೇಯಿಸಿಕೊಳ್ಳಬೇಕು. ಅಂಗೈಗೆ ಎಣ್ಣೆ ಸವರಿಕೊಂಡು ಪಾತ್ರೆಯಲ್ಲಿರುವ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉದ್ದಿನವಡೆ ಆಕಾರ ಮಾಡಿಟ್ಟುಕೊಳ್ಳಬೇಕು. ಎಲ್ಲವನ್ನೂ 15ರಿಂದ 20 ನಿಮಿಷ ಹಬೆಯಲ್ಲಿ ಬೇಯಿಸಬೇಕು (ಹಪ್ಪಳ ಹಗುರವಾಗಿ, ಅರಳಿನಂತೆ ಬರಲು, ಮುರಿಯದಿರಲು ಈ ಹಂತ ಬಲು ಮುಖ್ಯ). ಬಳಿಕ ಬೆಂದ ಹಿಟ್ಟನ್ನು ಬಿಸಿ ಇರುವಾಗಲೇ ಚೆನ್ನಾಗಿ ನಾದಿಕೊಳ್ಳಬೇಕು. ನಂತರ ಎರಡೂ ಬದಿಯಲ್ಲಿ ಪ್ಲಾಸ್ಟಿಕ್ ಶೀಟ್ ಇಟ್ಟು ತೆಳ್ಳಗೆ ಲಟ್ಟಿಸಿ, ಎಣ್ಣೆ ಹಚ್ಚಿದ ಕವರ್ ಮೇಲೆ ಒಣಗಲು ಹಾಕಬೇಕು. ಖಡಕ್ ಬಿಸಿಲು ಇದ್ದರೆ ಒಂದು ದಿನ ಒಣಗಿಸಿ ವರ್ಷದವರೆಗೂ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಎಣ್ಣೆಯಲ್ಲಿ ಕರಿದರೆ ಹಪ್ಪಳದ ಅಳತೆಗಿಂತ ಒಂದು ಪಟ್ಟು ಹೆಚ್ಚು ಅರಳುತ್ತದೆ.

ಬಾಬಿ, ನೆಲ್ಲಿ, ಪೇಪರ್, ಗಾಜು!

ಅಕ್ಕಿಹಿಟ್ಟಿನಲ್ಲಿ ಮಾಡುವ ಬಾಬಿ ಹಪ್ಪಳ, ಒಲೆ ಹಚ್ಚದೆ ಐದೇ ನಿಮಿಷದಲ್ಲಿ ಮಾಡುವ ಮಾವಿನಹಣ್ಣಿನ ಹಪ್ಪಳ, ಹಲಸಿನ ಹಪ್ಪಳ, ಗೋಧಿ ನೆನೆಸದೆ ಮಾಡುವ ಹಪ್ಪಳ, ಆಲೂಗಡ್ಡೆ ಹಪ್ಪಳ, ಜೋಳದ ಹಪ್ಪಳ, ಅವಲಕ್ಕಿ ಹಪ್ಪಳ, ಕಡ್ಲೆಹಿಟ್ಟಿನ ಹಪ್ಪಳ, ಹುರುಳಿ ಹಪ್ಪಳ, ನೆಲ್ಲಿಕಾಯಿ ಹಪ್ಪಳ, ಪೇಪರ್ ಹಪ್ಪಳ, ಗೆಣಸಿನ ಹಪ್ಪಳ, ಹೆಸರುಬೇಳೆ ಹಪ್ಪಳ, ಅಲಸಂದೆ ಹಪ್ಪಳ, ಗಾಜಿನ ಹಪ್ಪಳ, ಉದ್ದಿನಬೇಳೆ ಹಪ್ಪಳ, ಅವಲಕ್ಕಿ– ಆಲೂಗಡ್ಡೆ ಹಪ್ಪಳ, ಕೇರಳದ ರುಪ್ಪಳ ಹಪ್ಪಳ... ಹೀಗೆ 62 ಬಗೆಯ ಹಪ್ಪಳದ ರೆಸಿಪಿಗಳು ರಶ್ಮಿ ಅವರ ಚಾನೆಲ್ನ ಅಂಗಳದಲ್ಲಿವೆ.

ಡೇಟಾ ಹಿಂದೆ ಹೋಗಿ...

ಇನ್ಸ್ಟಂಟ್ ರೆಸಿಪಿಗಳನ್ನು ಹೆಚ್ಚು ಹೇಳಿಕೊಡುವ ‘ಶ್ರಾವಣಿ ಅಡುಗೆ ಮನೆ’ 4.67 ಲಕ್ಷ ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದು, ಈವರೆಗೆ 12 ಕೋಟಿ ವೀಕ್ಷಣೆ ಪಡೆದಿದೆ. 988 ಖಾದ್ಯದ ರೆಸಿಪಿಗಳನ್ನು ಈ ಚಾನೆಲ್ ಮೂಲಕ ಹಂಚಿಕೊಂಡಿದ್ದಾರೆ ರಶ್ಮಿ.

ಐದು ವರ್ಷಗಳ ಹಿಂದಷ್ಟೇ ಕೀಪ್ಯಾಡ್ ಫೋನ್ ಬಳಸುತ್ತಿದ್ದ ಅವರು, ಯೂಟ್ಯೂಬ್ ಚಾನೆಲ್ಗೆ ತೆರೆದುಕೊಂಡದ್ದು ಅಚ್ಚರಿಯೇ. ಕೋವಿಡ್ ಸಮಯದಲ್ಲಿ ಮಗನ ಆನ್ಲೈನ್ ಪಾಠದಿಂದಾಗಿ ಸ್ಮಾರ್ಟ್ಫೋನ್ ಸಖ್ಯ ಬೆಳೆಯಿತು. ಪಾಠ ಮುಗಿದ ಬಳಿಕ ಆ ದಿನದ 2 ಜಿಬಿ ಡೇಟಾ ಖಾಲಿ ಮಾಡುವ ಉಮೇದು ರಶ್ಮಿ ಅವರದ್ದು. ಅದಕ್ಕಾಗಿ ಟಿಕ್ಟಾಕ್ ಮಾಡುತ್ತಿದ್ದರು. ಟಿಕ್ಟಾಕ್ ರದ್ದಾದ ಬಳಿಕ ಯೂಟ್ಯೂಬ್ಗೆ ಅಡುಗೆ ರೆಸಿಪಿಯ ವಿಡಿಯೊಗಳನ್ನು ಹಾಕಲು ಶುರುವಿಟ್ಟರು. ಹೀಗೆ ಶುರುವಾದ ಖಯಾಲಿ ಈಗ ರಶ್ಮಿ ಅವರನ್ನು ಸ್ವಾವಲಂಬಿಯನ್ನಾಗಿಸಿದೆ. ಪತಿಯ ಸಹಕಾರವೂ ಅವರ ಬೆನ್ನಿಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.