ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಕುಂಬಳಕಾಯಿಯ ಸವಿ ರುಚಿ

Last Updated 7 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಕುಂಬಳಕಾಯಿ ಅಥವಾ ಚೀನಿಕಾಯಿ– ಎಲ್ಲೆಡೆ ಧಾರಾಳವಾಗಿ ಲಭ್ಯವಾಗುವ ತರಕಾರಿ. ಇದು ಬೆಳೆಯುವುದು ಸುಲಭ. ಬಳಸುವುದು ಸುಲಭ. ಇದರಲ್ಲಿ ‘ಎ’ ವಿಟಮಿನ್ ಇರುತ್ತದೆ. ಇದರಿಂದ ಮಾಡಿದ ಕೆಲವು ರಸರುಚಿಗಳು ಇಲ್ಲಿವೆ.

ಜಾಮೂನು

ಬೇಕಾಗುವ ಸಾಮಗ್ರಿ: ಕುಂಬಳಕಾಯಿ ಎರಡು ಹೋಳು, ಸಕ್ಕರೆ 2 ಕಪ್, ಏಲಕ್ಕಿ ಚೂರು, ಕೇಸರಿ ಸ್ವಲ್ಪ, ಕಾರ್ನ್ ಫ್ಲೋರ್ 3 ಚಮಚ, ಹಾಲಿನ ಪುಡಿ ಮೂರು ಚಮಚ

ಮಾಡುವ ವಿಧಾನ: ಮೊದಲು ಕುಂಬಳಕಾಯಿಯನ್ನು ಮೆತ್ತಗೆ ಬೇಯಿಸಿ ನೀರನ್ನು ತೆಗೆದು ಚೆನ್ನಾಗಿ ನುರಿದುಕೊಳ್ಳಿ. ಸ್ವಲ್ಪವೂ ಗಂಟಿರಬಾರದು. ಅದಕ್ಕೆ ಮೂರು ಚಮಚ ಕಾರ್ನ್ ಫ್ಲೋರ್, ಮೂರು ಚಮಚ ಹಾಲಿನ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ ಹತ್ತು ನಿಮಿಷ ಮುಚ್ಚಿಡಿ. ಆಮೇಲೆ ಉಂಡೆ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಸಕ್ಕರೆ ಪಾಕ ಮಾಡಿಟ್ಟುಕೊಳ್ಳಿ. ಅದಕ್ಕೆ ಏಲಕ್ಕಿ ಪುಡಿ, ಕೇಸರಿ ಹಾಕಿ. ಆಮೇಲೆ ಕರಿದ ಜಾಮೂನನ್ನು ಪಾಕಕ್ಕೆ ಹಾಕಿ. ಪಾಕ ಚೆನ್ನಾಗಿ ಹೀರಿಕೊಂಡ ಮೇಲೆ ಮೆತ್ತಗಾಗುತ್ತದೆ. ಜಾಮೂನು ಸಿದ್ಧ.

ಖಾರಾ ಇಡ್ಲಿ
ಖಾರಾ ಇಡ್ಲಿ

ಖಾರಾ ಇಡ್ಲಿ

ಬೇಕಾಗುವ ಸಾಮಗ್ರಿ: ಕುಂಬಳಕಾಯಿ ತುರಿದಿದ್ದು 2 ಕಪ್, ಇಡ್ಲಿ ರವೆ 2 ಕಪ್, ಹಸಿಮೆಣಸು 2, ಜೀರಿಗೆ ಅರ್ಧ ಚಮಚ, ಕಾಯಿತುರಿ ಒಂದು ಕಪ್, ಉಪ್ಪು, ಮೊಸರು ಒಂದು ಕಪ್, ತೆಳು ಅವಲಕ್ಕಿ ಒಂದು ಕಪ್, ಎಣ್ಣೆ 2 ಚಮಚ

ಮಾಡುವ ವಿಧಾನ:ಮೊದಲು ಇಡ್ಲಿ ರವೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ತಣಿದ ನಂತರ ತೊಳೆದು ನೆನಸಿ, ನೀರನ್ನು ಬಸಿಯಿರಿ. ಅದಕ್ಕೆ ತುರಿದ ಕುಂಬಳಕಾಯಿ ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕಾಯಿತುರಿ, ಉಪ್ಪು ಹಾಕಿ. ತೆಳು ಅವಲಕ್ಕಿಯನ್ನು ತೊಳೆದು ಅದಕ್ಕೆ ಹಾಕಿ. ಕೊನೆಯಲ್ಲಿ ಮೊಸರು ಹಾಕಿ ಚೆನ್ನಾಗಿ ಇಡ್ಲಿ ಹಿಟ್ಟಿನ ಹದಕ್ಕೆಮಿಶ್ರ.ಎಣ್ಣೆ ಹಾಕಿ . ಒಂದು ಗಂಟೆ ಮುಚ್ಚಿಡಿ. ನಂತರ ಉಗಿಯಲ್ಲಿ ಇಡ್ಲಿ ತಯಾರಿಸಿ. ಹಸಿರು ಚಟ್ನಿಯೊಂದಿಗೆ ತಿನ್ನಿ.

ಐಸ್ ಕ್ರೀಮ್
ಐಸ್ ಕ್ರೀಮ್

ಐಸ್ ಕ್ರೀಮ್

ಬೇಕಾಗುವ ಸಾಮಗ್ರಿ: ಕುಂಬಳಕಾಯಿ ಹೆಚ್ಚಿದ್ದು ಒಂದು ಕಪ್, ಮಿಲ್ಕ್ ಮೇಡ್ ಒಂದು ಕಪ್, ತಾಜಾ ಕ್ರೀಮ್ ಒಂದು ಕಪ್, ವೆನಿಲ್ಲಾ ಎಸೆನ್ಸ್ ಒಣಹಣ್ಣುಗಳು ಬೇಕಾದರೆ

ಮಾಡುವ ವಿಧಾನ:ಮೊದಲು ಕುಂಬಳಕಾಯನ್ನು ಬೇಯಿಸಿಕೊಂಡು ತಣಿದ ನಂತರ ಮಿಕ್ಸಿಗೆ ಹಾಕಿ ಮಿಶ್ರಣವನ್ನು ತೆಗೆದಿಟ್ಟುಕೊಳ್ಳಿ. ಅಮುಲ್ ಕ್ರೀಮ್‌ನ್ನು ಚೆನ್ನಾಗಿ ಬ್ಲೆಂಡ್ ಮಾಡಿ ಅದಕ್ಕೆ ಮಿಲ್ಕ್ ಮೇಡ್ ಸೇರಿಸಿ. ಮತ್ತೆ ಬ್ಲೆಂಡ್ ಮಾಡಿ. ಅದಕ್ಕೆ ರುಬ್ಬಿದ ಮಿಶ್ರಣ ಹಾಗೂ ವೆನಿಲ್ಲಾ ಎಸೆನ್ಸ್ ಹಾಕಿ ಇನ್ನೊಮ್ಮೆ ಬ್ಲೆಂಡ್ ಮಾಡಿ 6 ಗಂಟೆ ಫ್ರಿಜ್ ನಲ್ಲಿಡಿ. ಇದನ್ನು ನಂತರ ಮತ್ತೊಮ್ಮೆ ಮಿಕ್ಸರ್‌ನಲ್ಲಿ ಹಾಕಿ. ನೊರೆ ನೊರೆ ಬರುವಷ್ಟು ತಿರುಗಿಸಬೇಕು. ನಿಮಗೆ ಬೇಕಾದರೆ ಒಣ ಹಣ್ಣುಗಳನ್ನು ಸೇರಿಸಿ 5ರಿಂದ 6 ಗಂಟೆ ಫ್ರೀಜರ್‌ನಲ್ಲಿಡಿ.

ಸೂಪ್
ಸೂಪ್

ಸೂಪ್

ಬೇಕಾಗುವ ಸಾಮಗ್ರಿ: ಬೆಣ್ಣೆ 2 ಚಮಚ, ಬೆಳ್ಳುಳ್ಳಿ 3-4ಎಸಳು, ಉಪ್ಪು, ಕಾಳುಮೆಣಸಿನ ಪುಡಿ ಚೂರು, ಲವಂಗ 2, ಕ್ರೀಮ್, ಹೆಚ್ಚಿದ ಕುಂಬಳಕಾಯಿ 2 ದೊಡ್ಡ ಕಪ್, ಸಕ್ಕರೆ ಒಂದು ಚಮಚ( ಬೇಕಾದರೆ)

ಮಾಡುವ ವಿಧಾನ :ಮೊದಲು ಕುಂಬಳಕಾಯಿಯನ್ನು ಲವಂಗ ಹಾಕಿ ಬೇಯಿಸಿಕೊಳ್ಳಿ. ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ದೊಡ್ಡ ಬಾಣಲೆಗೆ ಬೆಣ್ಣೆ ಹಾಕಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಕುದಿಸಿ. ಕುದಿಯುವಾಗ ಉಪ್ಪು, ಕಾಳುಮೆಣಸು ಮತ್ತು ಸಕ್ಕರೆ ಸೇರಿಸಿ. ಕುದಿಸಿ. ಇಳಿಸುವಾಗ ಮೇಲಿನಿಂದ ಕ್ರೀಮ್ ಹಾಕಿ ಬಡಿಸಿ. ಇದಕ್ಕೆ ಬೇರೆ ತರಕಾರಿಯನ್ನು ಸೇರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT