ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ತಪ್ಪಕ್ಕೂ ಉಂಟು ರಂಜಾನ್ ನಂಟು

Last Updated 31 ಮೇ 2019, 19:30 IST
ಅಕ್ಷರ ಗಾತ್ರ

ಮುಸ್ಲಿಂ ಸಮುದಾಯದಲ್ಲಿ ಇತರ ದಿನಗಳಿಗಿಂತ ರಂಜಾನ್‌ನ ಆಚರಣೆಯ ಸಂದರ್ಭದಲ್ಲಿ ಆಹಾರ ಪದ್ಧತಿ ಸ್ವಲ್ಪ ಭಿನ್ನ ಮತ್ತು ವಿಶೇಷ. ಕೆಲವು ತಿನಿಸುಗಳು ಮಾಮೂಲಿನಂತೆ ಕಂಡರೂ ರಂಜಾನ್‌ನಲ್ಲಿ ಅವುಗಳನ್ನು ವಿಶೇಷವಾಗಿ ಪರಿಗಣಿಸುವುದಿದೆ. ಪರಂಪರೆಯ ಜೊತೆಗೆ ನಂಟು ಬೆಳೆಸಿಕೊಂಡು ಕೆಲವೊಂದು ಖಾದ್ಯಗಳು ಇಂದಿಗೂ ರುಚಿಸಬಲ್ಲವು. ಮಂಗಳೂರು ಭಾಗದಲ್ಲಿ ತಯಾರಿಸುವ ಪತ್ತಿರ್‌, ಕಲ್ತಪ್ಪ ಮುಂತಾದ ತಿನಿಸುಗಳು ಹಿಂದಿನ ಕಾಲದವುಗಳಾಗಿದ್ದರೂ ಹೊಸತೆನಿಸುತ್ತವೆ. ರುಚಿಯಲ್ಲೂ ಹೆಸರಿನಲ್ಲೂ ಭಿನ್ನವಾಗಿರುವ ಇಂತಹ ಕೆಲವು ಖಾದ್ಯಗಳನ್ನು ಇಲ್ಲಿ ಪರಿಚಯಿಸಿದ್ದಾರೆ.

ಕಲ್ತಪ್ಪ

ಬೇಕಾಗುವ ಸಾಮಗ್ರಿಗಳು: ಅಕ್ಕಿ(ಬೆಳ್ತಿಗೆ ಮತ್ತು ಕುಚ್ಚುಲಕ್ಕಿ ಸಮಪ್ರಮಾಣದಲ್ಲಿ)– 1 ಲೋಟ, ಬೆಲ್ಲ– 1 ಅಚ್ಚು, ಸೌತೆಕಾಯಿ– 1, ತುರಿದ ತೆಂಗಿನಕಾಯಿ– 1 ಕಪ್, ಏಲಕ್ಕಿ ಪುಡಿ– ಸ್ವಲ್ಪ, ಉಪ್ಪು– ರುಚಿಗೆ ತಕ್ಕಷ್ಟು, ಎಣ್ಣೆ–ಸ್ವಲ್ಪ, ಈರುಳ್ಳಿ – 3

ತಯಾರಿಸುವ ವಿಧಾನ: ಮೊದಲು ಅಕ್ಕಿಯನ್ನು ಕೆಲಹೊತ್ತು ನೀರಿನಲ್ಲಿ ನೆನೆಸಿಡಿ. ಬೆಲ್ಲ ಮತ್ತು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ತಯಾರಾಗಿ ಇಟ್ಟು, ಬಳಿಕ ಅಕ್ಕಿ ಜತೆ ಬೆಲ್ಲ, ಸೌತೆಕಾಯಿ, ಕಾಯಿತುರಿ, ಏಲಕ್ಕಿ ಪುಡಿ ಮತ್ತು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಸುಮಾರು ಅರ್ಧಗಂಟೆ ಹಾಗೇ ಬಿಡಿ. ಒಂದು ಅಗಲ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಆ ಪಾತ್ರೆಗೆ ರುಬ್ಬಿದ ಹಿಟ್ಟನ್ನು ಹಾಕಿ ಸರಿಯಾಗಿ ಅಲುಗಿಸಿ. ಸಣ್ಣ ಉರಿಯಲ್ಲಿ ಬೇಯಿಸಿ. ಮೀನು ಸಾರು, ತರಕಾರಿ ಸಾಂಬಾರಿನ ಜತೆಗೆ ಕಲ್ತಪ್ಪ ಸವಿಯಬಹುದು.

ಮಟನ್‌ ಹಲೀಮ್

ಬೇಕಾಗುವ ಸಾಮಗ್ರಿಗಳು: ಮಟನ್ ಮಾಂಸ– 1 ಕೆಜಿ, ಶುಂಠಿ ಪೇಸ್ಟ್– 2 ಚಮಚ, ತೊಗರಿ ಬೇಳೆ– 1ಕಪ್‌, ಮೆಣಸಿನ ಹುಡಿ– 1ಕಪ್, ಮೊಸರು– 2 ಕಪ್‌, ಗೋಡಂಬಿ– 1/2 ಕಪ್, ಕಾಳುಮೆಣಸು– ಅರ್ಧ ಚಮಚ, ತುಪ್ಪ– ಅರ್ಧ ಕಪ್, ಪುದೀನ– ಅರ್ಧ ಕಪ್.

ಇವುಗಳನ್ನೂ ಸೇರಿಸಬಹುದು: ಗೋಧಿಹಿಟ್ಟು– 3 ಕಪ್, ಬೆಳ್ಳುಳ್ಳಿ ಪೇಸ್ಟ್–2 ಚಮಚ, ಕಡ್ಲೆ ಬೇಳೆ– 1 ಕಪ್, ಅರಿಸಿನ ಹುಡಿ– 1/4 ಚಮಚ, ಈರುಳ್ಳಿ– 1 ಕಪ್, ಗರಂ ಮಸಾಲ ಪುಡಿ– ಅರ್ಧ ಚಮಚ, ದಾಲ್ಚಿನ್ನಿ– 1, ಕೊತ್ತಂಬರಿ ಸೊಪ್ಪು– 1 ಕಪ್, ಹಸಿಮೆಣಸು– 6.

ತಯಾರಿಸುವ ವಿಧಾನ: ಮೊದಲು ಗೋಧಿಹಿಟ್ಟನ್ನು ನೀರಿನಲ್ಲಿ ನೆನೆಸಿಡಿ. ಬಳಿಕ ಮಟನ್‌ ಅನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ಗೆ ಹಾಕಿ. ಅರ್ಧರ್ಧ ಚಮಚದಷ್ಟು ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಅರ್ಧ ಚಮಚ ಮೆಣಸಿನ ಪುಡಿ, ಅರ್ಧ ಚಮಚ ಗರಂ ಮಸಾಲೆ ಪುಡಿ, ಸ್ವಲ್ಪ ಅರಿಸಿನ ಪುಡಿಯನ್ನು ಮಟನ್‌ ಜತೆಗೆ ಸೇರಿಸಿ. 8 ರಿಂದ 10 ನಿಮಿಷದವರೆಗೆ (ನಾಲ್ಕು ವಿಷಲ್ ಬರುವವರೆಗೆ) ಬೇಯಿಸಿ. 15 ರಿಂದ 20 ನಿಮಿಷದವರೆಗೆ ಕುದಿಸಿದ ಬಳಿಕ ಪಕ್ಕಕ್ಕೆ ಇಡಿ. ಬಳಿಕ ಗೋಧಿಹಿಟ್ಟನ್ನು ತೊಗರಿ ಬೇಳೆ ಮತ್ತು ಕಡ್ಲೆಬೇಳೆ ಜತೆ ಸೇರಿಸಿ, ಒಂದು ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಅರಿಸಿನ ಮತ್ತು 2–3 ಹಸಿಮೆಣಸು, ಕಾಳುಮೆಣಸು ಹಾಕಿ, 8–10ಕಪ್ ನೀರು ಹಾಕಿ, ನೀರು ಹೀರಿಕೊಳ್ಳುವವರೆಗೆ ಬೇಯಿಸಿ. ಬಳಿಕ ಅವನ್ನು ಮಿಶ್ರಣ ಮಾಡಿ.

ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ, ಮಸಾಲೆ ಬೆರೆಸಿ, ಸಣ್ಣದಾಗಿ ತುರಿದ ಮಾಂಸವನ್ನು ಹಾಕಿ, ಉಳಿದಿರುವ ಹಸಿಮೆಣಸು, ಅರ್ಧ ಕಪ್ ಕೊತ್ತಂಬರಿ ಸೊಪ್ಪು ಹಾಕಿ 2– 9 ನಿಮಿಷ ಬೇಯಿಸಿ. ಬಳಿಕ ಮೊಸರು ಸೇರಿಸಿ 10– 15 ನಿಮಿಷ ಬಿಟ್ಟು, ಮೂರು ಕಪ್ ನೀರು ಸೇರಿಸಿ ಬೇಯಿಸಿ. ಬಳಿಕ ಮಿಶ್ರ ಮಾಡಿದ ಗೋಧಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಕಿ, ಸ್ವಲ್ಪ ತುಪ್ಪ ಸೇರಿಸಿ, ಅರ್ಧ ತಾಸು ಚೆನ್ನಾಗಿ ಕುದಿಯಲು ಬಿಡಿ.

ಪತ್ತಿರ್

ಬೇಕಾಗುವ ಸಾಮಗ್ರಿಗಳು: ಬಿಳಿ ಅಕ್ಕಿ ಹುಡಿ– 1 ಕಪ್, ನೀರು– 1/4 ಕಪ್, ತೆಂಗಿನ ಎಣ್ಣೆ– 1 ಚಮಚ, ಉಪ್ಪು– ಅರ್ಧ ಚಮಚ.

ತಯಾರಿಸುವ ವಿಧಾನ: ಒಂದು ಕಪ್ ಅಕ್ಕಿ ಹುಡಿಯನ್ನು ಪಾತ್ರೆಯೊಂದರಲ್ಲಿ ಹಾಕಿ, ಅದಕ್ಕೆ ಅರ್ಧ ಚಮಚ ಉಪ್ಪು ಸೇರಿಸಿ ಕಲಕಿ. ಬಳಿಕ ನೀರು ಸೇರಿಸಿ ಚೆನ್ನಾಗಿ ಕಲಸಿ ಹದವಾದ ಹಿಟ್ಟು ತಯಾರಿಸಿ. ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಬೇಕು. ಒಂದು ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿಟ್ಟುಕೊಳ್ಳಿ. ಬಳಿಕ ಆ ಉಂಡೆಗಳನ್ನು ಸಣ್ಣ ಮಣೆ(ಅಥವಾ ಟೇಬಲ್‌) ಮೇಲೆ ಇಟ್ಟು ರೋಲ್‌ ಬಳಸಿ ಅದು ವೃತ್ತಾಕಾರ ಪಡೆಯುವಂತೆ ಒತ್ತಿ ತೆಳುವಾಗಿಸಿ. ಮೆತ್ತಗೆ ತೆಗೆದು ತವಾದಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ದಪ್ಪವಾದ ಬಟ್ಟೆಯ ಮೂಲಕ ಮೇಲಿನಿಂದ ಸ್ವಲ್ಪ ಹದವಾಗಿ ಒತ್ತಿ. ಹೆಚ್ಚು ಬಿಸಿಯಾಗದಂತೆ ನೋಡಿಕೊಂಡು ತೆಗೆದು ಪ್ಲೇಟ್‌ಗೆ ಹಾಕಿ. ಚಿಕನ್ ಕರಿ, ಚಿಕನ್ ಸುಕ್ಕ, ಚಟ್ನಿಯ ಜತೆಗೂ ಪತ್ತಿರ್ ಸವಿಯಲು ಚೆನ್ನ.

ಮಸಾಲೆ ಪುಂಡಿ

ಬೇಕಾಗುವ ಸಮಾಗ್ರಿಗಳು: ಬಿಳಿ ಅಕ್ಕಿ ಅಥವಾ ಅಕ್ಕಿ ಹುಡಿ– 1 ಕಪ್, ನೀರು– 1/4 ಕಪ್, ತೆಂಗಿನ ಎಣ್ಣೆ– 1 ಚಮಚ, ಉಪ್ಪು– ರುಚಿಗೆ ತಕ್ಕಷ್ಟು. ಚಿಕನ್ (ಅಥವಾ ಯಾವುದೇ ಮಾಂಸದ) ಕರಿ.

ತಯಾರಿಸುವ ವಿಧಾನ: ಅಕ್ಕಿಯನ್ನು ಕೆಲಹೊತ್ತು ನೆನೆಸಿಟ್ಟು, ಕಾಯಿತುರಿ, ಉಪ್ಪು ಸೇರಿಸಿ ರುಬ್ಬಿ. ರುಬ್ಬಿದ ಹಿಟ್ಟನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಬಳಿಕ ಹಿಟ್ಟನ್ನು ಸ್ವಲ್ಪ ದೊಡ್ಡ ಗಾತ್ರದಲ್ಲಿ ಉಂಡೆಯಾಗಿ ಮಾಡಿ. ಬೆರಳಿನ ಮೂಲಕ ಉಂಡೆಯ ಮದ್ಯಭಾಗವನ್ನು ಒತ್ತಿ ದಪ್ಪಗಿನ ತೂತಾಗಿಸಿ. ಚಿಕನ್‌ ಕರಿಯನ್ನು ಅದರೊಳಗೆ ತುಂಬಿಸಿ ಹಿಟ್ಟು ಹಾಕಿ ಮುಚ್ಚಿ. ಬಳಿಕ ಅವುಗಳನ್ನೆಲ್ಲ ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿ. ಸ್ವಲ್ಪ ಹೊತ್ತು ಕಳೆದ ಬಳಿಕ ಪಾತ್ರೆ ಕೆಳಗಿಳಿಸಿ.

ಓಡುದೋಸೆ

ಬೇಕಾಗುವ ಸಾಮಗ್ರಿಗಳು: ಅಕ್ಕಿ(ಬೆಳ್ತಿಗೆ ಮತ್ತು ಕುಚ್ಚುಲಕ್ಕಿ ಸಮಪ್ರಮಾಣದಲ್ಲಿ)–1 ಲೋಟ, ದಪ್ಪಗೆ ತುರಿದ ತೆಂಗಿನಕಾಯಿ– 1 ಕಪ್, ಉಪ್ಪು– ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿಯನ್ನು ಕೆಲಹೊತ್ತು ನೆನೆಸಿಟ್ಟು, ದಪ್ಪಗೆ ತುರಿದ ತೆಂಗಿನಕಾಯಿ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಸ್ವಲ್ಪ ಹೊತ್ತು ರುಬ್ಬಿದ ಹಿಟ್ಟನ್ನು ಹಾಗೇ ಬಿಡಿ. ಮಣ್ಣಿನ ಓಡನ್ನು ಒಂದೆರಡು ನಿಮಿಷ ಕಾಯಿಸಿ, ಹಿಟ್ಟನ್ನು ಹಾಕಿ ನಿಧಾನಕ್ಕೆ ಅಲುಗಿಸಿ. ಸಣ್ಣ ಉರಿಯಲ್ಲಿ ಬೇಯಿಸಿದರೆ ಓಡುದೋಸೆ ಸಿದ್ಧ. ಮಂಗಳೂರಿನಲ್ಲಿ ಬಂಗುಡೆ ಸಾರು, ಗಸಿ ಜತೆ ಓಡುದೋಸೆ ಸವಿಯುವ ಸುಖ ಭಿನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT