ಧರ್ಮಸ್ಥಳ ಸ್ನಾನಘಟ್ಟದ ಬಳಿ ಎಸ್ಐಟಿ ನೇತೃತ್ವದಲ್ಲಿ ನಡೆದ ಶೋಧಕಾರ್ಯ
ಮಂಗಳೂರಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿಆಯೋಜಿಸಿದ್ದ ‘ಚೀಪ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್’ ಬ್ಯಾಡ್ಮಿಂಟನ್ ಟೂರ್ನಿಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹತ್ಯೆಗೊಂಡ ಸುಹಾಸ್ ಶೆಟ್ಟಿ ಅಂತಿಮ ಯಾತ್ರೆ
ಹತ್ಯೆಗೊಂಡ ಅಬ್ದುಲ್ ರಹಿಮಾನ್ ಪಾರ್ಥಿವ ಶರೀರ ಕೊಳತ್ತಮಜಲಿನಲ್ಲಿರುವ ಅವರ ಮನೆಗೆ ತಲುಪಿದ್ದಾಗ ಸೇರಿದ್ದ ಜನ
ಅಪಘಾತ:
ಒಂದೇ ದಿನ ಆರು ಮಂದಿ ಬಲಿ ಆ.28: ತಲಪಾಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಆಟೊರಿಕ್ಷಾಕ್ಕೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟರು. ರಿಕ್ಷಾ ಚಾಲಕ ಮುಳ್ಳುಗುಡ್ಡೆ ಅಜ್ಜಿನಡ್ಕದ ಹೈದರ್ ಆಲಿ (47) ಫರಂಗಿಪೇಟೆ ಪರಾರಿಯ ಅವ್ವಮ್ಮ (60) ಅಜ್ಜಿನಡ್ಕ ಖತೀಜ (60) ಅವರ ಸಹೋದರಿ ನಫೀಸಾ (52) ನಫೀಸಾ ಪುತ್ರಿ ಆಯೇಷಾ ಫಿದಾ (19) ನಫೀಸಾ ಅಣ್ಣನ ಪುತ್ರಿ ಹಸ್ನಾ (5) ಮೃತರು. ನ.15: ನಗರದ ಹೊರವಲಯದ ಪಣಂಬೂರು ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಎರಡು ಗ್ಯಾಸ್ ಟ್ಯಾಂಕರ್‌ಗಳ ನಡುವೆ ಸಿಲುಕಿದ ಆಟೊ ರಿಕ್ಷಾ ನಜ್ಜುಗುಜ್ಜಾಯಿತು. ಉಳ್ಳಾಲದ ರಿಕ್ಷಾ ಚಾಲಕ ಮೊಹಮ್ಮದ್ ಕುಞಿ (25) ಕೊಣಾಜೆ ಮೋಂಟೆಪದವು ನಿವಾಸಿಗಳಾದ ಅಬೂಬಕ್ಕರ್ (65) ಹಾಗೂ ಇಬ್ರಾಹಿಂ (68) ಸ್ಥಳದಲ್ಲೇ ಅಸುನೀಗಿದರು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದು ಬೆಂಗಳೂರಿನ ಒಂದೇ ಕುಟುಂಬದವರಾದ ರವಿ (64) ನಂಜಮ್ಮ (75) ರಮ್ಯಾ (23) ಮೃತಪಟ್ಟರು.
ಅಗಲಿದ ಗಣ್ಯರು ಜ.25
ಯಕ್ಷಗಾನ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ (84). ಫೆ.4:ಯಕ್ಷಗಾನ ಅರ್ಥಧಾರಿ ಕೆ.ವಿ ಗಣಪಯ್ಯ (92). ಮಾರ್ಚ್ 15: ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ತುಳು ಕನ್ನಡ ವಿದ್ವಾಂಸ ವಾಮನ ನಂದಾವರ (81). ಜೂ.7 ತೆಂಕು ತಿಟ್ಟಿನ ವೇಷಧಾರಿ ಕಟೀಲು ಮೇಳದ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ (67). ಜೂ.8 ತೆಂಕುತಿಟ್ಟಿನ ಹಾಸ್ಯ ಕಲಾವಿದ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ (70). ಅ.16 ತೆಂಕುತಿಟ್ಟಿನ ಹೆಸರಾಂತ ಭಾಗವತ ದಿನೇಶ್ ಅಮ್ಮಣ್ಣಾಯ (66). ಡಿ.14 ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ (68 ).
ಕುತೂಹಲ ಕೆರಳಿಸಿದ ಧರ್ಮಸ್ಥಳ ಪ್ರಕರಣ
‘ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವಬೆದರಿಕೆ ಒಡ್ಡಿ ಈ ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ’ ಎಂದು ಚಿನ್ನ ಸಿ.ಎನ್ ಎಂಬ ವ್ಯಕ್ತಿ ಆರೋಪಿಸಿದ ಪ್ರಕರಣದಿಂದಾಗಿ ಜಿಲ್ಲೆಯ ದೇಶವಿದೇಶಗಳಲ್ಲಿ ಗಮನ ಸೆಳೆಯಿತು. ಆತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಜುಲೈ 3ರಂದು ದೂರು ನೀಡಿದ್ದು ಜುಲೈ 4ರಂದು ಪ್ರಕರಣ ದಾಖಲಾಗಿತ್ತು. ಆತನಿಗೆ ಸಾಕ್ಷಿ ಸಂರಕ್ಷಣೆ ನಿಯಮಗಳಡಿ ರಕ್ಷಣೆ ನೀಡಲಾಯಿತು. ಆತ ವಕೀಲರ ಜೊತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಜುಲೈ 11ರಂದು ಹಾಜರಾಗಿ ಹೇಳಿಕೆ ದಾಖಲಿಸಿದ್ದ. ರಾಜ್ಯ ಸರ್ಕಾರ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಜುಲೈ 19ರಂದು ಎಸ್‌ಐಟಿ ರಚಿಸಿತ್ತು. ಜುಲೈ 26ರಂದು ವಿಚಾರಣೆ ಆರಂಭವಾಯಿತು. ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳಿಗಾಗಿ ಜು 29ರಿಂದ ಶೋಧ ಆರಂಭವಾಗಿತ್ತು. ಒಟ್ಟು 17 ಕಡೆ ನೆಲ ಅಗೆದು ಮೃತದೇಹಗಳ ಅವಶೇಷಗಳಿಗಾಗಿ ಶೋಧಕಾರ್ಯ ನಡೆಸಲಾಯಿತು. ಅವುಗಳಲ್ಲಿ ಒಂದು ಕಡೆ ನೆಲದಡಿಯಲ್ಲಿ ಹಾಗೂ ಒಂದು ಕಡೆ ನೆಲದ ಮೇಲೆ ಮೃತದೇಹದ ಅವಶೇಷಗಳು ಸಿಕ್ಕಿದ್ದವು. ‘ಪೊಲೀಸರಿಗೆ ಒಪ್ಪಿಸಿದ್ದ ತಲೆಬುರುಡೆಯು ನಾನು ಹೂತು ಹಾಕಿದ್ದ ಮೃತದೇಹದ್ದಲ್ಲ’ ಎಂದು ಆತ ಎಸ್‌ಐಟಿ ಎದುರು ಒಪ್ಪಿಕೊಂಡಿದ್ದ. ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಆ.23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಡಿ. 18ರಂದು ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಎಸ್‌ಐಟಿ ಬಿಎನ್‌ಎಸ್‌ಎಸ್ ಸೆಕ್ಷನ್ 215ರ ಅಡಿ 5000ಕ್ಕೂ ಹೆಚ್ಚು ಪುಟಗಳ ವರದಿಯನ್ನು ನ.20ರಂದು ಸಲ್ಲಿಸಿದೆ. ಸಾಕ್ಷಿ ದೂರುದಾರ ಮಹೇಶ್ ಶೆಟ್ಟಿ ತಿಮರೋಡಿ ಗಿರೀಶ ಮಟ್ಟೆಣ್ಣವರ ಜಯಂತ್ ಟಿ. ವಿಠಲ ಗೌಡ ಸುಜಾತಾ ಭಟ್ ನ್ಯಾಯಾಲಯದ ದಾರಿ ತಪ್ಪಿಸಿರುವುದನ್ನು ಹಾಗೂ ನ್ಯಾಯಾಲಯಕ್ಕೆ ಸುಳ್ಳು ಪುರಾವೆ ಸಲ್ಲಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ.