‘ಪತ್ನಿಗೆ ನಾನು ಮಾಡುವ ಉಪ್ಪಿಟ್ಟು ಇಷ್ಟ’

7

‘ಪತ್ನಿಗೆ ನಾನು ಮಾಡುವ ಉಪ್ಪಿಟ್ಟು ಇಷ್ಟ’

Published:
Updated:
ಶ್ರೀನಾಥ್

ಅಪ್ಪ–ಅಮ್ಮನಿಗೆ ನಾವು ಮೂವರು ಗಂಡುಮಕ್ಕಳೇ. ಮನೆಯ ಎಲ್ಲ ಕೆಲಸಗಳ ಹೊರೆ ಅಮ್ಮನ ಮೇಲೆ ಬಿದ್ದಿತ್ತು. ಹೀಗಾಗಿಯೇ, ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಅಮ್ಮನಿಗೆ ನೆರವಾಗುತ್ತಿದ್ದೆ. ಅಡುಗೆ ಮಾಡಲು ತುಸು ಹೆಚ್ಚಾಗಿಯೇ ಅಮ್ಮನಿಗೆ ನೆರವಾಗುತ್ತಿದ್ದೆ. ಸಹಾಯ ಮಾಡುವುದರ ಜೊತೆಗೆ ಅಮ್ಮ ಹೇಗೆ ಅಡುಗೆ ಮಾಡುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವರು ಮಾಡುತ್ತಿದ್ದ ಅಕ್ಕಿರೊಟ್ಟಿ ತುಂಬಾ ಚೆನ್ನಾಗಿರುತ್ತಿತ್ತು. ಅವರು ಮಾಡುವಷ್ಟೇ ರುಚಿಕರವಾಗಿ ಅಕ್ಕಿರೊಟ್ಟಿಯನ್ನು ನಾನೂ ಮಾಡುವೆ.

ಅಮ್ಮನಿಗೆ ನೆರವಾಗುತ್ತಿದ್ದರಿಂದಲೇನೊ ಅಡುಗೆ ಬಗ್ಗೆ ಕೊಂಚ ಕೊಂಚವೇ ಆಸಕ್ತಿ ಮೂಡಿತು. ಆಗ ಸರಿಯಾಗಿ ನನಗೆ 16 ವರ್ಷ ಇರಬೇಕು  9ನೇ ತರಗತಿ ಓದುತ್ತಿದ್ದೆ. ಅವತ್ತೊಂದಿನ ಮನೆಯಲ್ಲಿ ಯಾರೂ ಇರಲಿಲ್ಲ. ಹಸಿವಾಗಿತ್ತಾದರೂ ಪಾತ್ರೆಗಳು ಖಾಲಿ ಇದ್ದವು. ಹಸಿವು ನೀಗಿಸಲೇಬೇಕಿದ್ದರಿಂದ ಅಕ್ಕಿ ರೊಟ್ಟಿ ಮಾಡಿದ್ದೆ. ಅದು ನನ್ನ ಮೊದಲ ಅಡುಗೆ ಪ್ರಯೋಗ ಎನ್ನಬಹುದು. ರೊಟ್ಟಿಯನ್ನು ತಕ್ಕಮಟ್ಟಿಗೆ ಚೆನ್ನಾಗಿಯೇ ಮಾಡಿದ್ದೆ. ಆ ಬಳಿಕ ಮನೆಯಲ್ಲಿ ಒಬ್ಬನೇ ಇದ್ದಾಗಲೆಲ್ಲ ನನ್ನ ನಾಲಿಗೆಗೆ ನನ್ನ ಕೈರುಚಿ ತಾಗುತ್ತಿತ್ತು.

ವಿವಾಹವಾದ ಬಳಿಕ ಪತ್ನಿ ರೇಖಾ, ಎಂ.ಡಿ. ಪೆಥಾಲಜಿ ಓದಲು ಹೋದಳು. ಒಬ್ಬನೇ ಇದ್ದಿದ್ದರಿಂದ ಸುಮಾರು ಮೂರು ವರ್ಷ ನಾನೇ ಅಡುಗೆ ಮಾಡಿಕೊಂಡಿದ್ದೆ. ವೃತ್ತಿಯಲ್ಲಿ ನಾನು ಮತ್ತು ರೇಖಾ ವೈದ್ಯರು. ಇಬ್ಬರೂ ಕೆಲಸಕ್ಕೆ ಹೋಗುತ್ತೇವೆ. ಮನೆಗೆಲಸದ ಜವಾಬ್ದಾರಿ ರೇಖಾ ಒಬ್ಬಳ ಮೇಲೆಯೇ ಬೀಳುತ್ತಿದೆ ಎಂಬ ಕಾರಣಕ್ಕೆ ಹೇಗೋ ಅಡುಗೆ ಮಾಡಲು ಗೊತ್ತಿದ್ದರಿಂದ ಆಕೆಗೆ ನೆರವಾಗುತ್ತಿದ್ದೇನೆ. ಅಡುಗೆ ಸಂಬಂಧಿತ ಎಲ್ಲ ಕೆಲಸಗಳನ್ನು ಮಾಡುತ್ತೇನೆ.

ರೇಖಾ ಕೆಲಸಕ್ಕೆ ಹೋಗಿದ್ದಾಗ ಅಥವಾ ಬೇರೆ ಎಲ್ಲಿಗಾದರೂ ಹೋದಾಗ ಮನೆಯಲ್ಲಿ ನಾನೇ ಕುಕ್. ಮಗಳು ‘ಋತು’ ನಾಲಿಗೆಗೆ ನನ್ನದೇ ಕೈರುಚಿ. ಪತ್ನಿ ಇದ್ದಾಗಲೂ ಪಾರ್ಟ್ ಟೈಮ್ ಕುಕ್ ಕೆಲಸ ನನ್ನದಾಗಿರುತ್ತದೆ. ರೇಖಾ ಕೆಲಸದಿಂದ ಬರುವಷ್ಟರಲ್ಲಿ ಬಿಡುವಿದ್ದರೆ, ಆಕೆಗೆ ಹೇಳದೆಯೇ ಅಡುಗೆ ಮಾಡಿ ಇಟ್ಟಿರುತ್ತೇನೆ. ಅದನ್ನು ನೋಡಿ ತುಂಬಾನೇ ಖುಷಿ ಪಡುತ್ತಾಳೆ ಆಕೆ. ದಿನವಿಡೀ ದುಡಿದು ಸುಸ್ತಾಗಿ ಮನೆಗೆ ಬರುವ ಪತ್ನಿಗೂ ಕೊಂಚ ರಿಲ್ಯಾಕ್ಸ್ ಸಿಕ್ಕಂತಾಗುತ್ತದೆ. ಅಡುಗೆ ಮಾಡುವುದು ನನಗೂ ಮಾನಸಿಕವಾಗಿ ಖುಷಿ ಕೊಡುತ್ತದೆ.

ಇನ್ನು ಕೆಲವೊಮ್ಮೆ ನಾವಿಬ್ಬರೂ ಅಡುಗೆ ಕೆಲಸಗಳನ್ನು ಒಟ್ಟಿಗೆ ಹಂಚಿಕೊಂಡು ಮಾಡುತ್ತೇವೆ. ಇದರಿಂದ ಅಡುಗೆ ಕೆಲಸವೂ ಬೇಗ ಆಗುತ್ತದೆ. ಕೆಲವೊಮ್ಮೆ ನನಗೆ ಹಗಲು ಹಾಗೂ ಆಕೆಗೆ ರಾತ್ರಿ ಪಾಳಿಯದಲ್ಲಿ ಕೆಲಸವಿರುತ್ತದೆ. ಅಂತಹ ಸಂದರ್ಭದಲ್ಲಿ ಅಡುಗೆ ಮಾಡಿಟ್ಟು ಕೆಲಸಕ್ಕೆ ಹೋಗುತ್ತೇನೆ.

ಹೆಚ್ಚು ತರಕಾರಿ ಹಾಕಿ ಮಾಡುವ ಯಾವುದೇ ಅಡುಗೆ ಅಂದರೂ ನನಗಿಷ್ಟ. ಅದರಲ್ಲೂ ಪತ್ನಿ ಮಾಡುವ ಬಿಸಿಬೇಳೆಬಾತ್ ಅಂತೂ ನನ್ನ ಅಚ್ಚುಮೆಚ್ಚು. ಆಕೆ ಮಾಡುವ ಎಲ್ಲ ಅಡುಗೆ ನನಗಿಷ್ಟ. ರೇಖಾ, ಅಡುಗೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತ ಇರುತ್ತಾಳೆ. ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿ ಮತ್ತೊಂದು ದಿನ ಪ್ರಯತ್ನಿಸುತ್ತಿರುತ್ತೇನೆ.

ಅಕ್ಕಿ ರೊಟ್ಟಿ ಹಾಗೂ ರಾಗಿ ರೊಟ್ಟಿ ಸೇರಿದಂತೆ ಸೌಥ್ ಇಂಡಿಯಾದ ಬಹುತೇಕ ಸಸ್ಯಾಹಾರಿ ಖಾದ್ಯಗಳನ್ನು ಮಾಡುವೆ. ಮಗಳಿಗೆ ನಾನು ಮಾಡುವ ಎಗ್ ಫ್ರೈಡ್ ರೈಸ್ ಅಂದರೆ ತುಂಬಾ ಇಷ್ಟ. ನಾನು ಮಾಡುವ ಕಾಫಿ ಹಾಗೂ ಹೆಚ್ಚು ತರಕಾರಿ ಹಾಕಿ ಸ್ವಾದಿಷ್ಟಕರವಾಗಿ ಮಾಡುವ ಉಪ್ಪಿಟ್ಟು ಪತ್ನಿಗೆ ಹೆಚ್ಚು ಇಷ್ಟ. ಇಷ್ಟ ಪಟ್ಟು ಅವರು ಪ್ರೀತಿಯಿಂದ ತಿನ್ನುತ್ತಾರೆ. ಸಲಹೆಗಳನ್ನು ನೀಡುತ್ತಾರೆ.

ಅಡುಗೆ ಮಾಡುವುದನ್ನು ನಾನು ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ. ನಾನು ಮಾಡುವ ಪ್ರತಿಯೊಂದು ಅಡುಗೆಯೂ ತಿನ್ನುವವರ  ನಾಲಿಗೆಗೆ ಒಳ್ಳೆಯ ರುಚಿ ಕಟ್ಟಿಕೊಡಬೇಕು ಎಂಬುದು ನನ್ನಾಸೆ. ಅದಕ್ಕಾಗಿ, ನಾನು ಪ್ರಾಮಾಣಿಕ ಪ್ರಯತ್ನ ಮಾಡುವೆ. ನಾನು ಮಾಡಿದ ಅಡುಗೆ ಚೆನ್ನಾಗಿಲ್ಲ ಎಂಬ ಪ್ರತಿಕ್ರಿಯೆ ಬಂದರೆ ತುಂಬಾನೆ ಬೇಜಾರಾಗುತ್ತದೆ. ಹಾಗಾಗದಂತೆ ಮುಂಚೆಯೇ  ಎಚ್ಚರವಹಿಸುವೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !