ಆಷಾಢದ ಕೊನೆಯ ದಿನ ನಾಗರ ಅಮಾವಾಸ್ಯೆ ಹೆಸರಿನಲ್ಲಿ ಮತ್ತೆ ಮಣ್ಣಿನ ಪೂಜೆ ನಡೆಯುತ್ತದೆ ,ಈ ದಿನ ದಿವಸಿ ಅಮಾವಾಸ್ಯೆ ಎಂತಲೂ ಪ್ರಸಿದ್ದವಾಗಿದೆ ಹಾಗೂ ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಮಣ್ಣಿನಿಂದಲೇ ದಿವಸಿ ಗೌರಿಯನ್ನು ತಯಾರಿಸಿ ಹೆಣ್ಣು ಮಕ್ಕಳು ಗೌರಿ ಪೂಜೆಯನ್ನು ಮಾಡುತ್ತಾರೆ. ಪತಿಯ ಆಯುವೃದ್ದಿಗಾಗಿ ಪ್ರಾರ್ಥನೆ ಮಾಡಿಕೊಂಡು ಅತ್ಯಂತ ಶೃದ್ಧೆಯಿಂದ ಪೂಜಿಸುವ ಸಂಪ್ರದಾಯ ಇದೆ.
ಮದುವೆಗೆ ಮೊದಲು ಕೂಡ ಹೆಣ್ಣುಮಕ್ಕಳಿಂದ ಈ ಪೂಜೆ ಮಾಡಲಾಗುತ್ತದೆ. ನಂತರವೂ ಹತ್ತು ವರುಷ ವೃತವೆಂದು ಆಚರಿಸುತ್ತಾರೆ. ತಮ್ಮ ಗಂಡ ಭೀಮನಂತೆ ಬಲಿಷ್ಠನಾಗಲಿ ಎಂಬ ಹಾರೈಕೆ ಇರುತ್ತದೆ.
ಇನ್ನೂಂದು ವಿಶೇಷವೆಂದರೆ" ಬ್ಯಾಳಿ ಭಂಡಾರ "ಒಡೆಯುವ ಕಾರ್ಯಕ್ರಮ ನಡೆಸುತ್ತಾರೆ. ಊಟಕ್ಕಿಂತ ಮೊದಲು ಹೆಣ್ಣುಮಕ್ಕಳು ಹೊಸ್ತಿಲು ಪೂಜೆ ಮಾಡಿ ಹೊಸ್ತಿಲು ಮೇಲೆ ಬ್ಯಾಳಿ ಭಂಡಾರ ಒಡೆಯುವ ಕಾರ್ಯಕ್ರಮ ನಡೆಸುತ್ತಾರೆ .ಅಣ್ಣ - ತಮ್ಮಂದಿರು ಕಣಕದಲ್ಲಿ ಅಡಗಿದ ಬೆಳೆಯನ್ನು ಒಡೆದು ಬೇರೆ ಮಾಡಿ ಅಕ್ಕ - ತಂಗಿಯರಿಗೆ ಕೊಡುತ್ತಾರೆ. ಭಂಡಾರವೆಂದರೆ ಲಕ್ಷ್ಮೀ - ಐಶ್ವರ್ಯ ಎಂದರ್ಥ . ಸೋದರರು ತಮ್ಮ ಸೋದರಿಯರಿಗೆ ನಾವು ಈ ರೂಪದಲ್ಲಿ ನಿಮ್ಮೊಂದಿಗೆ ಸದಾ ಇದ್ದೇವೆ ಎಂಬ ಪವಿತ್ರ ಸಂಕೇತದ ಭಾವವಿದು.
ನಾಗರ ಅಮಾವಾಸ್ಯೆ ನಂತರ ಬರುವ ಹಬ್ಬವೇ ನಾಗರ ಚೌತಿ ಮತ್ತು ನಾಗ ಪಂಚಮಿ. ಸರ್ಪವನ್ನು ದೇವತಾ ಸ್ವರೂಪವೆಂದೇ ಗುರುತಿಸಲಾಗುತ್ತದೆ.
ಮಹಾಭಾರತದಲ್ಲಿ ಬರುವ ಪರಿಕ್ಷೀತನ ಅಂತ್ಯಕ್ಕೆ ಕಾರಣವಾದ ಸರ್ಪ ಸಂತತಿಯನ್ನೆ ದ್ವೇಷಿಸಿ ಸರ್ಪ ಯಜ್ಞ ಕೈಗೊಂಡ ಜನಮೇಜಯ ರಾಜ. ಆಸ್ತಿಕ ಮಹರ್ಷಿಯ ಸಲಹೆಯಂತೆ ಯಜ್ಞ ನಿಲ್ಲಿಸಿದ್ದು ಶ್ರಾವಣ ಪಂಚಮಿಯಂದೆ , ಶ್ರಾವಣ ಶುದ್ಧ ಪಂಚಮಿಗೆ ನಾಗ ಪಂಚಮಿ ಅನ್ನುತ್ತಾರೆ.
ಒಮ್ಮೆ ರೈತನೊಬ್ಬ ಹೊಲ ಊಳುವಾಗ ತನಗೆ ಅರಿವಿಲ್ಲದಂತೆ ಸರ್ಪದ ಹನ್ನೆರೆಡು ಮರಿಗಳನ್ನು ನೇಗಿಲಿಗೆ ಆಹುತಿ ಮಾಡಿರುತ್ತಾನೆ. ಭಯಭೀತನಾದ ರೈತ ಮರುಗಿ ಮನೆಗೆ ಮರುಳುತ್ತಾನೆ. ರಾತ್ರಿ ಹೊರಗೆ ಮೇಯಲು ಹೊದ ರೈತನ ಮನೆಗೆ ಆತನ ಮಕ್ಕಳನ್ನು ಕಡಿಯಲು ಮರಿಗಳ ತಾಯಿ ಸರ್ಪ ಬರುತ್ತಾಳೆ. ಆಗ ರೈತ ಆ ಸರ್ಪಕ್ಕೆ ಶರಣಾಗತನಾಗಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಾನೆ. ಪ್ರತಿ ವರುಷ ನಿನ್ನ ಹೆಸರಿನಲ್ಲಿ ಆರಾಧನೆ ಮಾಡುತ್ತೇನೆ ಎನ್ನುವದರೊಂದಿಗೆ ಅತಿ ವಿಜ್ರಂಭಣೆಯಿಂದ ಈ ಹಬ್ಬ ಶುರುವಾಯಿತೆಂದು ನಂಬಿಕೆ..
ಪಂಚಮಿ ಹಿಂದಿನ ದಿನ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ರೊಟ್ಟಿ ಪಂಚಮಿ ಆಚರಿಸುತ್ತಾರೆ. ಹೇರಳವಾಗಿ ಸಿಗುವ ಸೊಪ್ಪುಗಳಿಂದ ಕೂಡಿದ ಪಚಡಿ, ಗಜ್ಜರಿ ಸೌತಿಕಾಯಿ , ಮೂಲಂಗಿಗಳ ಕೊಸಂಬರಿ, ಜುಣಕದ ವಡಿ, ಬದನೆಕಾಯಿ ಎಣಗಾಯಿ, ವಿವಿಧ ಚಟ್ನಿ ಪುಡಿಗಳು, ಮೊಸರನ್ನ, ಚಿತ್ರಾನ್ನಗಳೊಂದಿಗೆ ಗೆಳತಿಯರೆಲ್ಲ ಊಟ ಸವಿಯುತ್ತಾರೆ. ಪರಸ್ಪರ ಆ ರೊಟ್ಟಿ ಬುತ್ತಿಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಸಂಕ್ರಾಂತಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ತೋಳನಕೆರೆ ಉದ್ಯಾನದಲ್ಲಿ ಮಹಿಳೆಯರು ಹಾಗೂ ಕುಟುಂಬದವರು ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡಿದರು
ನಾಗ ಪಂಚಮಿ ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಪ್ರತೀತಿ ಇದೆ. ಇದು ಅವರಿಗೆ ಮಾಂಗಲ್ಯ ಪ್ರದ ಹಾಗು ಸಂತಾನ ಪ್ರದ ಎಂದು ನಂಬಿಕೆ.
ಚೌತಿಯ ದಿನ ಕಲ್ಲು ನಾಗರಕ್ಕೆ ಅಥವಾ ಮಣ್ಣಿನ ಹುತ್ತಕ್ಕೆ ಹಾಲು ಎರೆದು ಪೂಜೆ ಸಲ್ಲಿಸುತ್ತಾರೆ,ಮರುದಿನ ಪಂಚಮಿಯಂದು ಮನೆಯಲ್ಲಿ ಹುತ್ತದ ಮಣ್ಣಿನಿಂದ ಮಾಡಿದ ನಾಗಪ್ಪನನ್ನು ಪ್ರತಿಷ್ಠಾಪನೆ ಮಾಡಿ ಹಳದಿ ಬಣ್ಣದ ಗೆಜ್ಜೆ ವಸ್ತ್ರ ಅರಿಶಿಣ, ಕುಂಕುಮ, ಪತ್ರೆ, ಪುಷ್ಪ, ಧೂಪ - ದೀಪಗಳಿಂದ ಷೋಡಷೋಪಚಾರಗಳಿಂದ ಪೂಜೆ ಸಲ್ಲಿಸುತ್ತಾರೆ. ಚೌತಿಯ ದಿನ ನಾಗಪ್ಪನಿಗೆ ಬೆಲ್ಲದ ಹಾಲು ಎರೆದರೆ, ಪಂಚಮಿಯ ದಿನ ಹಸಿ ಹಾಲನ್ನು ಎರೆಯುತ್ತಾ ಕುಟುಂಬದ ಎಲ್ಲರ ಹೆಸರನ್ನು ತೆಗೆದುಕೊಂಡು ತನಿ ಬಿಡುತ್ತಾರೆ. ಕುಟುಂಬದ ಸದಸ್ಯರಿಗೆ ನಿನ್ನಿಂದ ಯಾವುದೇ ಬಾಧೆಯಾಗದಿರಲಿ ಎಂದು ಕೇಳುತ್ತಾ ,
ನಮ್ಮಪ್ಪನ ಪಾಲು ನಮ್ಮವ್ವನ ಪಾಲು, ನಮ್ಮಣ್ಣನ ಪಾಲು, ತಂಗಿ , ಗಂಡನ ಪಾಲು, ಮಕ್ಕಳ ಪಾಲು, ಸಕಲ ಬಂಧು–ಬಳಗದ ಮತ್ತು ಗೆಳತಿಯರ ಪಾಲನ್ನು ಕೂಡ ಹಾಕುತ್ತಾರೆ.
ವಿಚಾರವಂತರು ವೈಜ್ಞಾನಿಕ ಮನೋಭಾವದವರು ಹಾಲನ್ನು ವ್ಯರ್ಥ ಮಾಡುವುದಕ್ಕಿಂತ ಅದನ್ನು ಅನಾಥ ಆಶ್ರಮಗಳಿಗೆ ಹಂಚುತ್ತಿದ್ದಾರೆ.
ಅಳ್ಳು, ತಂಬಿಟ್ಟು, ಉಸುಳಿ ಮುಂತಾದವುಗಳನ್ನು ನೈವೇದ್ಯಯಾಗಿ ಅರ್ಪಿಸಿ ಕೃತಾರ್ಥರಾಗುತ್ತಾರೆ. ಜೋಕಾಲಿ ಜೀಕಿ ಸಂತೋಷಪಡುತ್ತಾರೆ. ಚಿಕ್ಕ ಮಕ್ಕಳು ಬೋಲ ಬಗರಿ ಆಡಿ ಸುಖಿಸುತ್ತವೆ. ಊರ ಆಯಗಾರ ಮಂದಿಯೆಲ್ಲ ಮನೆ ಮನೆಗೆ ಉಂಡಿ, ಅಳ್ಳು ಕೇಳಲು ಬರುತ್ತಾರೆ. ತರಹೇವಾರಿ ಉಂಡಿ, ಚಕ್ಕುಲಿ, ಕುರು ಕುರು ಅವಲಕ್ಕಿ ತಿಂದು ನಿರಮ್ಮಳವಾಗಿರುವ ಈ ಹಬ್ಬ ಹೆಣ್ಣು ಮಕ್ಕಳ ಪ್ರೀತಿಯ ಹಬ್ಬ.
ತವರು ಮನೆಗೆ ಬಂದ ಹೆಣ್ಣುಮಕ್ಕಳು ಗಂಡನ ಮನೆಯ ಆಯಾಸ, ಕಿರಿ ಕಿರಿಯನ್ನು ಮರೆತು ಹಿಗ್ಗಿ ನ ಬುಗ್ಗೆಯಾಗಿ ಸಡಗರ ಸಂಭ್ರಮದಲ್ಲಿ ತೇಲಾಡುತ್ತಾರೆ. ಹೊಸ ಬಟ್ಟೆ, ಹೊಸ ಆಭರಣವನ್ನು ಧರಿಸಿದಾಗ ತಂದೆ-ತಾಯಿಯ ಹೊಟ್ಟೆ ತುಂಬುತ್ತದೆ.
ಹೆಣ್ಣು ಮಕ್ಕಳಿಗೆ ಹಸಿರು ಸೀರೆ ಉಡಿಸಿ, ಹಸಿರು ಬಳೆ ತೊಡಿಸಿ ಸೌಭಾಗ್ಯದ ಸಂಕೇತವಾಗಿ ಅವರನ್ನು ಸಂತೋಷಪಡಿಸುತ್ತಾರೆ.
ಪಂಚಮಿಯ ಮರುದಿನ ಶಿರಿಯಾಳ ಷಷ್ಠಿ ಕಥೆಯನ್ನು ಆಧರಿಸಿದ ಮಕ್ಕಳ ಹಬ್ಬ , ಆ ದಿನ ಹೊಸದಾಗಿ ಮದುವೆಯಾದ ಹುಡುಗಿಯರು ಬುತ್ತಿ ಬೀರುತ್ತಾರೆ. ಕರ್ಚಿಕಾಯಿ ಅಥವಾ ಶಾವಿಗೆ ಪಾಯಸ ,ಮೊಸರನ್ನ ಐದೈದು ಮನೆಗಳಲ್ಲಿ ಬೀರಬೇಕೇಂಬ ನಿಯಮವಿದೆ. ಮೂದಲನೆಯ ವರುಷ ೫ ಹಾಗೆ ೫ ವರುಷಗಳಲ್ಲಿ ೨೫ ಮನೆಗಳಿಗೆ ಬೀರಿಸುವ ಪರಿಪಾಠವುಂಟು.
ಪುಟ್ಟ ಮಕ್ಕಳು ನಾಗರಪಂಚಮಿ ಪ್ರಯುಕ್ತ ನಾಗ ಶಿಲೆಯ ಅಭಿಷೇಕ ಸಲ್ಲಿಸುತ್ತಿರುವುದು ಬೆಂಗಳೂರಿನ ಬಸವನಗುಡಿಯಲ್ಲಿ ಕಂಡು ಬಂತು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಸೊಮಲಾಪುರದ ಶಿರಿಯಾಳ ಶೆಟ್ಟಿ ಲೋಕ ಹಿತಕ್ಕಾಗಿ ಕಟ್ಟಿಸಿದ ಕೆರೆಗೆ ನೀರು ಬರುವುದೆಯಿಲ್ಲ , ಹಿಗಾಗಿ ಆತನನ ಒದ್ದಾಟ ನೋಡಲಾಗದೆ ಕಿರಿಯ ಸೊಸೆ ತನ್ನ ಹತ್ತು ತಿಂಗಳ ಮಗುವನ್ನು ಷಷ್ಠಿಯಂದು ಬಲಿ ಕೊಡುತ್ತಾರ ಪರಿಣಾಮ ಕೆರೆ ತುಂಬುತ್ತದೆ. ಈ ದಿನ ಕೆರೆ ಕಟ್ಟಂಬಲಿ ಎಂದೆ ಹೆಸರಾಗಿದೆ. ಆಷಾಢದಲ್ಲಿ ತವರಿಗೆ ಬಂದ ಮೊದಲಗಿತ್ತಿಯರೆಲ್ಲ ಗಂಡನ ಮನೆಗೆ ಹೊಗಲು ಇಂದೇ ಶುಭಗಳಿಗೆ .
ರೊಟ್ಟಿ ಬುತ್ತಿ ಕಟ್ಟಿಕೊಂಡು ಕೊಟ್ಟ ಸೀರೆಯನ್ನು ಉಟ್ಟುಕೊಂಡು ತಾಯಿ ತಂದೆಯರಿಗೆ, ಗೆಳತಿಯರಿಗೆ ವಿದಾಯ ಹೇಳಿ ಕಂಠ ಬಿಗಿದಿರುತ್ತದೆ. ಆದರೆ ಎಷ್ಟು ದಿನ ತವರಿನಲ್ಲಿದ್ದರೂ ಒಂದು ದಿನ ತನ್ನ ಮನೆಗೆ ಹೊಗಲೆಬೇಕಲ್ಲವೇ? ಇದುವೇ ಜೀವನ....ಮತ್ತೆ ಬರುವ ಪಂಚಮಿ ಎದುರು ನೋಡುತ್ತಿರುತ್ತದೆ ಹೆಣ್ಣು ಜೀವ.ಕೊಬ್ಬರಿ ಕುಬಸ ತರುವ ಅಣ್ಣನಿಗಾಗಿ ಹಾದಿ ಕಾಯುತ್ತದೆ ಅವಳ ಜೀವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.