ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ | ಬಳಲಿಕೆ ತಣಿಸುವ ಪೌಷ್ಟಿಕ ಖಾದ್ಯಗಳು

Last Updated 24 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬೇಸಿಗೆ ಕಾಲ ಶುರುವಾಗಿದೆ. ಬಿಸಿಲು ಹೆಚ್ಚಾದಂತೆ, ದೇಹ ಬಹು ಬೇಗ ಬಳಲುತ್ತದೆ. ಬಳಲುವ ದೇಹಕ್ಕೆ ಚೈತನ್ಯ ತುಂಬಲು ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯ. ಆಹಾರದಲ್ಲಿ ಪೌಷ್ಟಿಕತೆ ಇದ್ದರೆ ಸಾಕೇ, ಮನಸ್ಸಿಗೆ ಹಿಡಿಸುವಂತಹ ಪರಿಮಳವೂ ಬೇಕಲ್ಲವೇ ? ಇಂಥ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶವಿರುವ ಖಾದ್ಯಗಳ ರೆಸಿಪಿಗಳನ್ನು ಕೆ.ವಿ. ರಾಜಲಕ್ಷ್ಮಿ ಇಲ್ಲಿ ಪರಿಚಯಿಸಿದ್ದಾರೆ.

***

ರಾಗಿ ಸಿಹಿ ಪುಡಿ
ಬೇಕಾಗುವ ಸಾಮಗ್ರಿ:
ರಾಗಿ ಹುರಿಹಿಟ್ಟು -1 ಕಪ್, ಬೆಲ್ಲದ ಪುಡಿ ಮುಕ್ಕಾಲು ಕಪ್, ಎರಡು ಚಮಚ ಒಣಕೊಬ್ಬರಿ ಪುಡಿ, ಏಲಕ್ಕಿಪುಡಿ ಕಾಲು ಚಮಚ, ತುಪ್ಪ ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ತುಪ್ಪ ಕರಗಿಸಿ ಮೊದಲಿಗೆ ಬೆಲ್ಲದಪುಡಿ ಹಾಕಿ ಕರಗಿಸಿ. ನಂತರ ರಾಗಿ ಹುರಿಹಿಟ್ಟು, ಒಣಕೊಬ್ಬರಿ ಪುಡಿ, ಏಲಕ್ಕಿ ಪುಡಿ ಹಾಕಿ ಒಂದೆರಡು ನಿಮಿಷ ಗೊಟಾಯಿಸಿ. ಸ್ಟವ್‌ ಆರಿಸಿ.

ಬಾಣಲೆಯಲ್ಲಿರುವ ಪುಡಿ ತಣಿದ ಮೇಲೆ ಅದನ್ನು ಗಾಳಿಯಾಡದ ಡಬ್ಬಿಗೆ ವರ್ಗಾಯಿಸಿ. ನಿಮಗೆ ಬೇಕೆನಿಸಿದಾಗ ಈ ಪುಡಿಯನ್ನು ಸೇವಿಸಬಹುದು. ಅಷ್ಟೇ ಅಲ್ಲ, ಹಾಲಿನೊಂದಿಗೆ ಈ ಪುಡಿಯನ್ನು ಬೆರೆಸಿ ಮಾಲ್ಟ್‌ ರೀತಿ ಮಾಡಿಕೊಂಡು ಕುಡಿಯಬಹುದು. ದೇಹಕ್ಕೆ ಶಕ್ತಿ ನೀಡುತ್ತದೆ, ದೇಹವನ್ನು ತಂಪಾಗಿಡುತ್ತದೆ.

***

ಪ್ರೊಟೀನ್ ಪೌಡರ್
ಬೇಕಾಗುವ ಸಾಮಗ್ರಿ:
ಹುರಿದು, ಸಿಪ್ಪೆ ತೆಗೆದ ಕಡಲೆಕಾಯಿ ಬೀಜ 1 ಕಪ್, ಹುರಿಗಡಲೆ 1 ಕಪ್, ಒಣಕೊಬ್ಬರಿ ತುರಿ ಅರ್ಧ ಕಪ್, ಬೆಲ್ಲದಪುಡಿ 3 ಕಪ್, ಗೋಡಂಬಿ 6, ಬಾದಾಮಿ 6, ಏಲಕ್ಕಿ ಪುಡಿ 1 ಚಮಚ.

ಮಾಡುವ ವಿಧಾನ: ಬೆಲ್ಲದ ಪುಡಿ, ಏಲಕ್ಕಿ ಪುಡಿ ಹೊರತುಪಡಿಸಿ, ಉಳಿದೆಲ್ಲ ಪದಾರ್ಥಗಳನ್ನು ತರಿತರಿಯಾಗಿ ಅರೆಯಿರಿ. ನಂತರ ಆ ಪುಡಿಗೆ ಬೆಲ್ಲ, ಏಲಕ್ಕಿಪುಡಿ ಹಾಕಿ. ಒಂದೆರದು ಸುತ್ತು ಅರೆಯಿರಿ. ಸ್ವಾದಿಷ್ಟಭರಿತ ಪ್ರೊಟೀನ್ ಪೌಡರ್ ಸಿದ್ಧ. ಇದನ್ನು ಹಾಲಿನೊಂದಿಗೆ ಬೆರೆಸಿಕೊಂಡು ಸೇವಿಸಬಹುದು. ಪಾಯಸ ತಯಾರಿಸುವಾಗ, ಈ ಪ್ರೊಟಿನ್ ಪುಡಿಯನ್ನು ಎರಡು ಚಮದಷ್ಟು ಬೆರೆಸಿಕೊಂಡರೆ, ಪಾಯಸ ರುಚಿಗಟ್ಟುತ್ತದೆ.

***

ಬೆಲ್ಲದ ಸಜ್ಜಿಗೆ
ಬೇಕಾಗುವ ಸಾಮಗ್ರಿ:
ಸಣ್ಣ ರವೆ ಒಂದು ಕಪ್, ಬೆಲ್ಲ ಒಂದು ಕಪ್, ಹುರಿದ ಗೋಡಂಬಿ-ದ್ರಾಕ್ಷಿ 8 ರಿಂದ 10, ಲವಂಗದ ಪುಡಿ ಕಾಲು ಚಮಚ, ತುಪ್ಪ ಸ್ವಲ್ಪ.

ಮಾಡುವ ವಿಧಾನ: ರವೆಯನ್ನು ತುಪ್ಪದಲ್ಲಿ ಘಮ ಘಮ ಪರಿಮಳ ಬರುವವರೆಗೆ ಹುರಿದಿಟ್ಟುಕೊಳ್ಳಿ. ನಂತರ ಒಂದು ದಪ್ಪ ತಳದ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ, ಅದರಲ್ಲಿ ಬೆಲ್ಲ ಹಾಕಿ ಕರಗಿಸಿಕೊಳ್ಳಿ. ಅದಕ್ಕೆ ರವೆಯನ್ನು ಸೇರಿಸಿ. ಒಂದೆರಡು ನಿಮಿಷ ಬಿಸಿಯಲ್ಲೇ ಬಾಡಿಸಿ. ಅದಕ್ಕೆ ಎರಡು ಕಪ್ ನೀರು ಹಾಕಿ. ಸಣ್ಣ ಉರಿಯಲ್ಲಿ ಬೇಯಲು ಬಿಡಿ. ರವೆ ಮೆತ್ತಗಾದಾಗ, ಗೋಡಂಬಿ, ದ್ರಾಕ್ಷಿ, ಲವಂಗದ ಪುಡಿ, ಎರಡು ಚಮಚ ತುಪ್ಪ ಸೇರಿಸಿ ಚೆನ್ನಾಗಿ ಮಗುಚಿ ಮುಚ್ಚಳ ಮುಚ್ಚಿ. ಉರಿ ಆರಿಸಿ ತಣಿಯಲು ಬಿಡಿ. ಈಗ ಬೆಲ್ಲದ ಸಜ್ಜಿಗೆ ಸವಿಯಲು ಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT