ಮುಸ್ಸಂಜೆಗೆ ಪಿಜ್ಜಾ ದೋಸೆ

7

ಮುಸ್ಸಂಜೆಗೆ ಪಿಜ್ಜಾ ದೋಸೆ

Published:
Updated:
Deccan Herald

ದೋಸೆ ಹುಯ್ದೊಡನೆ, ಇಷ್ಟು ದಪ್ಪ ಊದಿಕೊಂಡಿತ್ತು. ಇನ್ನೊಂದು ಮೈ ಮಗ್ಗುಲು ಹೊರಳಲಿಲ್ಲ. ಅದರ ಮೇಲೆ ಚೀಸ್‌ ತುರಿದು, ಸುರಿಸಲಾಯಿತು.  ಹೆಚ್ಚಿದೀರುಳ್ಳಿ, ಮಳೆಹನಿಯಂತೆ ಅಲ್ಲಲ್ಲಿ ಉರುಳಿಕೊಂಡವು. ಮಳೆಯೊಳಗೆ ಆಲಿಕಲ್ಲು ಬೀಳುವಂತೆ ಜೋಳದ ಕಾಳುಗಳೂ ಬಿದ್ದವು.

ಈ ಬಣ್ಣಕ್ಕೆ ಇನ್ನಷ್ಟು ಮೆರುಗು ನೀಡಲು ಕೆಂಪು ಬೆಳ್ಳುಳ್ಳಿ ಚಟ್ನಿ, ಶುಂಠಿ ಚಟ್ನಿಯೂ ಸವರಿಕೊಂಡಿತು. ನೋಡಿದೊಡನೆ ಪಿಜ್ಜಾ ನೆನಪಿಸುವಂತಾಯಿತು. ಆದರಿದು, ಪಿಜ್ಜಾ ಅಲ್ಲ, ದೇಸಿ ಪಿಜ್ಜಾ ಹೌದು. ಅರರೆ ಏನಿದು ಅಂತ ಹುಬ್ಬೇರಿಸಬೇಡಿ, ಪಿಜ್ಜಾ ಲುಕ್‌ ನೀಡುವ ಪಿಜ್ಜಾ ದೋಸೆ.

ಒಂದೇ ನೋಟಕ್ಕೆ ಸವಿಯಬೇಕು ಎನಿಸುವ ಆ ಖಾದ್ಯದ ಹೆಸರೇ ಪಿಜ್ಜಾ ದೋಸೆ. ಹೊಸಕೋಟೆಯಿಂದ ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಮೂರು ಕಿಲೋ ಮೀಟರ್ ಸಾಗಿದರೆ ಎಡಬದಿಯಲ್ಲಿ ಸಿಗುವುದೇ ನಂದಿ ಗ್ರ್ಯಾಂಡ್‌ ಹೋಟೆಲ್‌. ಆ ಹೋಟೆಲ್‌ನ ವಿಶೇಷ ಖಾದ್ಯಗಳ ಪೈಕಿ ಈ ದೋಸೆಯೂ ಒಂದು.

ಇಡೀ ತಟ್ಟೆಯನ್ನು ಚೆಂದವಾಗಿ ಅಲಂಕರಿಸಿದ್ದ ಆ ದೋಸೆಯ ರುಚಿಯೂ ಅಷ್ಟೇ ಸ್ವಾದಿಷ್ಟಕರವಾಗಿತ್ತು. ನಾಲ್ಕು ಭಾಗಗಳಾಗಿ ಕತ್ತರಿಸಿ ತಟ್ಟೆಯಲ್ಲಿ ನೀಟಾಗಿ ಅದನ್ನು ಇಡಲಾಗಿತ್ತು. ಅದರ ನಡುವೆ ಕಪ್‌ನಲ್ಲಿ ಇಟ್ಟಿದ್ದ ಸಾಸ್ ಹೊಳೆಯುತ್ತಿತ್ತು. ಕತ್ತರಿಸಿದ ದೊಣ್ಣೆಮೆಣಸಿನಕಾಯಿ ತುಂಡುಗಳು ಆ ಖಾದ್ಯಕ್ಕೆ ಹಸಿರು ಸ್ಪರ್ಶ ನೀಡಿತ್ತು.

ಕೈ ಸುಡುವಷ್ಟು ಬಿಸಿಯಿದ್ದ ಅದನ್ನು ತುಂಡರಿಸಿ ಬಾಯಿಗೇರಿಸಿದರೆ ಹೂಕೋಮಲ ಪಿಜ್ಜಾ ತಿಂದಂತೆಯೇ ಎನಿಸುತ್ತದೆ.  ಚೀಸ್ ಸ್ವಲ್ಪ ಹೆಚ್ಚೆನಿಸಿತಾದರೂ ರುಚಿಯೂ ಕಡಿಮೆಯಿರಲಿಲ್ಲ. ಹಾಗಾಗಿ ಹದವಾಗಿ, ಹಿತವಾಗಿ ಹೊಟ್ಟೆಗಿಳಿಯುತ್ತದೆ. ಇದಿಷ್ಟವಾಗದಿದ್ದಲ್ಲಿ ಬನ್‌ ದೋಸೆ ಸವಿಯಬಹುದು.

ನಂದಿ ಗ್ರ್ಯಾಂಡ್‌ನಲ್ಲಿ ಪ್ರತಿ ತಿಂಗಳು ಒಂದೊಂದು ಖಾದ್ಯದ ಹತ್ತು ವೆರೈಟಿಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತದೆ.

ಈ ತಿಂಗಳ ವಿಶೇಷ ‘ದೋಸಾ ಉತ್ಸವ್’. ಸಾಗು ಮಸಾಲೆ ದೋಸೆ, ಬನ್ ದೋಸೆ, ಪನೀರ್ ಬಟರ್‌ ಮಸಾಲೆ ದೋಸೆ, ನಟ್ಸ್ ಮಸಾಲೆ ದೋಸೆ, ಮಶ್ರೂಮ್ ಮಸಾಲೆ ದೋಸೆ, ಪೆಸರಟ್ಟು ಮಸಾಲೆ ದೋಸೆ, ಪಾಲಕ್ ಮಸಾಲ ದೋಸೆ, ಗೋಬಿ ಮಸಾಲೆ ದೋಸೆ, ಚೀಸ್ವಾನ್ ಚೀಸ್ ಮಸಾಲೆ ದೋಸೆ ಹಾಗೂ ಫಿಜ್ಹಾ ಮಸಾಲೆ ದೋಸೆ ಹೋಟೆಲ್‌ನ ಈ ಬಾರಿಯ ವಿಶೇಷ ಅತಿಥಿಗಳು.

ಊಟಕ್ಕೆ ಮಶ್ರೂಮ್‌ ಕರಿ ಸವಿಯಲೇಬೇಕು. ಇದಕ್ಕೆ ರೊಟ್ಟಿ ಜೊತೆಯಾಗುತ್ತದೆ.

ಮಶ್ರೂಮ್ ಕರಿ, ಈ ಹೋಟೆಲ್‌ನ ವಿಶೇಷ ಖಾದ್ಯಗಳ ಪೈಕಿ ಮತ್ತೊಂದು.

ಬಿಸಿಬಿಸಿ ರೋಟಿಯು ಮಶ್ರೂಮ್ ಕರಿಗೆ ಹೇಳಿ ಮಾಡಿಸಿದಂತಿತ್ತು. ಮಶ್ರೂಮ್ ಕರಿಯಲ್ಲಿ ಅಣಬೆಯ ತುಂಡುಗಳು ಇಷ್ಟವಾದವು. ಉಪ್ಪುಖಾರ ಹಾಗೂ ಮಸಾಲೆ ಪದಾರ್ಥಗಳೊಂದಿಗೆ ಹದವಾಗಿ ಬೆಂದಿದ್ದ ಅಣಬೆ ತುಂಡುಗಳು ನಾಲಿಗೆಗೆ ಸ್ವಾದಿಷ್ಟಕರವಾದ ರುಚಿ ನೀಡಿದವು. ಆಗಷ್ಟೇ ಕಾದ ಎಣ್ಣೆಯಲ್ಲಿ ಮಿಂದೆದ್ದು ಬಂದಿದ್ದ ಚೀಸ್ ಬೌಲ್‌ಗಳು ರುಚಿಯಾಗಿದ್ದವು.

‘ದಕ್ಷಿಣ ಹಾಗೂ ಉತ್ತರ ಭಾರತ ಖಾದ್ಯಗಳು, ಚೈನೀಸ್ ಖಾದ್ಯಗಳು ಹೋಟೆಲ್‌ನಲ್ಲಿ ಲಭ್ಯ. ಹೆದ್ದಾರಿಯಲ್ಲಿ ಸಾಗುವವರಿಗೆ ಗುಣಮಟ್ಟದ ಹಾಗೂ ರುಚಿಕರ ಆಹಾರ ಒದಗಿಸುವ ಉದ್ದೇಶದಿಂದ ಈ ಹೋಟೆಲ್ ಸ್ಥಾಪಿಸಿದೆ. ಹೊಸಕೋಟೆ–ಚಿಂತಾಮಣಿ ರಸ್ತೆಯ ದೊಡ್ಡಹುಲ್ಲೂರು ಬಳಿ ಮತ್ತೊಂದು ಶಾಖೆಯನ್ನು ತೆರೆಯಲಾಗಿದೆ. ಹೊಸಕೋಟೆ ಟೋಲ್‌ಗೇಟ್ ಬಳಿಯೂ ಮತ್ತೊಂದು ಶಾಖೆಯನ್ನು ಶೀಘ್ರವೇ ತೆರೆಯಲಿದ್ದೇವೆ’ ಎಂದರು ಹೋಟೆಲ್‌ನ ಮಾಲೀಕ ಮಂಜುನಾಥ್.

‘ಹೈವೆಯಲ್ಲಿ ಹೆಚ್ಚಾಗಿ ಸಂಚಾರ ಮಾಡುವವರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಈ ಹೋಟೆಲ್‌ಗೆ ಕಾಯಂ ಗ್ರಾಹಕರು.

ಈ ಹೋಟೆಲ್‌ನ ಸುತ್ತ ಮುತ್ತಲಿನ ಪರಿಸರ ಸಂಜೆ ವೇಳೆ ಮನಸಿಗೆ ಇಷ್ಟವಾಗುತ್ತದೆ. ಹೀಗಾಗಿ, ಸಂಜೆ ವೇಳೆ ಹೆಚ್ಚು ಜನರು ಇಲ್ಲಿಗೆ ಬರುತ್ತಾರೆ. ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮಾನ್ಯವಾಗಿ ವಾರಂತ್ಯದಲ್ಲಿ ಲಾಂಗ್ ಡ್ರೈವ್‌ ಹೋಗುವವರೂ ಈ ಹೋಟೆಲ್‌ಗೆ ಬಂದು ಹೋಗುತ್ತಾರೆ’ ಎನ್ನುತ್ತಾರೆ.

‘ನಾನಾ ರೀತಿಯ ಈ ದೋಸೆಗಳೆಲ್ಲವೂ ವಿಭಿನ್ನವಾಗಿದ್ದು, ನಾಲಿಗೆಗೆ ವಿಶೇಷ ಅನುಭವವನ್ನು ನೀಡಿವೆ. ಈ ಹೆದ್ದಾರಿ ಮಾರ್ಗದಲ್ಲಿ ಸಾಗುವವರಿಗೆ ಈ ಹೋಟೆಲ್‌ ಸೂಕ್ತವೆನಿಸುತ್ತದೆ. ಈ ಹೋಟೆಲ್ ವಿಶಾಲವಾಗಿದ್ದು, ಆರಾಮವಾಗಿ ಕೂತು ಹೊಟ್ಟೆ ತುಂಬಿಸಿಕೊಂಡು ಸ್ವಲ್ಪಹೊತ್ತು ವಿರಮಿಸಿ ಸಾಗಬಹುದು. ಈ ಮಾರ್ಗದಲ್ಲಿ ಸಾಗುವಾಗಲೆಲ್ಲ ಈ ಹೋಟೆಲ್‌ಗೆ ಬಂದು ಹೋಗುವೆ’ ಎನ್ನುತ್ತಾರೆ ಹೋಟೆಲ್‌ನಲ್ಲಿದ್ದ ಗ್ರಾಹಕ ರಾಮಕೃಷ್ಣ.

**

ರೆಸ್ಟೊರೆಂಟ್: ನಂದಿ ಗ್ರ್ಯಾಂಡ್

ವಿಶೇಷ: ಪಿಜ್ಜಾ ದೋಸೆ

ಒಬ್ಬರಿಗೆ: ₹99

ಸ್ಥಳ: ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿ, ಕೊಳತೂರು ಗೇಟ್ ಸಮೀಪ.

ಟೇಬಲ್ ಕಾಯ್ದಿರಿಸಲು: 87620 30099

Tags: 

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !