ಶುಕ್ರವಾರ, ಮೇ 29, 2020
27 °C

ರಾಗಿ ಕೇಕಿನ ತಂಪು, ಮಸಾಲೆ ದೋಸೆಯ ಕಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಗಿ ಬರ್ಫಿ

ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 2 ಬಟ್ಟಲು, ಬೆಲ್ಲ – 2 ಬಟ್ಟಲು, ಒಣಕೊಬ್ಬರಿ – 1/2 ಬಟ್ಟಲು, ಹುರಿದ ಎಳ್ಳಿನ ಪುಡಿ – 1/2 ಬಟ್ಟಲು, ತುಪ್ಪ – 1/2 ಬಟ್ಟಲು. ಗೋಡಂಬಿ, ಬಾದಾಮಿ, ಏಲಕ್ಕಿ ಪುಡಿ ಮತ್ತು ಗಸಗಸೆ. 
ತಯಾರಿಸುವ ವಿಧಾನ: ದಪ್ಪ ಕಡಾಯಿಯಲ್ಲಿ 4 ಚಮಚ ತುಪ್ಪ ಹಾಕಿ, ರಾಗಿ ಹಿಟ್ಟನ್ನು ಘಮ್ಮನೆ ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಮತ್ತೊಂದು ಕಡಾಯಿಯಲ್ಲಿ ಬೆಲ್ಲ ಮತ್ತು ತುಪ್ಪ ಹಾಕಿ ಕರಗಿಸಬೇಕು. ಇದಕ್ಕೆ ಹುರಿದ ರಾಗಿ ಹಿಟ್ಟು ಮತ್ತೆರಡು ಚಮಚ ತುಪ್ಪ, ಕೊಬ್ಬರಿ ಪುಡಿ, ಎಳ್ಳಿನ ಪುಡಿ, ಗೋಡಂಬಿ, ಬಾದಾಮಿ, ಗಸಗಸೆ ಹಾಕಿ ತಿರುವಿ ತುಪ್ಪ ಹಚ್ಚಿದ ತಟ್ಟೆಗೆ ಸುರಿದು ಸಮತಟ್ಟು ಮಾಡಿ ಬೇಕಾದ ಆಕಾರಕ್ಕೆ ಕತ್ತರಿಸಿಬೇಕು. ಗೋಡಂಬಿ ಬಾದಾಮಿ, ಗಸಗಸೆಯಿಂದ ಅಲಂಕಾರ ಮಾಡಬೇಕು.

ರಾಗಿ ಸೌತೆಕಾಯಿ ತಾಲಿಪಟ್ಟು

ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 2 ಬಟ್ಟಲು, ಸೌತೆಕಾಯಿ – 1, ಈರುಳ್ಳಿ – 2, ಹಸಿಕೊಬ್ಬರಿ – 1 ಬಟ್ಟಲು, ಹಸಿಮೆಣಸಿನಕಾಯಿ – 2, ಜೀರಿಗೆ – 1/2 ಚಮಚ, ಕೊತ್ತಂಬರಿ, ಕರಿಬೇವು, ಉಪ್ಪು.
ತಯಾರಿಸುವ ವಿಧಾನ: ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ತುರಿದ ಕೊಬ್ಬರಿ, ಜೀರಿಗೆ ಸೇರಿಸಿ, ರಾಗಿ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರು ಹಾಕಿ ನಾದಿಕೊಳ್ಳಬೇಕು. ಲಿಂಬೆಗಾತ್ರದಷ್ಟು ಹಿಟ್ಟು ತೆಗೆದುಕೊಂಡು ತಟ್ಟಿ ಎರಡೂ ಬದಿ ಎಣ್ಣೆ ಹಾಕಿ ಬೇಯಿಸಬೇಕು. ಮೊಸರು, ಚಟ್ನಿಗಳೊಂದಿಗೆ ಸವಿಯಬಹುದು.

ರಾಗಿ ಕೇಕು

ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 300 ಗ್ರಾಂ, ಬೆಣ್ಣೆ – 250 ಗ್ರಾಂ, ಸಕ್ಕರೆ ಪುಡಿ – 200 ಗ್ರಾಂ ಮೊಟ್ಟೆ – 4
ತಯಾರಿಸುವ ವಿಧಾನ: ದಪ್ಪ ಕಡಾಯಿಯಲ್ಲಿ ರಾಗಿ ಹಿಟ್ಟನ್ನು ಘಮ್ಮನೆ ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು.
ಅಗಲವಾದ ತಟ್ಟೆಯಲ್ಲಿ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಬೇಕು. ಸಕ್ಕರೆ ಪುಡಿ ಸೇರಿಸಿ ಮತ್ತೆ ಚೆನ್ನಾಗಿ ನಾದಬೇಕು.‌

ಮೊಟ್ಟೆಗಳನ್ನು ಒಡೆದು ಬಿಳಿ ಮತ್ತು ಹಳದಿ ಭಾಗಗಳನ್ನು ಪ್ರತ್ಯೇಕಗೊಳಿಸಿ ಚೆನ್ನಾಗಿ ಕಡೆಯಬೇಕು.
ಮೊದಲು ಬಿಳಿ ಭಾಗವನ್ನು ಬೆಣ್ಣೆ ಸಕ್ಕರೆ ಇರುವ ತಟ್ಟೆಯಲ್ಲಿ ಹಾಕಿ ಕಲೆಸಬೇಕು. ನಂತರ ಹಳದಿ ಭಾಗ ಹಾಕಿ ಚೆನ್ನಾಗಿ ಕಲೆಸಬೇಕು. 
ಈಗ ಸ್ವಲ್ಪ ಸ್ವಲ್ಪ (ಹುರಿದ) ರಾಗಿ ಹಿಟ್ಟನ್ನು ಹಾಕುತ್ತ ಕಲಕುತ್ತಿರಬೇಕು. ಹೆಚ್ಚು ತಿಕ್ಕಿದಷ್ಟೂ ಕೇಕ್ ಹಗುರಾಗುತ್ತದೆ.
ನಂತರ ಕೇಕ್ ಪಾತ್ರೆಗೆ ಬೆಣ್ಣೆ ಸವರಿ, ತಿಕ್ಕಿದ ಹಿಟ್ಟನ್ನು ಹಾಕಿ ಓವನ್‌ನಲ್ಲಿ ಬೇಯಿಸಬೇಕು.

ರಾಗಿ ಸಬ್ಬಸಿಗೆ ಕಡುಬು

ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು - 2 ಬಟ್ಟಲು, ಸಬ್ಬಸಿಗೆ ಸೊಪ್ಪು – 1 ಕಟ್ಟು, ತೊಗರಿ ಬೇಳೆ – 1/2 ಬಟ್ಟಲು, ಈರುಳ್ಳಿ – 2, ಹಸಿಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಸಾಸಿವೆ ಜೀರಿಗೆ, ಬೆಳ್ಳುಳ್ಳಿ, ಹಸಿಕೊಬ್ಬರಿ – 1/2 ಬಟ್ಟಲು ಮತ್ತು ಹುಣಸೆರಸ – 2 ಚಮಚ, ಎಣ್ಣೆ ಮತ್ತು ಉಪ್ಪು.
ತಯಾರಿಸುವ ವಿಧಾನ: ದಪ್ಪ ಕಡಾಯಿಯಲ್ಲಿ 2 ಬಟ್ಟಲು ನೀರು ಹಾಕಿ, ರಾಗಿ ಹಿಟ್ಟನ್ನು ಹಾಕಿ. ಸ್ವಲ್ಪ ಉಪ್ಪು ಹಾಕಿ ಮುದ್ದೆ ಮಾಡಿಕೊಳ್ಳಬೇಕು. ಕುಕ್ಕರಿನಲ್ಲಿ ಬೇಳೆ ಮತ್ತು ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು ಹಾಕಿ ಬೇಯಿಸಿಕೊಳ್ಳಬೇಕು. 
ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಕಾಯಲಿಟ್ಟು ಸಾಸಿವೆ, ಜೀರಿಗೆ, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ, ಕುಟ್ಟಿದ ಬೆಳ್ಳುಳ್ಳಿ, ಕರಿಬೇವು ಹಾಕಿ ಬಾಡಿಸಬೇಕು. ಇದಕ್ಕೆ ಕುಕ್ಕರಿನಲ್ಲಿ ಬೇಯಿಸಿದ ಬೇಳೆ ಮತ್ತು ಸಬ್ಬಸಿಗೆ ಸೊಪ್ಪು ಹಾಕಿ ಹುಣಸೆ ಹುಳಿ ಮತ್ತು ಉಪ್ಪು ಹಾಕಿ ಬೇಯಿಸಬೇಕು. 
ಮುದ್ದೆಯಲ್ಲಿಯ ಅಡಿಕೆ ಗಾತ್ರದ ಹಿಟ್ಟು ತೆಗೆದು ದುಂಡಗೆ ಉಂಡೆಗಳನ್ನು ಮಾಡಿ ಬೇಯುತ್ತಿರುವ ಬೇಳೆಗೆ ಹಾಕಿ ಮತ್ತಷ್ಟು ಬೇಯಿಸಬೇಕು. ಮೇಲೆ ಹಸಿಕೊಬ್ಬರಿ ಮತ್ತು ಕೊತ್ತಂಬರಿ ಹಾಕಿ ಸವಿಯಬೇಕು.

 

ರಾಗಿ ಮಸಾಲೆ ದೋಸೆ

ಬೇಕಾಗುವ ಸಾಮಗ್ರಿಗಳು: ಉದ್ದಿನ ಬೇಳೆ – 1 ಬಟ್ಟಲು, ರಾಗಿ ಹಿಟ್ಟು – 3 ಬಟ್ಟಲು, ಮೆಂತ್ಯ – 1 ಚಮಚ, ಅವಲಕ್ಕಿ – 1/2 ಬಟ್ಟಲು ಮತ್ತು ಉಪ್ಪು
ತಯಾರಿಸುವ ವಿಧಾನ: ಉದ್ದಿನ ಬೇಳೆ, ಮತ್ತು ಮೆಂತ್ಯವನ್ನು 4 ತಾಸುಗಳವರೆಗೆ ನೆನೆಸಿ, ತೋಯಿಸಿದ ಅವಲಕ್ಕಿ ಕೂಡಿಸಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಹಿಟ್ಟಿಗೆ 3 ಬಟ್ಟಲು ರಾಗಿ ಹಿಟ್ಟನ್ನು ಸೇರಿಸಿ, ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಿಸಬೇಕು. ಬೇಕೆಂದರೆ ಈಗಲೇ ಉಪ್ಪು ಸೇರಿಸಿ ದೋಸೆ ಮಾಡಬಹುದು. ಅಥವಾ 8 ತಾಸು ಹುದುಗಲು ಬಿಟ್ಟು ನಂತರ ಉಪ್ಪು ಸೇರಿಸಿ ಮಾಡಬಹುದು. ದೋಸೆಯನ್ನು ಆಲೂಗೆಡ್ಡೆ ಪಲ್ಯ ಮತ್ತು ಕೊಬ್ಬರಿ ಚಟ್ನಿಯೊಂದಿಗೆ ಸವಿಯಬಹುದು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು