ಗುರುವಾರ , ಏಪ್ರಿಲ್ 2, 2020
19 °C

ರಂಜಾನ್‌ ಮಾಸದಲ್ಲಿ ವಿಶೇಷ ಹಲೀಂ

ಸಿದ್ದರಾಜು ಎಂ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮುಸ್ಲಿಮರ ಪವಿತ್ರ ವ್ರತಾಚರಣೆಯ ರಂಜಾನ್‌ ಮಾಸವು ವಿಶೇಷ ತಿನಿಸುಗಳ ರಸದೌತಣವೂ ಹೌದು. ಪ್ರತಿದಿನ ಉಪವಾಸ ವ್ರತ ಮುಗಿದ ಬಳಿಕ ತಮ್ಮಿಷ್ಟದ ಆಹಾರ ಮೊರೆ ಹೋಗುವ ಬಹುತೇಕರಿಗೆ ನೆನಪಾಗುವುದು ವಿಶೇಷ ಖಾದ್ಯ ಹಲೀಂ.

ಹೈದರಾಬಾದ್‌ನಲ್ಲಿ ಪ್ರಸಿದ್ಧಿ ಪಡೆದ ಈ ಇರಾನಿ ಖಾದ್ಯಕ್ಕೆ ಕಲಬುರ್ಗಿಯಲ್ಲೂ ಹೆಚ್ಚು ಬೇಡಿಕೆ ಇದೆ. ನಗರದ ಮುಸ್ಲಿಂ ಚೌಕ್‌, ಸೂಪರ್‌ ಮಾರ್ಕೆಟ್‌,  ಎಸ್‌ವಿಪಿ ವೃತ್ತ, ರೈಲು ನಿಲ್ದಾಣದ ರಸ್ತೆ, ಖಾದ್ರಿ ಚೌಕ್, ಬಸ್‌ ನಿಲ್ದಾಣ, ಎಂಎಸ್‌ಕೆ ಮಿಲ್‌ ಸೇರಿದಂತೆ ಇನ್ನೂ ಹಲವು ಕಡೆ ವಿವಿಧ ಬಗೆಯ ಹಲೀಂ ತಯಾರಿಸುವ ಹೋಟೆಲ್‌ಗಳಿದ್ದು, ಅಲ್ಲಿ ಸಂಜೆ ವೇಳೆ ಜನಜಂಗುಳಿ ನೆರೆದಿರುತ್ತದೆ. 

ಸ್ವಾದಿಷ್ಟ, ರುಚಿಕರ ಹಾಗೂ ಪೌಷ್ಟಿಕಾಂಶಯುಕ್ತ ಖಾದ್ಯವಾದ ಹಲೀಂ ಸೇವನೆಗೆ ಮುಸ್ಲಿಮರು, ಹಿಂದೂ ಸೇರಿದಂತೆ ಇತರೆ ಧರ್ಮೀಯರು ಆಕರ್ಷಿತರಾಗಿದ್ದಾರೆ. ನಗರದಲ್ಲಿ ಮಟನ್‌, ಚಿಕನ್‌ ಹಾಗೂ ಬೀಫ್‌ ಹಲೀಂ ಲಭ್ಯವಿದ್ದು, ಹೆಚ್ಚಿನ ಜನರು ಚಿಕನ್‌ ಹಲೀಂ ಅನ್ನು ಸವಿಯುತ್ತಾರೆ.

‘ಹಲೀಂ ರಂಜಾನ್ ಮಾಸದಲ್ಲಿ ಮಾತ್ರವೇ ಕಲಬುರ್ಗಿಯಲ್ಲಿ ದೊರೆಯುತ್ತದೆ. ಹೈದರಾಬಾದ್‌ನಿಂದ ಬಾಣಸಿಗರನ್ನು ಕರೆಸುತ್ತೇವೆ. ಪ್ರತಿದಿನ ನಮ್ಮಲ್ಲಿ 150 ಪ್ಲೇಟ್‌ ಹಲೀಂ ಮಾರಾಟವಾಗುತ್ತದೆ’ ಎಂದು ರೈಲು ನಿಲ್ದಾಣದ ರಸ್ತೆಯ ರಾಯಲ್‌ ಹೋಟೆಲ್‌ ಮಾಲೀಕ ಮಹಮ್ಮದ್‌ ಜಮೀರ್‌ ಹೇಳುತ್ತಾರೆ.

‘ಉಪವಾಸ ವ್ರತ ಕೈಗೊಳ್ಳುವ ಮಂದಿಗೆ ಬಹು ಪೌಷ್ಟಿಕಾಂಶಯುಕ್ತ ಆಹಾರ ಇದು. ಇದರ ಸೇವನೆಯಿಂದ ಅಜೀರ್ಣ ಸೇರಿದಂತೆ ಇತರೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಈ ಪದಾರ್ಥ ಸೇವನೆ ಇಲ್ಲದೆ ಹಬ್ಬದ ಆಚರಣೆ ಅಪೂರ್ಣವಿದ್ದಂತೆ’ ಎಂದು ಅವರು ತಿಳಿಸಿದರು. 

‘ಎರಡು ದಶಕದಿಂದ ಇಲ್ಲಿ ಹಲೀಂ ತಯಾರಿಸಲಾಗುತ್ತಿದೆ. ರಂಜಾನ್‌ ಮಾಸ ಆರಂಭವಾದ ದಿನದಿಂದ ಪ್ರತಿ ದಿನವೂ 15 ಕೆಜಿ ಚಿಕನ್‌ ಹಲೀಂ ತಯಾರಿಸಲಾಗುತ್ತದೆ. ಸಂಜೆ 5 ಗಂಟೆಗೆ ವೇಳೆಗೆ ಹಲೀಂ ಸಿದ್ಧವಾಗಿರುತ್ತದೆ’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)