ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆ: ಚಪ್ಪರಕ್ಕಷ್ಟೆ ಅಲ್ಲ ಚಪ್ಪರಿಸಲೂ ಹೌದು

ಅಕ್ಷರ ಗಾತ್ರ

ಬಾಳೆಕಾಯಿಯಿಂದ ಪಕೋಡ-ಪಲ್ಯಗಳನ್ನು ಮಾಡಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಬಾಳೆದಿಂಡಿನಿಂದಲೂ ಹಲವು ಖಾದ್ಯಗಳನ್ನು ತಯಾರಿಸಬಹುದು. ಇಂಥ ಹಲವು ತಿನಿಸುಗಳನ್ನು ಮಾಡುವ ವಿಧಾನವನ್ನು ಇಲ್ಲಿ ತಿಳಿಸಿದ್ದಾರೆ ಬಿ. ಎಸ್‌. ರಾಜಲಕ್ಷ್ಮೀ.

ಬಾಳೆದಿಂಡಿನ ಕೋಸಂಬರಿ

ಬೇಕಾಗುವ ಸಾಮಗ್ರಿಗಳು: ಬಾಳೆದಿಂಡು –1ಕಪ್ (ಸಣ್ಣಗೆ ಹೆಚ್ಚಿದ್ದು), ಹೆಸರುಬೇಳೆ - 1/2ಕಪ್, ತೆಂಗಿನ ತುರಿ - 1/2ಕಪ್,ಹಸಿಮೆಣಸಿನ ಕಾಯಿ - 4, ಕೊತ್ತಂಬರಿಸೊಪ್ಪು, ಸಾಸಿವೆ, ಇಂಗು, ಉಪ್ಪು, ನಿಂಬೆರಸ

ತಯಾರಿಸುವ ವಿಧಾನ: ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನೆಸಿಡಿ. ನಂತರ ನೀರು ಬಸಿದು ಹೆಚ್ಚಿದ ಬಾಳೆದಿಂಡು, ತೆಂಗಿನ ತುರಿ, ಉಪ್ಪು, ನಿಂಬೆರಸವನ್ನು ಸೇರಿಸಿ. ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಒಂದು ಟೀ ಚಮಚ ಎಣ್ಣೆಯಲ್ಲಿ ಇಂಗು ಸಾಸಿವೆಯೊಡನೆ ಒಗ್ಗರಣೆ ಮಾಡಿಕೊಂಡು ಮೊದಲಿನ ಮಿಶ್ರಣಕ್ಕೆ ಹಾಕಿ. ನಂತರ ಎಲ್ಲವನ್ನೂ ಚೆನ್ನಾಗಿ ಬೆರೆಸಿದರೆ ರುಚಿಕರವಾದ ಕೋಸಂಬರಿ ಸಿದ್ಧ. ತಿನ್ನಲು ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

ಬಾಳೆದಿಂಡಿನ ಖಾರದ ಪಲ್ಯ

ಬೇಕಾಗುವ ಸಾಮಗ್ರಿಗಳು: ಬಾಳೆದಿಂಡು - 1ಕಪ್ (ಸಣ್ಣಗೆ ಹೆಚ್ಚಿದ್ದು), ತೆಂಗಿನ ತುರಿ - 1/2ಕಪ್, ಹಸಿಮೆಣಸಿನ ಕಾಯಿ - 4, ಉದ್ದಿನಬೇಳೆ, ಕಡಲೆಬೇಳೆ - 1/2ಚಮಚ, ಕೊತ್ತಂಬರಿಸೊಪ್ಪು, ಸಾಸಿವೆ, ಇಂಗು, ಉಪ್ಪು, ನಿಂಬೆರಸ

ತಯಾರಿಸುವ ವಿಧಾನ: ಬಾಣಲೆಗೆ ಎರಡು ಟೀ ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ಇಂಗು ಹಾಕಿ ಒಗ್ಗರಣೆ ಮಾಡಿಕೊಂಡ ನಂತರ ಹೆಚ್ಚಿದ ಬಾಳೆದಿಂಡನ್ನು ಹಾಕಿ ಸ್ವಲ್ಪ ನೀರನ್ನು ಚುಮುಕಿಸಿ ತಟ್ಟೆ ಮುಚ್ಚಿ ಐದು ನಿಮಿಷ ಬಿಡಿ. ಆನಂತರ ತೆಂಗಿನ ತುರಿ, ಕೊತ್ತಂಬರಿಸೊಪ್ಪು, ಉಪ್ಪು, ನಿಂಬೆರಸ ಹಾಕಿ ಕೂಡಿಸಿದರೆ ಬಾಳೆದಿಂಡಿನ ಪಲ್ಯ ತಯಾರು.

ಮೊಸರು ಬಜ್ಜಿ

ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿದ ಬಾಳೆದಿಂಡು - 1ಕಪ್, ಮೊಸರು - 1ಕಪ್, ಹಸಿಮೆಣಸಿನ ಕಾಯಿ - 4,ಕೊತ್ತಂಬರಿಸೊಪ್ಪು, ಹಸಿ ಶುಂಠಿ, ಸಾಸಿವೆ, ಇಂಗು, ಉಪ್ಪು

ತಯಾರಿಸುವ ವಿಧಾನ:ತುಪ್ಪದಲ್ಲಿ ಸಾಸಿವೆ, ಇಂಗು, ಹಸಿರು ಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿಕೊಂಡು ಹೆಚ್ಚಿದ ಬಾಳೆದಿಂಡು, ಮೊಸರು, ಉಪ್ಪು, ಕೊತ್ತಂಬರಿಸೊಪ್ಪು, ಹಸಿಶುಂಠಿಯನ್ನು ಸೇರಿಸಿ ಕೂಡಿಸಿ. ದಿಢೀರ್ ಮೊಸರುಬಜ್ಜಿ ರೆಡಿ.

ಬಾಳೆದಿಂಡಿನ ಸೂಪ್

ಬೇಕಾಗುವ ವಸ್ತುಗಳು: ಸಣ್ಣಗೆ ಹೆಚ್ಚಿದ ಬಾಳೆದಿಂಡು - 1ಕಪ್, ಬೆಣ್ಣೆ - 1ಚಮಚ, ಕಾಳುಮೆಣಸಿನ ಪುಡಿ,
ಉಪ್ಪು, ಯಾವುದಾದ ರೊಂದು ಹಿಟ್ಟು – 1/2ಚಮಚ

ತಯಾರಿಸುವ ವಿಧಾನ: ಬಾಣಲೆಗೆ ಬೆಣ್ಣೆ ಹಾಕಿ ಹೆಚ್ಚಿದ ಬಾಳೆದಿಂಡನ್ನು ಐದು ನಿಮಿಷ ಬಾಡಿಸಿ ಉಪ್ಪು, ಕಾಳುಮೆಣಸಿನ ಪುಡಿಯನ್ನು ಹಾಕಿ. ಸ್ವಲ್ಪ ನೀರಿಗೆ ಹಿಟ್ಟನ್ನು ಹಾಕಿ ಕೂಡಿಸಿ ಬೇಯಿಸಿದ ಬಾಳೆದಿಂಡಿನ ಮಿಶ್ರಣ ಹಾಕಿ ಕುದಿಸಿ. ಬಿಸಿ ಇರುವಾಗಲೇ ಊಟಕ್ಕೆ ಮೊದಲು ಕುಡಿದರೆ ಚೆನ್ನ. ಈ ಸೂಪಿಗೆ ಬೇಕಿದ್ದರೆ ರಸ್ಕ್ ಅಥವಾ ಬಿಸ್ಕತ್ತಿನ ಚೂರುಗಳನ್ನು ಹಾಕಿಕೊಳ್ಳಬಹುದು.

ಸಿಹಿಪಲ್ಯ

ಬೇಕಾಗುವ ವಸ್ತುಗಳು: ಸಣ್ಣಗೆ ಹೆಚ್ಚಿದ ಬಾಳೆದಿಂಡು - 1ಕಪ್, ತೆಂಗಿನ ತುರಿ - 1/2ಕಪ್, ಬೆಲ್ಲದ ಪುಡಿ - 1/4ಕಪ್, ಉದ್ದಿನ ಬೇಳೆ, ಕಡಲೆಬೇಳೆ, ಸಾಸಿವೆ - 1/4ಚಮಚ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಹಾಲು - 1/4ಕಪ್, ತುಪ್ಪ - 1ಚಮಚ

ತಯಾರಿಸುವ ವಿಧಾನ: ಬಾಣಲೆಗೆ ತುಪ್ಪಹಾಕಿ ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಒಗ್ಗರಣೆ ಮಾಡಿಕೊಂಡು ಇದಕ್ಕೆ ಹಾಲು, ಹೆಚ್ಚಿದ ಬಾಳೆದಿಂಡನ್ನು ಹಾಕಿ ಐದು ನಿಮಿಷ ಬೇಯಿಸಿ. ನಂತರ ಬೆಲ್ಲ, ಕಾಯಿತುರಿಯನ್ನು ಹಾಕಿ ಕೂಡಿಸಿ. ದ್ರಾಕ್ಷಿ, ಗೋಡಂಬಿ, ಏಲಕ್ಕಿಯನ್ನು ತುಪ್ಪದಲ್ಲಿ ಕರಿದು ಸೇರಿಸಿದರೆ ಸಿಹಿಪಲ್ಯ ರೆಡಿ.

ಬಾಳೆದಿಂಡಿನ ತಂಪುಪಾನೀಯ

ಬೇಕಾಗುವ ಸಾಮಗ್ರಿಗಳು: ಬಾಳೆದಿಂಡು, ಬೆಲ್ಲದ ಪುಡಿ -2ಚಮಚ, ಏಲಕ್ಕಿ, ನಿಂಬೆರಸ

ತಯಾರಿಸುವ ವಿಧಾನ: ಬಾಳೆದಿಂಡನ್ನು ತುರಿದು ಸ್ವಲ್ಪ ನೀರು ಸೇರಿಸಿ ಸೋಸಿಕೊಳ್ಳಿ. ನಂತರ ಬೆಲ್ಲದ ಪುಡಿ, ಏಲಕ್ಕಿ, ನಿಂಬೆರಸ, ಚಿಟಿಕೆ ಉಪ್ಪು ಬೆರೆಸಿ ಕುಡಿಯುವುದರಿಂದ ಮೂತ್ರಕೋಶ ಶುದ್ಧಿಯಾಗುತ್ತದೆ. ದೇಹಕ್ಕೂ ತಂಪು.

ಬಾಳೆದಿಂಡಿನ ತೊವ್ವೆ

ಬೇಕಾಗುವ ವಸ್ತುಗಳು: ಸಣ್ಣಗೆ ಹೆಚ್ಚಿದ ಬಾಳೆದಿಂಡು - 1ಕಪ್, ಹೆಸರು ಬೇಳೆ - 1/2ಕಪ್, ತೆಂಗಿನ ತುರಿ - 1/2ಕಪ್, ಹಸಿಮೆಣಸಿನ ಕಾಯಿ - 4, ಕೊತ್ತಂಬರಿಸೊಪ್ಪು, ಹಸಿ ಶುಂಠಿ,
ಸಾಸಿವೆ, ಇಂಗು, ಉಪ್ಪು, ನಿಂಬೆರಸ

ತಯಾರಿಸುವ ವಿಧಾನ: ಹೆಸರು ಬೇಳೆಯನ್ನು ಸ್ವಲ್ಪ ಹುರಿದುಕೊಂಡು ನೀರು ಹಾಕಿ ಬೇಯಿಸಿ. ನಂತರ ಹೆಚ್ಚಿದ ಬಾಳೆದಿಂಡು ಹಾಕಿ ಐದು ನಿಮಿಷ ಮತ್ತೆ ಬೇಯಿಸಿ. ತೆಂಗಿನ ತುರಿ, ಹಸಿಮೆಣಸಿನ ಕಾಯಿ, ಕೊತ್ತಂಬರಿಸೊಪ್ಪು, ಹಸಿ ಶುಂಠಿ ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ಹೆಸರುಬೇಳೆ ಬಾಳೆದಿಂಡಿನ ಮಿಶ್ರಣಕ್ಕೆ ಸೇರಿಸಿ. ಇದಕ್ಕೆ ಉಪ್ಪು, ನಿಂಬೆರಸ ಹಾಕಿ ಕೂಡಿಸಿ ಸಾಸಿವೆ, ಇಂಗಿನ ಒಗ್ಗರಣೆ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT