ಭಾನುವಾರ, ನವೆಂಬರ್ 27, 2022
22 °C

ನಳಪಾಕ: ಚಳಿಗೆ ಬೆಚ್ಚನೆಯ ಖಾದ್ಯ ಸರ್ಸೋಂ ಕಾ ಸಾಗ್‌

ದೀಪಾಶ್ರೀ ಕೂಡ್ಲಿಗಿ Updated:

ಅಕ್ಷರ ಗಾತ್ರ : | |

Prajavani

ಚಳಿಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯಗಳ ಪೈಕಿ ಸರ್ಸೋಂ ಕಾ ಸಾಗ್‌ ಕೂಡ ಒಂದು. ಇದೇನಿದು ಚೀನಾ ರೆಸಿಪಿ ಅಂದುಕೊಂಡಿರಾ? ಹಾಗೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಸಾಸಿವೆ ಎಲೆಗಳಿಂದ ಮಾಡಿದ ಖಾದ್ಯವನ್ನು ಸರ್ಸೋಂ ಕಾ ಸಾಗ್‌ ಎನ್ನಲಾಗುತ್ತದೆ. ಸಾಸಿವೆ ಎಲೆಗಳ ಸೇವನೆ ಆರೋಗ್ಯಕ್ಕೆ ಹಲವು ಪ್ರಯೋಜನ ತಂದುಕೊಡುತ್ತದೆ. ಪೋಷಕಾಂಶ ಹಾಗೂ ಖನಿಜಗಳ ಆಗರವಾದ ಈ ಎಲೆಗಳನ್ನು  ಹುರಿದಾದರೂ, ಹಬೆಯಲ್ಲಿ ಬೇಯಿಸಿಯಾದರೂ ಖಾದ್ಯ ತಯಾರಿಸಬಹುದು. ಎಲೆಯಿಂದಾಗುವ ಪ್ರಯೋಜನ:  ಸಾಸಿವೆ ಎಲೆಯಲ್ಲಿ ಕಡಿಮೆ ಕ್ಯಾಲರಿ ಇರುವ ಕಾರಣ ತೂಕ ನಿಯಂತ್ರಣಕ್ಕೆ ಹೆಚ್ಚು ಸಹಕಾರಿ. ನಾರಿನಂಶ ಹೊಂದಿದ್ದು, ವಿಟಮಿನ್ ಕೆ, ಎ, ಸಿ, ಈ ಆ್ಯಂಟಿ ಆಕ್ಸಿಡೆಂಟ್ ಹಾಗೂ ಪೋಲಿಕ್‌ ಇದ್ದು, ಆರೋಗ್ಯಕ್ಕೆ ಒಳ್ಳೆಯದು. ಕ್ಯಾನ್ಸರ್‌ಕಾರಕ ಪ್ರೀರಾಡಿಕಲ್‌ ಕಣಗಳ ವಿರುದ್ಧ ಹೋರಾಡಲು ಇದು ಸಹಕಾರಿ. ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.

‌ನೆನಪಿರಲಿ: ರಕ್ತ ಹೆಪ್ಪು ಗಟ್ಟುವುದನ್ನು ತಡೆಯುವ ಔಷಧಿ ಸೇವಿಸುತ್ತಿರುವವರು, ಕಿಡ್ನಿ ಸ್ಟೋನ್‌(ಮೂತ್ರಪಿಂಡದ ಕಲ್ಲುಗಳು) ಸಮಸ್ಯೆ ಇರುವವರು ಇದನ್ನು ಸೇವಿಸಬಾರದು.

ಸಾಸಿವೆ ಎಣ್ಣೆಯಂತೆಯೇ ಸಾಸಿವೆ ಎಲೆಗಳನ್ನು ತರಕಾರಿ ರೀತಿಯಲ್ಲಿ ಬಳಸಬಹುದು. ಸಾಸಿವೆಯ ಹಸಿರೆಲೆಗಳನ್ನು ಖಾದ್ಯಗಳ ಬದಲಾಗಿ ಹಸಿಯಾಗಿ ತಿನ್ನುವುದರಿಂದ ಅದರಲ್ಲಿರುವ ಪ್ರೊಟೀನ್, ಕಾರ್ಬೊಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ ಪೊಟ್ಯಾಷಿಯಂ, ಸೋಡಿಯಂ, ವಿಟಮಿನ್, ತಾಮ್ರ, ಸತು, ಸೆಲೆನಿಯಮ್, ಮಿನರಲ್‌, ಕೆರೊಟಿನ್‌‌ಗಳು ದೇಹಾರೋಗ್ಯವನ್ನು ರಕ್ಷಿಸುತ್ತವೆ.

ಹಸಿರೆಲೆಗಳನ್ನು ಬೇಳೆಯೊಡನೆ ಬೇಯಿಸಿ ತೊವ್ವೆ ರೂಪದಲ್ಲಿ, ಹಸಿಯಾಗಿ, ಸ್ಮೂತಿ, ಪಾಸ್ತ, ಜ್ಯೂಸ್, ಸಲಾಡ್, ಉಪ್ಪಿನಕಾಯಿ, ಸೂಪ್, ಚಟ್ನಿ, ಗೊಜ್ಜು .. ಹೀಗೆ ಹಲವು ರೂಪದಲ್ಲಿ ಸೇವಿಸ ಬಹುದು. ಇದರಿಂದ ಮಾಡಿದ ಕೆಲವು ರೆಸಿಪಿಗಳು ಇಲ್ಲಿವೆ.

ಸಾಸಿವೆ ಎಲೆಯ ಸಲಾಡ್

ಬೇಕಾಗುವ ಸಾಮಗ್ರಿಗಳು: ಒಂದು ಬಟ್ಟಲು ಸಾಸಿವೆ ಎಲೆ, ಮೂರರಿಂದ ನಾಲ್ಕು ಚಮಚ ನಿಂಬೆ ರೆಸ, 3 ಚಮಚ ಆಲಿವ್ ಎಣ್ಣೆ, ಒಂದು ಚಮಚ ಸೋಯಾ ಸಾಸ್‌ , ಹೆಚ್ಚಿದ ಬೆಳ್ಳುಳ್ಳಿ ಎರಡು, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಬಟ್ಟಲಿನಲ್ಲಿ ತೊಳೆದ ಸಾಸಿವೆ ಸೊಪ್ಪು, ನಿಂಬೆ ರಸ, ಸೋಯಾ ಸಾಸ್, ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮತ್ತೊಮ್ಮೆ ಕಲಕಿ ಸಾಸಿವೆ ಸಲಾಡ್ ಸವಿಯಿರಿ. 

ಸಾಸಿವೆ ಎಲೆಯ ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಅರ್ಧಕಪ್‌ ಸಾಸಿವೆ ಎಲೆಗಳು, ಒಂದು ಸೌತೆಕಾಯಿ, ಒಂದು ಸೇಬು, ಸಕ್ಕರೆ ರುಚಿಗೆ ತಕ್ಕಷ್ಟು, ನಿಂಬೆ ರಸ , ಶುಂಠಿ ತುಂಡು 

ಮಾಡುವ ವಿಧಾನ: ಸಾಸಿವೆ ಎಲೆ, ಸೇಬು, ಸೌತೆಕಾಯಿ, ನಿಂಬೆ ರಸ ಶುಂಠಿ, ಸಕ್ಕರೆ ಎಲ್ಲಾ ಪದಾರ್ಥಗಳನ್ನು ಐಸ್ ಕ್ಯುಬ್, ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಒಂದು ಲೋಟಕ್ಕೆ ವರ್ಗಾಯಿಸಿ ತಣ್ಣನೆಯ ಸಾಸಿವೆ ಎಲೆಯ ಜ್ಯೂಸ್ ಕುಡಿಯಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.