ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಹಬ್ಬಕ್ಕೆ ಡಯಟ್‌ ಸಿಹಿ: ಪನೀರ್‌ ಖೀರ್‌, ಸೋರೆಕಾಯಿ ಹಲ್ವ

Last Updated 9 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹಬ್ಬವೆಂದರೆ ಸಿಹಿಯೂಟವಿಲ್ಲದಿದ್ದರೆ ಅದರ ಸಡಗರವೇ ಗೌಣವಾದಂತೆ. ಆರೋಗ್ಯವಂತರೇನೋ ಚೆನ್ನಾಗಿ ಸಿಹಿ ಖಾದ್ಯಗಳನ್ನು ತಿಂದು ಸಂತೃಪ್ತಿಯಿಂದ ತೇಗಬಹುದು. ಆದರೆ ಮಧುಮೇಹಿಗಳು? ಈಗಂತೂ ಬಹಳಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಜಿಹ್ವಾ ಚಾಪಲ್ಯವನ್ನು ತಡೆದುಕೊಳ್ಳುವುದು ಸುಲಭವಲ್ಲ. ಕಣ್ಣುಗಳು ಸಿಹಿ ಭಕ್ಷ್ಯಗಳ ರಾಶಿಯನ್ನು ನೋಡುತ್ತಿದ್ದರೆ, ನಾಲಿಗೆ ಹೇಗೆ ತಾನೇ ಕಡಿವಾಣ ಹಾಕಿಕೊಳ್ಳುತ್ತದೆ?

ಮಧುಮೇಹಿಗಳು ಸಿಹಿ ತಿಂಡಿ ಸೇವಿಸುವುದನ್ನು ನಿಯಂತ್ರಿಸಿಕೊಳ್ಳುವುದು, ಕ್ಯಾಲರಿ ಮೇಲೆ ನಿಗಾ ವಹಿಸುವುದು, ಕಾರ್ಬೊಹೈಡ್ರೇಟ್‌ ಲೆಕ್ಕ ಹಾಕುವುದೇನೋ ಸರಿ, ಆದರೆ ಅಪರೂಪಕ್ಕೆ, ಇಂತಹ ಹಬ್ಬದ ಸಂದರ್ಭದಲ್ಲಿ ಕಡಿಮೆ ಪ್ರಮಾಣದಲ್ಲಿ ಸಿಹಿ ಸೇವಿಸಬಹುದು. ಆದರೆ ಸಕ್ಕರೆ, ಜೇನುತುಪ್ಪ, ಹಣ್ಣಿನ ಸಕ್ಕರೆ, ಕಾರ್ನ್‌ ಸಿರಪ್‌ ಬೆರೆತ ಭಕ್ಷ್ಯವಲ್ಲ, ರಕ್ತದಲ್ಲಿ ಸಕ್ಕರೆ ಪ್ರಮಾಣದ ಮೇಲೆ ಕಣ್ಗಾವಲು ಇಡುವಂತಹ ಸಂಕೀರ್ಣ ಕಾರ್ಬೊಹೈಡ್ರೇಟ್ಸ್‌ ತಿನ್ನಬಹುದು. ಈಗಂತೂ ಅಂಗಡಿಗಳಲ್ಲಿ ಕಡಿಮೆ ಸಕ್ಕರೆ ಇರುವ ಅಥವಾ ಕೃತಕ ಸಿಹಿ ಸೇರಿಸಿದ ಸಿಹಿ ಖಾದ್ಯ ಲಭ್ಯ. ಆದರೆ ಮನೆಯಲ್ಲೇ ಆರೋಗ್ಯಕರ ಸಿಹಿ ಭಕ್ಷ್ಯಗಳನ್ನು ನಿಮಗೆ ಬೇಕಾದಂತೆ ತಯಾರಿಸಿಕೊಳ್ಳುವುದು ಸೂಕ್ತ.

ಪನೀರ್‌ ಖೀರ್‌

ಬೇಕಾಗುವ ಸಾಮಗ್ರಿ: ಕಡಿಮೆ ಕೊಬ್ಬಿರುವ ಹಾಲು– 3 ಕಪ್‌, ತುರಿದ ಕಾಟೇಜ್‌ ಪನೀರ್‌– 1 ಕಪ್‌, ಸ್ಟೀವಿಯ (ಕಡಿಮೆ ಕ್ಯಾಲರಿಯಿರುವ ನೈಸರ್ಗಿಕ ಸಿಹಿ)– 2 ಟೀ ಚಮಚ, ಏಲಕ್ಕಿ ಪುಡಿ– ಕಾಲು ಟೀ ಚಮಚ.

ಮಾಡುವ ವಿಧಾನ: ಹಾಲನ್ನು ಅಗಲವಾದ ಪಾತ್ರೆಯಲ್ಲಿ ಕುದಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಸ್ಟೀವಿಯ ಮತ್ತು ಏಲಕ್ಕಿ ಪುಡಿ ಮಿಶ್ರ ಮಾಡಿ. ಇದಕ್ಕೆ ಪನೀರ್‌ ತುಂಡು ಹಾಕಿ ಫ್ರಿಜ್‌ನಲ್ಲಿ ಒಂದು ತಾಸು ಇಟ್ಟು ಸೇವಿಸಿ. ಇದರಲ್ಲಿ ಕಾರ್ಬೊಹೈಡ್ರೇಟ್‌ ಕೇವಲ ಶೇ 6ರಷ್ಟಿರುತ್ತದೆ.

ಸೋರೆಕಾಯಿ ಹಲ್ವ

ಬೇಕಾಗುವ ಸಾಮಗ್ರಿ: ತುರಿದ ಸೋರೆಕಾಯಿ– ಎರಡೂವರೆ ಕಪ್‌, ಕಡಿಮೆ ಕೊಬ್ಬಿರುವ ಹಾಲು– ಒಂದೂವರೆ ಕಪ್‌, ತುಪ್ಪ– ಒಂದು ಟೀ ಚಮಚ, ಏಲಕ್ಕಿ ಪುಡಿ– ಅರ್ಧ ಚಮಚ, ಸ್ಟೀವಿಯ ಅಥವಾ ಬೆಲ್ಲ– 2 ಚಮಚ.

ಮಾಡುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಬಿಸಿಯಾದ ನಂತರ ತುರಿದ ಸೋರೆಕಾಯಿ ಹಾಕಿ ಮುಚ್ಚಳ ಮುಚ್ಚಿ 5–6 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಆಗಾಗ ಸೌಟಿನಿಂದ ತಿರುವಿ. ಇದಕ್ಕೆ ಹಾಲು ಹಾಗೂ ಏಲಕ್ಕಿ ಪುಡಿ ಹಾಕಿ 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಕೊನೆಯಲ್ಲಿ ಸ್ಟೀವಿಯ ಹಾಕಿ ತಿನ್ನಲು ಕೊಡಿ. ಒಂದು ಕಪ್‌ ಹಲ್ವದಲ್ಲಿ ಇರುವ ಕಾರ್ಬೊಹೈಡ್ರೇಟ್‌ ಪ್ರಮಾಣ ಶೇ 5ರಷ್ಟು.

ಓಟ್ಸ್‌– ಸೇಬು ಫಿರ್ನಿ

ಬೇಕಾಗುವ ಸಾಮಗ್ರಿ: ತರಿತರಿಯಾಗಿ ಪುಡಿ ಮಾಡಿದ ಓಟ್ಸ್‌– ಮುಕ್ಕಾಲು ಕಪ್‌, ತುರಿದ ಸೇಬು– ಮುಕ್ಕಾಲು ಕಪ್‌, ಕಡಿಮೆ ಕೊಬ್ಬಿನ ಹಾಲು– 3 ಕಪ್‌, ಸ್ಟೀವಿಯ ಅಥವಾ ಬೆಲ್ಲ– 2 ಟೀ ಚಮಚ.

ಮಾಡುವ ವಿಧಾನ: ಹಾಲನ್ನು ದಪ್ಪ ತಳದ ಪಾತ್ರೆಯಲ್ಲಿ ಚೆನ್ನಾಗಿ ಕಾಯಿಸಿ. ಇದಕ್ಕೆ ಓಟ್ಸ್‌ ಹಾಕಿ ಮಧ್ಯಮ ಉರಿಯಲ್ಲಿ ಎರಡು ನಿಮಿಷ ಬೇಯಿಸಿ. ಚೆನ್ನಾಗಿ ತಿರುವುತ್ತ ಇರಿ. ಸ್ಟವ್‌ನಿಂದ ಇಳಿಸಿ ಸಿಹಿಯನ್ನು ಸೇರಿಸಿ ತಣ್ಣಗಾಗಲು ಬಿಡಿ. ನಂತರ ಸೇಬಿನ ತುರಿ ಸೇರಿಸಿ ಫ್ರೀಜರ್‌ನಲ್ಲಿ ಅರ್ಧ ತಾಸು ಇಡಿ. ತಣ್ಣಗಿನ ರುಚಿಕರ ಫಿರ್ನಿ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT