ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ದೋಸೆಯ ರುಚಿಗೆ ಖಾರದ ರಂಜಕ ಸಾಥ್‌

Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಸದಾ ಸಿಗುವ ಕಾಶ್ಮೀರಿ ಆ್ಯಪಲ್‌ ಎಂದರೆ ಟೊಮೆಟೊ ಎಂದರೆ ತಪ್ಪಾಗಲಿಕ್ಕಿಲ್ಲ. ಆರೋಗ್ಯ ವರ್ಧಕ ಹುಳಿ–ಸಿಹಿ ಭರಿತ ಸ್ವಾದಿಷ್ಟ ತರಕಾರಿ ಇದು. ಟೊಮೆಟೊ ರಸಂನ ಸ್ವಾದವಿಲ್ಲದೇ ಅನೇಕರಿಗೆ ಊಟ ಪರಿಪೂರ್ಣ ಎನ್ನಿಸುವುದಿಲ್ಲ. ಹಸಿಯಾಗಿಯೂ ಸಲಾಡ್ ರೂಪದಲ್ಲಿ ಟೊಮೆಟೊ ಹಣ್ಣನ್ನು ತಿನ್ನುತ್ತಾರೆ. ಅಧಿಕ ಖನಿಜಾಂಶ ಹೊಂದಿರುವ ಈ ತರಕಾರಿ ಆರೋಗ್ಯಕ್ಕೂ ಉತ್ತಮ. ಎಲ್ಲಾ ತರಕಾರಿ ಸಾಂಬಾರ್‌ನಲ್ಲೂ ಟೊಮೆಟೊಗೆ ಒಂದು ಪಾಲು ಇದ್ದೇ ಇದೆ. ಅಷ್ಟೇ ಅಲ್ಲದೇ ಇದರಿಂದ ರಂಜಕ, ಹಸಿಗೊಜ್ಜು, ಸೂಪ್‌ ಕೂಡ ತಯಾರಿಸಬಹುದು ಎನ್ನುತ್ತಾರೆ ಎಸ್‌. ರೋಹಿಣಿ ಶರ್ಮಾ.

ಟೊಮೆಟೊ ರಂಜಕ

ಬೇಕಾಗುವ ಸಾಮಗ್ರಿಗಳು: ಟೊಮೆಟೊ ಹಣ್ಣು – 3, ಹುಣಸೆಹಣ್ಣು – ನಿಂಬೆಹಣ್ಣು ಗಾತ್ರದ್ದು, ಉಪ್ಪು – ರುಚಿಗೆ, ಒಣಮೆಣಸಿನಕಾಯಿ – 5 ರಿಂದ 5, ಜೀರಿಗೆ – 2 ಚಮಚ, ಮೆಂತ್ಯ – 1ಚಮಚ, ಇಂಗು – ಒಂದು ಚಿಟಿಕೆ,

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ: ಜೀರಿಗೆ, ಮೆಂತ್ಯೆ ಹಾಗೂ ಒಣಮೆಣಸಿನ ಕಾಯಿಗಳನ್ನು ಸ್ವಲ್ಪ ಎಣ್ಣೆ ಬಿಟ್ಟು ಬಿಡಿ ಬಿಡಿಯಾಗಿ ಹೊಂಬಣ್ಣ ಬರುವವರೆಗೂ ಹಾಗೆ ಹುರಿದಿಟ್ಟುಕೊಳ್ಳಿ. ಟೊಮೆಟೊ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಸ್ವಲ್ಪ ಬಾಡಿಸಿ. ಅನಂತರ ಟೊಮೆಟೊ, ಉಪ್ಪು, ಇಂಗು, ಹುರಿದ ಸಾಂಬಾರ್ ಪುಡಿ, ಹುಣಸೆಹಣ್ಣನ್ನು ಹುರಿದಿಟ್ಟುಕೊಂಡ ಪದಾರ್ಥಗಳ ಜೊತೆ ಹಾಕಿ ರುಬ್ಬಬೇಕು. ದಪ್ಪ ತಳದ ಪಾತ್ರೆಗೆ ಎಣ್ಣೆ, ಸಾಸಿವೆ ಹಾಕಿ ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಗ್ಗರಣೆ ಪಾತ್ರೆಗೆ ಹಾಕಿ ಎರಡು–ಮೂರು ಬಾರಿ ಕುದಿ ಬರಿಸಿ ಇಳಿಸಿ. ಖಾರ–ಖಾರವಾದ ಈ ರಂಜಕ ದೋಸೆ, ಚಪಾತಿ, ರೊಟ್ಟಿಗಳಿಗೆ ಒಳ್ಳೆ ಹೊದಿಕೆ.

ಟೊಮೆಟೊ ಹಸಿ (ಮೊಸರುಗೊಜ್ಜು)

ಬೇಕಾಗುವ ಸಾಮಗ್ರಿಗಳು: ಟೊಮೆಟೊಹಣ್ಣು – 2, ಸಿಹಿಮೊಸರು – ಅರ್ಧ ಬಟ್ಟಲು, ಹಸಿಮೆಣಸಿನಕಾಯಿ – 2–3, ದೊಣ್ಣೆಮೆಣಸು – ಅರ್ಧ, ಈರುಳ್ಳಿ – 1, ಸಿಹಿಸೌತೆ – 1 ಸಣ್ಣದು, ಕೊತ್ತಂಬರಿ ಸೊಪ್ಪು – ಸ್ವಲ್ಪ.

ತಯಾರಿಸುವ ವಿಧಾನ: ಟೊಮೆಟೊ, ಹಸಿಮೆಣಸಿನ ಕಾಯಿ, ದೊಣ್ಣೆಮೆಣಸು, ಈರುಳ್ಳಿ, ಸೌತೆಕಾಯಿ ಎಲ್ಲವನ್ನೂ ಸಣ್ಣದಾಗಿ ಹೆಚ್ಚಿ ಒಂದು ಸಣ್ಣ ಕಪ್‌ಗೆ ಹಾಕಿ. ಇದಕ್ಕೆ ಉಪ್ಪು, ಸಕ್ಕರೆ, ಸಣ್ಣದಾಗಿ ಹೆಚ್ಚಿದ ಕೊತ್ತುಂಬರಿ ಸೊಪ್ಪು, ಸಿಹಿಮೊಸರು ಹಾಕಿ ಚೆನ್ನಾಗಿ ಕೂಡಿಸಿ. ಉದ್ದಿನಬೇಳೆ, ಸಾಸಿವೆ, ಕೊಬ್ಬರಿಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ‘ಮೊಸರು ಗೊಜ್ಜು’, ಹಾಕದಿದ್ದರೆ ‘ಹಸಿ’. ಊಟಕ್ಕೆ, ಪಲಾವ್ ಅಥವಾ ಚಿತ್ರಾನ್ನದ ಜೊತೆ ನೆಂಚಿಕೊಂಡರೆ ಊಟ ಮಾಡಿದ್ದೇ ಗೊತ್ತಾಗುವುದಿಲ್ಲ. ಇದು ತಯಾರಿಸಲೂ ಸುಲಭ, ಜೀರ್ಣಕಾರಿ!

ಟೊಮೆಟೊ ದೋಸೆ

ಬೇಕಾಗುವ ಸಾಮಗ್ರಿಗಳು: ದೋಸೆ ಅಕ್ಕಿ – 3 ಕಪ್‌, ಶುಂಠಿ – 1 ಚಿಕ್ಕ ತುಂಡು, ತೊಗರಿಬೇಳೆ – 2 ಚಮಚ, ಟೊಮೆಟೊಹಣ್ಣು – 2, ಕೊತ್ತಂಬರಿ ಬೀಜ – 2 ಚಮಚ, ಜೀರಿಗೆ – 1ಚಮಚ, ಒಣಮೆಣಸಿನ ಕಾಯಿ – 3 ರಿಂದ 4, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ:ಅಕ್ಕಿ- ತೊಗರಿಬೇಳೆಗಳನ್ನು ಮೂರು ಬಾರಿ ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೆನೆಸಿಡಿ. ಅನಂತರ ನಯವಾಗಿ ರುಬ್ಬಿ ಒಂದು ಪಾತ್ರೆಗೆ ಹಾಕಿಡಿ. ಇದೇ ಮಿಕ್ಸಿ ಜಾರ್‌ಗೆ ಶುಂಠಿ, ಸಣ್ಣಗೆ ಹೆಚ್ಚಿದ ಟೊಮೆಟೊ, ಕೊತ್ತಂಬರಿ, ಜೀರಿಗೆ, ಒಣಮೆಣಸಿನಕಾಯಿ, ಉಪ್ಪು, ಕೊತ್ತಂಬರಿಸೊಪ್ಪು ಹಾಕಿ ಸ್ವಲ್ಪ ತರಿತರಿಯಾಗಿ ರುಬ್ಬಿ ಅಕ್ಕಿಹಿಟ್ಟಿನ ಜೊತೆ ರುಬ್ಬಿದ ಟೊಮೆಟೊವನ್ನು ಹಾಕಿ ಚೆನ್ನಾಗಿ ಕೂಡಿಸಬೇಕು. ಒಲೆಯ ಮೇಲೆ ಕಬ್ಬಿಣದ ಕಾವಲಿ ಕಾದ ನಂತರ ಬೆಣ್ಣೆ ಅಥವಾ ಎಣ್ಣೆ ಸವರಿ ಹಿಟ್ಟು ಹೊಯ್ದರೆ ಕೆಂಪು ಕೆಂಪಾದ –ರುಚಿ ರುಚಿಯಾದ ದೋಸೆ ಸಿದ್ಧ! ಕಾಯಿ ಚಟ್ನಿ ಅಥವಾ ತೊಕ್ಕಿನ ಜೊತೆ ನೆಂಚಿಕೊಂಡರೆ ಎರಡಲ್ಲ- ನಾಲ್ಕಾರು ದೋಸೆಗಳನ್ನು ಒಮ್ಮೆಗೆ ತಿನ್ನಬಹುದು.

ಒಣಗಿಸಿದ ಟೊಮೆಟೊ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: ಜಾಮೂನ್ ಟೊಮೆಟೊ – ಅರ್ಧ ಕೆ.ಜಿ., ಕಲ್ಲುಪ್ಪು – 1 ಮುಷ್ಟಿ, ಹುಣಸೆಹಣ್ಣು – ನಿಂಬೆಹಣ್ಣಿನ ಗಾತ್ರ, ಮೆಂತ್ಯೆ – 2 ಚಮಚ, ಸಾಸಿವೆ – 2 ಚಮಚ, ಬೆಳ್ಳುಳ್ಳಿ ಎಸಳು – 8ರಿಂದ10, ಸಣ್ಣ ಈರುಳ್ಳಿ – 1, ಬ್ಯಾಡಗಿ ಮೆಣಸು – 8-10, ಅರಿಸಿನ – ಒಂದು ಚಮಚ, ಅಡುಗೆಎಣ್ಣೆ –ಒಂದು ಬಟ್ಟಲು ಕರಿಬೇವು – ನಾಲ್ಕಾರು ಎಸಳು ‌

ತಯಾರಿಸುವ ವಿಧಾನ: ಟೊಮೆಟೊ ಹಣ್ಣುಗಳನ್ನು ಉದ್ದುದ್ದವಾಗಿ ತೆಳ್ಳಗೆ ಹೆಚ್ಚಿ ಗಾಜಿನ ಒಂದು ಬಾಟಲಿಯಲ್ಲಿ ಒಂದು ಹಾಸು ಟೊಮೆಟೊ ಹಾಗೂ ಒಂದು ಹಾಸು ಕಲ್ಲುಪ್ಪು ಹಾಕಿ. ಸ್ವಲ್ಪ ಸಮಯದ ನಂತರ ಚೆನ್ನಾಗಿ ಕಲಕಿ ಮುಚ್ಚಳ ಹಾಕಿ ಹಾಗೆ ಬಿಡಿ. ಮರುದಿನ ಮತ್ತೊಂದು ಬಟ್ಟಲಿಗೆ ಹುಣಸೆಹಣ್ಣು ಹಾಕಿ ಅದಕ್ಕೆ ಟೊಮೆಟೊ ಹೋಳಿನ ನೀರನ್ನು ಹಾಕಿಡಿ. ನೆನೆದ ಟೊಮೆಟೊ ಹೋಳುಗಳನ್ನು ಒಮ್ಮೆ ಕೈಯಲ್ಲಿ ಅಮುಕಿ ಒಂದು ಸ್ಟೀಲ್ ಪ್ಲೇಟಿಗೆ ಹಾಕಿ ನಯವಾಗಿ ಬಿಡಿಬಿಡಿಯಾಗಿ ಜೋಡಿಸಿ ಪ್ರಖರವಾದ ಬಿಸಿಲಲ್ಲಿ ಬಟ್ಟೆ ಮುಚ್ಚಿ ಇಡಬೇಕು. ಇದೇ ರೀತಿ ಹುಣಸೆಹಣ್ಣನ್ನೂ ಬಿಸಿಲಲ್ಲಿ ಇಡಬೇಕು. ನಾಲ್ಕು ದಿನಗಳ ಬಿಸಿಲಿಗೆ ಟೊಮೆಟೊ ಹೋಳುಗಳು ಗರಿಗರಿಯಾಗಿರುತ್ತವೆ. ಅನಂತರ ಒಂದು ದಪ್ಪತಳದ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಮೆಣಸಿನಕಾಯಿ, ಮೆಂತ್ಯೆ, ಬೆಳ್ಳುಳ್ಳಿ , ಸಾಸಿವೆಗಳನ್ನು ಕೆಂಬಣ್ಣಕ್ಕೆ ಹುರಿದು ಪುಡಿ ಮಾಡಿಕೊಳ್ಳಬೇಕು. ಗರಿಗರಿ ಟೊಮೆಟೊ ಹೋಳುಗಳು, ಹುಣಸೆಹಣ್ಣು, ಬೆಳ್ಳುಳ್ಳಿಗಳನ್ನು ಮಿಕ್ಸಿಗೆ ಹಾಕಿ ನಯವಾಗಿ ರುಬ್ಬಬೇಕು. ಪ್ರತ್ಯೇಕವಾಗಿ ಒಂದು ಬಾಣಲಿಗೆ ಒಂದು ಬಟ್ಟಲು ಎಣ್ಣೆ ಹಾಕಿ, ಈರುಳ್ಳಿ, ಕರಿಬೇವಿನಸೊಪ್ಪು ರುಬ್ಬಿದ ಮಿಶ್ರಣ, ಸಾಂಬಾರ್‌ಪುಡಿ, ಅರಿಸಿನ ಹಾಕಿ ನಾಲ್ಕೈದು ಕುದಿ ಕುದಿಸಬೇಕು. ಚೆನ್ನಾಗಿ ಆರಿದ ನಂತರ ಗಾಳಿ ಆಡದಂತೆ ಶುದ್ಧವಾದ ಗಾಜಿನ ಬಾಟಲಿಯಲ್ಲಿ ತುಂಬಿಟ್ಟುಕೊಂಡರೆ ಈ ಉಪ್ಪಿನಕಾಯಿ ಒಂದು ವರ್ಷವಾದರೂ ಕೆಡದು. ಕಾಯಿ ಚಟ್ನಿ ಬದಲು ಇದು ಸಮಯಕ್ಕೆ ಸಹಾಯವಾದೀತು. ವರ್ಷದ ಮುನ್ನೂರ ಅರವತ್ತೈದು ದಿನಗಳಲ್ಲಿಯೂ ಉಳಿಸಿ ಬಳಸಿ ಮತ್ತೂ ಉಳಿಸಿಟ್ಟುಕೊಳ್ಳಬಹುದು.

ಟೊಮೆಟೊ ಸೂಪ್‌

ಬೇಕಾಗುವ ಸಾಮಗ್ರಿಗಳು: ಟೊಮೆಟೊ ಹಣ್ಣು – 2, ಪಲಾವ್ ಎಲೆ – 2, ಬೆಳ್ಳುಳ್ಳಿ ಎಸಳು – 5– 6, ಸಣ್ಣ ಈರುಳ್ಳಿ – 1, ಕ್ಯಾರೆಟ್ ಹೋಳು – 5– 6, ಬೀಟ್‌ರೂಟ್ ಹೋಳು 5– 6, ಕಾಳುಮೆಣಸು – 8ರಿಂದ 10, ಕಾರ್ನ್ ಫ್ಲೋರ್ – 1 ಚಮಚ, ಬ್ರೆಡ್ ತುಂಡು – 2, ಕೊತ್ತಂಬರಿ ಸೊಪ್ಪು – ಸ್ವಲ್ಪ, ಗರಂ ಮಸಾಲಾ – ಕಾಲು ಚಮಚ, ಸಕ್ಕರೆ –ಒಂದು ಚಮಚ, ಬೆಣ್ಣೆ – ಅರ್ಧ ಚಮಚ, ಅಡುಗೆ ಎಣ್ಣೆ – ಒಂದು ಚಮಚ

ತಯಾರಿಸುವವಿಧಾನ: ಟೊಮೆಟೊ ಹಣ್ಣುಗಳನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಹೆಚ್ಚಿಕೊಂಡು ಒಂದು ಬಾಣಲಿಗೆ ಬೆಣ್ಣೆ ಹಾಕಿ ಕಾದ ನಂತರ ಮೇಲೆ ತಿಳಿಸಿದ ಎಲ್ಲವನ್ನೂ ಚೆನ್ನಾಗಿ ಬಾಡಿಸಿಕೊಳ್ಳಿ. ಈ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ ಸ್ವಲ್ಪವೂ ಚರಟವಿಲ್ಲದಂತೆ ಸೋಸಿಕೊಳ್ಳಬೇಕು. ಒಂದು ಕಬ್ಬಿಣದ ದೋಸೆ ಹೆಂಚಿನ ಮೇಲೆ ಬ್ರೆಡ್ ರೋಸ್ಟ್ ಮಾಡಿಕೊಳ್ಳಬೇಕು. ಮತ್ತೊಂದು ದಪ್ಪ ತಳದ ಬಾಣಲಿಗೆ ಒಂದು ಚಮಚ ಬೆಣ್ಣೆ ಹಾಕಿ ಮೊದಲು ರುಬ್ಬಿ ಸೋಸಿದ ಟೊಮೆಟೊ ರಸವನ್ನು ಹಾಕಿ ಕುದಿಸಿ. ಒಂದು ಬಟ್ಟಲಿಗೆ ಒಂದು ಚಮಚ ಕಾರ್ನ್ ಫ್ಲೋರ್‌ ಹಾಕಿ ಅದಕ್ಕೆ ನೀರು ಹಾಕಿ ಗಂಟಿಲ್ಲದಂತೆ ಕದಡಿಕೊಳ್ಳಿ. ( ಕಾರ್ನ್ ಫ್ಲೋರ್ ಇರದಿದ್ದರೆ ಆಲೂಗೆಡ್ಡೆಯನ್ನು ಬೇಯಿಸಿ ಹಾಕಬಹುದು ). ನಂತರ ಕುದಿಯುತ್ತಿರುವ ಟೊಮೆಟೊ ರಸಕ್ಕೆ ಇದನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಟೊಮೆಟೊ ರಸ ದಪ್ಪಗಾದ ಕೂಡಲೇ ಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಟ್ರೇ ಮೇಲೆ ಬ್ರೆಡ್ ಚೂರು ಹಾಕಿ ಕುಡಿಯಲು ಕೊಟ್ಟರೆ ಹೊಟ್ಟೆ ಚುರುಕಾಗುತ್ತದೆ, ಮತ್ತೆ ಮತ್ತೆ ಬೇಕೆನಿಸುತ್ತದೆ. ಸೂಪ್ ಕುಡಿಯಲು ಹೋಟೆಲ್ ಆಗಬೇಕಿಲ್ಲ. ಮನೆಯಲ್ಲಿಯೇ ರುಚಿ- ಶುಚಿಯಾದ ಸೂಪ್ ತಯಾರಿಸಲು ಅಡ್ಡಿಯಿಲ್ಲ. ಮಕ್ಕಳು- ಹಿರಿಯರಿಗೆ ಇಷ್ಟವಾದರೆ ಅವರೂ ಪ್ರೀತಿಯಂದ ಕುಡಿಯಬಹುದು. ಹೊಟ್ಟೆ ಹಸಿವೂ ಹೆಚ್ಚಾಗಿ ಊಟವೂ ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT