ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ! ಇದು ಉಪ್ಪಿನಕಾಯಿ, ತೊಕ್ಕು

Last Updated 27 ಜುಲೈ 2018, 19:30 IST
ಅಕ್ಷರ ಗಾತ್ರ

ಚಳಿಗಾಲ ಮತ್ತು ಮಳೆಗಾಲಕ್ಕೆ ಆರೋಗ್ಯಕರವಾದ ತೊಕ್ಕು ಮತ್ತು ಉಪ್ಪಿನಕಾಯಿಗಳು.

ತೊಕ್ಕುಗಳು ಮತ್ತು ಉಪ್ಪುನಕಾಯಿಗಳು –

1. ಆಮ್ಲೆಟ್ ಮಾವಿನಕಾಯಿ ಮತ್ತು ಈರುಳ್ಳಿ ಬಾಡಿಸಿದ ಉಪ್ಪಿನಕಾಯಿ
ಬೇಕಾಗುವ ಸಾಮಾನುಗಳು – ಹೆಚ್ಚಿದ ಆಮ್ಲೆಟ್ ಮಾವಿನಕಾಯಿ ಒಂದು, ಒಂದು ಸಣ್ಣಕಪ್ ಬಿಸಿಮಾಡಿದ ಕಲ್ಲುಪ್ಪು,( ರುಚಿಗೆ ತಕ್ಕಷ್ಟು ) ದಪ್ಪಕ್ಕೆ,ಉದ್ದುದ್ದಕ್ಕೆ ಹೆಚ್ಚಿದ ಮೂರು ಈರುಳ್ಳಿ, ಗುಂಟೂರು ಮೆಣ್ಸಿನಕಾಯಿಯ ಖಾರದ ಪುಡಿ,-ಎರಡು ಟೀ ಚಮಚ. ಒಂದು ಟೇಬಲ್ ಚಮಚ ಮೆಂತ್ಯಕಾಳು ಮತ್ತು ಒಂದು ಟೇಬಲ್ ಚಮಚ ಸಾಸಿವೆ, ಅರ್ದ ಚಮಚ ಹಿಂಗಿನ ಪುಡಿ, ಒಂದು ಮಧ್ಯಮ ಗಾತ್ರದ ಕಪ್ ನಲ್ಲಿ ಎಣ್ಣೆ, ಒಣಮೆಣಸಿನಕಾಯಿ ತುಂಡುಗಳು ಆರು, ಹರಿಶಿನ ಪುಡಿ ಅರ್ದ ಚಮಚ, ಕರಿಬೇವು ಸ್ವಲ್ಪ.

ಮಾಡುವ ವಿಧಾನ – ಒಂದು ದಪ್ಪ ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ ಕಾಯಿಸಿ, ಹಿಂಗು,ಮೆಂತ್ಯೆ ಸಾಸಿವೆ ಕರಿಬೇವು,ಮತ್ತು ಒಣ ಮೆಣಸಿನಕಾಯಿ ಹಾಕಿ ಚಿಟುಗುಟ್ಟಿಸಿ, ಬಾಡಿಸಿ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿದ ನಂತರೆ ಮಾವಿನ ದಪ್ಪ ಹೋಳುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಬಾಡಿಸುತ್ತಿರಿ. ಈ ಮಾವಿನ ಹೋಳಿನ ತಿರುಳು ಬೇಗ ಮೆತ್ತಗಾಗುತ್ತದೆ ಮತ್ತು ಹುಳಿಯೂ ಇರುತ್ತದೆ. ಹತ್ತು ಹದಿನೈದು ನಿಮಿಷ ಕೆದಕುತ್ತಿರಿ. ಇದಕ್ಕೆ ಹರಿಶಿನ ಖಾರದ ಪುಡಿ ಉಪ್ಪು ಹಾಕಿ ಚೆನ್ನಾಗಿ ಕೂಡಿಕೊಂಡ ನಂತರ ಗೊಜ್ಜಿನಂತೆ ಆಗುತ್ತದೆ. ಮುಚ್ಚಳ ಮುಚ್ಚಬಾರದು ತಣ್ಣಗಾದ ಮೇಲೆ ಈ ಉಪ್ಪಿನಕಾಯಿಯನ್ನು ಶುಭ್ರವಾದ ಗಾಜಿನ ಬಾಟಲಿಗೆ ತುಂಬಿ ಮುಚ್ಚಳ ಗಟ್ಟಿಯಾಗಿ ಮುಚ್ಚಿಡಿ. ವರ್ಷಪೂರ್ತಿ ಇರುವುದಿಲ್ಲ ಹದಿನೈದು ದಿನ ಕೆಡದೇ ಇರುತ್ತದೆ. ಹೆಚ್ಚಿನ ಉಪ್ಪಿನಕಾಯಿಯನ್ನು ಫ್ರಿಜ್ ನಲ್ಲಿಟ್ಟು ಬೇಕೆಂದಾಗ ಸ್ವಲ್ಪ ತೆಗೆದು ಉಪಯೋಗಿಸಬಹುದು. ಈ ಚಳಿಗಾಲ ಮತ್ತು ಮಳೆಗಾಲಕ್ಕೆ ಈ ಉಪ್ಪಿನಕಾಯಿ ಬಿಸಿ ಅನ್ನ ತುಪ್ಪದ ಜೊತೆ ಕಲೆಸಿ ಸವಿಯಬಹುದು.ಮತ್ತು ಅಕ್ಕಿ ರೊಟ್ಟಿ ಜೊತೆಗೂ ರುಚಿಯಾಗಿರುತ್ತದೆ.

2. ಕೊತ್ತಂಬರಿ ಸೊಪ್ಪಿನ ತೊಕ್ಕು
ಬೇಕಾಗುವ ಸಾಮಗ್ರಿಗಳು – ಒಂದು ಕಪ್ ಹುಣಸೇಹಣ್ಣು, ಒಂದು ಕಪ್ ಹಸಿಮೆಣಸಿನಕಾಯಿ,ಐದಾರು ಒಣಮೆಣಸಿನಕಾಯಿ ಒಂದು ಕಪ್ ಬೆಲ್ಲ ರುಚಿಗೆ ತಕ್ಕಷ್ಟು ಹರಳುಪ್ಪು.ಒಂದು ದೊಡ್ಡಕಂತೆ ಕೊತ್ತಂಬರಿಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಹೆಚ್ಚಿದ್ದು.

ಮಾಡುವ ವಿಧಾನ – ಹುಣಸೇಹಣ್ಣು ನೆನೆಸಿ ಗಟ್ಟಿಯಾಗಿ ರಸ ತೆಗೆದುಕೊಳ್ಳಿ, ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಎಣ್ಣೆಯಲ್ಲಿ ಬಾಡಿಸಿಕೊಳ್ಳಿ. ಮತ್ತು ಕೊತ್ತಂಬರಿಸೊಪ್ಪನ್ನು ಬಾಡಿಸಿಕೊಳ್ಳಿ ಒಗ್ಗರಣೆ ಸಾಮಾನು ಬಿಟ್ಟು .ಮಿಕ್ಕ ಸಾಮಾನುಗಳನ್ನು ಇವುಗಳ ಜೊತೆ ಸೇರಿಸಿ ನುಣ್ಣಗೆ ರುಬ್ಬಿಡಿ. ಸಾಸಿವೆ ಕರಿಬೇವಿನ ಒಗ್ಗರಣೆಮಾಡಿ ತಿರುವಿದ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ನೀರಿನಂಶ ಹೋಗುವ ವರೆವಿಗೂ ಹುರಿಯಬೇಕು. ಆರಿದನಂತರ ಗಾಜಿನ ಬಾಟಲಿಗೆ ತುಂಬಿಡಿ. ಇದು ಸಹ ಬಿಸಿ ಅನ್ನ ಮತ್ತು ಯಾವುದೇ ರೊಟ್ಟಿಗಳ ಜೊತೆ ಸವಿಯಲು ರುಚಿಯಾಗಿರುತ್ತದೆ.

3. ಹಸಿ ಶುಂಠಿ ತೊಕ್ಕು
ಬೇಕಾಗುವ ಸಾಮಗ್ರಿಗಳು – ಮೂರು ಇಂಚು ಹಸಿ ಶುಂಠಿ, ತೊಳೆದು ಸಿಪ್ಪೆ ತೆಗೆದು ಹೆಚ್ಚಿಡಿ. ಒಗ್ಗರಣೆಗೆ-ಎಣ್ಣೆ ಒಂದು ಸಣ್ಣ ಕಪ್, ಹಿಂಗು ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸಿನಕಾಯಿ ತುಂಡು ಮತ್ತು ಅರಿಶಿನ ಸ್ವಲ್ಪಸ್ವಲ್ಪ, ರುಬ್ಬಲು- ಒಣ ಕೊಬ್ಬರಿ, ಹುರಿಗಡಲೆ, ಮತ್ತು ಶುಂಠಿ, ಬ್ಯಾಡಗಿಮೆಣಸಿನಕಾಯಿ- ೬. ಸ್ವಲ್ಪ ಹುಣಸೇಹಣ್ಣು, ಬೆಲ್ಲ ಮತ್ತು ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ – ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಮಿಕ್ಕ ಸಾಮಾನುಗಳನ್ನು ರುಬ್ಬಿ ಅದನ್ನು ಒಗ್ಗರಣೆಗೆ ಸೇರಿಸಿ ಮಿಕ್ಸಿ ತೊಳೆದ ನೀರನ್ನು ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಹುರಿಯಿರಿ. ನೀರಿನಂಶ ಕಡಿಮೆಯಾದಾಗ ಒಲೆ ಆರಿಸಿ ತಣ್ಣಗಾದ ಮೇಲೆ ಬಾಟಲಿಗೆ ತುಂಬಿಡಿ. ಈ ತೊಕ್ಕಿಗೆ ಬೇಕಾದರೆ ಸ್ವಲ್ಪ ಈರುಳ್ಳಿಸಹ ಸೇರಿಸಿ ಬಾಡಿಸಬಹುದು. ಈ ತೊಕ್ಕು ಉಪಯೋಗಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

4. ನಿಂಬೆ ಹಣ್ಣಿನ ಸಿಹಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿಗಳು – ದೊಡ್ಡ ಗಾತ್ರದ ನಿಂಬೆಹಣ್ಣು -೧೨. ಬ್ಯಾಡಗಿ ಮೆಣಸಿನಕಾಯಿಯ ಪುಡಿ ೫೦ ಗ್ರಾಂ.ಉಪ್ಪಿನ ಪುಡಿ ೧೦೦-ಗ್ರಾಂ. ಮೆಂತ್ಯ- ಹರಿಶಿನ ಪುಡಿ,ಪುಡಿ ಮಾಡಿದ ಹಿಂಗು, ಅಡುಗೆ ಎಣ್ಣೆ –ತಲಾ ಒಂದೊಂದು ಟೀ ಚಮಚ. ಸಕ್ಕರೆ ೫೦೦-ಗ್ರಾಂ.

ಮಾಡುವ ವಿಧಾನ – ನಿಂಬೆ ಹಣ್ಣುಗಳನ್ನು ನೀರಿನಲ್ಲಿ ತೊಳೆದು ಬಟ್ಟೆಯಿಂದ ಒರೆಸಿದ ನಂತೆರ ೮ ಹೋಳುಗಳನ್ನಾಗಿ ಮಾಡಿ.ಈ ಹೋಳುಗಳನ್ನು ಒಂದು ಪಾತ್ರೆಗೆ ಹಾಕಿ ಉಪ್ಪಿನ ಪುಡಿ ಹರಿಶಿನದ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ ಒಂದು ಗಾಜಿನ ಬಾಟಲಿಗೆ ಹಾಕಿ ಅದರ ಬಾಯಿಗೆ ಬಟ್ಟೆ ಕಟ್ಟಿ ಒಂದು ವಾರದ ವರೆಗೆ ಇಡಿ.ನಂತರ ಸ್ವಲ್ಪ ಎಣ್ಣೆಯಲ್ಲಿ ಮೆಂತ್ಯೆಕಾಳನ್ನು ಹದವಾಗಿ ಹುರಿದು ಪುಡಿ ಮಾಡಿ, ಸಕ್ಕರೆಯ ಎಳೆಪಾಕ ತಯಾರಿಸಿ,ಸಕ್ಕರೆಯ ಪಾಕ ಮೆಂತ್ಯೆದ ಪುಡಿ, ಮೆಣಸಿನಕಾಯಿ ಪುಡಿ ಮತ್ತು ಹಿಂಗು ಕಳಿತ ಉಪ್ಪಿನಕಾಯಿ ಹೋಳುಗಳಿಗೆ ಸೇರಿಸಿ ಬಾಟಲಿಯಲ್ಲಿ ಬಿಟ್ಟಿರುವ ರಸವನ್ನುಸೇರಿಸಿ ಚೆನ್ನಾಗಿ ಕಲೆಸಿ ಒಲೆಯ ಮೇಲಿಟ್ಟು ಒಂದೆರಡು ಕುದಿ ಕುದಿಸಿರಿ.ನೀರು ಇಂಗುವವರೆವಿಗೂ ಕುದಿಸಿದ ನಂತರ ಕೆಳಕ್ಕಿಳಿಸಿ. ಬಿಸಿ ಆರಿದ ನಂತರ ಬಾಟಲಿಗೆ ತುಂಬಿ ಮುಚ್ಚಿದ ಮುಚ್ಚಳದಮೇಲೆ ಬಟ್ಟೆ ಕಟ್ಟಿಡಿ.ಇದು ಸಿಹಿ ಹುಳಿ ಖಾರ ಕೊಡುವ ರುಚಿ ಅದ್ಭುತವಾಗಿರುತ್ತದೆ. ಜಾಂ ತರಹ ರುಚಿಯಾಗಿರುತ್ತದೆ. ಚಪಾತಿ, ಪಲ್ಯದ ಊಟದ ಜೊತೆ ಮದ್ಯೆ ಮದ್ಯೆ ಈ ಉಪ್ಪಿನಕಾಯಿ ತಿನ್ನಲು, ಅಕ್ಕಿ, ಹೆಸರು ಬೇಳೆಯ ಕಿಚಡಿ ಮತ್ತು ಹಪ್ಪಳ ಸಂಡಿಗೆ ಜೊತೆ ಸವಿಯಲು ರುಚಿಕರವಾಗಿರುತ್ತದೆ.

ಲೀಲಾ ಚಂದ್ರಶೇಖರ, ಮೊ.ನಂ. 7760810866.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT