ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ನೋಟ, ತರಹೇವಾರಿ ಊಟ..!

ಹಂಪಿ ಉತ್ಸವ 2020
Last Updated 8 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಸಸ್ಯಾಹಾರಿಗಳಿಗೆ ಜೋಳದ ರೊಟ್ಟಿ, ಚಪಾತಿ, ಹೋಳಿಗೆ ಊಟ ಬಾಯಲ್ಲಿ ನೀರೂರಿಸಿದರೆ, ಮಾಂಸಹಾರಿಗಳಿಗೆ ಬಳ್ಳಾರಿ ಬಿರಿಯಾನಿಯ ಪರಿಮಳ, ನೇರವಾಗಿ ಹೋಟೆಲ್‌ ಹುಡುಕಿ ಬರುವಂತೆ ಮಾಡುತ್ತದೆ. ಅದಕ್ಕೆ ಈ ಬಿರಿಯಾನಿ ಉಂಡವರು ಹೇಳುತ್ತಾರೆ, ‘ಬಳ್ಳಾರಿ ಕಡೆಗೆ ಹೋದರೆ, ಬಿರಿಯಾನಿ ತಿನ್ನದೇ ಬರಬೇಡಿ’ ಎಂದು..!

ಹಂಪಿ ಪ್ರವಾಸಕ್ಕೆ ಹೋದವರಿಗೆ, ಈ ಎರಡೂ ಖಾದ್ಯವನ್ನು ರುಚಿ ನೋಡುವ ಅವಕಾಶವಿದೆ. ಸುತ್ತಾಡಿ ಸುತ್ತಾಡಿ ಸುಸ್ತಾದರೆ, ಈ ಖಾದ್ಯಗಳು ಹೊಟ್ಟೆಯ ಹಸಿವು, ನಾಲಿಗೆಯ ರುಚಿಯನ್ನು ತಣಿಸುತ್ತವೆ. ಇದು ಬಳ್ಳಾರಿ ಬಿರಿಯಾನಿಯಾದರೂ, ಹೊಸಪೇಟೆಯ ಹಲವು ಹೋಟೆಲ್‌ಗಳಲ್ಲಿ ಲಭ್ಯ. ಹೀಗಾಗಿ ಈ ಬಿರಿಯಾನಿಗೆ, ಪ್ರವಾಸಿಗರಷ್ಟೇ ಅಲ್ಲ ಇಲ್ಲಿಗೆ ಚಿತ್ರೀಕರಣಕ್ಕೆಂದು ಬರುವ ಕನ್ನಡ, ತೆಲುಗು ಸಿನಿಮಾ ನಟ, ನಟಿಯರೂ ‘ಫಿದಾ’ ಆಗಿದ್ದಾರೆ.

ಹೈದರಾಬಾದಿ ಬಿರಿಯಾನಿ ಸೇರಿದಂತೆ ಇತರೆ ಕಡೆಗಳಲೆಲ್ಲಾ ಸಾಮಾನ್ಯವಾಗಿ ಬಾಸ್ಮತಿ ಅಕ್ಕಿ ಬಳಸಿ ಬಿರಿಯಾನಿ ಮಾಡುತ್ತಾರೆ. ಆದರೆ, ಬಳ್ಳಾರಿ ಬಿರಿಯಾನಿಗೆ ಸ್ಥಳೀಯ ಸೋನಾ ಮಸೂರಿ ಅಕ್ಕಿಯನ್ನೇ ಬಳಸುತ್ತಾರೆ. ಅದು ಕೂಡ ದಮ್‌ ಬಿರಿಯಾನಿ. ಹೀಗಾಗಿ ಬಳ್ಳಾರಿ ಬಿರಿಯಾನಿಗೆ ಅದರದೇ ಆದ ಐಡೆಂಟಿಟಿ ಇದೆ.

ಬಿರಿಯಾನಿ

‘ಬಾಸ್ಮತಿ ಅಕ್ಕಿಯಿಂದ ಮಾಡಿದ ಬಿರಿಯಾನಿಯನ್ನು ಹೆಚ್ಚು ತಿನ್ನೋಕೆ ಆಗಲ್ಲ. ಇದರೊಂದಿಗೆ ಮಸಾಲೆ ಸುಲಭವಾಗಿ ಬೇಗ ಬೆರೆಯುವುದಿಲ್ಲ. ಸೋನಾ ಮಸೂರಿ ಅಕ್ಕಿಯಾದರೆ, ಅಕ್ಕಿ ಅರೆಬೆಂದ ಸ್ಥಿತಿಯಲ್ಲಿರುವಾಗ ಪುಲಾವ್‌ ರೀತಿಯಲ್ಲಿ ಮಾಡಿ, ಬಳಿಕ ಚಿಕನ್‌ ಅಥವಾ ಮಟನ್‌ ಸೇರಿಸಿ, ಮುಚ್ಚಳವನ್ನು ಹಿಟ್ಟಿನಿಂದ ಹೊಗೆಯಾಡದಂತೆ ಮುಚ್ಚುತ್ತೇವೆ. ಇದರಿಂದ ಫ್ಲೇವರ್‌, ಬಿರಿಯಾನಿಯಲ್ಲಿ ಸೇರಿಕೊಳ್ಳುತ್ತದೆ. ವಿಶಿಷ್ಟ ಸ್ವಾದ ಪಡೆಯುತ್ತದೆ. ಹೀಗಾಗಿಯೇ ಜನ ಇಷ್ಟಪಡುತ್ತಾರೆ’ ಎನ್ನುತ್ತಾರೆ ಹೊಸಪೇಟೆಯ ‘ಬಳ್ಳಾರಿ ಬಿರಿಯಾನಿ’ ಮಾಲೀಕ ಹಬೀಬ್‌ ರೆಹಮಾನ್‌. ಮಧ್ಯಾಹ್ನ 12ಕ್ಕೆ ತೆರೆಯುವ ಈ ಹೋಟೆಲ್‌ ಮಧ್ಯರಾತ್ರಿವರೆಗೂ ತೆರೆದಿರುತ್ತದೆ. ಇಲ್ಲಿಗೆ ಬರುವವರು ಊಟ ಮಾಡಿ ಪಾರ್ಸಲ್‌ ಕೊಂಡೊಯ್ಯುತ್ತಾರೆ. ಅಲ್ಲಿನ ಅಲ್ಫಾಮ್‌ ಚಿಕನ್‌, ಬಾರ್ಬೆಕ್ಯು ತಂದೂರಿ ಕೂಡ ಅಷ್ಟೇ ಫೇಮಸ್ಸು.

ಬಿರಿಯಾನಿ ಜತೆಗೆ, ತುಂಗಭದ್ರಾ ಜಲಾಶಯದಲ್ಲಿ ಸಿಗುವ ಕಾಟ್ಲಾ ಮೀನಿನ ಖಾದ್ಯವೂ ಅಷ್ಟೇ ರುಚಿಕರವಾಗಿರುತ್ತೆ. ಹಾಗಂತ ಈ ಹೋಟೆಲ್‌ ಬರೀ ಮಾಂಸಾಹಾರಿಗಳಿಗಷ್ಟೇ ಸೀಮಿತವಲ್ಲ. ಶಾಖಾಹಾರಿಗಳಿಗೂ ಬೇಕಾದ ಖಾದ್ಯಗಳೂ ಲಭ್ಯವಿವೆ.

ಹಂಪಿಯ ರೊಟ್ಟಿ ಊಟ

ಸಸ್ಯಹಾರಿಗಳಿಗೆ ಹೊಸಪೇಟೆ, ಹಂಪಿ ಸುತ್ತಮುತ್ತ ಅನೇಕ ಖಾನಾವಳಿಗಳಿವೆ. ಆಂಧ್ರ ಭೋಜನಾಲಯಗಳಿವೆ. ಇಲ್ಲಿ ಜೋಳದ ರೊಟ್ಟಿ, ಚಪಾತಿ, ಹೋಳಿಗೆ, ಎರಡ್ಮೂರು ಬಗೆಯ ಕಾಳಿನ ಪಲ್ಯ, ಮೆಂತೆ ಸೊಪ್ಪು, ಸೌತೆಕಾಯಿ, ಕ್ಯಾರೆಟ್‌, ಶೇಂಗಾ– ಅಗಸಿ ಹಿಂಡಿ, ಗಟ್ಟಿ ಮೊಸರು, ಮಜ್ಜಿಗೆ, ಅನ್ನ ಸಿಗುತ್ತದೆ.

ಹಂಪಿಯ ಬಹುತೇಕ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಸ್ಥಳೀಯ ಖಾದ್ಯಗಳ ಜತೆಗೆ ಕಾಂಟಿನೆಂಟಲ್‌ ಫುಡ್‌ ಕೂಡ ಸಿಗುತ್ತದೆ. ‘ಹಂಪಿ ಉತ್ಸವ’ದ ಸಂದರ್ಭದಲ್ಲಿ ಆಹಾರ ಮೇಳವೂ ನಡೆಯುತ್ತದೆ. ಸಂಜೆಯ ‘ಕುರುಕಲು’ ಆಹಾರಕ್ಕಾಗಿ ಮಂಡಕ್ಕಿ ಒಗ್ಗರಣೆ, ಇಡ್ಲಿ, ಮಿರ್ಚಿ, ದೋಸೆ ತುಂಬಾ ಫೇಮಸ್‌.

ಎರಡು ದಿನಗಳ ಹಂಪಿ ಪ್ರವಾಸಕ್ಕೆ ಇಷ್ಟು ಫುಡ್‌ ನೋಟ್‌ ಸಾಕಲ್ಲವಾ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT