ಮಂಗಳವಾರ, ನವೆಂಬರ್ 30, 2021
22 °C

ಅಡುಗೆ ಮನೆಗೆ ಬೇಕು ಸ್ಮಾರ್ಟ್‌ ಉಪಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅ ಡುಗೆ ಮಾಡುವುದು ದೊಡ್ಡ ಕೆಲಸವಾದರೆ, ಅದಕ್ಕೆ ಬೇಕಾದಂತಹ ಸಾಮಾನು ಸರಂಜಾಮು, ಸಲಕರಣೆಗಳನ್ನು ಹೊಂದಿಸಿಕೊಳ್ಳುವುದು ಇನ್ನೂ ಕಷ್ಟ. ತುಂಬಾ ಅನುಕೂಲಕರ ಎಂದು ಖರೀದಿಸಿದ ಗ್ಯಾಜೆಟ್‌ ಏನೂ ಬಳಕೆಯಿಲ್ಲದೇ ಅಟ್ಟ ಸೇರುವುದೂ ಉಂಟು. ಮಾರುಕಟ್ಟೆಯಲ್ಲಂತೂ ಹೊಸ ಬಗೆಯ ಸಲಕರಣೆಗಳು ಬರುತ್ತಲೇ ಇರುತ್ತವೆ. ಆನ್‌ಲೈನ್‌ನಲ್ಲಿ ಕೂಡ ರಿಯಾಯ್ತಿ ದರದಲ್ಲಿ ಇವುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿರುತ್ತದೆ. ಆಧುನಿಕ ಸ್ಮಾರ್ಟ್‌ ಅಡುಗೆ ಪರಿಕರಗಳ ಬಗ್ಗೆ ಟಿವಿಯಲ್ಲಿ ಬೇಕಾದಷ್ಟು ಪ್ರಚಾರವೂ ನಡೆಯುತ್ತಿರುತ್ತದೆ. ಆದರೆ ಏನು ಖರೀದಿಸುವುದು, ಅವೆಷ್ಟು ಬಳಕೆಗೆ ಯೋಗ್ಯ ಎಂಬುದನ್ನು ನಿರ್ಧರಿಸಿ ಕೊಳ್ಳಬೇಕಾಗುತ್ತದೆ.

ಮನೆಯಲ್ಲಿ ಅಡುಗೆಗೆ ಅಗತ್ಯವಾದ ಕೆಲವು ಉಪಕರಣಗಳನ್ನು ಖರೀದಿಸಿಟ್ಟುಕೊಂಡರೆ ಅಡುಗೆಯೂ ಸುಲಭ. ಅಂತಹ ಕೆಲವು ಸಲಕರಣೆಗಳು ಹೀಗಿವೆ..

ಫುಡ್‌ ಪ್ರೊಸೆಸರ್‌

ಚಾಕುವಿನಿಂದ ತರಕಾರಿ, ಮಾಂಸ ಕತ್ತರಿಸುವುದು ಸುಲಭವೇ. ಆದರೆ ಫುಡ್‌ ಪ್ರೊಸೆಸರ್‌ ಇಟ್ಟುಕೊಂಡರೆ ತರಕಾರಿ ಹೆಚ್ಚುವುದು, ಟೊಮೆಟೊ ಪಲ್ಪ್‌ ತಯಾರಿಸುವುದು ಇನ್ನೂ ಸುಲಭ. ಕ್ಷಣಾರ್ಧದಲ್ಲಿ ಮಾಡಬಹುದು.

ಉದಾಹರಣೆಗೆ ಕ್ಯಾಬೇಜ್‌ ಅನ್ನು ಪಲ್ಯಕ್ಕೆ ಚಿಕ್ಕದಾಗಿ ಹೆಚ್ಚುತ್ತ ಕುಳಿತರೆ ಅರ್ಧ ಗಂಟೆಯಾದರೂ ಬೇಕು. ಆದರೆ ಫುಡ್‌ ಪ್ರೊಸೆಸರ್‌ನಲ್ಲಿ ಎರಡೇ ನಿಮಿಷದಲ್ಲಿ 5–6 ಜನರಿಗೆ ಪಲ್ಯಕ್ಕೆ ಸಾಕಾಗುವಷ್ಟು ಕ್ಯಾಬೇಜ್‌ ಅನ್ನು ಬೇಕಾದ ಸೈಝ್‌ಗೆ ಕತ್ತರಿಸಿ ಹಾಕಬಹುದು. ಮೂಲಂಗಿ, ಕ್ಯಾರೆಟ್‌ ತುರಿಯುತ್ತ ಕೂರುವ ಬದಲು ದೊಡ್ಡದಾಗಿ ಕತ್ತರಿಸಿ ಫುಡ್‌ ಪ್ರೊಸೆಸರ್‌ನಲ್ಲಿ ಹಾಕಿದರೆ ಸಣ್ಣ ತುರಿ ಕ್ಷಣಾರ್ಧದಲ್ಲಿ ಲಭ್ಯ.

ಬ್ಲೆಂಡರ್‌

ತರಕಾರಿ, ಹಣ್ಣುಗಳ ರಸ, ಸ್ಮೂದಿ, ಸೂಪ್‌ಗೆ ಟೊಮೆಟೊ ಪಲ್ಪ್‌ ಮಾಡಲು... ಹೀಗೆ ತರಹೇವಾರಿ ಕೆಲಸಗಳಿಗೆ ಬ್ಲೆಂಡರ್‌ ನೆರವಿಗೆ ಬರುತ್ತದೆ. ದಾಳಿಂಬೆ ರಸ ತಯಾರಿಸುವಾಗ ಬೀಜವನ್ನೂ ಅರೆಯುವುದರಿಂದ ಪೌಷ್ಟಿಕಾಂಶವನ್ನು ಉಳಿಸಿಕೊಳ್ಳಬಹುದು.

ಸ್ಟ್ಯಾಂಡ್‌ ಮಿಕ್ಸರ್‌

ಕೋವಿಡ್‌ ಸಂದರ್ಭದಲ್ಲಿ ವೈವಿಧ್ಯಮಯ ಅಡುಗೆಗಳನ್ನು ಕಲಿತವರಿಗೆ ಈ ಸ್ಟ್ಯಾಂಡ್ ಮಿಕ್ಸರ್‌ ಹೆಚ್ಚು ಪ್ರಯೋಜನಕಾರಿ ಎನ್ನಬಹುದು. ಕುಕೀಸ್‌ ಮಿಶ್ರಣ, ಬ್ರೆಡ್‌ ಮಿಶ್ರಣ ತಯಾರಿಸಲು, ಸಾಸ್‌, ಸೂಪ್‌ಗೆ, ಪ್ಯಾನ್‌ಕೇಕ್‌ ತಯಾರಿಕೆಗೆ ಇದು ಉಪಯೋಗಕ್ಕೆ ಬರುತ್ತದೆ. ಕುಕೀಸ್‌, ಕೇಕ್‌, ಬ್ರೌನಿ, ಬ್ರೆಡ್‌, ಪಿಜ್ಜಾ ಮೊದಲಾದವುಗಳ ಮಿಶ್ರಣ ತಯಾರಿಸಬಹುದು. ಬಳಕೆಗೆ ಮಾತ್ರವಲ್ಲ, ಶುಚಿಗೊಳಿಸುವುದೂ ಸುಲಭ. ಮಿಕ್ಸರ್‌ ಹಾಕಿ, ಬೇರೆ ಕೆಲಸ ಮಾಡಿಕೊಳ್ಳಬಹುದು.

ಏರ್‌ ಫ್ರೈಯರ್‌ ಓವೆನ್‌

ಇದು ನಿಮ್ಮ ಬಹಳಷ್ಟು ಕೆಲಸಗಳನ್ನು ಸರಾಗವಾಗಿ ಮಾಡುತ್ತದೆ. ಬೇಕ್ ಮಾಡಲು, ಟೋಸ್ಟ್‌ ಮಾಡಲು, ಕಡಿಮೆ ಎಣ್ಣೆ ಬಳಸಿ ಮಾಡುವ ಕುರುಕಲು ತಿಂಡಿಗೆ.. ಇದು ಪ್ರಯೋಜನಕಾರಿ. ಕ್ಷಣಮಾತ್ರದಲ್ಲಿ ಬೇಯಿಸಿದ ತರಕಾರಿ ಪ್ಲೇಟ್‌ಗೆ ಬೀಳುತ್ತದೆ. ಟೋಸ್ಟರ್‌, ಏರ್‌ ಫ್ರೈಯರ್‌ ಎಂದು ಬೇರೆ ಬೇರೆ ಬಳಸುವ ಅಗತ್ಯವಿಲ್ಲ.

ಇನ್‌ಸ್ಟಂಟ್‌ ಪಾಟ್‌ ಕುಕರ್‌

ರೈಸ್‌ ಕುಕರ್‌ ಎಲ್ಲರ ಮನೆಯಲ್ಲೂ ಸಾಮಾನ್ಯ. ಆದರೆ ವಿದ್ಯುತ್‌ ಬಳಸುವ ಇನ್‌ಸ್ಟಂಟ್‌ ಪಾಟ್‌ ಕುಕರ್‌ ಅನ್ನು ತರಹೇವಾರಿ ಅಡುಗೆ ಮಾಡಲು ಬಳಸಬಹುದು. ಅನ್ನವನ್ನು ಮಾತ್ರವಲ್ಲ, ತರಕಾರಿಗಳನ್ನು ಉಗಿಯಲ್ಲಿ ಬೇಯಿಸಬಹುದು. ಕಡಿಮೆ ಎಣ್ಣೆಯಲ್ಲಿ ಮಾಡುವಂತಹ ಏರ್‌ ಫ್ರೈಯರ್‌ ತರಹ ಬಳಕೆ ಮಾಡಬಹುದು. ಪುಲಾವ್‌, ಖಿಚಡಿಯನ್ನು ರುಚಿಕರವಾಗಿ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.