ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀರ್‌ ಕೈರುಚಿಗೆ ಮನ ಸೋಲದವರಿಲ್ಲ..!

ವಿಜಯಪುರದ ಮನಗೂಳಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ವಿಭಿನ್ನ ಬಗೆಯ ಬಜಿಗಳು
Last Updated 2 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ವಿಜಯಪುರ:ಬಗೆ ಬಗೆಯ ಇಲ್ಲಿನ ಬಜಿಗಳನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎಂಬ ಆಸೆ ಮನದಲ್ಲಿ ಮೂಡುತ್ತದೆ. ಈ ಹೋಟೆಲ್‌ನ ಬಜಿ ರುಚಿಗೆ ಮನ ಸೋಲದವರಿಲ್ಲ.

ಬದುಕು ಕಟ್ಟಿಕೊಳ್ಳಲು ಮನಗೂಳಿ ಅಗಸಿ ರಸ್ತೆಯಲ್ಲಿ ಜಮೀರ್‌ ಬಳ್ಳಾರಿ ಆರಂಭಿಸಿದ ಮಿರ್ಚಿ ಮತ್ತು ಈರುಳ್ಳಿ ಬಜಿ ವ್ಯಾಪಾರ, ಇದೀಗ ಬಗೆ ಬಗೆಯ ಮತ್ತು ರುಚಿಕರ ಬಜಿಗಳ ತಯಾರಿಕೆಯಿಂದ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿನ ಬಜಿ ರುಚಿ ಒಮ್ಮೆ ಸವಿದರೆ, ಮತ್ತೆ ಮತ್ತೆ ಸವಿಯಬೇಕು ಎನ್ನಿಸದಿರಲಾರದು.

‘ಜಮೀರ್‌ ಹೋಟೆಲ್‌ನಲ್ಲಿ ತಯಾರಾಗುವ ವಿವಿಧ ತರಹದ ಬಜಿಗಳನ್ನು 10 ವರ್ಷಗಳಿಂದ ಮನೆಯವರು ತಿನ್ನುತ್ತಿದ್ದೇವೆ. ಗೆಳೆಯರೊಂದಿಗೆ ಬಂದು ಸಹ ಬಜಿ ತಿನ್ನುತ್ತೇವೆ. ವಾರದಲ್ಲಿ ಒಮ್ಮೆಯಾದರೂ ಇಲ್ಲಿನ ಬಜಿ ತಿನ್ನದಿದ್ದರೆ ಸಮಾಧಾನವಾಗುವುದಿಲ್ಲ. ಮನೆಗೆ ಯಾರೇ ಬಂದರೂ, ಇಲ್ಲಿನ ಬಜಿ ರುಚಿ ತೋರಿಸುತ್ತೇವೆ. ಯಾರೊಬ್ಬರೂ ಸಹ ಗುಣಮಟ್ಟದ ಬಗ್ಗೆ ಚಕಾರ ಎತ್ತಿಲ್ಲ. ಇಲ್ಲಿನ ಬಜಿ ಎಷ್ಟು ತಿಂದರೂ ಕೆಮ್ಮು ಬರುವುದಿಲ್ಲ’ ಎಂದು ಗಣೇಶ ನಗರದ ನಿವಾಸಿ ಆನಂದ ಹದರಿ ಹೇಳಿದರು.

‘ಏಳು ವರ್ಷದಿಂದ ಹೋಟೆಲ್‌ನಲ್ಲಿ ಬಜಿ ತಿನ್ನುತ್ತಿದ್ದೇನೆ. ಒಳ್ಳೆಯ ಎಣ್ಣೆ ಬಳಸಿ ಗುಣಮಟ್ಟದ ಬಜಿ ತಯಾರಿಸುವುದರಿಂದ ಮನೆಯ ಬಳಿ ಅಂಗಡಿಗಳಿದ್ದರೂ, ಜಮೀರ್‌ ಹೋಟೆಲ್‌ಗೆ ಬಂದು ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತೇವೆ. ಪ್ರಮಾಣ ಹೆಚ್ಚಿದ್ದರೂ, ದರ ಹೆಚ್ಚಿಲ್ಲ. ಹೀಗಾಗಿ ಎಲ್ಲರಿಗೂ ಜಮೀರ್‌ ಹೋಟೆಲ್‌ ಇಷ್ಟವಾಗಿದೆ’ ಎನ್ನುತ್ತಾರೆ ಗ್ರಾಹಕ ಮುಸ್ತಾಫ್‌ ಇನಾಮದಾರ.

‘20 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಆರಂಭಿಸಿದ ಬಜಿ ವ್ಯಾಪಾರ, ಆರ್ಥಿಕವಾಗಿ ಸದೃಢಗೊಳಿಸುವ ಜತೆಗೆ ಹೆಸರು ಸಹ ತಂದು ಕೊಟ್ಟಿದೆ. ಬಜಿ ಎಂದರೆ ಜಮೀರ್‌ ಹೋಟೆಲ್‌ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ದೂರದ ಪ್ರದೇಶದಲ್ಲಿನ ಜನರು ಸಹ ನಮ್ಮಲ್ಲಿ ಬಜಿ ತೆಗೆದುಕೊಂಡು ಹೋಗುತ್ತಾರೆ. ಅಂಗಡಿಗಳ ಸಂಖ್ಯೆ ಹೆಚ್ಚಿದ್ದರೂ, ನಮ್ಮ ವ್ಯಾಪಾರಕ್ಕೆ ಎಳ್ಳಷ್ಟು ತೊಂದರೆಯಾಗಿಲ್ಲ. ಗುಣಮಟ್ಟ ಕಾಯ್ದುಕೊಂಡಿರುವುದರಿಂದ ಗ್ರಾಹಕರು ನಮ್ಮತ್ತ ಬರುತ್ತಾರೆ’ ಎಂದು ಹೋಟೆಲ್‌ ಮಾಲೀಕ ಜಮೀರ್‌ ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಪ್ಲೇಟ್‌ ಪೂರಿ ₹ 25, ಅವಲಕ್ಕಿ ₹ 15, ಇಡ್ಲಿ ₹ 20, ಶಿರಾ ₹ 15, ಉಪ್ಪಿಟು ₹ 15, ಮಸಾಲ ದೋಸೆ ₹ 30, ಸಾದಾ ದೋಸೆ ₹ 25 ಮುಂಜಾನೆ ನಮ್ಮಲ್ಲಿ ಸಿಗುತ್ತವೆ. ಸಂಜೆ ಕಾಂದಾ, ಆಲೂ, ಕಟ್‌, ಗುಂಡು ಬಜಿ ₹ 15, ಆನಿಯನ್‌ ಪಕೋಡಾ ₹ 20, ಚೋಡಾ, ಅವಲಕ್ಕಿ ₹ 20 ಹಾಗೂ ಬಾದುಶಾ ₹ 12ಕ್ಕೆ ಒಂದರಂತೆ ಮಾರಾಟ ಮಾಡುತ್ತಿರುವುದಾಗಿ’ ಜಮೀರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT