ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಸ್ವಾದ: ಶುಂಠಿ, ನೆಲ್ಲಿ, ಟೊಮೆಟೊ ಚಟ್ನಿ– ಮಾಡುವ ಬಗ್ಗೆ ಮಾಹಿತಿ ಇಲ್ಲಿದೆ..

ಚಪಾತಿ, ಅನ್ನ, ರೊಟ್ಟಿ ಹೀಗೆ ನಿಮಗೆ ಇಷ್ಟವಾದ ಪದಾರ್ಥ ಗಳೊಂದಿಗೆ ಇವುಗಳನ್ನು ಸವಿಯಬಹುದು
Published 20 ಜನವರಿ 2024, 0:55 IST
Last Updated 20 ಜನವರಿ 2024, 0:55 IST
ಅಕ್ಷರ ಗಾತ್ರ

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಟ್ನಿ, ಉಪ್ಪಿನಕಾಯಿ ರೆಸಿಪಿಗಳನ್ನು ನೀಡಿದ್ದಾರೆ
ವೇದಾವತಿ ಎಚ್‌.ಎಸ್‌. ಚಪಾತಿ, ಅನ್ನ, ರೊಟ್ಟಿ ಹೀಗೆ ನಿಮಗೆ ಇಷ್ಟವಾದ ಪದಾರ್ಥ ಗಳೊಂದಿಗೆ ಇವುಗಳನ್ನು ಸವಿಯಬಹುದು.

ಶುಂಠಿ ಸಿಹಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಶುಂಠಿ 100ಗ್ರಾಂ, ಸಾಸಿವೆ 1 ಟೇಬಲ್ ಚಮಚ, ಜೀರಿಗೆ 1 ಟೇಬಲ್ ಚಮಚ, ಉದ್ದಿನಬೇಳೆ 2 ಟೇಬಲ್ ಚಮಚ, ಮೆಂತ್ಯ 1 ಟೇಬಲ್ ಚಮಚ, ಧನಿಯಾ 2 ಟೇಬಲ್ ಚಮಚ, ಎಣ್ಣೆ 200 ಎಂ ಎಂ, ಕರಿಬೇವು 50 ಎಲೆಗಳು, ಬೆಲ್ಲ 350ಗ್ರಾಂ, ಹುಣಸೆರಸ 200ಗ್ರಾಂ, ಅಚ್ಚಖಾರದ ಪುಡಿ 2 ಟೇಬಲ್ ಚಮಚ, ಉಪ್ಪು 2 ಟೇಬಲ್ ಚಮಚ, ಇಂಗು 1/4 ಟೀ ಚಮಚ, ಅರಶಿನ ಪುಡಿ 1/2 ಟೀ ಚಮಚ, ನೀರು ಅರ್ಧ ಕಪ್.

ತಯಾರಿಸುವ ವಿಧಾನ: ಶುಂಠಿಯ ಮೇಲಿನ ಸಿಪ್ಪೆಯನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಬಾಣಲೆಗೆ ಸಾಸಿವೆ, ಜೀರಿಗೆ, ಮೆಂತ್ಯ, ಉದ್ದಿನಬೇಳೆ, ಧನಿಯಾ, 20 ಎಸಳು ಕರಿಬೇವು, 1 ಟೀ ಚಮಚ ಎಣ್ಣೆಯನ್ನು ಹಾಕಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬೆಲ್ಲಕ್ಕೆ ಅರ್ಧ ಕಪ್ ನೀರು ಹಾಕಿ ಒಂದೇಳೆ ಪಾಕ ಬರುವಂತೆ ಕುದಿಸಿ. ಬಳಿಕ ಹುಣಸೆರಸ ಸೇರಿಸಿ ಐದು ನಿಮಿಷ ಕುದಿಸಿ. ನಂತರ ಪುಡಿ ಮಾಡಿದ ಶುಂಠಿ ಪೇಸ್ಟ್, ತಯಾರಿಸಿದ ಮಸಾಲೆ ಪುಡಿ, ಅಚ್ಚಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉರಿಯಲ್ಲಿ ಐದು ನಿಮಿಷ ಗಟ್ಟಿಯಾಗುವರೆಗೆ ಕುದಿಸಿ. ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ಸಾಸಿವೆ, ಇಂಗು, ಅರಶಿನ ಉಳಿದ ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. ಒಗ್ಗರಣೆಯನ್ನು ಶುಂಠಿ ಚಟ್ನಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹುಳಿ, ಖಾರ, ಸಿಹಿ ಮಿಶ್ರಿತ ಶುಂಠಿ ಚಟ್ನಿಯನ್ನು ಆರು ತಿಂಗಳವರೆಗೆ ಸವಿಯಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಟೊಮೆಟೊ ಚಟ್ನಿ

ಬೇಕಾಗುವ ಸಾಮಗ್ರಿಗಳು: ನಾಟಿ ಟೊಮೆಟೊ ಹಣ್ಣು 1 ಕೆಜಿ, ಹುಣಸೆಹಣ್ಣು 50 ಗ್ರಾಂ, ಸಾಸಿವೆ 1 ಟೇಬಲ್ ಚಮಚ ಮತ್ತು ಮೆಂತ್ಯ 1 ಟೇಬಲ್ ಚಮಚ ಹುರಿದು ಪುಡಿ ಮಾಡಿಕೊಳ್ಳಿ, ಎಣ್ಣೆ 1/4 ಕಪ್. ಸಾಸಿವೆ 1 ಟೀ ಚಮಚ, ಜೀರಿಗೆ 1 ಟೀ ಚಮಚ, ಕಡಲೆಬೇಳೆ 1 ಟೀ ಚಮಚ, ಉದ್ದಿನಬೇಳೆ 1 ಟೀ ಚಮಚ, ಇಂಗು 1/4 ಟೀ ಚಮಚ, ಕರಿಬೇವು 15 ರಿಂದ 20, ಬೆಳ್ಳುಳ್ಳಿ 20 ರಿಂದ 25, 50 ಗ್ರಾಂ ಅಚ್ಚ ಖಾರದಪುಡಿ, 50 ಗ್ರಾಂ ಉಪ್ಪು, 2 ಒಣಮೆಣಸು.

ತಯಾರಿಸುವ ವಿಧ: ಟೊಮೆಟೊ ತೊಳೆದು ನೀರು ಇರದಂತೆ ಚೆನ್ನಾಗಿ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಗೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಕತ್ತರಿಸಿದ ಟೊಮೆಟೊ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಹುಣಸೆಹಣ್ಣನ್ನು ಸೇರಿಸಿ. ಬಳಿಕ ಮುಚ್ಚಳ ಮುಚ್ಚಿ ಮೆತ್ತಗಾಗುವರೆಗೆ ಬೇಯಿಸಿ. ಬೆಂದ ನಂತರ ಆರಲು ಬಿಡಿ. ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ ಉಳಿದ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಬಳಿಕ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಇಂಗು, ಕರಿಬೇವಿನ ಎಲೆ, ಬೆಳ್ಳುಳ್ಳಿ, ಒಣಮೆಣಸನ್ನು ತುಂಡು ಮಾಡಿ ಹಾಕಿ. ಇವುಗಳು ಕೆಂಬಣ್ಣ ಬರುವವರೆಗೆ ಹುರಿಯಿರಿ. ನಂತರ ರುಬ್ಬಿಕೊಂಡ ಮಿಶ್ರಣ, ಪುಡಿ ಮಾಡಿದ ಮಿಶ್ರಣ, ಅಚ್ಚಖಾರದಪುಡಿ, ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಕುದಿಸಿ. ಮಿಶ್ರಣವು ಎಣ್ಣೆಯನ್ನು ಬಿಟ್ಟುಕೊಂಡು ಗಟ್ಟಿಯಾಗುತ್ತಾ ಬರುವಾಗ ಒಲೆಯನ್ನು ಆರಿಸಿ. ಈಗ ರುಚಿಕರವಾದ ಟೊಮೆಟೊ ಚಟ್ನಿ ಸಿದ್ಧಗೊಳ್ಳುತ್ತದೆ. ನಿಮಗೆ ಇಷ್ಟವಾದ ಪದಾರ್ಥಗಳೊಂದಿಗೆ ಸವಿಯಬಹುದು.

ನೆಲ್ಲಿಕಾಯಿ ಸಿಹಿ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: ನೆಲ್ಲಿಕಾಯಿ 1/2 ಕೆ.ಜಿ., ಎಣ್ಣೆ 2 ಟೇಬಲ್ ಚಮಚ, ಜೀರಿಗೆ 1 ಟೀ ಚಮಚ, ಮೆಂತ್ಯ 1 ಟೀ ಚಮಚ, ಮೆಂತ್ಯ 1 ಟೀ ಚಮಚ, ಸೊಂಪು 1 ಟೀ ಚಮಚ, ಇಂಗು 1/4 ಟೀ ಚಮಚ, ತುರಿದ ಶುಂಠಿ 1 ಟೇಬಲ್ ಚಮಚ, ಬೆಲ್ಲ 400 ಗ್ರಾಂ, 1 ಟೀ ಚಮಚ ಧನಿಯಾಪುಡಿ, 1/2 ಟೀ ಚಮಚ ಜೀರಿಗೆಪುಡಿ, 1/2 ಟೀ ಚಮಚ ಕಾಳುಮೆಣಸಿನ ಪುಡಿ, 1/2 ಟೀ ಚಮಚ ಅರಶಿನಪುಡಿ, 1 ಟೀ ಚಮಚ ಬ್ಲಾಕ್ ಸಾಲ್ಟ್, 1/2 ಟೀ ಚಮಚ ಗರಂಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಅಚ್ಚಖಾರದಪುಡಿ 2 ಟೀ ಚಮಚ.
ತಯಾರಿಸುವ ವಿಧಾನ: ಬಾಣಲೆಗೆ ಒಂದು ಲೀಟರ‍್ ನೀರು ಮತ್ತು ನೆಲ್ಲಿಕಾಯಿಯನ್ನು ಹಾಕಿ ಮುಚ್ಚಳ ಮುಚ್ಚಿ ಹತ್ತು ನಿಮಿಷ ಬೇಯಿಸಿ. ಬಳಿಕ ನೆಲ್ಲಿಕಾಯಿಯನ್ನು ನೀರಿನಿಂದ ತೆಗೆದು ಆರಲು ಬಿಡಿ. ಆರಿದ ನಂತರ ಒಳಗಿನ ಬೀಜ ತೆಗೆದು ಬಿಡಿಬಿಡಿಯಾಗಿ ಹೋಳು ತಯಾರಿಸಿಕೊಳ್ಳಿ. ಬಾಣಲೆಗೆ ಎಣ್ಣೆಯನ್ನು ಹಾಕಿ ಜೀರಿಗೆ, ಮೆಂತ್ಯ, ಸೊಂಪು, ಇಂಗು, ತುರಿದ ಶುಂಠಿ ಹಾಕಿ ಮಿಶ್ರಣ ಮಾಡಿ. ಬಳಕ ನೆಲ್ಲಿಕಾಯಿ, ಬೆಲ್ಲವನ್ನು ಸೇರಿಸಿ. ಬೆಲ್ಲ ಕರಗುವರೆಗೆ ಮಿಶ್ರಣ ಮಾಡಿ. ನಂತರ ಧನಿಯಾಪುಡಿ, ಜೀರಿಗೆಪುಡಿ, ಕಾಳುಮೆಣಸಿನಪುಡಿ, ಅರಶಿನಪುಡಿ, ಬ್ಲಾಕ್ ಸಾಲ್ಟ್, ಗರಂಮಸಾಲೆ, ಉಪ್ಪು, ಅಚ್ಚಖಾರದಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಹಾಕಿರುವ ಮಸಾಲೆ ನೆಲ್ಲಿಕಾಯಿಯೊಂದಿಗೆ ಸೇರಿ ಗಟ್ಟಿಯಾಗುತ್ತಾ ಬಂದಾಗ ಒಲೆಯನ್ನು ಆರಿಸಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT