ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ದೋಸೆ ದಿನ: ವ್ಯಕ್ತಿಯೊಬ್ಬನಿಂದ ವರ್ಷದಲ್ಲಿ 447 ಬಾರಿ ಆರ್ಡರ್‌: Swiggy

Published 29 ಫೆಬ್ರುವರಿ 2024, 11:59 IST
Last Updated 29 ಫೆಬ್ರುವರಿ 2024, 11:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಯಂಬತ್ತೂರಿನ ವ್ಯಕ್ತಿಯೊಬ್ಬರು ಒಂದೇ ವರ್ಷದಲ್ಲಿ 447 ಬಾರಿ ದೋಸೆಯನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ’ ಎಂದು ಮೊಬೈಲ್ ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ಸ್ವಿಗ್ಗಿ ಹೇಳಿದೆ.

ವಿಶ್ವ ದೋಸೆ ದಿನ (ಮಾರ್ಚ್ 3)ದ ಅಂಗವಾಗಿ ಸ್ವಿಗ್ಗಿ ಈ ಮಾಹಿತಿ ಹಂಚಿಕೊಂಡಿದ್ದು, ಕಳೆದ ಒಂದು ವರ್ಷದಲ್ಲಿ 2.9 ಕೋಟಿ ದೋಸೆಯನ್ನು ಗ್ರಾಹಕರು ಇರುವಲ್ಲಿಗೆ ತಲುಪಿಸಲಾಗಿದೆ ಎಂದು ಹೇಳಿದೆ.

ದೇಶದಲ್ಲಿ ದೋಸೆ ಪ್ರಿಯರ ಸಂಖ್ಯೆ ದೊಡ್ಡದಿದೆ. 2023ರ ಫೆ. 25ರಿಂದ 2024ರ ಫೆ. 25ರವರೆಗಿನ ಮಾಹಿತಿ ಆಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಭಾರತದ ಈ ಆಹಾರಕ್ಕೆ ದೇಶವ್ಯಾಪಿ ವ್ಯಾಪಕ ಬೇಡಿಕೆ ಇದೆ. ಕಳೆದ ಒಂದು ವರ್ಷದಲ್ಲಿ ಪ್ರತಿ ನಿಮಿಷಕ್ಕೆ 122 ದೋಸೆಯಂತೆ ಜನರು ತಮ್ಮ ಮೆಚ್ಚಿನ ಆಹಾರವನ್ನು ಕಾಯ್ದಿರಿಸಿದ್ದಾರೆ. 

ಅದರಲ್ಲೂ ದೋಸೆ ತರಿಸಿಕೊಂಡು ಸವಿಯುವುದರಲ್ಲಿ ಹೈದರಾಬಾದ್ ಹಾಗೂ ಚೆನ್ನೈಗೆ ಹೋಲಿಸಿದರೆ ಬೆಂಗಳೂರಿಗರೇ ಮುಂಚೂಣಿಯಲ್ಲಿದ್ದಾರೆ. ದೇಶದ ದೋಸೆ ರಾಜಧಾನಿ ಎಂದೇ ಹೆಸರು ಪಡೆದ ಬೆಂಗಳೂರಿಗರು ದೆಹಲಿ, ಮುಂಬೈ ಮತ್ತು ಕೋಲ್ಕತ್ತಗಿಂತ ದುಪ್ಪಟ್ಟು ದರದಲ್ಲಿ ದೋಸೆಯನ್ನು ಸ್ವಿಗ್ಗಿ ಮೂಲಕ ಆರ್ಡರ್‌ ಮಾಡಿ ತರಿಸಿಕೊಳ್ಳುತ್ತಿದ್ದಾರೆ. 

ಅಚ್ಚರಿ ಎಂಬಂತೆ ಬೆಣ್ಣೆ ಪರಾಟಗಿಂತ ಚಂಡೀಗಢದ ಜನರು ಮಸಾಲಾ ದೋಸೆಗೆ ಮನಸೋತಿದ್ದು, ಇದು ತಮ್ಮ ಅಚ್ಚುಮೆಚ್ಚಿನ ತಿಂಡಿ ಎಂದಿದ್ದಾರೆ. ರಾಂಚಿ, ಕೊಯಂಬತ್ತೂರು, ಪುಣೆ ಹಾಗೂ ಭೋಪಾಲ್‌ನಲ್ಲೂ ದೋಸೆ ಕಾಯ್ದಿರಿಸುವವರ ಸಂಖ್ಯೆ ದೊಡ್ಡದಿದೆ.

ರಂಜಾನ್ ಮಾಸದಲ್ಲಿ ಅತಿ ಹೆಚ್ಚು ಆರ್ಡರ್‌ ಮಾಡಿದ ತಿನಿಸುಗಳಲ್ಲಿ ದೋಸೆ ಅಗ್ರಸ್ಥಾನದಲ್ಲಿದೆ. ಇಷ್ಟು ಮಾತ್ರವಲ್ಲ, ಕ್ರಿಕೆಟ್ ವಿಶ್ವಕಪ್‌ ಹಾಗೂ ಐಪಿಎಲ್‌ ಮತ್ತು ನವರಾತ್ರಿ ಸಂದರ್ಭದಲ್ಲೂ ಅತಿ ಹೆಚ್ಚು ಬೇಡಿಕೆಯ ತಿನಿಸು ದೋಸೆಯೇ ಆಗಿತ್ತು ಎಂದು ಸ್ವಿಗ್ಗಿ ತನ್ನ ಮಾಹಿತಿ ಆಧರಿಸಿ ಹೇಳಿದೆ.

ದೋಸೆಯನ್ನು ಬೆಳಗಿನ ಉಪಾಹಾರಕ್ಕೆ ಹಾಗೂ ರಾತ್ರಿಯ ಭೋಜನ ಅವಧಿಯಲ್ಲೂ ತರಿಸಿಕೊಂಡ ದಾಖಲೆ ಇದೆ. ಚೆನ್ನೈನಲ್ಲಂತೂ ದೋಸೆ ಪ್ರಿಯರ ಸಂಖ್ಯೆ ದೊಡ್ಡದಿದೆ. ಮತ್ತೊಂದೆಡೆ ಹೈದರಾಬಾದ್‌ನಲ್ಲಿ ಸಂಜೆಯ ಕುರುಕಲು ತಿಂಡಿ ಹಾಗೂ ಚಹಾ ಸೇವನೆ ಸಮಯದಲ್ಲಿ ದೋಸೆ ಸವಿಯುವ ಅಭ್ಯಾಸವಿದೆಯಂತೆ. 

ಹೀಗೆ ಅತಿ ಹೆಚ್ಚು ಆರ್ಡರ್‌ ಮಾಡಿದ ದೋಸೆಗಳಲ್ಲಿ ಮಸಾಲಾ ದೋಸೆ, ಸಾದಾ ದೋಸೆ, ಸೆಟ್‌ ದೋಸೆ, ಉತ್ತಪ್ಪ (ಈರುಳ್ಳಿ ದೋಸೆ) ಹಾಗೂ ಬೆಣ್ಣೆ ಮಸಾಲೆ ದೋಸೆಗಳಿಗೆ ಅಗ್ರ ಸ್ಥಾನ. ಇದನ್ನು ದೋಸೆ, ದೋಸೈ, ದೋಸೇ ಹಾಗೂ ದೋಶಾ ಎಂದೂ ಹಲವರು ಕರೆದಿದ್ದಾರೆ. ಆದರೆ ಸಾಂಪ್ರದಾಯಿಕ ದೋಸೆಗಳ ಜತೆಗೆ ಆಧುನಿಕ ಶೈಲಿಯ ಚಾಕೊಲೇಟ್ ದೋಸೆ, ಪಾವ್‌ ಬಾಜಿ ನೂಡಲ್ಸ್‌ ಪಾಲಕ್ ದೋಸೆ, ಷೆಝ್ವಾನ್‌ ಚಾಪ್ ಸೂ ಸ್ಪೆಷಲ್ ದೋಸೆ, ದಿಲ್‌ಖುಷ್‌ ದೋಸೆ, ಲೇಸ್ ದೋಸೆ ಹಾಗೂ ಪನ್ನೀರ್‌ ಇರುವ ಅಮೆರಿಕನ್ ಚಾಪ್ಸಿ ದೋಸೆಯಂತ ವಿಶೇಷ ಬಗೆಯ ತನಿಸಿಗೂ ಬೇಡಿಕೆ ಹೆಚ್ಚಿದೆ ಎಂದು ಸ್ವಿಗ್ಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT