ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಾಪುರದ ಸವಿರುಚಿ

ರಸಾಸ್ವಾದ
Last Updated 19 ಜನವರಿ 2014, 19:30 IST
ಅಕ್ಷರ ಗಾತ್ರ

ನಗರದ ಮಲ್ಲೇಶ್ವರ ಸರ್ಕಲ್‌ನಿಂದ ನವರಂಗ್‌ನತ್ತ ಸಾಗುವವರಿಗೆ ಮರಿಯಪ್ಪನಪಾಳ್ಯದ ಬಳಿಯಿರುವ ‘ಹಾಸನ ಜಿಲ್ಲಾ ಕೇರಳಾಪುರದ ಸೌಂದರ್ಯ ಹಿಂದೂ ಮಿಲಿಟರಿ ಹೋಟೆಲ್‌’ ಎಂಬ ಉದ್ದನೆಯ ಫಲಕ ಕಣ್ಣಿಗೆ ರಾಚುತ್ತದೆ. ಸುಮಾರು ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಈ ಹೋಟೆಲ್‌ ಶುಚಿ ಮತ್ತು ರುಚಿಗೆ ಮಹತ್ವ ಪಡೆದಿದೆ.

ಇಲ್ಲಿನ ಮಾಂಸಾಹಾರಿ ಅಡುಗೆಯ ರುಚಿ ಸವಿದವರು ಮತ್ತೆ ಮತ್ತೆ ಬರುತ್ತಿರುತ್ತಾರೆ. ಮನೆರುಚಿ ಮತ್ತು ಕೇರಳಾಪುರದ ನಾಟೀಶೈಲಿಯ ಕುರಿಮಾಂಸ ಮತ್ತು ಕೋಳಿಮಾಂಸದ ವಿವಿಧ ಪದಾರ್ಥಗಳು ಹೊಟ್ಟೆಯೊಳಕ್ಕೆ ಹೋಗುತ್ತಿದ್ದಂತೆ ಮನಸ್ಸೂ ತುಂಬಿಬರುತ್ತದೆ. ಇದರ ಮಾಲೀಕರಾದ ಗಿರಿರಾಜು ಗ್ರಾಹಕರನ್ನು ತಮ್ಮ ದೇಸಿ ರುಚಿಗೆ ಒಗ್ಗಿಸಿಕೊಂಡಿದ್ದಾರೆ. ಸಾಂಬಾರ ಪದಾರ್ಥಗಳನ್ನು ಹೆಚ್ಚಿಗೆ ಬಳಸದೆ, ಮನೆ ಅಡುಗೆಯನ್ನು ಉಂಡ ಭಾವವನ್ನು ತುಂಬಿಕೊಡುವ ಖಾದ್ಯಗಳು ಇಲ್ಲಿ ಲಭ್ಯ.

ಗ್ರಾಹಕನ ಮನಸ್ಸನ್ನು ಅರಿಯುವುದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡುವ ಗಿರಿರಾಜ್‌, ಸಣ್ಣಪುಟ್ಟ ದೂರುಗಳನ್ನೂ ಗಂಭೀರವಾಗಿ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಆದರೆ ಸೌಂದರ್ಯ ಹೋಟೆಲ್‌ ಅದಕ್ಕೆ ಅಪವಾದದಂತಿದೆ. ಮಾಂಸಾಹಾರಿ ಹೋಟೆಲಿನ ಕಮಟು ವಾಸನೆ ಇಲ್ಲಿ ಹೊರಹೊಮ್ಮುವುದಿಲ್ಲ.

ಗ್ರಾಹಕರ ಊಟವಾದ ಕೂಡಲೇ ತಕ್ಷಣ ಚೆಲ್ಲಿದ್ದನ್ನೆಲ್ಲಾ ತೆಗೆಯಲು ಇಲ್ಲಿ ವಿಶೇಷ ಗಮನ ಕೊಡುತ್ತಾರೆ. ದಿನದಲ್ಲಿ ಎಷ್ಟು ಖರ್ಚಾಗುತ್ತದೋ ಅಷ್ಟನ್ನು ಮಾತ್ರ ತಯಾರಿಸುವುದು ಇಲ್ಲಿನ ರೂಢಿ. ಕೆಲವೊಮ್ಮೆ ತಡವಾಗಿ ಬರುವ ನಿತ್ಯ ಗ್ರಾಹಕರಿಗೆ ತಮ್ಮ ಇಷ್ಟದ ಪದಾರ್ಥಗಳು ಸಿಗದೆ ನಿರಾಶೆಯಾಗುವುದೂ ಉಂಟು. ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲೇ ಎಲ್ಲವೂ ಲಭ್ಯ. ಚಿಕನ್‌ ಮತ್ತು ಮಟನ್‌ ಬಿರಿಯಾನಿ, ಕಬಾಬ್‌, ಲಾಲಿಪಪ್ಸ, ಕೈಮ, ಚಿಲ್ಲಿ ಚಿಕನ್‌, ತಲೆಮಾಂಸ ಮುಂತಾದ ಪದಾರ್ಥಗಳಿಗೆ ಇಲ್ಲಿ ಹೆಚ್ಚಿನ ಬೇಡಿಕೆಯಿದೆ.

ಇಲ್ಲಿನ ಮತ್ತೊಂದು ವಿಶೇಷವೆಂದರೆ ರಾಗಿ ಮುದ್ದೆ. ಪುಟ್ಟದಾಗಿ, ಸುಂದರವಾಗಿ ಫಳಫಳಿಸುವ ಮುದ್ದೆಯನ್ನು ಬೆರಳುಗಳಿಂದ ಮುರಿದು ಗ್ರೇವಿಯಲ್ಲಿ ಅದ್ದಿ ಬಾಯೊಳಗಿಟ್ಟು ನುಂಗುವುದೇ ಅಪರೂಪದ ಅನುಭವ.

ಮೂಲತಃ ಹಾಸನ ಜಿಲ್ಲಾ ಅರಕಲಗೂಡು ತಾಲ್ಲೂಕಿನ ಕೇರಳಾಪುರದವರಾದ ಗಿರಿರಾಜು ಪಟ್ಟಸಾಲಿ ದೇವಾಂಗ ಜನಸಮುದಾಯಕ್ಕೆ

ಸೇರಿದವರು. ನೇಯ್ಗೆ ಇವರ ಕುಲಕಸುಬು. ಕುಲಕಸುಬು ದುಸ್ತರವಾದಾಗ ಕೇರಳಾಪುರದ ಅನೇಕ ಕುಟುಂಬಗಳು ಕರ್ನಾಟಕದ ವಿವಿಧೆಡೆ ವಲಸೆ ಹೋದವು. ಅವರ ಪೈಕಿ ಕೆಲವರು ಹೋಟೆಲ್‌ ಉದ್ಯಮವನ್ನು ಆಯ್ಕೆ ಮಾಡಿಕೊಂಡರು. ಕಡುಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಇವರನ್ನು ಹೋಟೆಲ್‌ ಉದ್ಯಮ ಕೈ ಹಿಡಿಯಿತು. ರುಚಿಯ ಜೊತೆಗೆ ಶುಚಿತ್ವವನ್ನು ಉಳಿಸಿಕೊಂಡು ಬಂದ ಈ ಸಮುದಾಯದ ಹೋಟೆಲ್‌ಗಳು ನಗರದಲ್ಲಿ ಮೂರ್‍ನಾಲ್ಕು ಕಡೆ ಇದೆ ಎನ್ನುತ್ತಾರೆ ಗಿರಿರಾಜು. ಕೇರಳಾಪುರದ ಹೆಸರಿನಲ್ಲಿ ಒಂದಷ್ಟು ಬೇರೆ ಹೋಟೆಲುಗಳು ಇವೆಯೆಂದು ಹೇಳಲು ಅವರು ಮರೆಯುವುದಿಲ್ಲ.

ಮರಿಯಪ್ಪನಪಾಳ್ಯ, ಪ್ರಕಾಶನಗರ, ರಾಜಾಜಿನಗರ, ಗಾಯತ್ರಿನಗರ, ಮಂಜುನಾಥನಗರ, ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಮಾಂಸಾಹಾರಿ ಪ್ರಿಯರಿಗೆ ಈ ಹೋಟೆಲ್‌ ಅಚ್ಚುಮೆಚ್ಚು. ಮಧ್ಯಸೇವನೆ ಇಲ್ಲಿ ನಿಷಿದ್ಧ. ಹಾಗಾಗಿ ಕುಟುಂಬ ಸಮೇತ ಇಲ್ಲಿಗೆ ಗ್ರಾಹಕರು ಬರುತ್ತಿರುತ್ತಾರೆ.

ಚಿತ್ರರಂಗದ ಗಣ್ಯ ವ್ಯಕ್ತಿಗಳಾದ ಗೀತಪ್ರಿಯ, ಹಂಸಲೇಖ ಮುಂತಾದವರು ಈ ಹೋಟೆಲಿನ ಸವಿರುಚಿಗೆ ಮಾರುಹೋದವರು. ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡ ಕೇರಳಾಪುರದ ಸೌಂದರ್ಯ ಹೋಟೆಲ್‌ನಿಂದ ಪಾರ್ಸಲ್‌ ತರಿಸಿಕೊಳ್ಳುತ್ತಿರುತ್ತಾರೆಂದು ಮಾಲೀಕರು ಹೇಳುತ್ತಾರೆ.
ಗಿರಿರಾಜು ಅವರ ಸಂಪರ್ಕ: 9980811046.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT