ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಉಪವಾಸ- ಉಪಾಹಾರ

Last Updated 4 ಮಾರ್ಚ್ 2016, 19:30 IST
ಅಕ್ಷರ ಗಾತ್ರ

‘ಶಿವ’, ಎಂಬ ಪದಕ್ಕೆ, ಶುಭ, ಶ್ರೇಯಸ್ಸು, ಮಂಗಳ ಎಂದು ಅರ್ಥಗಳಿವೆ. ಮಾಘ ಮಾಸದ ಕ್ರಷ್ಣ ಪಕ್ಷದ ಚತುರ್ದಶಿಯಂದು ಆಚರಿಸುವ ಮಹಾಶಿವರಾತ್ರಿಯನ್ನು ವ್ರತಗಳ ರಾಜನೆಂದೂ ಕರೆಯುತ್ತಾರೆ. ಮಹಾಶಿವರಾತ್ರಿಯಂದು ಭಕ್ತರು, ಉಪವಾಸ ಇಲ್ಲವೆ ಲಘು ಉಪಹಾರ ಸೇವಿಸಿ, ಪೂಜೆ,-ಧ್ಯಾನಗಳಲ್ಲದೆ, ಜಾಗರಣೆಯನ್ನು ಮಾಡುತ್ತಾರೆ. ಶಿವರಾತ್ರಿಯಂದು ಸುಲಭವಾಗಿ ತಯಾರಿಸಬಲ್ಲ, ಕೆಲವೊಂದು ಉಪಹಾರಗಳನ್ನು ಮಾಡುವ ವಿಧಾನ ಇಲ್ಲಿದೆ.
*

ಕಡಲೇಕಾಳಿನ ಗುಗ್ಗರಿ

ಬೇಕಾಗುವ ಸಾಮಗ್ರಿ
ಕಡಲೇಕಾಳು 2ಕಪ್
ಕತ್ತರಿಸಿದ ಹಸಿಮೆಣಸಿನಕಾಯಿ  4-5
ಕತ್ತರಿಸಿದ ಸಿಹಿಗೆಣಸಿನ ಹೋಳುಗಳು 1/2 ಕಪ್
ಕತ್ತರಿಸಿದ ಕ್ಯಾರಟ್ ಹೋಳುಗಳು 1/4 ಕಪ್
ದಾಳಿಂಬೆ ಕಾಳುಗಳು 1/4 ಕಪ್
ಎಣ್ಣೆ- 3 ಟೀ ಚಮಚ
ಇಂಗು- 1/4 ಟಿ ಚಮಚ
ಜೀರಿಗೆ 1 ಟಿ ಚಮಚ
ಶುಂಠಿ ತುರಿ 1/2 ಟಿ ಚಮಚ
ತೆಂಗಿನಕಾಯಿ ತುರಿ 4 ಟೀ ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ಟೀ ಚಮಚ
ನಿಂಬೆರಸ  1/2 ಟಿ ಚಮಚ
ಉಪ್ಪು  -ರುಚಿಗೆ ತಕ್ಕಷ್ಟು

ವಿಧಾನ: ಕಡಲೇಕಾಳುಗಳನ್ನು ಅರ್ಧ ಘಂಟೆ ನೆನೆಸಿ ಬಸಿದು ಬೇಯಿಸಿಡಿ. ಕತ್ತರಿಸಿದ ಸಿಹಿಗೆಣಸಿನ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಜೀರಿಗೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ, ಹಸಿಮೆಣಸಿನಕಾಯಿ, ಬೇಯಿಸಿದ ಗೆಣಸಿನ ಹೋಳುಗಳು, ಕ್ಯಾರಟ್ ಹೋಳುಗಳನ್ನು ಹಾಕಿ ಬಾಡಿಸಿ, ಬೇಯಿಸಿದ ಕಡಲೇಕಾಳುಗಳನ್ನು ಸೇರಿಸಿ. ಈ ಮಿಶ್ರಣಕ್ಕೆ, ಉಪ್ಪು, ಶುಂಠಿತುರಿ ನಿಂಬೆರಸ ಹಾಕಿ ಕಲಕಿ. ಒಲೆಯಿಂದ ಕೆಳಗಿರಿಸಿ,  ತೆಂಗಿನಕಾಯಿ ತುರಿ, ದಾಳಿಂಬೆ ಕಾಳುಗಳು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಕಡಲೇಕಾಳಿನ ಗುಗ್ಗರಿ ಉಪಹಾರಕ್ಕೆ ರೆಡಿ.
*

ಕಡಲೆ ಬೀಜದ ಉಂಡೆ

ಬೇಕಾಗುವ ಸಾಮಗ್ರಿ
ಕಡಲೆಕಾಯಿಬೀಜ 2 ಕಪ್
ಖರ್ಜೂರದ ತುಂಡುಗಳು 1/2 ಕಪ್
ತುಪ್ಪ 1/2 ಕಪ್
ಹುರಿದ ಒಣ ಕೊಬ್ರಿತುರಿ 1 ಕಪ್
ಗಸಗಸೆ ಪುಡಿ 1 ಟೀ ಚಮಚ
ಏಲಕ್ಕಿ ಪುಡಿ 1 ಟೀ ಚಮಚ
ತುರಿದ ಬೆಲ್ಲ 1 ಕಪ್

ವಿಧಾನ: ಕಡಲೆಕಾಯಿ ಬೀಜವನ್ನು ಹುರಿದು, ಸಿಪ್ಪೆ ತೆಗೆದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ. ಖರ್ಜೂರವನ್ನು ತುಪ್ಪದಲ್ಲಿ ಹುರಿದಿರಿಸಿ. ಬಾಣಲೆಯಲ್ಲಿ ತುಪ್ಪ ಕಾಯಿಸಿ, ಬೆಲ್ಲ ಹಾಕಿ ಕರಗಿಸಿ. ಬೆಲ್ಲ ಕರಗಿದ ನಂತರ, ಕಡಲೆಕಾಯಿಬೀಜದ ಪುಡಿ, ಖರ್ಜೂರದ ತುಂಡುಗಳು, ಗಸಗಸೆ ಪುಡಿ, ಕೊಬ್ಬರಿತುರಿ, ಏಲಕ್ಕಿ ಪುಡಿ ಹಾಕಿ, ಚನ್ನಾಗಿ ಕಲಕಿ ಒಲೆಯಿಂದ ಕೆಳಗಿರಿಸಿ. ತಣಿದ ಮೆಲೆ ಬೇಕಾದ ಗಾತ್ರದಲ್ಲಿ, ಉಂಡೆ ಕಟ್ಟಿದರೆ, ಸವಿಯಾದ ಕಡಲೆಕಾಯಿ ಬೀಜದ ಉಂಡೆ ಸವಿಯಲು ಸಿದ್ಧ.
*
ಸಿಹಿಗೆಣಸಿನ ಪಾಯಸ

ಬೇಕಾಗುವ ಸಾಮಗ್ರಿ

ಸಿಹಿಗೆಣಸು  1/,    ಹಾಲು 3 ಕಪ್
ತೆಂಗಿನಕಾಯಿ ತುರಿ 1/2 ಕಪ್
ಲವಂಗ ಮತ್ತು ಏಲಕ್ಕಿ ಪುಡಿ  1/2 ಟೀ ಚಮಚ, ಸಕ್ಕರೆ 1 ಕಪ್
ಹಾಲಿನಲ್ಲಿ ಕರಗಿಸಿದ ಕೇಸರಿ ಬಣ್ಣ - 1/4 ಟೀ ಚಮಚ
ತುಪ್ಪದಲ್ಲಿ ಹುರಿದ ಗೋಡಂಬಿ 2 ಟೀ ಚಮಚ
ತುಪ್ಪದಲ್ಲಿ ಹುರಿದ ದ್ರಾಕ್ಷಿ 2 ಟೀ ಚಮಚ

ವಿಧಾನ: ಗೆಣಸನ್ನು ಕುಕ್ಕರಿನಲ್ಲಿ ಬೇಯಿಸಿ, ಸಿಪ್ಪೆ ತೆಗೆದು, ಮಸೆದಿಡಿ. ಮಸೆದಿರಿಸಿದ ಗೆಣಸಿಗೆ, ಸಕ್ಕರೆ, ಹಾಲು, ತೆಂಗಿನಕಾಯಿತುರಿ, ಏಲಕ್ಕಿಪುಡಿ, ಲವಂಗದ ಪುಡಿ ಹಾಕಿ ಕುದಿಸಿ. ಒಲೆಯಿಂದ ಕೆಳಗಿರಿಸಿ, ಕರಗಿಸಿದ ಕೇಸರಿ ಬಣ್ಣ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಗಳಿಂದ ಅಲಂಕರಿಸಿದರೆ ರುಚಿಯಾದ ಸಿಹಿಗೆಣಸಿನ ಪಾಯಸ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT