ಮಣ್ಣಿನ ಮಕ್ಕಳ ‘ಅರಣ್ಯ’ ರೋದನ

7
ಉತ್ತರ‌ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಒತ್ತಾಯ

ಮಣ್ಣಿನ ಮಕ್ಕಳ ‘ಅರಣ್ಯ’ ರೋದನ

Published:
Updated:
Prajavani

ಬೆಂಗಳೂರು: ತಲೆಮಾರುಗಳಿಂದ ಅರಣ್ಯ ಭೂಮಿಯಲ್ಲಿ ನೆಲೆ ನಿಂತವರಿವರು. ಹತ್ತಾರು ವರ್ಷಗಳಿಂದ ಭೂಮಿ ಹಕ್ಕಿಗಾಗಿ ನಿತ್ಯ ಪರದಾಡುವ ಇವರಿಗೆ ಪರಿಸರ ತಾಯಿಯೇ ಆಸರೆ. ‘ನಮ್ಮ ಭೂಮಿ ನಮಗೆ ಕೊಡಿ’ ಎನ್ನುವ ಕೂಗು ಅವರದ್ದು. 

ಅರಣ್ಯವಾಸಿಗಳ ಭೂಮಿ‌ ಹಕ್ಕಿಗೆ ಒತ್ತಾಯಿಸಿ ಉತ್ತರ‌ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಮೂಲಕ ನಗರದಲ್ಲಿ ಮಂಗಳವಾರ ವಿಧಾನಸೌಧ ಚಲೋ ಕುರಿತ ಸಭೆಯಲ್ಲಿ ಭಾಗವಹಿಸಿದವರ ಸ್ಥಿತಿ ಇದು.

‘ಬದುಕು ಕಟ್ಟಿಕೊಳ್ಳೊಕೆ ನೆಲೆ ನಿಲ್ಲಲ್ಲು ಇದ್ದಿದ್ದೆ ಮೂರು ಗುಂಟೆ ಭೂಮಿ. ಈಗ ಅದನ್ನು ತೆರವು ಮಾಡಿ ಬೇರೆ ಎಲ್ಲಾದರೂ ಹೋಗಿ ಅಂದರೆ ಹೇಗೆ? ಕೂಲಿ ಮಾಡಿ ಬದುಕು ಸಾಗಿಸುವ ಕುಟುಂಬಗಳು ಪುಟ್ಟ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು? ನಮಗೆ ನಮ್ಮ ಭೂಮಿ ಬೇಕು...’ ಎಂದು ಕುಮುಟಾದ ಸಾವಿತ್ರಿ ತಿಮ್ಮನಗೌಡ ಅಳಲು ತೋಡಿಕೊಂಡರು.

‘ಸರ್ಕಾರಿ ಭೂಮಿಯನ್ನು ರಿಯಲ್‌ ಎಸ್ಟೇಟ್‌ ಮಂದಿ ಕಬಳಿಸಿದರೂ ಕೇಳುವವರಿಲ್ಲ. ಆದರೆ, ನಾವೇನೂ ದೊಡ್ಡ ದೊಡ್ಡ ಮನೆ ಕಟ್ಟಿಕೊಂಡು ಅವರಂತೆ ವ್ಯಾಪಾರ ಮಾಡಲು ಅರಣ್ಯ ಭೂಮಿ ಬಳಸಿಕೊಂಡಿಲ್ಲ. ಮೂರು ತಲೆಮಾರುಗಳಿಂದ ತುತ್ತು ಅನ್ನಕ್ಕಾಗಿ, ದುಡಿಮೆಗಾಗಿ ಇಲ್ಲೆ ಇದ್ದೇವೆ. ನಮ್ಮ ಹಕ್ಕು ನಮಗೆ ಕೊಡಿ...’ ಎಂದು ಮರ್ಬಾದ ಅನಂತ ಪರಮೇಶ್ವರ ಆಗ್ರಹಿಸಿದರು.

‘ಅರಣ್ಯ ಹಕ್ಕು ಕಾಯ್ದೆಯಡಿ ಉತ್ತರ ಕನ್ನಡ ಜಿಲ್ಲೆಯ ಸುಮಾರು 11 ತಾಲೂಕಿನ ಜನರು ಸಲ್ಲಿಸಿರುವ 87,625 ಅರ್ಜಿಗಳ ಪೈಕಿ 65,220 ಅರ್ಜಿಗಳು ತಿರಸ್ಕೃತಗೊಂಡಿವೆ. ಗ್ರಾಮೀಣ ಭಾಗದ ಅರಣ್ಯ ಭೂಮಿ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಸಲ್ಲಿಸಿದ ಅರ್ಜಿಗಳಿವು. ಸುಮಾರು 1 ಲಕ್ಷ ಕುಟುಂಬ ಈ ಭೂಮಿಯನ್ನೇ ಅವಲಂಬಿಸಿವೆ. ಅರ್ಜಿ ತಿರಸ್ಕಾರದ ಬಗ್ಗೆ ಕಾರವಾರದ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರೆ ಉತ್ತರವಿಲ್ಲ. ಅಕ್ರಮ ಚಟುವಟಿಕೆ ನಡೆಸುತ್ತಿದ್ದೀರಿ ಎಂದು ನೋಟಿಸ್‌ ನೀಡದೇ ಜಾಗ ಖಾಲಿ ಮಾಡಬೇಕೆಂದು ಆದೇಶ ಹೊರಡಿಸಿದ್ದಾರೆ. ನಮ್ಮ ಅಳಲನ್ನು ಕೇಳುವ ಪುರಸೊತ್ತು ಸಹ ಯಾವ ಅಧಿಕಾರಿ, ರಾಜಕಾರಣಿಗಳಿಗೆ ಇಲ್ಲ’ ಎಂದು ಮುಂಡಗೋಡದ ಪಾಂಡುರಂಗ ದೂರಿದರು. 

ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ, ‘ತಿರಸ್ಕಾರಗೊಂಡ ಅರ್ಜಿಗಳ ಮರು ಪರಿಶೀಲಿಸಿ ಅರಣ್ಯವಾಸಿಗಳಿಗೆ ಹಕ್ಕುನ್ನು ಒದಗಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ  ಹಕ್ಕು ಪಡೆಯಲು ವಿಫಲಗೊಂಡವರಿಗೆ ಬದಲೀ ವ್ಯವಸ್ಥೆ ರೂಪಿಸಬೇಕು.... ಇತ್ಯಾದಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುತ್ತೇವೆ. ನಾವು ಅರಣ್ಯ ಅತಿಕ್ರಮಣದಾರರಲ್ಲ, ಅರಣ್ಯ ವಾಸಿಗಳು. ಹಕ್ಕುಪತ್ರ ದೊರೆಯುವ ತನಕ ನಾವ್ಯಾರು ನಿದ್ದೆ ಮಾಡಲ್ಲ. ಎಂಥದ್ದೇ ಕಠಿಣ ಪರಿಸ್ಥಿತಿ ಬಂದರೂ ಎದೆಗೊಟ್ಟು ನಿಲ್ಲುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !