ನಳಂದ ವಿ.ವಿ ಭೂಮಿ ಪೂಜೆ ನಾಳೆ

7
ಸರ್ಕಾರದಿಂದ 25 ಎಕರೆ ಭೂಮಿ ಮತ್ತು ₹10 ಕೋಟಿ ಅನುದಾನ

ನಳಂದ ವಿ.ವಿ ಭೂಮಿ ಪೂಜೆ ನಾಳೆ

Published:
Updated:

ಚಾಮರಾಜನಗರ: ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಳಂದ ವಿಶ್ವವಿದ್ಯಾಲಯ ಹಾಗೂ ಬೌದ್ಧ ವಿಹಾರ ಕೇಂದ್ರದ ಶಂಕುಸ್ಥಾಪನೆ ಶನಿವಾರ ನಡೆಯಲಿದೆ. ಕಾಂಗ್ರೆಸ್‌ ಮುಖಂಡ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

‘ಜಾತಿ ರಹಿತ ಸಮಾಜ ನಿರ್ಮಾಣದ ಉದ್ದೇಶದಿಂದ ಇಂಟರ್‌ನ್ಯಾಷನಲ್‌ ಬುದ್ಧಿಸ್ಟ್‌ ಮಾಂಕ್ಸ್‌ ಚಾರಿಟಬಲ್‌ ಟ್ರಸ್ಟ್‌ನಿಂದ ವಿಶ್ವವಿದ್ಯಾಲಯ, ನಳಂದ ಬೌದ್ಧ ವಿಹಾರ, ಅಂಬೇಡ್ಕರ್‌ ಸಂಶೋಧನೆ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ’ ಎಂದು ಟ್ರಸ್ಟ್‌ ಹಾಗೂ ಅಧ್ಯಯನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬೋಧಿದತ್ತ ಬಂತೇಜಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ನಗರ ಹೊರ ವಲಯದ ಉತ್ತುವಳ್ಳಿ ಸಮೀಪದ ಯಡಬೆಟ್ಟದ ಬಳಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಿಂಭಾಗ ವಿಶ್ವವಿದ್ಯಾನಲಯ ಕಟ್ಟಡ ನಿರ್ಮಾಣವಾಗಲಿದೆ. ಇದೊಂದು ಅಂತರರಾಷ್ಟ್ರೀಯ ಮಟ್ಟದ ಬೌದ್ಧ ವಿಹಾರ ಕೇಂದ್ರ. ಹಿಂದೆ ಇದ್ದಂತಹ ನಳಂದ ವಿಶ್ವವಿದ್ಯಾನಿಲಯದ ಮಾದರಿಯಲ್ಲೇ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ನಿರ್ಮಿಸಲಾಗುತ್ತದೆ.  ರಾಜ್ಯ ಸರ್ಕಾರ ಈಗಾಗಲೇ ಅಗತ್ಯ ಜಾಗ ಹಾಗೂ ₹10 ಕೋಟಿ ಹಣ ನೀದೆ’ ಎಂದು ತಿಳಿಸಿದರು.

ಮುಕ್ತ ಅವಕಾಶ: ‘ಶಾಂತಿ, ಮೈತ್ರಿ, ಕರುಣೆ, ಜಾತಿ ರಹಿತ ಸಮಾಜ ನಿರ್ಮಾಣ ಈ ಎಲ್ಲವುದರ ಬಗ್ಗೆ ತಿಳಿಸಲು ಬೌದ್ಧ ವಿಹಾರ ಸದಾ ತೆರೆದಿರುತ್ತದೆ. ಅಸಮಾನತೆ ದೂರ ಮಾಡುವ ಉದ್ದೇಶದಿಂದ ಯಾರು ಬೇಕಾದರೂ ಇಲ್ಲಿಗೆ ಬರಬಹುದು. 24 ಗಂಟೆ ತೆರೆದಿರುತ್ತದೆ. ಮುಕ್ತ ಅವಕಾಶ ಇರುತ್ತದೆ. ಅಡೆತಡೆ ಇಲ್ಲದೆ ನಿರಂತರ ಜ್ಞಾನ ಸಿಗಲಿದೆ. ಮುಂದಿನ ದಿನಗಳಲ್ಲಿ ದಾಸೋಹ ವ್ಯವಸ್ಥೆ ಕೂಡ ಮಾಡಲಾಗುವುದು’ ಎಂದು ವಿವರಿಸಿದರು.

ಕಾರ್ಯಕ್ರಮ: ಶನಿವಾರದ ಕಾರ್ಯಕ್ರಮದ ನೇತೃತ್ವವನ್ನು ಭಂತೆ ಆನಂದ ಮಹಾಥೇರ, ಭಂತೆ ಧಮ್ಮಾನಂದ ಥೇರ, ಭಂತೆ ಮನೋರಖ್ಖಿತ ಥೇರ  ಅವರು ವಹಿಸಲಿದ್ದಾರೆ. 

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕಾರ್ಯಕ್ರಮ ಉದ್ಘಾಟಿಸುವರು. ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸುವರು. ಹಿಂದುಳಿದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್  ಖರ್ಗೆ ಧಮ್ಮ ಧ್ವನಿಸುರಳಿ ಬಿಡುಗಡೆಗೊಳಿಸುವರು. ಸಂಸದ ಆರ್.ಧ್ರುವನಾರಾಯಣ ಧಮ್ಮ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಮಧ್ಯಾಹ್ನ 3ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜು, ಶಿವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್, ಮುಖಂಡ ಎಸ್‌.ನಂಜುಂಡಸ್ವಾಮಿ, ವಕೀಲ ಪುಟ್ಟಸ್ವಾಮಿ ಇದ್ದರು. 

ಮಕ್ಕಳಿಗೆ ಉಚಿತ ಶಿಕ್ಷಣ
‘ಮುಂದಿನ ದಿನಗಳಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯೋಚನೆ ಇದೆ’ ಎಂದು ಬೋದಿದತ್ತ ಬಂತೇಜಿ ಹೇಳಿದರು.

5 ಎಕರೆ ಪ್ರದೇಶ ‘ಸಾಮಾಜಿಕ ಪರಿವರ್ತನೆ’ಗೆ ಮೀಸಲು: ‘ರಾಜ್ಯ ಸರ್ಕಾರ ಈಗಾಗಲೇ ಅಗತ್ಯ 25 ಎಕರೆ ಜಾಗವನ್ನು ಕೇಂದ್ರ ಸ್ಥಾಪನೆಗೆ ನೀಡಿದೆ. ಇದರಲ್ಲಿ 5 ಎಕರೆ ಜಾಗವನ್ನು ಸಾಮಾಜಿಕ ಪರಿವರ್ತನೆಗಾಗಿ ಮೀಸಲಿಡಲಾಗುವುದು. ಈ ಜಾಗದಲ್ಲಿ ಬೌದ್ಧ ಸಾಹಿತ್ಯ ಮಿಷನ್‌, ಸಂಶೋಧನಾ ಕೇಂದ್ರಗಳು ಬರಲಿವೆ’ ಎಂದು ಅವರು ತಿಳಿಸಿದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !