ಸರ್ಕಾರಿ ಜಾಗ ಬಹಿರ್ದೆಸೆಯ ತಾಣ!

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರೇಷ್ಮೆ ವಿಸ್ತರಣಾಧಿಕಾರಿ ಕಚೇರಿ, ತಾಂತ್ರಿಕ ಸೇವಾ ಕೇಂದ್ರದ 2 ಹಳೆಯ ಕಟ್ಟಡಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.
1 ಎಕರೆ 20 ಗುಂಟೆ ಪ್ರದೇಶದಲ್ಲಿ ಹರಡಿರುವ ಕಟ್ಟಡದ ಸುತ್ತಲೂ ಅನೈರ್ಮಲ್ಯ ತಾಂಡವವಾಡುತ್ತಿದೆ. ಸಮರ್ಪಕ ಸುತ್ತುಗೋಡೆ ಇಲ್ಲ. ಕಬ್ಬಿಣದ ಗೇಟ್ ಮುರಿದಿದೆ. ಇದರಿಂದ ಕಟ್ಟಡದ ಪರಿಸರವು ಬಯಲು ಬಹಿರ್ದೆಸೆ ಹಾಗೂ ಕುಡುಕರ ತಾಣವಾಗಿ ಮಾರ್ಪಟ್ಟಿದೆ.
ರೇಷ್ಮೆ ಇಲಾಖೆಯ ಏಳು ಮಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರದನಹಳ್ಳಿ ಹೋಬಳಿ ವ್ಯಾಪ್ತಿಗೆ ಸೇರಿದ ಗ್ರಾಮಗಳ ರೈತರು ರೇಷ್ಮೆ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳಿಗೆ ಸಹಿ ಮಾಡಿಸಲು ಈ ಕಚೇರಿಗೆ ಬರುತ್ತಾರೆ.
ರೈತರು ಕಚೇರಿಗೆ ಪ್ರತಿನಿತ್ಯ ಬಂದು ಹೋಗುತ್ತಾರೆ. ಅಧಿಕಾರಿಗಳೂ ಬರುತ್ತಾರೆ. ಆದರೆ, ರೇಷ್ಮೆ ಇಲಾಖೆಯಾಗಲಿ, ಗ್ರಾಮ ಪಂಚಾಯಿತಿಯಾಗಲಿ ಸ್ವಚ್ಛತೆಗೆ ಕ್ರಮವಹಿಸಿಲ್ಲ ಎನ್ನುವುದು ರೈತರ ಆರೋಪ.
ಇಲ್ಲಿ ಕರ್ತವ್ಯ ನಿರ್ವಹಿಸುವ ನಾಲ್ವರು ಮಹಿಳಾ ಸಿಬ್ಬಂದಿಯು ಕಚೇರಿ ಸ್ವಚ್ಛಗೊಳಿಸಿ, ಸಮೀಪದ ತೊಂಬೆಯಿಂದ ಕುಡಿಯುವ ನೀರು ತಂದಿಡುತ್ತಾರೆ. ಹೊರಗಡೆ ಮಲ, ಮೂತ್ರ ಹಾಗೂ ಮದ್ಯದ ಪ್ಯಾಕೆಟ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದರಿಂದ ಅಲ್ಲಿ ಸ್ವಚ್ಛಗೊಳಿಸಲು ಹಿಂದೇಟು ಹಾಕುತ್ತಾರೆ.
ಇಲಾಖೆಯವರು ಅಥವಾ ಗ್ರಾಮ ಪಂಚಾಯಿತಿಯವರು ಜಾಗವನ್ನು ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸುತ್ತಾರೆ. ಆದರೂ ಕಚೇರಿಯ ಆವರಣಕ್ಕೆ ಅನವಶ್ಯಕವಾಗಿ ಪ್ರವೇಶಿಸುವವರನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದು ಅಲ್ಲಿನ ಸಿಬ್ಬಂದಿಯೊಬ್ಬರ ಮಾತು.
15 ವರ್ಷಗಳ ಹಿಂದೆ ಈ ಜಾಗದಲ್ಲಿ ರೇಷ್ಮೆ ಕಾರ್ಖಾನೆ ಇತ್ತು. ಇಲ್ಲಿ ಬಾವಿಯೂ ಇತ್ತು. ರೇಷ್ಮೆ ಕುರಿತ ಪ್ರಾತ್ಯಕ್ಷಿಕೆಗಳು ನಡೆಯುತ್ತಿದ್ದವು. ಈಗ ಪಾಳುಬಿದ್ದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಜಾಗ ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ವೆಂಕಟಯ್ಯನಛತ್ರ ರೈತ ಮಲ್ಲಿಕಾರ್ಜುನಸ್ವಾಮಿ ಆಗ್ರಹಿಸಿದರು.
ಜಾಗ ಸ್ವಚ್ಛಗೊಳಿಸುವಂತೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಮತ್ತು ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಈವರೆಗೂ ಸ್ವಚ್ಛತೆಗೆ ಮುಂದಾಗಿಲ್ಲ. ಈ ಕಚೇರಿ ಸುತ್ತಲೂ ಕಾಂಪೌಂಡ್ ನಿರ್ಮಿಸಿದರೆ ಪುಂಡರ ಹಾವಳಿಗೆ ಕಡಿವಾಣ ಹಾಕಬಹುದು ಎಂದು ಸಿಬ್ಬಂದಿಯೊಬ್ಬರು ಹೇಳಿದರು.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಕುಡುಕರ ತಾಣ
ಕಟ್ಟಡ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಕುಡುಕರ ತಾಣವಾಗಿ ಬದಲಾಗಿದೆ. 15 ವರ್ಷಗಳಷ್ಟು ಹಳೆಯದಾದ ಕಟ್ಟಡವು ಸುಣ್ಣಬಣ್ಣ ಇಲ್ಲದೆ ಪಾಳು ಬಿದ್ದಂತೆ ಕಾಣುತ್ತಿದೆ. ಕಾಂಪೌಂಡ್ ಕೂಡ ಇಲ್ಲ. ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಹಾಗಾಗಿ ಸಂಜೆ ಹೊತ್ತು ಕುಡುಕರು ಮದ್ಯದ ಪ್ಯಾಕೆಟ್ ಹಾಗೂ ಬಾಟಲಿಗಳನ್ನು ಇಲ್ಲಿಗೆ ತಂದು ಮದ್ಯ ಸೇವನೆ ಮಾಡುತ್ತಾರೆ. ಇದರಿಂದಾಗಿ ರಸ್ತೆಯಲ್ಲಿ ತಿರುಗಾಡುವ ಜನರಿಗೂ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರು ದೂರಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.