ಅಪಾಯಕ್ಕೆ ಆಹ್ವಾನಿಸುತ್ತಿವೆ ಮರಗಳು

ಸೋಮವಾರ, ಮೇ 27, 2019
33 °C
ಮೈಸೂರು–ಊಟಿ ಹೆದ್ದಾರಿಯಲ್ಲಿವೆ ಟೊಳ್ಳು ಬಿದ್ದ ವೃಕ್ಷಗಳು, ಗಾಳಿ ಮಳೆಗೆ ಬೀಳುವ ಆತಂಕ

ಅಪಾಯಕ್ಕೆ ಆಹ್ವಾನಿಸುತ್ತಿವೆ ಮರಗಳು

Published:
Updated:
Prajavani

ಗುಂಡ್ಲುಪೇಟೆ: ಎರಡು ವಾರಗಳಿಂದ ಬಿರುಗಾಳಿ ಸಮೇತ ಮಳೆಯಾಗುತ್ತಿರು‌ವುದರಿಂದ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಇರುವ ಆಲದ ಮರಗಳು ಧರೆಗುರುಳುತ್ತಿವೆ.

ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಎರಡು ಬದಿಗಳಲ್ಲೂ ಇರುವ ಆಲದ ಮರಗಳ ಪೈಕಿ ಕೆಲವು ಮರಗಳು ಒಣಗಿವೆ. ಇನ್ನೂ ಕೆಲವುಗಳ ಕಾಂಡ ಟೊಳ್ಳಾಗಿದೆ. ಇವು ಗಾಳಿಗೆ ಧರೆಗೆ ಉರುಳುವ ಸಾಧ್ಯತೆ ಇದ್ದು, ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಅಪಾಯವನ್ನು ತಂದೊಡ್ಡಲಿವೆ.

ಮೂರು ದಿನಗಳ ಹಿಂದೆ ದೊಡ್ಡ ಆಲದ ಮರವೊಂದು ಬಿದ್ದು ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

ಕಿಡಿಗೇಡಿಗಳ ಕೃತ್ಯ: ಬೇಸಿಗೆಯಲ್ಲಿ ಕೆಲವು ಕಿಡಿಗೇಡಿಗಳು ಹೆದ್ದಾರಿಯಲ್ಲಿರುವ ಕೆಲವು ಆಲದ ಮರಗಳ ಬುಡಕ್ಕೆ ಬೆಂಕಿ ಹಾಕಿದ್ದರು. ಇದರಿಂದಾಗಿ ಐದಾರು ಮರಗಳ ಕಾಂಡಗಳು ದುರ್ಬಲಗೊಂಡಿವೆ. ಯಾವ ಕ್ಷಣದಲ್ಲಾದರೂ ಅವು ಬೀಳಬಹುದು. ತಕ್ಷಣವೇ ಅವುಗಳನ್ನು ತೆರವುಗೊಳಿಸಬೇಕು ಎಂಬುದು ವಾಹನ ಸವಾರರ ಒತ್ತಾಯ.

ಮೈಸೂರು - ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರಿಕಾಟಿಯಿಂದ ಗಡಿಭಾಗದ ಮೇಲುಕಾಮನಹಳ್ಳಿ ಗ್ರಾಮದವರೆಗೆ ನೂರಾರು ಆಲದ ಮರಗಳಿವೆ. ಕೆಲ ಮರಗಳು ಬೇರು ಮತ್ತು ಬುಡ ಸಡಿಲಗೊಂಡು ಬೀಳುತ್ತಿದ್ದರೆ, ಇನ್ನೂ ಕೆಲವು ಮಾನವನ ವಿಕೃತ ಕಾರ್ಯದಿಂದ ನಾಶವಾಗುತ್ತಾ ಬರುತ್ತಿವೆ.

‘ಐದು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸುವಾಗ ಮಾಡುವಾಗ ರಸ್ತೆಯ ಬದಿಯಲ್ಲಿ ಇದ್ದ ಮರಗಳನ್ನು ಕಡಿಯಲಾಯಿತು. ಇಂತಹ ಮರಗಳನ್ನು ಮತ್ತೆ ಬೆಳೆಸುವುದಕ್ಕೆ ಆಗುವುದಿಲ್ಲ. ಇರುವ ಮರಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಕೆಲ ವರ್ಷಗಳ ಹಿಂದೆ ತಾಲ್ಲೂಕನ್ನು ಪ್ರವೇಶಿಸುತ್ತಿದ್ದಂತೆಯೇ ತಂಪಾದ ವಾತಾವರಣದ ಅನುಭವವಾಗುತ್ತಿತ್ತು ಈಗ ಅಭಿವೃದ್ಧಿ ಇನ್ನಿತರ ಕಾರಣಗಳಿಂದ ಮರಗಳು ನಾಶವಾಗುತ್ತಲೇ ಇದೆ’ ಎಂದು ಪರಿಸರ ಪ್ರೇಮಿ ಶಿವ ಅವರು ಆತಂಕ ವ್ಯಕ್ತಪ‍ಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !