ಭಾನುವಾರ, ಡಿಸೆಂಬರ್ 8, 2019
25 °C

ಭಾರತ ಮೂಲದ ಗೀತಾ ಗೋಪಿನಾಥ್‌ ಐಎಂಎಫ್‌ನ ನೂತನ ಮುಖ್ಯ ಆರ್ಥಿಕ ತಜ್ಞೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಭಾರತ ಮೂಲದ ಗೀತಾ ಗೋಪಿನಾಥ್ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞೆಯನ್ನಾಗಿ ನೇಮಕ ಮಾಡಲಾಗಿದೆ.

ಸದ್ಯ ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞರಾಗಿರುವ ಮೌರಿ ಆಬ್‌ಸ್ಟ್‌ಫೆಲ್ಡ್ ಡಿಸೆಂಬರ್‌ನಲ್ಲಿ ನಿವೃತ್ತರಾಗಲಿದ್ದು, ನಂತರ ಗೋಪಿನಾಥ್ ಹುದ್ದೆ ಅಲಂಕರಿಸಲಿದ್ದಾರೆ. ಗೀತಾ ಗೋಪಿನಾಥ್ ಅವರು ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದು, ಅಂತರರಾಷ್ಟ್ರೀಯ ಹಣಕಾಸು ಮತ್ತು ಸ್ಥೂಲ ಅರ್ಥಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿದ್ದಾರೆ.

ಐಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿನ್ ಲಾಗರ್ಡ್ ಅವರು ಗೀತಾ ಗೋಪಿನಾಥ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ‘ಗೀತಾ ಗೋಪಿನಾಥ್ ಅವರು ಅತ್ಯುತ್ತಮ ಅರ್ಥಶಾಸ್ತ್ರಜ್ಞೆಯಾಗಿದ್ದು, ನಿಷ್ಕಳಂಕ ಶೈಕ್ಷಣಿಕ ರುಜುವಾತುಗಳನ್ನು ಹೊಂದಿದ್ದಾರೆ. ಅಂತರರಾಷ್ಟ್ರೀಯ ವಿಚಾರಗಳಲ್ಲಿ ವ್ಯಾಪಕ ಅನುಭವ ಹೊಂದಿದ್ದು, ಅತ್ಯುತ್ತಮ ನಾಯಕತ್ವ ಸಾಮರ್ಥ್ಯ ಹೊಂದಿರುವುದನ್ನು ಸಾಬೀತುಪಡಿಸಿದ್ದಾರೆ. ಅಂತಹ ಪ್ರತಿಭಾನ್ವಿತರನ್ನು ಐಎಂಎಫ್‌ನ ಮುಖ್ಯ ಅರ್ಥಿಕ ತಜ್ಞೆಯನ್ನಾಗಿ ನೇಮಕ ಮಾಡುತ್ತಿರುವುದಕ್ಕೆ ಹರ್ಷವಿದೆ’ ಎಂದು ಕ್ರಿಸ್ಟಿನ್ ಹೇಳಿದ್ದಾರೆ.

ಭಾರತದಲ್ಲಿ ಜನಿಸಿದ ಗೋಪಿನಾಥ್ ಅವರು ಸದ್ಯ ಅಮೆರಿಕದ ಪೌರತ್ವ ಹೊಂದಿದ್ದಾರೆ. ದೆಹಲಿಯ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದ ಅವರು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಿಂದ 2001ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ದೆಹಲಿ ಸ್ಕೂಲ್ ಆಫ್ ಎಕಾನಮಿಕ್ಸ್‌ ಮತ್ತು ವಾಷಿಂಗ್ಟನ್‌ನ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿದ್ದಾರೆ.

ಜಿ20 ರಾಷ್ಟ್ರಗಳ ‘ಶ್ರೇಷ್ಠ ವ್ಯಕ್ತಿಗಳ ಸಲಹಾ ತಂಡ’ದ ಸದಸ್ಯರಾಗಿದ್ದುಕೊಂಡು ಭಾರತದ ಹಣಕಾಸು ಇಲಾಖೆ ಪರ ಸೇವೆ ಸಲ್ಲಿಸಿದ್ದರು. ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರುವುದಕ್ಕೂ ಮುನ್ನ ಷಿಕಾಗೊ ವಿಶ್ವವಿದ್ಯಾಲಯದ ಗ್ರಾಜ್ಯುಯೇಟ್‌ ಸ್ಕೂಲ್ ಆಫ್‌ ಬ್ಯುಸಿನೆಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು