ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021-2022ರಿಂದ ಜಾಗತಿಕ ದಡಾರ ಸಾವು ಶೇ 43ರಷ್ಟು ಹೆಚ್ಚಳ: WHO

ಜಾಗತಿಕವಾಗಿ ದಡಾರ ಸಾವಿನ ಸಂಖ್ಯೆ ಪ್ರತಿಶತ 43ರಷ್ಟು ಹೆಚ್ಚಾಗಿದೆ-ವಿಶ್ವ ಆರೋಗ್ಯ ಸಂಸ್ಥೆ ವರದಿ
Published 20 ನವೆಂಬರ್ 2023, 10:33 IST
Last Updated 20 ನವೆಂಬರ್ 2023, 10:33 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಮೆರಿಕದ ರೋಗ ನಿಯಂತ್ರಣ ಮತ್ತು ಮುಂಜಾಗ್ರತಾ ಕೇಂದ್ರ (CDC)ದ ಹೊಸ ವರದಿಯ ಪ್ರಕಾರ, 2021-2022ರಿಂದ ಜಾಗತಿಕವಾಗಿ ದಡಾರ ಸಾವಿನ ಸಂಖ್ಯೆ ಪ್ರತಿಶತ 43ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

2021ರಲ್ಲಿ 22 ದೇಶಗಳ ಜನರು, 2022ರಲ್ಲಿ 37 ದೇಶಗಳ ಜನರು ದಡಾರ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ಹೇಳಿದೆ. ಅವುಗಳಲ್ಲಿ ಯುರೋಪಿನ ಒಂದು ದೇಶ, ಆಫ್ರಿಕಾದ 28 ದೇಶಗಳ ಜನರು, ಮೆಡಿಟರೇನಿಯನ್‌ನಲ್ಲಿ 6, ಆಗ್ನೇಯ ಏಷ್ಯಾದಲ್ಲಿ 2 ದೇಶಗಳು ‌ಸೇರಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

'ಕಳೆದ ಕೆಲ ವರ್ಷಗಳಿಂದ ದಡಾರ ಸೋಂಕಿಗೆ ನೀಡಲಾಗುತ್ತಿರುವ ಲಸಿಕೆಯ ದರ ಇಳಿಮುಖವಾಗಿದೆ. ಹೀಗಿದ್ದರೂ ದಡಾರ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಏರುಮುಖವಾಗಿರುವುದು ದಿಗ್ಭ್ರಮೆ ಮೂಡಿಸುವಂತಿದೆ' ಎಂದು ಸಿಡಿಸಿ ವಿಭಾಗದ ನಿರ್ದೇಶಕ ಜಾನ್ ವರ್ಟೆಫ್ಯೂಲ್ ಹೇಳಿದ್ದಾರೆ.

'ದಡಾರ ಸೋಂಕು ಲಸಿಕೆ ಪಡೆಯದ ಜನರಿಗೆ ಹೆಚ್ಚು ಅಪಾಯವನ್ನುಂಟುಮಾಡುತ್ತವೆ. ರೋಗ ಮತ್ತು ಸಾವಿನ ಪ್ರಮಾಣ ತಡೆಗಟ್ಟಲು ತುರ್ತು ಹಾಗೂ ಉದ್ದೇಶಿತ ಪ್ರಯತ್ನಗಳು ನಿರ್ಣಾಯಕವಾಗಿವೆ' ಎಂದು ವರ್ಟೆಫ್ಯೂಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಡಾರ ಲಕ್ಷಣಗಳು:

  • ತೀವ್ರ ನಿರ್ಜಲೀಕರಣ.

  • ಗಂಭೀರ ಉಸಿರಾಟದ ತೊಂದರೆ.

  • ನ್ಯುಮೋನಿಯಾದಂತಹ ಸಮಸ್ಯೆ.

ಹೇಗೆ ಹರಡುತ್ತದೆ?:

  • ದಡಾರ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ರೋಗ.

  • ಸೋಂಕಿತ ವ್ಯಕ್ತಿ ಉಸಿರಾಡಿದಾಗ, ಕೆಮ್ಮಿದಾಗ ಅಥವಾ ಸೀನಿದಾಗ ಇದು ಸುಲಭವಾಗಿ ಹರಡುತ್ತದೆ.

  • ಇದು ಗಂಭೀರ ಕಾಯಿಲೆಯಾಗಿದ್ದು, ಸಾವಿಗೆ ಕಾರಣವಾಗಬಹುದು.

ಸೋಂಕು ತಡೆಗಟ್ಟುವಿಕೆ ಹೇಗೆ?:

ಎರಡು ಡೋಸ್ ಲಸಿಕೆಯಿಂದ ದಡಾರವನ್ನು ತಡೆಗಟ್ಟಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2021 ರಿಂದ 2022ರಲ್ಲಿ ಜಾಗತಿಕ ವ್ಯಾಕ್ಸಿನೇಷನ್ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಇನ್ನೂ 33 ಮಿಲಿಯನ್ ಮಕ್ಕಳು ದಡಾರ ಲಸಿಕೆಯನ್ನು ಪಡೆದಿಲ್ಲ. ಸುಮಾರು 2.2 ಕೋಟಿ ಜನರು ಮೊದಲ ಡೋಸ್ ಕೂಡ ಪಡೆದಿಲ್ಲ. ಉಳಿದ 1.1 ಕೋಟಿ ಜನರು 2ನೇ ಡೋಸ್ ಲಸಿಕೆಯನ್ನು ಪಡೆದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕಡಿಮೆ ಆದಾಯದ ದೇಶಗಳಲ್ಲಿ ದಡಾರ ಸಾವಿನ ಅಪಾಯ ಹೆಚ್ಚಿದೆ. 2022ರಲ್ಲಿ ಮೊದಲ ಡೋಸ್ ಲಸಿಕೆ ಪಡೆಯದ 2.2 ಕೋಟಿ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು 10 ದೇಶ (ಅಂಗೋಲಾ, ಬ್ರೆಜಿಲ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಮಡಗಾಸ್ಕರ್, ನೈಜೀರಿಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್)ಗಳಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT