ಶುಕ್ರವಾರ, ಡಿಸೆಂಬರ್ 6, 2019
21 °C

ದೇಹ ಕಡೆದು ಮುಪ್ಪು ಕಳಚಿದ 73ರ ಮರಿಯಾ

Published:
Updated:

ನಾಲ್ಕು ವರ್ಷಗಳ ಕಾಲ ಸತತವಾಗಿ ಬೆವರು ಹರಿಸಿ, ದೇಹ ಹುರಿಗಟ್ಟಿಸಿದ 73 ವರ್ಷದ ‘ಚೆಲುವೆ’ಯೊಬ್ಬರು ಅಮೆರಿಕದ ‘ಬಿಕಿನಿ ಬಾಡಿ’ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ! 

ಕಳೆದ ವಾರದ ಅಮೆರಿಕದ ಮಾಧ್ಯಮಗಳಲ್ಲಿ ಮರಿಯಾ ಕ್ರಿಸ್ಟಿನಾ ಅವರದ್ದೇ ಮಾತು. ನೆವಡಾದ ರೆನೊ ಪಟ್ಟಣದ ಜಿಮ್‌ ಒಂದರಲ್ಲಿ ದೇಹ ಕಡೆಯಲು ಆರಂಭಿಸಿದಾಗ ಮರಿಯಾ ಅವರಿಗೆ 69ರ ಹರೆಯ!. ಚರ್ಮ ಅದಾಗಲೇ ಸುಕ್ಕುಗಟ್ಟಿತ್ತು. ಈ ವಯಸ್ಸಿನಲ್ಲಿ ಅವರು ಸ್ನಾಯುಗಳನ್ನು ಹುರಿಗಟ್ಟಿಸುವುದು ಸಾಧ್ಯವೇ?. ಅಸಾಧ್ಯವೆಂದೇ ಎಲ್ಲರೂ ಅವರನ್ನು ಹಂಗಿಸಿದ್ದರು. ಆದರೆ ಅವರು ಅದನ್ನೇ ಸವಾಲಾಗಿ ತೆಗೆದುಕೊಂಡು ಎಲ್ಲರೂ ಆಶ್ಚರ್ಯಪಡುವಂತೆ ಗುರಿಯನ್ನು ಸಾಧಿಸಿಯೇ ಬಿಟ್ಟರು. 

ಮನೆಯವರು ಮತ್ತು ಸ್ನೇಹಿತರು ಕೂಡ ಇವರ ದೇಹ ಸಿರಿ ನೋಡಿ ಬೆರಗಾದರು. ಅರ್ಧದಷ್ಟು ವಯಸ್ಸಿನವರಂತೆ ಅಂದರೆ 30– 40ರ ವಯೋಮಾನದವಂತೆ ಮರಿಯಾ ಕಂಡಿದ್ದು ‌ಎಲ್ಲರನ್ನು ಚಕಿತಗೊಳಿಸಿತ್ತು. 

ನೆವಡಾ ಮತ್ತು ಕ್ಯಾಲಿಫೋರ್ನಿಯಾದ ಹಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿದ ಮರಿಯಾ ಅವರಿಗೆ ಫಿಟ್‌ ಆಗಿ ಇರಬೇಕೆಂಬ ಆಲೋಚನೆ ಮೊಳೆದದ್ದೇ ನಿವೃತ್ತಿ ನಂತರ. ದಿನವೂ ಒಂದೆರಡು ತಾಸು ಸರಳ ವ್ಯಾಯಾಮ ಮಾಡುತ್ತಿದ್ದ‌ರು. ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಚಾಂಪಿಯನ್‌ ಆಗಬೇಕೆಂಬ ಕನಸು ಕಂಡರು.

ವ್ಯಾಯಾಮಾಭ್ಯಾಸ ಆರಂಭಿಸಿದಾಗ ಅವರ ದೇಹ ಅದಾಗಲೇ ದಣಿದಿತ್ತು. ಆಗಾಗ ಕೈಕೊಡುತ್ತಿತ್ತು. 60ರ ವಯಸ್ಸಿನವರಿಗೆ ಬರುವ ವಯೋಸಹಜ ಬಾಧೆಗಳಾದ ಬೆನ್ನುನೋವು, ಮಂಡಿ ನೋವು ಕಾಡುತ್ತಿದ್ದವು. ಖಿನ್ನತೆಗೊಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾದದ್ದೂ ಇತ್ತು. 69ನೇ ವಯಸ್ಸಿನಲ್ಲಿ ವೈಯಕ್ತಿಕ ಫಿಟ್‌ನೆಸ್‌ ತರಬೇತುದಾರರನ್ನು ಗೊತ್ತುಮಾಡಿಕೊಂಡ ಮರಿಯಾ, ಅವರ ಮಾರ್ಗದರ್ಶನದಲ್ಲಿಯೇ ವ್ಯಾಯಾಮಾಭ್ಯಾಸವನ್ನು ನಿಯಮಿತವಾಗಿ ಮಾಡಲು ಆರಂಭಿಸಿದರು. 

ನೋವು ಮತ್ತು ಖಿನ್ನತೆಯನ್ನು ಕೊನೆಗಾಣಿಸಲು ಪಣ ತೊಟ್ಟ ಮರಿಯಾ, 2017ರಲ್ಲಿ ಸರಳ ವ್ಯಾಯಾಮಗಳನ್ನು ಮಾಡುತ್ತಿದ್ದರು. 45 ನಿಮಿಷಗಳಿಂದ 60 ನಿಮಿಷಗಳವರೆಗೂ ಕಾರ್ಡಿಯೊ ಅಭ್ಯಾಸವನ್ನು ಒಂದು ದಿನವೂ ತಪ್ಪಿಸಲಿಲ್ಲ.

ಕಾಲ ಕ್ರಮೇಣ ದೇಹವನ್ನು ಹುರಿಗಟ್ಟಿಸುವುದೇ ಅವರ ಇಷ್ಟದ ಹವ್ಯಾಸವಾಯಿತು. ದೇಹವನ್ನು ಪ್ರೀತಿಸಲು ಆರಂಭಿಸಿದರು. ವ್ಯಾಯಾಮಾಭ್ಯಾಸ ಶುರು ಮಾಡಿದ ಮೇಲೆ ಎದುರಾಗುವ ನೋವುಗಳ ಒಂದೊಂದು ಕ್ಷಣವನ್ನು ಅನುಭವಿಸಿದರು.

ಅವುಗಳನ್ನು ಮೀರಿದರು. ನೋವುಗಳಿಗೆ ಸಾಂತ್ವನ ಹೇಳಿದರು. ನೋವು ಕಳೆಯಲು ಪ್ರತಿಯೊಂದು ಅಂಗಗಳ‌ ದನಿಯನ್ನು ಕೇಳಿಸಿಕೊಳ್ಳುವಷ್ಟಿತ್ತು ಅವರ ದೇಹ ಪ್ರೀತಿ. 

ನೋಡು ನೋಡುತ್ತಿದ್ದಂತೆ ಅವರ ದೇಹ ಸಪೂರತೆಯೆಡೆಗೆ ಹೊರಳಿತು. ಸುಕ್ಕುಗಟ್ಟಿದ ಚರ್ಮ ಗಟ್ಟಿಯಾಗುತ್ತಾ ಸಾಗಿತು. ಜೊತೆಜೊತೆಗೆ ಮಾಡಲಿಂಗ್‌ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಮಧ್ಯ ವಯಸ್ಸಿನ ಸ್ಪರ್ಧಿಗಳೂ ನಾಚುವಂತಿತ್ತು ಇವರ ದೇಹಸಿರಿ. 

ಮರಿಯಾ ಅವರು ತಮ್ಮ ಜಿಮ್‌ ತರಬೇತುದಾರರೊಂದಿಗೆ ಇದೀಗ ಫಿಟ್‌ನೆಸ್‌ ಕಂಪನಿಯನ್ನು ಆರಂಭಿಸಿದ್ದಾರೆ. ಜಿಮ್‌ನಲ್ಲಿನ ವ್ಯಾಯಾಮದ ಪಟ್ಟುಗಳನ್ನು ಹಲವರಿಗೆ ಕಲಿಸಿಕೊಡುತ್ತಿದ್ದಾರೆ.

‘ವಯಸ್ಸಾದಂತೆ ನಮ್ಮ ಎಲ್ಲ ಕಾರ್ಯಗಳು ನಿಧಾನವೆಂತಲೇ ಭಾವಿಸಿ ಕೆಲಸ ಮಾಡುತ್ತೇವೆ. ಅದು ನಮ್ಮನ್ನು ಮತ್ತಷ್ಟು ಮಂದಗತಿಗೆ ದೂಡುತ್ತದೆ. ವಯಸ್ಸಿನ ನೆಪವೊಡ್ಡಿ ನಮ್ಮೆಲ್ಲ ಕೆಲಸಗಳನ್ನು ನಿಧಾನ ಮಾಡುತ್ತೇವೆ. ನಮ್ಮ ಅಳಿದುಳಿದ ಉತ್ಸಾಹವನ್ನು ಅಡಗಿಸಿಬಿಡುತ್ತೇವೆ. ಇದೇ ನಾವು ಮಾಡುವ ಅತಿ ದೊಡ್ಡ ತಪ್ಪು’ ಎಂದು ಹೇಳುತ್ತಾರೆ.  

50 ತಲುಪುತ್ತಿದ್ದಂತೆಯೇ ಎಲ್ಲರಲ್ಲೂ, ಅದಲ್ಲಿಯೂ ಮಹಿಳೆಯರಲ್ಲಿ ಸುಸ್ತು ಕಾಣಿಸುಕೊಳ್ಳಲಾರಂಭಿಸುತ್ತದೆ. ಅದನ್ನೇ ನಾವು ಸಾವಿನ ದಿನದವರೆಗೂ ಹೊತ್ತೊಯ್ಯುತ್ತೇವೆ ಎಂದು ಹೇಳುತ್ತಾರೆ ಮರಿಯಾ. 

‘ವಯಸ್ಸು 40ಕ್ಕೆ ಏರುತ್ತಿದ್ದಂತೆಯೇ ಉತ್ಸಾಹವು ಮಹಿಳೆಯರಿಗೆ ಮರೆಯಾಗುತ್ತದೆ. ಸಮಾಜವೂ ಹಾಗೆಯೇ ಇದೆ ನೋಡಿ.! ವಯಸ್ಸಾದಂತೆ ನಮ್ಮನ್ನಾರೂ ನೋಡುವುದೇ ಇಲ್ಲ. ನಮ್ಮ ದನಿಯನ್ನು ಕೇಳುವುದೇ ಇಲ್ಲ. ನಮಗೆ ನಾವೇ ದನಿಯಾಗಬೇಕಾಗುತ್ತದೆ. ನಮಗೆದುರಾಗುವ ಸಮಸ್ಯೆಗಳನ್ನು, ಸಂತೋಷ– ದುಃಖದ ಕ್ಷಣಗಳನ್ನೊಮ್ಮೆ ನಾವೇ ಮಾತನಾಡಿಸಬೇಕು. ಒಂದೊಂದು ಅಂಗಾಂಶವನ್ನು ಸ್ಪರ್ಶಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ದೇಹವನ್ನರಿತವರು ಜಗವನ್ನೇ ಅರಿತವರಾಗುತ್ತಾರೆ ಅಲ್ಲವೇ’ ಎನ್ನುತ್ತಾರೆ. 

‘ನಾನೂ ಇದೀಗ ಫಿಟ್‌ನೆಸ್‌ ಪಾಠಗಳನ್ನು ಹೇಳುತ್ತಿದ್ದೇನೆ. ನನಗೀಗ 73, ನನ್ನ ವಯಸ್ಸು 90 ದಾಟಿದರೂ ಇದೇ ಉತ್ಸಾಹದೊಂದಿಗೆ ತರಬೇತಿ ನೀಡುತ್ತೇನೆ’ ಎಂದು ಅವರು ನಗೆ ಸೂಸುತ್ತಾರೆ.  2017ರಲ್ಲಿ ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದ ಮರಿಯಾ ಅವರು, ಅಂತರರಾಷ್ಟ್ರೀಯ ದೇಹದಾರ್ಡ್ಯ ಸಂಸ್ಥೆ (ಐಎನ್‌ಬಿಎ) ಮತ್ತು ಅಮೆಚೂರ್‌ ಅಥ್ಲೆಟಿಕ್‌ ಯೂನಿಯನ್‌ (ಎಎಯು) ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. 10 ಬಾರಿ ಚಾಂಪಿಯನ್‌ ಆಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಆಯೋಜಿಸಲಾಗಿದ್ದ ಐಸಿಎನ್‌ ಲಾಸ್‌ ವೆಗಾಸ್‌ ಒಪನ್‌ ಫಿಟ್‌ನೆಸ್‌ ಮಾಡೆಲ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. 

ಇದನ್ನೂ ಓದಿ: ಆರೋಗ್ಯ ಕಾಪಾಡಲು ಧ್ಯಾನ, ಯೋಗ ಪೂರಕ

ಪ್ರತಿಕ್ರಿಯಿಸಿ (+)