ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ್ಯಪಾನದಿಂದ ತಾಯಿಗೂ, ಮಗುವಿಗೂ ಆರೋಗ್ಯ: ಏನೆಲ್ಲಾ ಲಾಭಗಳು?

ಎದೆಹಾಲಿನ ಶಕ್ತಿ: ತಾಯಂದಿರು, ಶಿಶುಗಳ ಜೀವಮಾನದ ಯೋಗಕ್ಷೇಮ ಪೋಷಣೆ
Published 31 ಆಗಸ್ಟ್ 2023, 6:27 IST
Last Updated 31 ಆಗಸ್ಟ್ 2023, 6:27 IST
ಅಕ್ಷರ ಗಾತ್ರ

ಶಿಶುಗಳಿಗಾಗಿ ಇರುವ ನೈಸರ್ಗಿಕ ಮತ್ತು ಅತ್ಯಂತ ಮುಖ್ಯವಾದ ಕ್ರಿಯೆ ಎಂದರೆ ಅದು ಸ್ತನ್ಯಪಾನ ಅಥವಾ ಎದೆಹಾಲು ಕುಡಿಯುವುದು. ತಾಯಂದಿರು ಮತ್ತು ಶಿಶುಗಳ ನಡುವೆ ವಿಶೇಷ ಬಾಂಧವ್ಯವನ್ನು ಮೂಡಿಸುವ ಮತ್ತು ಉತ್ತಮ ಆರೋಗ್ಯವನ್ನು ನೀಡುವಂತಹ ವಿಶೇಷ ಬಂಧ ಇದಾಗಿರುತ್ತದೆ. ಎದೆಹಾಲನ್ನು ಸಾಮಾನ್ಯವಾಗಿ `ಸುವರ್ಣ ದ್ರವ’ ಎನ್ನಲಾಗುತ್ತದೆ. ಇದು ಅಗತ್ಯ ಪೋಷಕಾಂಶಗಳು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣಲಕ್ಷಣಗಳು ಮತ್ತು ಪಚನಕ್ರಿಯೆಗೆ ಸಹಾಯ ಮಾಡುವ ಹಾಗೂ ಆರೋಗ್ಯಕರ ಬೆಳವಣಿಗೆಗೆ ಮುಖ್ಯವಾಗಿರುವ ಅಲ್ಲದೆ, ಶಿಶುಗಳ ಅಭಿವೃದ್ಧಿಗೆ ಪ್ರಮುಖವಾಗಿರುವ ಕಿಣ್ವಗಳಿಂದ (ಎನ್‍ಜೈಮ್) ಸಮೃದ್ಧವಾಗಿರುತ್ತದೆ.

ಎದೆಹಾಲುಣಿಸುವ ಕ್ರಿಯೆ ಕೇವಲ ಪೋಷಕಾಂಶಯುತ ಆಹಾರವನ್ನು ಪೂರೈಸುವುದು ಮಾತ್ರವಲ್ಲದೆ, ತಾಯಂದಿರು ತಮ್ಮ ಮಕ್ಕಳನ್ನು ಪೋಷಿಸುವಾಗ ಆಕ್ಸಿಟೋಸಿನ್ ಎಂಬ ವಿಶೇಷ ರಾಸಾಯನಿಕವನ್ನು ಇದು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ತಮ್ಮ ಶಿಶುಗಳೊಂದಿಗೆ ತಾಯಂದಿರು ದೃಢವಾದ ಹಾಗೂ ಪ್ರೀತಿಪೂರ್ವಕ ಬಾಂಧವ್ಯ ಹೊಂದಲು ಅವಕಾಶ ಮಾಡಿಕೊಡುತ್ತದೆ.

ಈ ಮೇಲಿನ ಲಾಭಗಳಲ್ಲದೆ, ಸ್ತನ್ಯಪಾನ ಮಾಡಿಸುವುದು ಈ ಕೆಳಗಿನ ಅಂಶಗಳ ಮೂಲಕ ತಾಯಂದಿರು ಮತ್ತು ಶಿಶುಗಳಿಗೆ ಸಹಾಯಕವಾಗುತ್ತದೆ:

• ರೋಗನಿರೋಧಕ ವ್ಯವಸ್ಥೆ ಉತ್ತಮ ಪಡಿಸುವುದು : ಆ್ಯಂಟಿಬಾಡಿಗಳು (ಪ್ರತಿಕಾಯಗಳು), ರೋಗನಿರೋಧಕ ಕೋಶಗಳು ಮತ್ತು ತಾಯಿಯ ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವ ಜೈವಿಕವಾಗಿ ಸಕ್ರಿಯವಾಗಿರುವ ಅಂಶಗಳಿಂದ ಎದೆಹಾಲು ಸಮೃದ್ಧವಾಗಿರುತ್ತದೆ. ತಾಯಿ ತನ್ನ ಶಿಶುವಿಗೆ ಎದೆಹಾಲು ನೀಡುತ್ತಿರುವಂತೆ ಈ ರೋಗನಿರೋಧಕತೆ ಹೆಚ್ಚಿಸುವ ವಸ್ತುಗಳು ಶಿಶುವಿಗೆ ವರ್ಗಾವಣೆಗೊಳ್ಳುತ್ತವೆ. ಇವು ಜೊತೆಯಲ್ಲಿಯೇ ತಾಯಿಯ ರೋಗನಿರೋಧಕ ಪ್ರತಿಕ್ರಿಯೆಯನ್ನು ಸದೃಢಗೊಳಿಸುವುದಲ್ಲದೆ, ಇಬ್ಬರಿಗೂ ಲಾಭ ತರುತ್ತವೆ.

• ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ: ಸ್ತನ್ಯಪಾನ ಮಾಡಿಸುವುದರಿಂದ ಸ್ತನದ ಕ್ಯಾನ್ಸರ್ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಸ್ತನ್ಯಪಾನದ ಪ್ರತಿ ವರ್ಷಾವಧಿಯೊಂದಿಗೆ ಈ ಅಪಾಯ ಶೇ.4.3ರಷ್ಟು ಕಡಿಮೆಯಾಗುತ್ತದೆ. ಪ್ರತಿ ಶಿಶುವಿನ ಜನನದೊಂದಿಗೆ ಈ ಇಳಿಕೆ ಶೇ.7.0ಯಷ್ಟು ಕಡಿಮೆಯಾಗುತ್ತದೆ. ಜೊತೆಗೆ ಟ್ರಿಪಲ್ ನೆಗೆಟಿವ್ ಬ್ರೆಸ್ಟ್ ಕ್ಯಾನ್ಸರ್ ಅಪಾಯ ಶೇ.20ರಷ್ಟು ಕಡಿಮೆಯಾಗುತ್ತದೆ. ಬಿಆರ್‍ಸಿಎ1 ಮ್ಯೂಟೇಷನ್ ಕ್ಯಾರಿಯರ್‌ಗಳಿಗೆ ಈ ಅಪಾಯ ಶೇ.22ರಿಂದ 50ರಷ್ಟು ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ ಎದೆ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್ ಜೊತೆಗೆ ಗಂಭೀರ ಉನ್ನತ ಹಂತದ ಕ್ಯಾನ್ಸರ್‌ನ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

•ಗರ್ಭಾಶಯ ಸಂಬಂಧಿತ ಆರೋಗ್ಯ : ಎದೆಹಾಲುಣಿಸುವುದರಿಂದ ಗರ್ಭಾಶಯ ಕ್ಷಿಪ್ರಗತಿಯಲ್ಲಿ ಸಂಕುಚಿತಗೊಳ್ಳುತ್ತದೆ. ಇದರಿಂದ ಗರ್ಭಾಶಯವು ಗರ್ಭಾವಸ್ಥೆಗೆ ಪೂರ್ವದಲ್ಲಿದ್ದ ಗಾತ್ರಕ್ಕೆ ಹಿಂದಿರುಗಲು ಸಹಾಯವಾಗುತ್ತದೆ. ಇದರಿಂದ ಪ್ರಸವಾನಂತರದ ರಕ್ತಸ್ರಾವ ಮತ್ತು ಇತರೆ ಸಂಕೀರ್ಣ ತೊಂದರೆಗಳ ಅಪಾಯ ಕಡಿಮೆಯಾಗುತ್ತದೆ.

•ಸೂಕ್ತ ಪೋಷಣೆ : ಎದೆಹಾಲಿನಲ್ಲಿ ಸ್ಟೆಮ್ ಸೆಲ್‍ಗಳು, ಬಿಳಿ ರಕ್ತಕಣಗಳು, ಲಾಭದಾಯಕ ಬ್ಯಾಕ್ಟೀರಿಯಾಗಳು, ಆ್ಯಂಟಿಬಾಡಿಗಳು, ಎನ್‍ಜೈಮ್‍ಗಳು ಮತ್ತು ಹಾರ್ಮೋನ್‍ಗಳು ಮುಂತಾದ ಅನೇಕ ಪ್ರಯೋಜನಕಾರಿ ವಸ್ತುಗಳು ಇರುತ್ತವೆ. ಇದರೊಂದಿಗೆ ಎದೆಹಾಲು ಶಿಶುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯಂತ ಸೂಕ್ತವಾದ ಪೋಷಣೆಯಾಗಿರುತ್ತದೆ. ಇದು ಸುಲಭವಾಗಿ ಪಚನವಾಗುತ್ತದೆ ಅಲ್ಲದೆ, ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರೋಗನಿರೋಧಕತೆ, ರೋಗ ತಡೆಯುವುದನ್ನು ಬೆಂಬಲಿಸುವುದಲ್ಲದೆ, ಒಟ್ಟಾರೆ ಆರೋಗ್ಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

•ಶಿಶುಗಳಲ್ಲಿ ಆರೋಗ್ಯ ಅಪಾಯಗಳ ಇಳಿಕೆ : ಮೊದಲ ಆರು ತಿಂಗಳೊಳಗೆ ಪ್ರತ್ಯೇಕವಾಗಿ ಎದೆಹಾಲುಣಿಸಲಾದ ಶಿಶುಗಳಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಬಹಳ ಕಡಿಮೆಯಾಗಿರುತ್ತದೆ. ಈ ಸಮಸ್ಯೆಗಳಲ್ಲಿ ಸೋಂಕುಗಳು ಮತ್ತು ದಿಢೀರನೆ ಸಾವು ತರುವಂತಹ ಸಡನ್ ಇನ್‍ಫೆಂಟ್ ಡೆತ್ ಸಿಂಡ್ರೋಮ್ (ಎಸ್‍ಐಡಿಎಸ್) ಸೇರಿರುತ್ತದೆ. ಶಿಶುಗಳಿಗೆ ಎದೆಹಾಲುಣಿಸುವ ಕ್ರಿಯೆಯು, ಕೆಲವು ರೀತಿಯ ಕ್ಯಾನ್ಸರ್, ಸ್ಥೂಲಕಾಯ ಮತ್ತು ಮಧುಮೇಹಗಳು ವಯಸ್ಕರಾದಾಗ ಬರುವ ಸಾಧ್ಯತೆಯನ್ನು ಕೂಡ ಕಡಿಮೆ ಮಾಡುತ್ತದೆ.

•ಪರಿಸರ ಸಂಬಂಧಿತ ಲಾಭಗಳು: ವೈಯಕ್ತಿಕ ಆರೋಗ್ಯದಿಂದಾಚೆಗೆ ಎದೆಹಾಲುಣಿಸುವ ಕ್ರಿಯೆಯು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಯಾವುದೇ ರಾಸಾಯನಿಕ ಸಂರಕ್ಷಕಗಳು, ಪ್ಯಾಕೇಜಿಂಗ್ ಅಥವಾ ತ್ಯಾಜ್ಯಗಳ ಅಗತ್ಯವಿಲ್ಲದೆ, ಶಿಶುಗಳಿಗೆ ಸಂಸ್ಕರಿತವಲ್ಲದ ನೈಸರ್ಗಿಕ ಪೋಷಣೆಯನ್ನು ಇದು ಪೂರೈಸುತ್ತದೆ.

ಸೌಂದರ್ಯ ಕೆಡುತ್ತದೆಯೇ?

ಎದೆಹಾಲು ಉಣಿಸುವುದರಿಂದ ತಾಯಿಯ ದೇಹದ ಆಕಾರಕ್ಕೆ ಹಾನಿ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಸ್ತನ್ಯಪಾನ ತಾಯಿಯ ದೇಹದ ಆಕಾರವನ್ನು ಉತ್ತಮಪಡಿಸುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಇದು ಗರ್ಭಾವಸ್ಥೆಯ ಸಂದರ್ಭ ದೇಹದಲ್ಲಿ ಸಂಗ್ರಹವಾಗಿರುವ ಬಹಳಷ್ಟು ಕೊಬ್ಬನ್ನು ತೆಗೆದುಹಾಕುತ್ತದೆ.

ಎದೆಹಾಲು ತಾಯಂದಿರನ್ನು ಸದೃಢವಾಗಿಸುವುದಲ್ಲದೆ, ತಮ್ಮ ಶಿಶುಗಳ ಆರೈಕೆಯನ್ನು ನೋಡಿಕೊಳ್ಳಲು ಅವರನ್ನು ಸಮರ್ಥರನ್ನಾಗಿಸುತ್ತದೆ. ಈ ಪೋಷಕಾಂಶ ನೀಡುವ ಕಾರ್ಯವು ಅವರ ನಡುವಿನ ವಿಶೇಷ ಬಾಂಧವ್ಯವನ್ನು ದೃಢಗೊಳಿಸುವುದಲ್ಲದೆ, ಪೋಷಕರಾಗಿ ಅವರ ಹೊಣೆಯನ್ನೂ ಗಟ್ಟಿಗೊಳಿಸುತ್ತದೆ. ತಮ್ಮ ಶಿಶು ಆರೋಗ್ಯಕರವಾಗಿ ಇರುವುದರೊಂದಿಗೆ ಅದರ ಬೆಳವಣಿಗೆಯನ್ನು ನೋಡುವುದು ತಾಯಂದಿರ ಆತ್ಮವಿಶ್ವಾಸ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಎದೆಹಾಲುಣಿಸುವುದರಿಂದ ತಾಯಂದಿರು ವಿಶ್ವಾಸದೊಂದಿಗೆ ತಮ್ಮ ಪ್ರಮುಖ ಪಾತ್ರವನ್ನು ವಹಿಸುವುದರ ಜೊತೆಗೆ ಅರ್ಥಪೂರ್ಣ ರೀತಿಯಲ್ಲಿ ಸಬಲೀಕರಣಗೊಂಡ ಭಾವನೆ ಹೊಂದಬಹುದಾಗಿದೆ.

ಲೇಖಕರು: ಡಾ. ಜ್ಯೋತಿ ಬಂಡಿ, ನಿರ್ದೇಶಕರು, ಡಿವೈಯು ಹೆಲ್ತ್ ಕೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT