ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ – ಕುಶಲ: ಇಳಿಸಂಜೆಗಿರಲಿ ತಿಳಿಬೆಳದಿಂಗಳು

Published 27 ಮೇ 2024, 21:34 IST
Last Updated 27 ಮೇ 2024, 21:34 IST
ಅಕ್ಷರ ಗಾತ್ರ

ಜೀವನದ ಇಳಿಸಂಜೆಯಲ್ಲಿರುವವರು ಎದುರಿಸುವ ಆರೋಗ್ಯ ಸಮಸ್ಯೆಗಳು ಹತ್ತು ಹಲವು. ಜೀವನದ ಸುದೀರ್ಘ ಪಯಣದಲ್ಲಿ ನಜ್ಜುಗುಜ್ಜಾದ ದೇಹ–ಮನಸ್ಸುಗಳೆರಡರಲ್ಲೂ ಹಿಂದಿದ್ದ ಚೈತನ್ಯ, ಉತ್ಸಾಹ ಮತ್ತು ರೋಗನಿರೋಧಕ ಶಕ್ತಿ ಉಳಿದಿರುವುದಿಲ್ಲ. ದೇಹದ ಸಕಲ ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮ ಬೀರುವ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ಹತೋಟಿಗೆ ತರುವುದು ಕಷ್ಟವಾಗುತ್ತದೆ. ದುರಭ್ಯಾಸಗಳ ಕಾರಣದಿಂದ ಆರೋಗ್ಯವನ್ನು ಕಡೆಗಣಿಸದವರು ಮುಪ್ಪಿನಲ್ಲಿ ಪರಿತಪಿಸುವಂತಹ ವಾತಾವರಣವೂ ನಿರ್ಮಾಣವಾಗಿರುತ್ತದೆ. ತಮ್ಮ ಹುದ್ದೆ–ವೃತ್ತಿಗಳಿಂದ ನಿವೃತ್ತರಾಗಿರುತ್ತಾರಾದ ಕಾರಣ, ಅವರಿಗಿದ್ದ ಸಾಮಾಜಿಕ ಪ್ರತಿಷ್ಠೆ ಮತ್ತು ಸಂಪರ್ಕವು ಈಗ ಕಡಿಮೆಯಾಗಿರುತ್ತದೆ. ಈ ಕಾರಣದಿಂದ ಅವರು ಮಾನಸಿಕವಾಗಿಯೂ ಕುಗ್ಗುತ್ತಹೋಗುತ್ತಾರೆ. ಜೀವನದ ಇಳಿಸಂಜೆಯಲ್ಲಿ ಮನುಷ್ಯರು ಎದುರಿಸಬೇಕಾಗಿ ಬರುವ ಸವಾಲುಗಳು ಒಂದೆರಡಲ್ಲ.

ಹಿರಿಯ ವಯಸ್ಸಿನವರು ಸಮತೋಲದ ಆಹಾರವನ್ನು ಸೇವಿಸದಿದ್ದಲ್ಲಿ ಶರೀರಕ್ಕೆ ಅಗತ್ಯವಾದ ಖನಿಜ ಮತ್ತು ವಿಟಮಿನ್‌ಗಳ ಕೊರತೆಯುಂಟಾಗುವುದು ಸಾಮಾನ್ಯ. ಮನೆ ಬಿಟ್ಟು ಹೊರಗೆ ಹೋಗದವರಲ್ಲಿ ವಿಟಾಮಿನ್ಸ್ ಡಿ ಕೊರತೆ, ಸಸ್ಯಾಹಾರವನ್ನು ಮಾತ್ರ ಸೇವಿಸುವವರಲ್ಲಿ ವಿಟಮಿನ್ ಬಿ12 ಕೊರತೆ ಮುಂತಾದ ಸಮಸ್ಯೆಗಳು ಸಾಮಾನ್ಯ. ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಕಡಿಮೆಯಾದಲ್ಲಿ ರಕ್ತಹೀನತೆ ಮತ್ತು ಕೀಲುಗಳ ಸವಕಳಿ ಹೆಚ್ಚಾಗುತ್ತದೆ. ಸಮತೋಲನದ ಆಹಾರ ತೆಗೆದುಕೊಳ್ಳುವ ಶಿಸ್ತು ಮತ್ತು ವ್ಯವಸ್ಥೆಗಳು ಇಲ್ಲದವರು ನಿಯಮಿತವಾಗಿ ಪೂರಕ ಔಷಧಗಳನ್ನು ಸೇವಿಸುವುದು ಸೂಕ್ತ. ಹಲ್ಲುಗಳ ಸಮಸ್ಯೆಯಿಂದಲೂ ಹಿರಿಯರ ಅಹಾರ ಪದ್ಧತಿಗಳು ಬದಲಾಗುತ್ತವೆ. ಹಾಗಾಗಿ ಅವರು ದಂತವೈದ್ಯರನ್ನು ಕಾಣುವುದೂ ಅಗತ್ಯ.

ದೃಷ್ಟಿ ಮತ್ತು ಶ್ರವಣಶಕ್ತಿ ಕುಂಠಿತವಾಗುವುದು ಇಳಿ ವಯಸ್ಸಿನಲ್ಲಿ ಸಾಮಾನ್ಯ. ಯಾವುದೇ ಗಾಯವಿಲ್ಲದೆ ಮಾಡಬಲ್ಲ ಕ್ಯಾಟರಾಕ್ಟ್‌ ಸರ್ಜರಿಗಳು, ಲೇಸರ್ ಚಿಕಿತ್ಸೆಗಳು ಹಿರಿಯರ ದೃಷ್ಟಿದೋಷವನ್ನು ಪರಿಹರಿಸಬಹುದು. ಶ್ರವಣಶಕ್ತಿಯನ್ನು ಹೆಚ್ಚಿಸಲು ಶ್ರವಣಯಂತ್ರಗಳು ಸಹಾಯಕಾರಿ. ದೃಷ್ಟಿ ಮತ್ತು ಶ್ರವಣಶಕ್ತಿ ಸರಿಯಾಗಿದ್ದಲ್ಲಿ ಮಾತ್ರ ಬದುಕಿನ ಆನಂದವನ್ನು ಇಳಿವಯಸ್ಸಿನಲ್ಲಿಯೂ ಆನಂದಿಸಬಹುದು. ವಯಸ್ಸಾದಂತೆ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಕಷ್ಟವಾಗುವ ಕಾರಣದಿಂದ ಮತ್ತು ಮಾಂಸಖಂಡ-ಎಲಬುಗಳಲ್ಲಿ ಹಿಂದಿನ ಶಕ್ತಿಯಿಲ್ಲದ ಕಾರಣದಿಂದಾಗಿ ಹಿರಿಯರು ಜಾರಿ ಅಥವಾ ಎಡವಿ ಬೀಳುವ ಸಂಭವ ಜಾಸ್ತಿಯಿರುತ್ತದೆ. ಹಾಗಾಗಿ ಸಮತಟ್ಟಲ್ಲದ ಪ್ರದೇಶದಲ್ಲಿ ಅಥವಾ ಬೀಳುವ ಅಪಾಯವಿರುವ ಜಾಗಗಳಲ್ಲಿ ಅವರು ಓಡಾಡದಂತೆ ಎಚ್ಚರ ವಹಿಸಬೇಕು.

ಭಾರತದಲ್ಲಿ ಸುಮಾರು ಹದಿನೈದು ಕೋಟಿಗಳಿಗಿಂತ ಹೆಚ್ಚು ಅರವತ್ತರ ವಯಸ್ಸನ್ನು ಮೀರಿದವರಿದ್ದಾರೆ. ಅದರಲ್ಲಿ ಸುಮಾರು ಒಂದುವರೆ ಕೋಟಿಯಷ್ಟು ಅರವತ್ತರ ವಯಸ್ಸು ಮೀರಿದವರು ಏಕಾಂಗಿಯಾಗಿ ತಮ್ಮನ್ನು ತಾವು ನೋಡಿಕೊಳ್ಳುತ್ತಿದ್ದಾರೆ. ವಿದೇಶಗಳಲ್ಲಿ ಇರುವಂತೆ ನಮ್ಮಲ್ಲಿಯ ವ್ಯವಸ್ಥೆಗಳು ವೃದ್ಧಾಪ್ಯ ಸ್ನೇಹಿಯಾಗಿಲ್ಲ. ಭಾರತದಲ್ಲಿಯೂ ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿರುವ ಕಾರಣ ವಯಸ್ಸಾದವರನ್ನು ನೋಡಿಕೊಳ್ಳುವ ಕೌಟುಂಬಿಕ ಚೌಕಟ್ಟು ಸಡಿಲವಾಗಿದೆ. ವೃದ್ಧಾಪ್ಯದಲ್ಲಿ ನೆನಪಿನ ಶಕ್ತಿ ಕುಂಠಿತವಾಗುವ ಕಾರಣ ಹೆಚ್ಚಿನವರಿಗೆ ಅವರ ಔಷಧಗಳನ್ನು ನೆನಪಿಟ್ಟುಕೊಂಡು ಸೇವಿಸುವುದು ಕೂಡ ಸವಾಲಿನ ಸಂಗತಿಯಾಗಿರುತ್ತದೆ. ವಿವಿಧ ವೈದ್ಯರ ಸಲಹೆಯ ಮೇರೆಗೆ ಹಲವು ಔಷಧಗಳನ್ನು ಸೇವಿಸುವವರು ಎಚ್ಚರಿಕೆಯಿಂದಿರಬೇಕು. ಹಲವು ಔಷಧಗಳನ್ನು ಒಟ್ಟಿಗೆ ಸೇವಿಸಿದರೆ ದೇಹದ ವಿವಿಧ ಅಂಗಾಂಗಳ ಮೇಲೆ ದುಷ್ಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆಗಳ ಕುರಿತು ವೈದ್ಯರ ಜೊತೆಗೆ ಮುಂಚಿತವಾಗಿ ಚರ್ಚಿಸಬೇಕು. ಹರ್ಬಲ್ ಅಥವಾ ನಾಟಿ ಔಷಧಿಯೆಂಬ ಹಣೆಪಟ್ಟಿಯೊಂದಿಗೆ ದೇಹಕ್ಕೆ ಮಾರಕವಾಗಬಲ್ಲ ಭಾರೀ ಲೋಹಗಳು ಮತ್ತು ಸ್ಟಿರಾಯ್ಡ್‌ಗಳಿರುವ ಔಷಧಗಳನ್ನು ವೈದ್ಯರ ಅನುಮತಿಯಿಲ್ಲದೆ ಸೇವಿಸಬಾರದು. ವೃದ್ಧಾಪ್ಯದಲ್ಲಿರುವ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರುಗಳು ಹೆಚ್ಚು ಕಂಡುಬರುವಂತೆ, ಪುರುಷರಲ್ಲಿ ಶ್ವಾಸಕೋಶದ ಮತ್ತು ಕರುಳಿನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ. ಈ ಕ್ಯಾನ್ಸರ್‌ಗಳ ಮೊದಲ ಲಕ್ಷಣಗಳ ಬಗ್ಗೆ ಹಿರಿಯರಲ್ಲಿ ಅರಿವು ಮೂಡಿಸಿದರೆ ಅವರು ಈ ಕ್ಯಾನ್ಸರ್ ಕಾಯಿಲೆಗಳ ಆರಂಭಿಕ ಹಂತದಲ್ಲಿ ವೈದ್ಯಕೀಯ ನೆರವು ಪಡೆಯುವ ಸಾಧ್ಯವಾಗುತ್ತದೆ. ಮೊದಲ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿದರೆ ಅದು ಸಂಪೂರ್ಣ ಗುಣವಾಗುವ ಸಾಧ್ಯತೆಯೂ ಇರುತ್ತದೆ

ರೋಗವನ್ನು ಪತ್ತೆ ಹಚ್ಚುವುದರಿಂದ ಹಿಡಿದು ಅದರ ಸಂಪೂರ್ಣ ಚಿಕಿತ್ಸೆಯನ್ನು ಉತ್ತಮ ಸಂಸ್ಥೆಯಲ್ಲಿ ಪಡೆಯುವುದು ಬಹಳ ದುಬಾರಿಯಾಗಿದೆ. ಈ ಕಾರಣದಿಂದಾಗಿ ಗಂಭೀರ ಕಾಯಿಲೆಗಳು ವೃದ್ಧಾಪ್ಯದಲ್ಲಿರುವವರ ಜೀವಮಾನದ ಉಳಿತಾಯವನ್ನು ಖಾಲಿ ಮಾಡಿಸಬಹುದು. ಯಾವುದೆ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುವ ಮೊದಲೇ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡರೆ ವೃದ್ಧಾಪ್ಯದಲ್ಲಿ ಸಹಾಯಕ್ಕೆ ಬರುತ್ತದೆ.

ಹೆಚ್ಚಿನ ಮಕ್ಕಳು ವೃದ್ಧಾಪ್ಯದಲ್ಲಿರುವ ತಂದೆ–ತಾಯಿಗಳ ಆಹಾರ ಮತ್ತು ವೈದ್ಯಕೀಯ ನೆರವಿನ ಕುರಿತು ಕಾಳಸಿ ವಹಿಸುತ್ತಾರೆ. ಆದರೆ ಅವರಿಗಿರುವ ಮಾನಸಿಕ ತಳಮಳಗಳನ್ನು ಗಮನಿಸುವುದಿಲ್ಲ. ವೃದ್ಧಾಪ್ಯದಲ್ಲಿರುವವರು ಅವರ ಮಾನಸಿಕ ಸಮತೋಲನವನ್ನು ಚೆನ್ನಾಗಿಟ್ಟುಕೊಳ್ಳಲು ತಮ್ಮ ಸಮಾನಮನಸ್ಕರ ಜೊತೆಗೆ ಬೆರೆಯುವುದು ಮತ್ತು ತಮ್ಮ ಇಷ್ಟದ ಚಟುವಟಿಕೆಗಳಲ್ಲಿ ಪಾಲುಗೊಳ್ಳುವುದು ಅತ್ಯಗತ್ಯ. ಹಿರಿಯರು ಸಾಮಾಜಿಕವಾಗಿ ಮೂಲೆಗೆ ಸರಿದರೆ ಅದು ಅವರ ಆತ್ಮವಿಶ್ವಾಸ ಮತ್ತು ಮಾನಸಿಕ ಸಂತೃಪ್ತಿಯ ಮೇಲೆ ಕೆಟ್ಟ ಪ್ರಭಾವವನ್ನು ಬೀರಿ ದೈಹಿಕ ಆರೋಗ್ಯವನ್ನು ಹಾಳುಮಾಡಬಲ್ಲದು. ಅವರನ್ನು ಬಂಗಾರದ ಪಂಜರದೊಳಗೆ ಇಡುವ ಬದಲು ತಮಗಿಷ್ಟದ ಚಟುವಟಿಕೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ಅವರ ಆಯುಸ್ಸು ವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ. ಮನೆಯಲ್ಲಿ ಆಟವಾಡಲು ಮೊಮ್ಮಕ್ಕಳಿದ್ದಾಗ ಹಿರಿಯರ ಆರೋಗ್ಯ ವೃದ್ಧಿಯಾಗುವುದನ್ನು ನಾವು ಅನೇಕ ಮನೆಗಳಲ್ಲಿ ಗಮನಿಸಬಹುದು. ವಯಸ್ಸಾದ ಹಿರಿಯರು ಮಕ್ಕಳಂತೆ ನಡೆದುಕೊಳ್ಳುವುದು, ಹಠ ಮಾಡುವುದು ಸಹಜ. ಅವರಿಗೆ ಭಾವನಾತ್ಮಕವಾಗಿ ಸ್ಪಂದಿಸುವ ವಾತಾವರಣವಿದ್ದಲ್ಲಿ ಮತ್ತು ಮಕ್ಕಳನ್ನು ನೋಡಿಕೊಳ್ಳುವಂತೆ ಅವರ ಆರೋಗ್ಯ ಮತ್ತು ಆಹಾರದ ಕುರಿತು ಕಾಳಜಿವಹಿಸಿದ್ದರೆ ಅವರು ತಮ್ಮ ಜೀವನದ ಕೊನೆಯ ವರ್ಷಗಳು ಹೆಚ್ಚು ಅರ್ಥಪೂರ್ಣವಾಗಿ ಕಳೆಯಬಲ್ಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT