ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು | ನಾನೇಕೆ ಹೀಗೆ?

Last Updated 16 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

* ಎಂಎಸ್‌ಡಬ್ಲ್ಯೂ ಪದವಿ ಪಡೆದಿರುವ ಯುವಕ. ನನಗೆ ಯಾವುದೇ ಕೆಲಸ ಮಾಡುವಾಗಲೂ ಹಿಂಜರಿಕೆ. ಕೆಲಸ ಮಾಡುತ್ತಾ ಭಯದಿಂದ ಬೆವರಿ ಎಲ್ಲವನ್ನೂ ಮರೆತು ಗಲಿಬಿಲಿಗೊಳ್ಳುತ್ತೇನೆ. ಕಚೇರಿಯಲ್ಲಿ ಅಪರಿಚಿತರು, ಅಧಿಕಾರಿಗಳು ಪ್ರಶ್ನಿಸಿದರೆ ಉತ್ತರಿಸಲಾಗದೆ ತಡವರಿಸುತ್ತೇನೆ. ಬಾಲ್ಯದಿಂದಲೂ ಓದಿನಲ್ಲಿ ಆಸಕ್ತಿ ಕಡಿಮೆ. ಸರ್ಕಾರಿ ನೌಕರಿಗೆ ಪ್ರಯತ್ನಿಸುವುದಕ್ಕೆ ಆಗುತ್ತಿಲ್ಲ. ನಕಾರಾತ್ಮಕ ಆಲೋಚನೆಯಿಂದಾಗಿ ಸ್ವಂತ ಉದ್ಯಮ ಮಾಡಲು ಬಂಡವಾಳ ಹಾಕಲು ಧೈರ್ಯವಿಲ್ಲದೇ ಕುಗ್ಗಿದ್ದೇನೆ. ಒಂದು ಕೆಲಸವನ್ನೂ ಏಕಾಗ್ರತೆಯಿಂದ ಮಾಡಲಾಗುತ್ತಿಲ್ಲ. ನನ್ನ ಈ ಕೀಳರಿಮೆ ಅಧೈರ್ಯ ನಕಾರಾತ್ಮಕ ಆಲೋಚನೆಯಿಂದ ಹೊರಬರಲು ಪರಿಹಾರ ತಿಳಿಸಿ.
ಹೆಸರಿಲ್ಲ ಬಾಗಲಕೋಟೆ.

ಪತ್ರದ ಧಾಟಿಯನ್ನು ಗಮನಿಸಿದರೆ ನಿಮ್ಮನ್ನು ನೀವು ಪ್ರಪಂಚದ ಅತ್ಯಂತ ನಿಕೃಷ್ಟ ವ್ಯಕ್ತಿ ಎಂದು ತಿಳಿದುಕೊಂಡಿರುವಂತಿದೆ. ಹುಟ್ಟಬೇಕಾದರೆ ನೀವು ಇಂತಹ ಮನಸ್ಥಿತಿಯಲ್ಲಿ ಇರುವುದು ಸಾಧ್ಯವಿತ್ತೇ? ಇಲ್ಲ ಎಂದಾದರೆ ಬೆಳೆಯುತ್ತಾ ಬಂದಂತೆ ನಿಮ್ಮ ಬಗೆಗೆ ಇಂತಹ ಅಭಿಪ್ರಾಯಗಳು ನಿಮ್ಮೊಳಗೆ ಮೂಡುತ್ತಾ ಹೋಗಿರುತ್ತದೆ ಎಂದಾಯಿತಲ್ಲವೇ?

ಮಿದುಳಿನ ಪೂರ್ಣ ಬೆಳವಣಿಗೆ ಆಗದಿರುವ ಮಗುವಾಗಿರುವಾಗ ಪೋಷಕರ ಮತ್ತು ಸುತ್ತಲಿನ ಜನರ ಅಭಿಪ್ರಾಯಗಳನ್ನೇ ನಮ್ಮದು ಎಂದುಕೊಳ್ಳುವುದು ಸಹಜ. ಆದರೆ ವಯಸ್ಕರಾದ ಮೇಲೂ ಅದೇ ಮನಸ್ಥಿತಿಯಲ್ಲಿ ನಾವು ಇರುವುದು ಹೇಗೆ ಸಾಧ್ಯವಾಗುತ್ತದೆ? ಇದರ ಅರ್ಥವೇನೆಂದರೆ ನಮ್ಮಲ್ಲಿ ಭಾವನಾತ್ಮಕವಾಗಿ ಬೆಳವಣಿಗೆ ಆಗಿಲ್ಲ ಎಂದಲ್ಲವೇ? ಭಾವನಾತ್ಮಕ ಬೆಳವಣಿಗೆ ಆಗಬೇಕೆಂದರೆ ಇವತ್ತಿನ ವಾಸ್ತವವನ್ನು ಗಮನಿಸಿ. ನೀವು ಸ್ನಾತಕೋತ್ತರ ಪದವೀಧರರು. ಆದರೂ ನನಗೆ ಓದಿನಲ್ಲಿ ಆಸಕ್ತಿಯಿಲ್ಲ ಎಂದು ಹೇಗೆ ಒಪ್ಪಿಕೊಳ್ಳುತ್ತೀರಿ? ಈಗಾಗಲೇ ಒಂದು ಖಾಸಗಿ ಉದ್ಯೋಗದಲ್ಲಿದ್ದೀರಿ. ಆದರೂ ನನಗೆ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸಲು ಆಗುತ್ತಿಲ್ಲ ಎಂದು ಹೇಗೆ ನಿರ್ಧರಿಸಿದಿರಿ? ಬಾಲ್ಯದಲ್ಲಿ ಪೋಷಕರು ಗುರುಗಳು ಹೇಳಿದ ಅಭಿಪ್ರಾಯವೇ ನಿಮ್ಮ ಬಗೆಗಿನ ಅಂತಿಮ ಸತ್ಯ ಎಂದುಕೊಂಡು ನೋಯುತ್ತಿದ್ದೀರಲ್ಲವೇ? ಇದನ್ನು ಬದಲಾಯಿಸಬೇಕಾದರೆ ಸಣ್ಣಸಣ್ಣ ಹೊಸ ಪ್ರಯತ್ನ ಮಾಡುತ್ತಾ ಹೋಗಿ. ಸೋಲು ಸಹಜ ಎಂದು ಒಪ್ಪಿಕೊಂಡು ಪ್ರಯತ್ನಗಳನ್ನು ಮುಂದುವರಿಸಿ.

ನಿಮ್ಮ ಕೀಳರಿಮೆ ಹಿಂಜರಿಕೆ ಅಧೈರ್ಯ ಎಲ್ಲರಲ್ಲೂ ಇರುವಂತಹುದೇ. ಇವೆಲ್ಲ ಮನುಷ್ಯರ ಅನಿವಾರ್ಯತೆಗಳು. ಈ ಸ್ಥಿತಿಯಿಂದಲೇ ಎಲ್ಲರೂ ಬೆಳೆಯುತ್ತಾ ಬದಲಾಗುತ್ತಾ ಹೋಗುತ್ತಾರೆ. ಆದರೆ ನೀವು ಅದಕ್ಕೆ ಹುಲಿಯ ವೇಷ ತೊಡಿಸಿದ್ದೀರಿ. ಹಾಗಾಗಿ ನಿಮ್ಮೊಳಗಿರುವ ನೂರಾರು ಅದ್ಭುತ ಅಂಶಗಳು ನಿಮ್ಮ ಗಮನಕ್ಕೆ ಬರುತ್ತಿಲ್ಲ.

ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹವನ್ನು ಗಮನಿಸಿ ಸಡಿಲ ಬಿಡುವ ಅಭ್ಯಾಸ ಮಾಡಿ. ಇದನ್ನು ಆಗಾಗ ಮಾಡುತ್ತಿರಿ. ದೇಹ ಶಾಂತಗೊಂಡರೆ ಮನಸ್ಸನ್ನು ಹಿಡಿತಕ್ಕೆ ತರುವುದು ಸುಲಭ. ಅಗತ್ಯವಿದ್ದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ.

* 23 ವರ್ಷದ ಯುವಕ. ಯಾವಾಗಲೂ ನನ್ನ ಮನಸ್ಸು ಲೈಂಗಿಕತೆಯ ಬಗ್ಗೆ ಯೋಚಿಸುತ್ತದೆ. ಇದು ಓದಿಗೆ ತೀವ್ರ ತೊಂದರೆಯನ್ನು ಉಂಟು ಮಾಡಿದೆ. ಇದರಿಂದ ಹೊರಬರಲು ಸೂಕ್ತಸಲಹೆ ನೀಡಿ.
–ಊರು, ಹೆಸರು ತಿಳಿಸಿಲ್ಲ

ದೇಹ ಬೆಳೆದು ಲೈಂಗಿಕ ಸಂಪರ್ಕಕ್ಕೆ ಸಿದ್ಧವಾಗಿದೆ ಎಂದು ಪ್ರಕೃತಿ ನಿರ್ಧರಿಸಿದ ಮೇಲೆ ಲೈಂಗಿಕ ಯೋಚನೆಗಳ ಮೂಲಕ ಆಕರ್ಷಣೆ ಮೂಡುವುದು ಸಹಜ. ಇದನ್ನು ಬೇಡವಾದಾಗ ನಿಯಂತ್ರಣ ಮಾಡುವ ವ್ಯವಸ್ಥೆ ಮಿದುಳಿನಲ್ಲಿ ಇಲ್ಲ. ನಿಮ್ಮ ಲೈಂಗಿಕ ಆಲೋಚನೆಗಳನ್ನು ಆನಂದಿಸಿ. ಆದರೆ ಅದಕ್ಕೆ ಸಮಯವಿನ್ನೂ ಸೂಕ್ತವಾಗಿಲ್ಲ ಎಂದು ನೆನಪಿಸಿಕೊಳ್ಳಿ. ಯಾವಾಗಲೂ ಬರುವ ಲೈಂಗಿಕ ಯೋಚನೆಯ ಹಿಂದೆ ಅದರಲ್ಲಿ ದೊರೆಯುವ ಸುಖದ ಆಕರ್ಷಣೆ ಇರುತ್ತದೆ. ಇಂತಹ ಆಕರ್ಷಣೆಯನ್ನು ನೀವು ಯಾವುದೋ ನೋವನ್ನು ಮರೆಯಲು ಬಳಸುತ್ತಿರಬಹುದೇ? ಅಂತಹ ನೋವು ನಿಮ್ಮ ಕೀಳರಿಮೆ ಭವಿಷ್ಯದ ಕುರಿತಾದ ಅನಿಶ್ಚಿತತೆ ಆತಂಕದಿಂದ ಬಂದಿರುವ ಸಾಧ್ಯತೆಗಳಿರುತ್ತವೆ. ಹೀಗೆ ಆತಂಕದಿಂದ ತಪ್ಪಿಸಿಕೊಳ್ಳವ ಪ್ರಯತ್ನದಲ್ಲಿರುವಾಗ ಲೈಂಗಿಕ ಯೋಚನೆಗಳು ನಶೆಯಂತೆ ಅಂಟಿಕೊಳ್ಳುತ್ತವೆ. ಹಾಗಾಗಿ ಮೊದಲು ಬದುಕು ಭವಿಷ್ಯದ ಕುರಿತಾದ ನಿಮ್ಮ ಆತಂಕ ಅನುಮಾನ ಕೀಳರಿಮೆ ಹಿಂಜರಿಕೆಗಳನ್ನು ನಿಭಾಯಿಸುವುದನ್ನು ಕಲಿಯಬೇಕಲ್ಲವೇ?

ವಸಂತ ನಡಹಳ್ಳಿ
ವಸಂತ ನಡಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT