ಗುರುವಾರ , ಅಕ್ಟೋಬರ್ 6, 2022
24 °C

ಸ್ನಾನವೂ ಒಂದು ಚಿಕಿತ್ಸೆಯೇ

ಡಾ. ವಿಜಯಲಕ್ಷ್ಮಿ ಪಿ. Updated:

ಅಕ್ಷರ ಗಾತ್ರ : | |

Prajavani

ನಮ್ಮ ಹಿರಿಯರ ದಿನಚರಿ ಹೀಗಿರುತ್ತಿತ್ತು: ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲೇ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಮುಖ ತೊಳೆದು, ಸ್ನಾನ ಮಾಡಿ, ದೇವತಾರ್ಚನೆ ಮಾಡಿ ನಂತರ ಇತರ ಕೆಲಸಗಳ ಕಡೆಗೆ ಗಮನ ಕೊಡುವುದು.

ಸ್ನಾನ ಎನ್ನುವುದು ಅನಿವಾರ್ಯವಾದ ನಿತ್ಯಕರ್ಮ. ಆದರೆ ಇಂದು ಸ್ನಾನ ಎನ್ನುವುದು ದೇಹದ ಕೊಳೆಯನ್ನು ತೆಗೆಯಲು ಇರುವ ಸಾಧನ. ಆದ್ದರಿಂದ ಅದಕ್ಕೆ ಯಾವುದೇ ನಿಯಮಗಳಿಲ್ಲ. ಬೆಳಗ್ಗೆ ತಿಂಡಿ ತಿಂದು, ಬೆಳಗಿನ ಕೆಲಸ ಮುಗಿಸಿ ಮಧ್ಯಾಹ್ನ, ವ್ಯಾಯಾಮ ಮಾಡಿದ ನಂತರ, ಸಂಜೆ ಹೊತ್ತಿನಲ್ಲಿ, ರಾತ್ರಿ ಮಲಗುವ ಮೊದಲು – ಹೀಗೆ ಒಂದು ನಿರ್ದಿಷ್ಟವಾದ ಕಾಲವೇ ಇಲ್ಲ. ಆದರೆ ನಮ್ಮ ಪೂರ್ವಜರು ಎಲ್ಲ ದೈನಂದಿನ ಕ್ರಿಯೆಗಳೂ ಆರೋಗ್ಯಕ್ಕೆ ಪೂರಕವಾಗಿರುವಂತೆ ಕೆಲವು ನಿಯಮಗಳನ್ನು ಆಚರಿಸುತ್ತಿದ್ದರು. ಅದಕ್ಕೆ ಶಾಸ್ತ್ರ, ಪುರಾಣ ಸಂಪ್ರದಾಯಗಳ ಲೇಪನವನ್ನು ಕೊಟ್ಟು ಸಾಮಾನ್ಯರೂ ಆಚರಿಸುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ನಿಯಮವೇ ಇಲ್ಲದ ಜೀವನ ನಡೆಸುವಾಗ ಪ್ರತಿಯೊಂದೂ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಸ್ನಾನ ಮಾಡುವಾಗ ಪಾಲಿಸಲೇಬೇಕಾದ ನಿಯಮವೆಂದರೆ ತಿಂದ ಆಹಾರವು ಜೀರ್ಣವಾಗಿ ಹೊಟ್ಟೆ ಖಾಲಿ ಇರುವುದು. ಆದರೆ ಹಸಿವೆ ಪ್ರಾರಂಭವಾಗಿರಬಾರದು. ಇದರ ಲಕ್ಷಣವನ್ನು ಗಮನಿಸುವುದು ಸಾಧ್ಯವಿಲ್ಲವೆಂದೇ ಹಿರಿಯರು ಬೆಳಗ್ಗೆಯೇ ಸ್ನಾನ ಮಾಡಲು ಹೇಳುತ್ತಿದ್ದುದು. ಆಹಾರ ಸೇವಿಸಿದ ನಂತರ ಸ್ನಾನ ಮಾಡುವುದರಿಂದ, ಆಹಾರವು ಸಂಪೂರ್ಣವಾಗಿ ಪರಿಣಾಮವಾಗದೆ, ದೇಹಲ್ಲೋ ಉಳಿದು ಅಜೀರ್ಣ, ಅಮ್ಲಪಿತ್ತ, ಚರ್ಮರೋಗ, ಕರುಳಿಗೆ ಸಂಬಂಧಪಟ್ಟ ಅನೇಕ ರೋಗಗಳು, ಗಂಟುನೋವು, ಗಡ್ಡೆಗಳಾಗಲು ಕಾರಣವಾಗುತ್ತದೆ. ಎಲ್ಲರಿಗೂ ಎಲ್ಲಾ ರೋಗಗಳೂ ಬರುತ್ತವೆ – ಎಂದಲ್ಲದಿದ್ದರೂ ಅವರವರ ಪ್ರದೇಶ, ವಾತಾವರಣ, ದೈನಂದಿನ ಚಟುವಟುಕೆಗಳನ್ನು ಅನುಸರಿಸಿಕೊಂಡು ಅಮ್ಲಪಿತ್ತದಿಂದ ಹಿಡಿದು ಕ್ಯಾನ್ಸರ್‌ವರೆಗೂ ಬೇರೆ ಬೇರೆ ರೀತಿಯ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತದೆ.

ಸರಿಯಾದ ಕ್ರಮದಿಂದ ಸ್ನಾನ ಮಾಡಿದರೆ ದೇಹಕ್ಕಾಗುವ ಲಾಭಗಳು: ನಿದ್ರೆ, ತೂಕಡಿಕೆಯನ್ನು ದೂರಮಾಡಿ ಶರೀರಕ್ಕೆ ಉತ್ಸಾಹ, ಉಲ್ಲಾಸವನ್ನು ತರುತ್ತದೆ. ಜೊತೆಗೆ ಶರೀರವನ್ನು ಶುಭ್ರಗೊಳಿಸಿ ಮೈಕಾಂತಿಯನ್ನು ಹೆಚ್ಚಿಸುತ್ತದೆ. ಶರೀರವನ್ನು ಸುಗಂಧಗೊಳಿಸುತ್ತದೆ; ಜೊತೆಗೆ ಮೈ ನವೆ, ನೋವುಗಳಿಗೂ ಉಪಶಮನ ನೀಡುತ್ತದೆ. ಆದರೆ ಅಜೀರ್ಣವಾದಾಗ ಅಥವಾ ಹೊಟ್ಟೆಯಲ್ಲಿ ಆಹಾರ ಇರುವಾಗ ಸ್ನಾನ ಮಾಡಿದರೆ ಮೈ ತುರಿಕೆಯ ಉತ್ಪತ್ತಿಯಾಗಲು ಕಾರಣವಾಗುತ್ತದೆ.

ಸರಿಯಾದ ಕ್ರಮದಲ್ಲಿ ಮಾಡಿದ ಸ್ನಾನವು ಹಸಿವೆಯನ್ನು ಉತ್ಪತ್ತಿ ಮಾಡಿ ಬಾಯಿರುಚಿಯನ್ನು ತಂದು ಕೊಡುತ್ತದೆ. ಹಸಿವೆಯಾಗುತ್ತದೆ, ಆದರೆ ಆಹಾರ ರುಚಿಸುವುದಿಲ್ಲ – ಎಂದು ದೂರುವವರು, ರಾತ್ರಿ 8 ಗಂಟೆಯ ಒಳಗೆ ಆಹಾರವನ್ನು ಸೇವಿಸಿ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಎದ್ದು ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಬಾಯಿರುಚಿಯ ಉತ್ಪತ್ತಿಯಾಗುತ್ತದೆ. ಅಲ್ಲದೆ ಮಲಪ್ರವೃತ್ತಿ ಸಕಾಲದಲ್ಲಿ ಸರಿಯಾಗಿ ಆಗಲು ಬಿಸಿನೀರಿನ ಸ್ನಾನ ಕಾರಣವಾಗುತ್ತದೆ.

ಬಿಸಿಲಿಂದ ಬಂದ ಕೂಡಲೇ ಸ್ನಾನ ಮಾಡಬಾರದು ಎಂಬುದು ನಮ್ಮ ಹಿರಿಯರ ಹೇಳಿಕೆ. ಇಷ್ಟು ಮಾತ್ರವಲ್ಲ. ಅತಿ ಶ್ರಮದ ಕೆಲಸ ಮಾಡಿದ ತಕ್ಷಣ, ಬೆವರುವಷ್ಟು ವ್ಯಾಯಾಮ ಮಾಡಿಬಂದು, ಆಟವಾಡಿ ಬಂದು, ಆಹಾರ ಸೇವಿಸಿದ ತಕ್ಷಣ ಸ್ನಾನ ಮಾಡಬಾರದು. ದೇಹದ ಒಳಗಿನ ಸಮತ್ವದಂತೆ, ದೇಹದ ಹೊರಗೂ, ಚರ್ಮದ ರಕ್ತಪರಿಚಲನೆ ಮತ್ತು ಇತರ ಕ್ರಿಯೆಗಳು ಸಮಸ್ಥಿತಿಯಲ್ಲಿರುವಾಗ ಸ್ನಾನ ಮಾಡಬೇಕು. ಇಲ್ಲದಿದ್ದರೆ ಸೂಕ್ಷ್ಮರಕ್ತನಾಳಗಳು ಒಡೆಯುವಂತೆ ಮಾಡಿ, ಅತಿ ರಕ್ತಸ್ರಾವ, ಚರ್ಮ ಒರಟಾಗುವಿಕೆ, ರಕ್ತದೊತ್ತಡ ಹೆಚ್ಚಾಗುವುದು, ತಲೆಸುತ್ತುವಿಕೆ, ತಲೆನೋವು, ಮೈ ತುರಿಕೆ, ಮಲಬದ್ಧತೆ, ದೇಹದ ನೀರಿನಂಶದಲ್ಲಿ ವ್ಯತ್ಯಯ ಉಂಟಾಗಿ ಬೆವರು, ಮೂತ್ರಸಂಬಂಧಿ ತೊಂದರೆಗಳಿಗೆ ಕಾರಣವಾಗುತ್ತದೆ.

ರಾತ್ರಿ ಮಲಗುವಾಗ ಸ್ನಾಮಾಡುವುದು, ರಾತ್ರಿ ಊಟವಾದ ನಂತರ ಸ್ನಾನ ಮಾಡುವುದು ಉತ್ಸಾಹವನ್ನು ತರುತ್ತದೆ ಎಂದೆನಿಸಿದರೂ, ಅನಾರೋಗ್ಯಕ್ಕೆ ಮೂಲವಾಗುತ್ತದೆ. ದೇಹ ಶ್ರಮವಾಗಿದ್ದರೆ ರಾತ್ರಿ ಊಟಕ್ಕೆ ಮೊದಲು ಸ್ನಾನ ಮಾಡುವುದು ಆರೋಗ್ಯಕರ. ಬೇಸಗೆಯಲ್ಲಿ ತಣ್ಣೀರಿನ ಸ್ನಾನ ಹಿತಕರವಾದರೂ ಚಳಿಗಾಲದಲ್ಲಿ ಹಿತಕರವಲ್ಲ. ಚಳಿಗಾಲದಲ್ಲಾದರೂ ಬಾವಿ, ಹೊಳೆ, ನದಿ ನೀರಿನ ಸ್ನಾನ ಹೆಚ್ಚು ತೊಂದರೆ ಮಾಡುವುದಿಲ್ಲ. ಆದರೆ ಟ್ಯಾಂಕು, ಸಂಪುಗಳಲ್ಲಿ ಹಿಡಿದಿಟ್ಟ ನೀರಿನ ತಣ್ಣೀರು ಸ್ನಾನ ಅನಾರೋಗ್ಯಕರ. ಹಾಗಾಗಿ ಇಡೀ ವರ್ಷವೂ ಅತಿ ಬಿಸಿಯೂ ಅಲ್ಲದ, ಅತಿ ತಂಪೂ ಅಲ್ಲದ, ಬೆಚ್ಚಗಿನ ನೀರಿನ ಸ್ನಾನ ಆರೋಗ್ಯಕರ. ಬಿಸಿನೀರಿನ ಸ್ನಾನ ಮಾಡುವಾಗ ಮೊದಲು ಕಾಲಿಗೆ ನೀರನ್ನು ಹಾಕಿ ನಂತರ ಮೈಗೆ ನೀರನ್ನು ಹಾಕಿ, ನಂತರ ತಲೆಗೆ ಸ್ನಾನ ಮಾಡುವುದರಿಂದ ತಲೆಗೆ ರಕ್ತದೊತ್ತಡ ಹೆಚ್ಚುವುದನ್ನು ತಡೆದು, ಸ್ನಾನದ ನಂತರ ಅನುಭವಿಸುವ ತಲೆನೋವು, ತಲೆ ತಿರುಗುವಿಕೆ, ತಲೆ ನೆವೆ, ಮೈಕೈ ಊದಿದಂತೆ ಭಾಸವಾಗುವುದು, ಸೀನು ಬರುವುದು, ಕಣ್ಣು ಕೆಂಪಾಗುವುದು – ಹೀಗೆ ಅನೇಕ ತೊಂದರೆಗಳಿಂದ ದೂರವಿರಬಹುದು. ಅದೇ ತಣ್ಣೀರಿನಲ್ಲಿ ಸ್ನಾನ ಮಾಡುವಾಗ ಒಮ್ಮೆಗೇ ತಲೆಗೆ ನೀರು ಹಾಕುವುದರಿಂದ ಮೈ ಕೊಡವಿದಂತಾಗಿ ಅತಿಯಾದ ತಂಪು ದೇಹಕ್ಕೆ ಸೇರದೆ, ಕಫ ತಲೆಯಲ್ಲಿ ಉಳಿಯದೆ, ಚರ್ಮವೂ ಉತ್ತೇಜನಗೊಂಡು, ದೇಹಾರೋಗ್ಯವನ್ನು ಕಾಪಾಡುತ್ತದೆ.

ಇಂದ್ರಿಯಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಲು, ಮನಸ್ಸನ್ನು ಪ್ರಸನ್ನವಾಗಿರಿಸಲು, ಸ್ನಾನಕ್ಕೆ ಮೊದಲು ಎಳ್ಳೆಣ್ಣೆ, ಅಥವಾ ಕೊಬ್ಬರಿ ಎಣ್ಣೆ, ಇಲ್ಲವೇ ಆಯಾಯ ಪ್ರದೇಶದಲ್ಲಿ ನಿತ್ಯೋಪಯೋಗಿ ಎಣ್ಣೆಗಳಲ್ಲಿ ಯಾವುದಾದರೂ ಒಂದನ್ನು ಮೈಗೆ ಹಚ್ಚಿ, ಬಿಸಿನೀರಿನ ಸ್ನಾನ ಮಾಡುವುದು ಒಳ್ಳೆಯದು. ಕಡೆ ಪಕ್ಷ ನಿತ್ಯವೂ ಅಂಗಾಲಿಗೆ, ಅಂಗೈಗಳಿಗೆ, ಕಿವಿಗೆ, ನೆತ್ತಿಗೆ ಎಣ್ಣೆ ಹಚ್ಚಿ ಹದಾ ಬಿಸಿನೀರಿನ ಸ್ನಾನ ಮಾಡುವುದು, ದೇಹದ ರೋಗಕ್ಷಮತೆಯ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಕಿವುಡಾಗುವಿಕೆ, ಕಣ್ಣಿನ ತೊಂದರೆಗಳು, ಚರ್ಮ ಸುಕ್ಕಾಗುವಿಕೆ, ಕಪ್ಪಾಗುವುದನ್ನು ತಡೆಗಟ್ಟಿ, ಯೌವನವನ್ನು ಕಾಪಾಡುವಲ್ಲಿ ದಿನಚರಿಯ ಪ್ರಮುಖ ಅಂಗವಾಗಿದೆ.

ವ್ಯಾಯಮ ಮಾಡಿ, ದಣಿದು, ಬೆವರು ಸುರಿಸಿ ಬಂದು ತಕ್ಷಣವೇ ಸ್ನಾನ ಮಾಡುವುದಕ್ಕಿಂತ, ಸ್ವಲ್ಪ ಸುಧಾರಿಸಿಕೊಂಡು, ಮೈ–ಕೈಗಳಿಗೆ ಒಣಚೂರ್ಣಗಳಿಂದ – ಎಂದರೆ ತ್ರಿಫಲಾ, ಸೀಗೇಕಾಯಿ, ಅರಿಶಿನ, ಅನುಕೂಲವಿದ್ದವರು, ಶ್ರೀಗಂಧ, ಅಗರು, ಮುಲ್ತಾನಿ ಮಿಟ್ಟಿ – ಇವುಗಳಲ್ಲಿ ಒಂದೋ ಎರಡೋ ಅಥವಾ ಎಲ್ಲವನ್ನು ಸೇರಿಸಿ ಮೈಕೈಯನ್ನು ಚೆನ್ನಾಗಿ ತಿಕ್ಕಿ ಮೈ ಬೆವರನ್ನೆಲ್ಲಾ ತೆಗೆದು, ನಂತರ ಎಣ್ಣೆಯನ್ನು ಹಚ್ಚಿ, ಸ್ನಾನ ಮಾಡುವುದರಿಂದ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ, ದೇಹದ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು. ಮುಖ್ಯವಾಗಿ ವ್ಯಾಯಾಮದ ವ್ಯತ್ಯಾಸದಿಂದ ಅಡ್ಡಪರಿಣಾಮವಾಗಿ ಆಗುವ, ಹೃದಯಾಘಾತವೇ ಮೊದಲಾದ ಹೃದಯಸಂಬಂಧಿ, ರಕ್ತ ಮತ್ತು ರಕ್ತನಾಳ ಸಂಬಂಧಿ ರೋಗಗಳಿಂದ ದೂರವಿರಬಹುದು.

ವಿವೇಚನೆಯಿಂದ ಮಾಡುವ ಸ್ನಾನ ಆರೋಗ್ಯಕರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು