ಗುರುವಾರ , ಅಕ್ಟೋಬರ್ 21, 2021
29 °C

ವಿಶ್ವ ಹೃದಯ ದಿನ: ಯುವಕರೇ ಹೃದಯದ ಆರೈಕೆ ಮಾಡದಿದ್ದರೆ ಹೃದಯಾಘಾತವಾಗಬಹುದು ಎಚ್ಚರ!

ಡಾ. ಶ್ರೀನಿವಾಸ ಪ್ರಸಾದ್ Updated:

ಅಕ್ಷರ ಗಾತ್ರ : | |

ಅತಿ ವಿರಳವಾಗಿ ಕಂಡು ಬರುತ್ತಿದ್ದ ಹೃದಯಾಘಾತದಂತಹ ಆರೋಗ್ಯ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ 40 ವರ್ಷ ಒಳಗಿನ ಮಧ್ಯವಯಸ್ಕರು ಹಾಗೂ ಯುವಕರಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿವೆ. ಇದಕ್ಕೆ ಕಾರಣವೇನು?

ಇಂದು 'ವಿಶ್ವ ಹೃದಯ ದಿನ' ಈ ದಿನದ ಅಂಗವಾಗಿ ಯುವಕರಲ್ಲಿ ಹೆಚ್ಚಾಗಿ ಕಾಡುತ್ತಿರುವ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಪತ್ತೆ ಹಚ್ಚುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೃದಯಾಘಾತಕ್ಕೆ ಕಾರಣ ಇವು: ಮನುಷ್ಯನ ಹೃದಯದಲ್ಲಿ ರಕ್ತನಾಳಗಳು ಅಥವಾ ಕೊರೋನರಿ ಅರ್ಟರೀಸ್ ಇರುತ್ತದೆ. ದೇಹದಲ್ಲಿ ಒಟ್ಟು 3 ಕೊರೋನರಿ ಆರ್ಟರೀಸ್ ಇರುತ್ತದೆ. ಲೆಫ್ಟ್ ಕೊರೋನರಿ ಆರ್ಟಿರಿ (ಎಲ್‌ಸಿಎ), ಸರ್ಕಮ್ ಫ್ಲೆಕ್ಸ್ ಆರ್ಟರಿ ಹಾಗೂ ರೈಟ್ ಕೊರೋನರಿ ಆರ್ಟರಿ (ಆರ್‌ಸಿಎ). ಈ ಮೂರು ರಕ್ತನಾಳಗಳಿಂದ ಹೃದಯಕ್ಕೆ ರಕ್ತದ ಚಲನೆ ನಡೆಯುತ್ತಿರುತ್ತದೆ. ಈ ಮೂರು ರಕ್ತನಾಳಗಳಲ್ಲಿ ರಕ್ತಚಲನೆ ಸರಾಗವಾಗಿರಬೇಕು. ಈ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಾಗ ಹೃದಯಾಘಾತ ಸಂಭವಿಸುತ್ತದೆ. ಸಕ್ಕರೆ ಕಾಯಿಲೆ, ಬೊಜ್ಜು ಅಥವಾ ರಕ್ತದೊತ್ತಡ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಳ್ಳುತ್ತಾ ಹೋದಂತೆ ರಕ್ತನಾಳವು ಕುಗ್ಗುತ್ತಾ ಹೋಗುತ್ತದೆ. ಇದರಿಂದ ರಕ್ತ ಚಲನೆಗೆ ಅಡ್ಡಿ ಉಂಟಾಗುತ್ತದೆ. ಈ ಅಡಚಣೆಯಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೃದಯಕ್ಕೆ ರಕ್ತಚಲನೆ ನಿಂತು ಹೋಗಬಹುದು. 

ಯುವಕರಲ್ಲೇ ಹೆಚ್ಳಳ ಏಕೆ: ಬದಲಾದ ಜೀವನ ಶೈಲಿಯಿಂದ ಹಂತಹಂತವಾಗಿ ಆರೋಗ್ಯ ಕ್ಷೀಣಿಸುತ್ತಿದೆ. ಅದರಲ್ಲೂ ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಜಂಕ್ ಫುಡ್ ನೀಡುವುದರಿಂದ ಕೇವಲ ದೇಹದಲ್ಲಷ್ಟೇ ಬೊಜ್ಜು ಶೇಖರಣೆಯಾಗುವುದಲ್ಲದೆ ಹೃದಯದ ರಕ್ತನಾಳಗಳಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಜೊತೆಗೆ ಹೆಚ್ಚು ಎಣ್ಣೆಯುಕ್ತ ಆಹಾರ ಸೇವನೆಯಿಂದಲೂ ರಕ್ತನಾಳದಲ್ಲಿ ಕೊಬ್ಬು ತುಂಬುತ್ತವೆ. ಇದರಿಂದ ರಕ್ತಸಂಚಲನ ನಿಧಾನಗೊಳ್ಳುತ್ತಿದ್ದಂತೆ ಆ ಭಾಗದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. 30ನೇ ವಯಸ್ಸಿನೊಳಗೆ ರಕ್ತನಾಳಲ್ಲಿ ರಕ್ತ ಸಂಚಲನ ನಿಧಾನಗೊಂಡು ರಕ್ತ ಹೆಪ್ಪುಗಟ್ಟುವಿಕೆ ಪ್ರಾರಂಭವಾಗಿರುತ್ತದೆ. ಈ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸುತ್ತದೆ. 

ಹೃದಯಾಘಾತ ತಡೆ ಹೇಗೆ?: ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ವ್ಯಾಯಾಮ ಮಾಡುವುದು, ಜಂಕ್‌ಫುಡ್ ಸೇವನೆ ಕಡಿಮೆಮಾಡುವುದು, ಎಣ್ಣೆಯುಕ್ತ ಪದಾರ್ಥದಿಂದ ದೂರ ಇರುವುದು, ಪ್ರೋಟಿನ್, ತರಕಾರಿ ಹಣ್ಣುಗಳ ಸೇವನೆಯಿಂದ ದೇಹವು ಹೆಚ್ಚು ಆರೋಗ್ಯಕರವಾಗಿರುತ್ತದೆ. ಇದರಿಂದ ಭವಿಷ್ಯದಲ್ಲಿ ಸಂಭವಿಸುವ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು. 

ಹೃದಯಾಘಾತದ ಪ್ರಾಥಮಿಕ ಚಿಕಿತ್ಸೆ ಏನು: ಕೆಲವರಿಗೆ ಹೃದಯಾಘಾತ ಸಂಭವಿಸಿದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಂತ ಅವಶ್ಯಕ. ಕೆಲವೊಮ್ಮೆ ಆಸ್ಪತ್ರೆಗೆ ತೆರಳುವುದು ಅಸಾಧ್ಯವಾಗಬಹುದು. ಆ ಸಂದರ್ಭದಲ್ಲಿ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಂಬಂಧಿಸಿದ ಮಾತ್ರೆಗಳನ್ನು ನೀಡುವುದರಿಂದಲೂ ಸಾವನ್ನು ತಪ್ಪಿಸಬಹುದು. ಕೆಲವರು ಹೃದಾಘಾತವಾದವರಿಗೆ ಎದೆ ಮೇಲೆ ಕೈ ಇಟ್ಟು ಒತ್ತುವುದನ್ನು ನೋಡಿದ್ದೇವೆ. ಇದು ಅತ್ಯಂತ ಅಪಾಯಕಾರಿ. ಹೃದಯಾಘಾತ ಆಗಿ ಪ್ರಜ್ಞಾಹೀನಾರದವರಿಗೆ ಮಾತ್ರ ಹಾಗೇ ಪಂಪ್ ಮಾಡುವುದು ಸರಿಯಾದ ಮಾರ್ಗ. ಹೃದಯಾಘಾತವಾದರೂ ಎಚ್ಚರವಿದ್ದರೆ ಅಂಥವರಿಗೆ ಯಾವುದೇ ಕಾರಣಕ್ಕೂ ಎದೆಯ ಮೇಲೆ ಕೈ ಒಟ್ಟು ಒತ್ತುವ ಕೆಲಸ ಮಾಡಬೇಡಿ. ಇದು ಉಸಿರಾಟಕ್ಕೆ ಇನ್ನಷ್ಟು ಸಮಸ್ಯೆಯಾಗಿ ಪ್ರಾಣ ಹೋಗಬಹುದು. ಹೀಗಾಗಿ ಇಂದಿನಿಂದಲೇ ಹೃದಯದ ಆರೈಕೆ ಮಾಡಿ.

(ಲೇಖಕರು: ಹೃದಯ ತಜ್ಞ, ಫೋರ್ಟಿಸ್ ಆಸ್ಪತ್ರೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು