ಶನಿವಾರ, ಫೆಬ್ರವರಿ 22, 2020
19 °C

ರಕ್ತರಹಿತ ಯಕೃತ್ ಕಸಿ: ವೈದ್ಯಲೋಕದ ಅಚ್ಚರಿ, ಬೆಂಗಳೂರು ವೈದ್ಯರ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಯು ನೈಜೀರಿಯಾದ ರೋಗಿಯೊಬ್ಬರಿಗೆ ಇದೇ ಮೊದಲ ಬಾರಿಗೆ ರಕ್ತರಹಿತ ಯಕೃತ್ ಕಸಿ ಮಾಡುವ ಮೂಲಕ ವೈದ್ಯಕೀಯ ಲೋಕವೇ ಅಚ್ಚರಿಪಡುವಂತೆ ಮಾಡಿದೆ.

ವೈದ್ಯಕೀಯ ಕ್ಷೇತ್ರದಲ್ಲಿನ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಬಾಹ್ಯ ರಕ್ತ ಬಳಸದೆ ಯಕೃತ್ ಕಸಿ ಮಾಡಿದ ಪ್ರಕರಣ ಭಾರತದಲ್ಲಿ ಇದೇ ಮೊದಲು.  ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಈ ಶಸ್ತ್ರಚಿಕಿತ್ಸೆ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವ ಮತ್ತು ಧಾರ್ಮಿಕ ನಂಬುಗೆಗಳನ್ನು ರಕ್ಷಿಸುವ ಬದ್ಧತೆ ಮೆರೆದಿದ್ದೇವೆ ಎಂದು ಆಸ್ಪತ್ರೆ ಹೇಳಿಕೊಂಡಿದೆ. 

ಹೌದು! ಈ ಶಸ್ತ್ರಚಿಕಿತ್ಸೆಗೆ ವಿಚಿತ್ರವಾದ ಧಾರ್ಮಿಕ ನಂಬುಗೆಯೊಂದು ತಳುಕು ಹಾಕಿಕೊಂಡಿದೆ. ರೋಗಿಯ ಧಾರ್ಮಿಕ ನಂಬುಗೆ ರಕ್ಷಿಸಿ ಶಸ್ತ್ರಚಿಕಿತ್ಸೆ ಮಾಡುವ ವಿಚಿತ್ರ ಸನ್ನಿವೇಶದಲ್ಲಿ ವೈದ್ಯರ ತಂಡ ಸಿಲುಕಿತ್ತು. ಸಾಮಾನ್ಯ ಪ್ರಕರಣಗಳಿಂದ ತೀರಾ ಭಿನ್ನವಾದ ಈ ಸವಾಲನ್ನು ಸ್ವೀಕರಿಸಿ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಯಶಸ್ವಿಯಾಗಿದೆ.  

ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ನೈಜೀರಿಯಾದ ಜೆಹೊವಾಹ್ಸ್‌ ವಿಟ್ನೆಸೆಸ್‌ ಎಂಬ ಅಪರೂಪದ ಧಾರ್ಮಿಕ ಪಂಗಡಕ್ಕೆ ಸೇರಿದ ರೋಗಿ ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರನ್ನು ಭೇಟಿಯಾದ. ಅದಕ್ಕೂ ಮುಂಚೆ ರೋಗಿ ದೇಶ, ವಿದೇಶಗಳ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದ. ರೋಗಿಯ ಷರತ್ತುಗಳನ್ನು ಕೇಳಿ ವೈದ್ಯರು ಇದು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದರು. 

ರೋಗಿಯ ಧಾರ್ಮಿಕ ನಂಬುಗೆ ಅಡ್ಡಿ

ಜೆಹೊವಾಹ್ಸ್‌ ವಿಟ್ನೆಸೆಸ್‌ ಪಂಗಡ ಕ್ರಿಶ್ಚಿಯನ್‌ ನಂಬಿಕೆಯ ಅನುಯಾಯಿಗಳು. ಈ ನಂಬಿಕೆಯುಳ್ಳ ಅನುಯಾಯಿಗಳ ಚಿಕಿತ್ಸೆಯಲ್ಲಿ ಬಾಹ್ಯ ಅಥವಾ ಮತ್ತೊಬ್ಬರ ರಕ್ತ ಅಥವಾ ರಕ್ತದ ಉತ್ಪನ್ನಗಳ ಬಳಕೆ ಸಂಪೂರ್ಣ ನಿಷಿದ್ಧ.

ನೈಜೀರಿಯಾದ 37 ವರ್ಷದ ಗೆಹೊಜಾದಕ್‌ ಕೂಡ ಈ ಜೆಹೊವಾಹ್ಸ್‌ ವಿಟ್ನೆಸೆಸ್‌ ಪಂಗಡದ ಅನುಯಾಯಿ. ಕೆಲವು ವರ್ಷಗಳಿಂದ ಕೊಳೆತ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆಗಾಗಿ ಕಳೆದ 4 ವರ್ಷಗಳಲ್ಲಿ ಮೂರ‍್ನಾಲ್ಕು ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ಬಾಹ್ಯ ರಕ್ತ ಬಳಸಬಾರದು ಎಂಬ ಧಾರ್ಮಿಕ ನಂಬುಗೆ ರಕ್ಷಿಸುವ ಷರತ್ತು ಕೇಳಿ ಹೆಚ್ಚಿನ ವೈದ್ಯರು ದೂರ ಸರಿದಿದ್ದರು. 

ಸವಾಲು ಸ್ವೀಕರಿಸಿದ ಅಸ್ಟರ್‌ ವೈದ್ಯರು!

ರೋಗಿಯ ಧಾರ್ಮಿಕ ನಂಬುಗೆಗಳನ್ನು ರಕ್ಷಿಸಿ ಬಾಹ್ಯ ರಕ್ತ ಬಳಸದೆ ಯಕೃತ್ ಕಸಿ ಮಾಡುವ ಶಸ್ತ್ರಚಿಕಿತ್ಸೆ ತುಂಬ ಅಪಾಯಕಾರಿಯಾಗಿತ್ತು. ದೇಶ, ವಿದೇಶಗಳ ವೈದ್ಯರು ಕೈಚೆಲ್ಲಿದ್ದ ಈ ಸವಾಲನ್ನು ಅಸ್ಟರ್‌ ಆಸ್ಪತ್ರೆಯ ವೈದ್ಯರು ಸ್ವೀಕರಿಸಿದರು.

ವೈದ್ಯರ ತಂಡವು ರಕ್ತ ಅಥವಾ ರಕ್ತದ ಉತ್ಪನ್ನಗಳನ್ನು (ತಾಜಾ ಹೆಪ್ಪುಗಟ್ಟಿದ ಪ್ಲಾಸ್ಮಾ, ಕ್ರಯೋಪ್ರೆಸಿಪಿಟೇಟ್, ರಕ್ತಕಣಗಳು ಇತ್ಯಾದಿ) ಬಳಸುವಂತಿರಲಿಲ್ಲ. ಸಾಮಾನ್ಯ ಯಕೃತ್ತಿನ ಕಸಿಗೆ ಹೋಲಿಸಿದರೆ ಈ ಶಸ್ತ್ರಚಿಕಿತ್ಸೆ ನಿಜಕ್ಕೂ ಸವಾಲಿನದ್ದಾಗಿತ್ತು. ವಿಶೆಷವೆಂದರೆ ವಿಶ್ವದ ಕೆಲ ದೇಶಗಳಲ್ಲಿ ಮಾತ್ರ ಇಂತಹ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಭಾರತದ ವೈದ್ಯಕೀಯ ಇತಿಹಾಸ ಕೆದಕಿದಾಗ ಅಂತಹ ದಾಖಲೆಗಳು ಲಭ್ಯವಾಗಲಿಲ್ಲ ಎನ್ನುತ್ತಾರೆ ವೈದ್ಯರು.

ಆಸ್ಟರ್‌ ಸಿಎಂಐ ಆಸ್ಪತ್ರೆಯಲ್ಲಿ, ಯಕೃತ್ ಕಸಿಯ ಸಲಹಾ ಶಸ್ತ್ರಚಿಕಿತ್ಸಕರಾದ ಡಾ. ರಾಜೀವ್ ಲೋಚನ್, ಡಾ. ಸೋನಲ್‌ ಆಸ್ತಾನಾ, ಸಲಹಾ ಹೆಮಟೊಲಜಿಸ್ಟ್‌ ಡಾ. ಮಲ್ಲಿಕಾರ್ಜುನ್‌ ಸಕ್ಪಾಲ್‌, ಸಲಹಾ ಅರಿವಳಿಕೆ ತಜ್ಞ ಡಾ. ಅರುಣ್‌ ವಿ, ಸಲಹಾ ಇಂಟೆನ್ಸಿವಿಸ್ಟ್‌ ಡಾ. ಪ್ರಕಾಶ್‌ ದೊರೈಸ್ವಾಮಿ ಮುಂತಾದ ವೈದ್ಯರನ್ನು ಒಳಗೊಂಡ ಯಕೃತ್ ತಜ್ಞರ ತಂಡವು ರಕ್ತರಹಿತ ಯಕೃತ್ ಕಸಿಯನ್ನು ಶಿಫಾರಸ್ಸು ಮಾಡಿತು. ಮೊದಲು ರೋಗಿಯ ವೈದ್ಯಕೀಯ ಹಿನ್ನೆಲೆಯನ್ನು ಕೂಲಂಕುಷವಾಗಿ ಪರಿಶೀಲಿಸಿತ್ತು.

12 ತಾಸಿನ ಶಸ್ತ್ರಚಿಕಿತ್ಸೆ

ನಿರ್ಣಾಯಕ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲು 12 ತಾಸು ಬೇಕಾಯಿತು. ಅರಿವಳಿಕೆ ತಜ್ಞರು ಸೇರಿದಂತೆ ಸುಮಾರು 25 ವೈದ್ಯರನ್ನು ಹೊಂದಿರುವ ಎರಡು ವಿಶೇಷ ತಜ್ಞರ ತಂಡಗಳು ಸಮನ್ವಯದಿಂದ ಕೆಲಸ ಮಾಡಿದವು.

ಗೆಹೊಜಾದಕ್‌ ಅಂತಿಮವಾಗಿ ಜೀವ-ರಕ್ಷಕ ಯಕೃತ್ತಿನ ಕಸಿಯನ್ನು ಪಡೆದುಕೊಂಡರು. ಎರಡು ವಾರಗಳ ಅವಧಿಯಲ್ಲಿ, ರೋಗಿ ಮತ್ತು ಅವರ ಸಹೋದರ ಗುಣಮುಖರಾದರು. ಮನೆಗೆ ಮರಳುವ ಸಾಮರ್ಥ್ಯ ಪಡೆದ ನಂತರ ಡಿಸ್‌ಚಾರ್ಜ್‌ ಮಾಡಲಾಯಿತು.

ಎರಡು ತಿಂಗಳ ಸಿದ್ಧತೆ

ಶಸ್ತ್ರಚಿಕಿತ್ಸೆ ಯಶಸ್ವಿಗೆ ಕಾರ್ಯಸಾಧ್ಯವಾದ ಮತ್ತು ಪರಿಣಾಮಕಾರಿ ಮಾರ್ಗಗಳ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿತ್ತು. ಸಮಾಲೋಚನೆಯ ಬಳಿಕ ವಿವಿಧ ವಿಷಯಗಳಲ್ಲಿ ನೈಪುಣ್ಯ ಪಡೆದ ಸುಮಾರು 25 ತಜ್ಞ ವೈದ್ಯರ ತಂಡ ಎರಡು ತಿಂಗಳು ಸಿದ್ಧತೆ ನಡೆಸಿತ್ತು.   ಇಂತಹ ಶಸ್ತ್ರಚಿಕಿತ್ಸೆಗೆ ಅತ್ಯಂತ ಕಟ್ಟುನಿಟ್ಟಿನ ಪೂರ್ವ ತಯಾರಿ ಮುಖ್ಯ. ಸ್ವಲ್ಪ ಎಡವಟ್ಟಾದರೂ ರೋಗಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಯಕೃತ್ ಕಸಿ ಶಸ್ತ್ರಚಿಕಿತ್ಸಕ ಡಾ.ರಾಜೀವ್ ಲೋಚನ್. ಈ ಕಸಿ ಇತರ ಶಸ್ತ್ರಚಿಕಿತ್ಸೆಗಳಿಗಿಂತ ಬಹಳ ಸವಾಲಿನದ್ದಾಗಿತ್ತು. ರೋಗಿಯ ಜೀವಕ್ಕೆ ಅಪಾಯವಿದ್ದರೂ ಬಾಹ್ಯ ರಕ್ತ ಬಳಸುವಂತಿರಲಿಲ್ಲ. ನಾವು ಈ ಮೊದಲು ಜೆಹೊವಾಹ್ಸ್‌ ವಿಟ್ನೆಸೆಸ್‌ ಪಂಗಡದ ಅನುಯಾಯಿಗಳ ಕಸಿ ರಹಿತ ಯಕೃತ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇವೆ. ಇದು ನಮಗೆ ಗೆಹೊಜಾದಕ್‌ ಅವರಿಗೆ ರಕ್ತರಹಿತ ಯಕೃತ್ ಕಸಿ ಮಾಡುವ ವಿಶ್ವಾಸ ನೀಡಿತು.

– ಡಾ.ರಾಜೀವ್ ಲೋಚನ್, ಯಕೃತ್ತು ಕಸಿ ಶಸ್ತ್ರಚಿಕಿತ್ಸಕ

ರೋಗಿಯ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಆದರೂ ರೋಗಿ ರಕ್ತ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ. ಈ ಎಲ್ಲ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯ ಮಾರ್ಗವನ್ನು ಯೋಜಿಸಲಾಗಿತ್ತು, ಶಸ್ತ್ರಚಿಕಿತ್ಸೆ ಪೂರ್ಣ ತಯಾರಿಗಾಗಿ ಸುಮಾರು 2 ತಿಂಗಳು ಕಳೆದಿದ್ದೇವೆ. ಸಂಶ್ಲೇಷಿತ ಜೌಷಧಗಳಂತಹ ಕಸ್ಟಮೈಸ್ ಮಾಡಿದ ಕೃತಕ ಉತ್ಪನ್ನಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು

– ಡಾ. ಅರುಣ್ ವಿ., ಅರಿವಳಿಕೆ ತಜ್ಞ

ಶಸ್ತ್ರಚಿಕಿತ್ಸೆಯ ಸಿದ್ಧತೆಗಾಗಿ ರೋಗಿ ಮತ್ತು ಅವರ ಸಹೋದರನೂ ಸಹ ‘ಪುನಶ್ಚೇತನ’ಕ್ಕೆ ಒಳಗಾಗಬೇಕಾಯಿತು - ಈ ಪ್ರಕ್ರಿಯೆಯಲ್ಲಿ ಸಹೋದರರು ಬಾಹ್ಯ ರಕ್ತ ವರ್ಗಾವಣೆಯಿಲ್ಲದೆ ಶಸ್ತ್ರಚಿಕಿತ್ಸೆಯನ್ನು ತಡೆದುಕೊಳ್ಳಲು ಅವರ ಹೆಮಟೊಪಯಟಿಕ್ ವ್ಯವಸ್ಥೆಯನ್ನು ಬಲಪಡಿಸಲಾಯಿತು. ರೋಗಿಗಳ ಸ್ನಾಯುಗಳನ್ನು ಬಲಪಡಿಸಲು ನಿಯಮಿತ ಫಿಸಿಯೋಥೆರಪಿ ಮತ್ತು ಪೋಷಕಾಂಶಗಳಿಂದ ಬೆಂಬಲಿತವಾದ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಅವರಿಗೆ ಕಬ್ಬಿಣ ಮತ್ತು ವಿವಿಧ ಜೀವಸತ್ವಗಳು ಮತ್ತು ಎರಿಥ್ರೋಪೊಯೆಟಿನ್‌ಗಳಿಂದ ಕೂಡಿದ ಹೆಮಾಟಿನಿಕ್ಸ್ ಅನ್ನು ನೀಡಲಾಯಿತು 

– ಡಾ. ಸೋನಾಲ್ ಅಸ್ತಾನಾ, ಯಕೃತ್ತು ಕಸಿಯ ಸಲಹಾ ಶಸ್ತ್ರಚಿಕಿತ್ಸಕ

ಯಕೃತ್ತಿನ ಕಸಿ ಇಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ಗೆಹೊಜಾದಕ್‌ ಬದುಕುಳಿಯುವ ಸಾಧ್ಯತೆಗಳು ಶೇ 10ಕ್ಕಿಂತ ಕಡಿಮೆ ಇತ್ತು. ಸಾಮಾನ್ಯವಾಗಿ ಯಕೃತ್ತಿನ ಶಸ್ತ್ರಚಿಕಿತ್ಸೆ ಸಮಯದಲ್ಲಿ ರೋಗಿಗಳು ಹೆಚ್ಚಿನ ಪ್ರಮಾಣದ ರಕ್ತ ಕಳೆದುಕೊಳ್ಳುತ್ತಾರೆ. ರೋಗಿಯ ಉಳಿಯಬೇಕು ಎಂದರೆ ರಕ್ತ ಬದಲಾಯಿಸಬೇಕಾಗುತ್ತದೆ. ಸಾಮಾನ್ಯ ಯಕೃತ್ತಿನ ಕಸಿಗಾಗಿ ವೈದ್ಯರು ಕನಿಷ್ಠ 3ರಿಂದ4 ಯುನಿಟ್ ರಕ್ತವನ್ನು ಮತ್ತು ಅದೇ ರೀತಿಯ ಪ್ಲಾಸ್ಮಾ ಮತ್ತಿತರ ರಕ್ತಕಣಗಳನ್ನು ರೋಗಿಗೆ ನೀಡಬೇಕಾಗುತ್ತದೆ. ಈ ಪ್ರಕರಣದಲ್ಲಿ ನಾವು ಪರ್ಯಾಯ ಚಿಕಿತ್ಸಾ ಮಾರ್ಗ ಕಂಡುಹಿಡಿಯಬೇಕಾಗಿತ್ತು

- ಡಾ. ಮಲ್ಲಿಕಾರ್ಜುನ್ ಸಕ್ಪಾಲ್, ಸಲಹಾ ಹೆಪಟಾಲಜಿಸ್ಟ್

ಪರ್ಯಾಯ ಮಾರ್ಗ ಕಂಡುಕೊಂಡ ವೈದ್ಯರ ತಂಡ

ಕೋಶ ಸಂರಕ್ಷಣೆ ಪರ್ಯಾಯ ತಂತ್ರದ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ರೋಗಿ ಮತ್ತು ಸಹೋದರನ ರಕ್ತ ಪಡೆದು ಮರಳಿ ಬಳಸಲಾಯಿತು. ಈ ರೀತಿಯ ಕೋಶ ಸಂರಕ್ಷಣೆ ತಂತ್ರವು ಅಪರೂಪ, ಮತ್ತು ಇದನ್ನು ನಿರ್ವಹಿಸಲು ಬಳಸುವ ತಾಂತ್ರಿಕ ಪರಿಣತರು ಭಾರತದಲ್ಲಿ ವ್ಯಾಪಕವಾಗಿ ಲಭ್ಯವಿಲ್ಲ.

ನಾವು ‘ನಾರ್ಮೊ-ವೊಲೆಮಿಕ್ ಹೆಮೋಡಿಲ್ಯೂಷನ್’ ತಂತ್ರವನ್ನು ಬಳಸಿದೆವು. ಅಲ್ಲಿ ನಾವು ರೋಗಿ ಮತ್ತು ದಾನಿಗಳಿಬ್ಬರಿಂದಲೂ ಎರಡು ಯುನಿಟ್‌ ರಕ್ತ ತೆಗೆದುಕೊಂಡು ವಿಶೇಷ ಉಪಕರಣ ಬಳಸಿಕೊಂಡು ಶಸ್ತ್ರಚಿಕಿತ್ಸೆಯ ಉದ್ದಕ್ಕೂ ಅದನ್ನು ವ್ಯವಸ್ಥೆಯ ಸಂಪರ್ಕದಲ್ಲಿರಿಸಿಕೊಳ್ಳಲಾಗಿತ್ತು. ಇದರಿಂದ ರಕ್ತ ಪರಿಚಲನೆಯಲ್ಲಿ ಯಾವುದೇ ವಿರಾಮವಿರುವುದಿಲ್ಲ. ಈ ತಂತ್ರವನ್ನು ರೋಗಿಯೊಂದಿಗೆ ಮೊದಲೇ ಚರ್ಚಿಸಲಾಗಿತ್ತು. ಇದು ಅವರ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿತ್ತು. ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಗಳು ಸುಮಾರು ಎರಡು ಯುನಿಟ್ ರಕ್ತ ಕಳೆದುಕೊಂಡರು. ಆದರೆ ಈ ತಂತ್ರದ ಮೂಲಕ ನಾವು ನಷ್ಟ ಸರಿದೂಗಿಸಲು ಸಾಧ್ಯವಾಯಿತು ಎನ್ನುತ್ತಾರೆ ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಡಾ. ಪ್ರಕಾಶ್ ದೊರೈಸ್ವಾಮಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)