ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ! ನಿಮ್ಮ ನಡೆ ನುಡಿಗಳನ್ನು ಮಕ್ಕಳು ನೋಡುತ್ತಿದ್ದಾರೆ

Published 31 ಜುಲೈ 2023, 15:38 IST
Last Updated 31 ಜುಲೈ 2023, 23:30 IST
ಅಕ್ಷರ ಗಾತ್ರ

ಮಕ್ಕಳು ಪ್ರಪಂಚಕ್ಕೆ ತೆರೆದುಕೊಳ್ಳುತ್ತಾರೆ. ಹೊರಗಿನ ಅನೇಕ ಪ್ರಭಾವಗಳಿಗೆ ಒಳಗಾಗುತ್ತಾರೆ. ಅವನ್ನೆಲ್ಲಾ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದರೆ ಮನೆಯಲ್ಲಿ ಮಕ್ಕಳಿಗೆ ಬೆಂಬಲವಾಗಿ, ಮಾರ್ಗದರ್ಶಕರಾಗಿ, ಮಾದರಿಯಾಗಿ ಪೋಷಕರು ಇರಬೇಕಾಗುತ್ತದೆ.

***

ತಂದೆ–ತಾಯಿಯ ಯಾವ ವರ್ತನೆಗಳು ಮಕ್ಕಳನ್ನು ಯಾವ ರೀತಿ ಗಾಸಿಗೊಳಿಸುತ್ತದೆ; ಅದು ಹೇಗೆ ಅವರ ಮಾನಸಿಕ, ಬೌದ್ಧಿಕ, ಭಾವನಾತ್ಮಕ ಬೆಳವಣಿಗೆಗೆ ಅಡಚಣೆಯಾಗುತ್ತದೆ ಎನ್ನುವುದರ ಚಿಂತನೆ ಮತ್ತು ಚರ್ಚೆ ಪೋಷಕರಿಗೆ ಅತಿ ಅಗತ್ಯವಾದದ್ದು. ಮಕ್ಕಳ ಮನಸ್ಸಿಗೆ ನೋವುಂಟುಮಾಡಿ ಅವರ ವ್ಯಕ್ತಿತ್ವವನ್ನೇ ಊನಗೊಳಿಸುವ ತಮ್ಮ ಯಾವುದೇ ವರ್ತನೆಯ ಬಗ್ಗೆ ಪೋಷಕರು ಜಾಗೃತರಾಗಿ, ತಾವೇ ಜವಾಬ್ದಾರಿ ಹೊತ್ತು, ಮೊದಲ ಆದ್ಯತೆಯಾಗಿ ತಮ್ಮಲ್ಲಿನ ಅಂತಹ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕಾದುದು ಕೇವಲ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದಷ್ಟೇ ಅಲ್ಲದೆ, ಸಮಾಜದ ಹಿತದೃಷ್ಟಿಯಿಂದಲೂ ಉಚಿತವಾದದ್ದೇ ಹೌದು.

ಉದಾಹರಣೆಗೆ, ಯಾವುದೇ ರೀತಿಯ ಶಿಸ್ತನ್ನು ರೂಢಿಸಿಕೊಳ್ಳದೆ ತಮ್ಮ ಬದುಕನ್ನು ಅಸ್ತವ್ಯಸ್ತವಾಗಿಟ್ಟು ಕೊಂಡಿರುವ ಪೋಷಕರು ಆ ಅಶಿಸ್ತಿನ ಕಾರಣವಾಗಿ ಉಂಟಾಗುವ ಎಲ್ಲ ತೊಂದರೆಗಳಿಗೆ ಇತರರನ್ನು ಹೊಣೆಗಾರರನ್ನಾಗಿ ಮಾಡುತ್ತಿರುತ್ತಾರೆ. ಅಂತಹ ಪೋಷಕರು ತಮ್ಮ ಅಸಮಾಧಾನಕ್ಕೆ ಮಕ್ಕಳನ್ನೂ ಸದಾ ದೂರುತ್ತಿರುತ್ತಾರೆ. ಆಗ ಮಕ್ಕಳಿಗೆ ಎರಡು ರೀತಿಯ ತೊಂದರೆಗಳಾಗುತ್ತವೆ: ಒಂದು, ಶಿಸ್ತಿನ ಬದುಕನ್ನು ರೂಢಿಸಿಕೊಳ್ಳಲು ಸರಿಯಾದ ಮಾದರಿ ದೊರೆಯದಿರುವುದು; ಇನ್ನೊಂದು, ಪೋಷಕರು ತಮ್ಮ ಹತಾಶೆಗಳನ್ನು ಮಕ್ಕಳ ಮೇಲೆ ತೋರ್ಪಡಿಸಿಕೊಳ್ಳುವುದರಿಂದ ಆಗುವ ಭಾವನಾತ್ಮಕ ನೋವು, ಅಸಾಹಯಕತೆ. ಮಕ್ಕಳಿಗೆ ತಮ್ಮಿಂದ ತೊಂದರೆಯಾಗುತ್ತಿದೆ ಎಂದು ಅರಿತು ತಮ್ಮಲ್ಲಿನ ಈ ವರ್ತನೆಯ ಜವಾಬ್ದಾರಿಯನ್ನು ಪೋಷಕರು ತೆಗೆದುಕೊಳ್ಳದೇ, ಹೀಗೇ ಅವರಿವರ ಮೇಲೆ ದೋಷಾರೋಪಣೆ ಮಾಡುತ್ತಾ ತಮ್ಮ ಎಂದಿನ ಅಶಿಸ್ತಿನ ಬದುಕನ್ನು ಪರಾಮರ್ಶೆಗೊಳಪಡಿಸದೆ ಬದುಕುತ್ತಿದ್ದರೆ ಅದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ?

ಹಾಗಾಗಿ ತಮ್ಮ ತಮ್ಮ ವರ್ತನೆಗಳಿಗೆ ತಾವೇ ಜವಾಬ್ದಾರರಾಗುವುದನ್ನು ಕಲಿಯುವುದು ‘ಉತ್ತಮ ಪೋಷಕತ್ವ’ದ ಕಡೆಗೆ ಮೊದಲ ಹೆಜ್ಜೆಯೇ ಹೌದು. ಮಕ್ಕಳು ಸಾಮಾನ್ಯವಾಗಿ ತೋರಿಸುವ ಸಾಧಾರಣ ಹಠ, ಸೋಮಾರಿತನಗಳನ್ನೆಲ್ಲಾ ತಾವು ಪ್ರೌಢತೆಯಿಂದ ನಿರ್ವಹಿಸಲಾರದೆ, ತಮ್ಮ ಬದುಕಿನ ಕಸಿವಿಸಿಗಳ ಮಧ್ಯೆ ಮಕ್ಕಳಿಗೆ ಗಮನ ಕೊಡಲಾಗದೆ ಅದರಿಂದ ಉಂಟಾಗುವ ಪಾಪಪ್ರಜ್ಞೆಯನ್ನು ಹೊರಹಾಕುವ ಮಾರ್ಗವಾಗಿ ಮಕ್ಕಳನ್ನು ನಿಂದಿಸಿ, ಅವಮಾನಿಸಿ, ಕೆಲವೊಮ್ಮೆ ಹೊಡೆದು-ಬಡಿದು ನಂತರ ‘ನೀನು ರೇಗಿಸಿದೆ; ತಪ್ಪು ಮಾಡಿದೆ; ಹಾಗಾಗಿ ನಾನು ತಾಳ್ಮೆ ಕಳೆದುಕೊಂಡೆ; ಇಲ್ಲದಿದ್ದರೆ ನಿನ್ನ ಮೇಲೆ ನನಗೆ ತುಂಬಾ ಪ್ರೀತಿಯುಂಟು’ ಎಂದೆಲ್ಲಾ ತಮ್ಮ ವರ್ತನೆಯ ಜವಾಬ್ದಾರಿಯನ್ನು ತಾವು ಹೊರದೇ ಮಕ್ಕಳಿಗೆ ವರ್ಗಾಯಿಸುವುದು ಮಕ್ಕಳ ಮನಸ್ಸಿಗೆ ಆಘಾತವನ್ನು ಉಂಟುಮಾಡುತ್ತದೆ.

ಮಕ್ಕಳು ಪ್ರಪಂಚಕ್ಕೆ ತೆರೆದುಕೊಳ್ಳುತ್ತಾರೆ. ಹೊರಗಿನ ಅನೇಕ ಪ್ರಭಾವಗಳಿಗೆ ಒಳಗಾಗುತ್ತಾರೆ. ಅವನ್ನೆಲ್ಲಾ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದರೆ ಮನೆಯಲ್ಲಿ ಮಕ್ಕಳಿಗೆ ಬೆಂಬಲವಾಗಿ, ಮಾರ್ಗದರ್ಶಕರಾಗಿ, ಮಾದರಿಯಾಗಿ ಪೋಷಕರಿರಬೇಕಾಗುತ್ತದೆ.

ಹಾಗಾದರೆ ಪೋಷಕರಾದ ಮಾತ್ರಕ್ಕೆ ತಪ್ಪೇ ಮಾಡದಂತೆ, ಸದಾ ಅತ್ಯುತ್ತಮ ವರ್ತನೆಯನ್ನೇ ತೋರಿಸುತ್ತಿರುವುದು ಸಾಧ್ಯವೇ? ಪೋಷಕರೂ ಮನುಷ್ಯರಲ್ಲವೇ? ಹೌದು, ಪೋಷಕರಿಗೂ ದೌರ್ಬಲ್ಯಗಳಿರುತ್ತವೆ; ಎಲ್ಲವನ್ನೂ ಒಮ್ಮೆಲೇ ಬದಲಾಯಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ತಮ್ಮ ಭಾವನೆಗಳಿಗೆ, ವರ್ತನೆಗಳಿಗೆ, ನಿರ್ಧಾರಗಳಿಗೆ ತಾವೇ ಜವಾಬ್ದಾರರಾಗುತ್ತಾ, ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಕಷ್ಟವಾದರೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ತಂದೆ ತಾಯಿಯನ್ನು ನೋಡುತ್ತಾ ಬೆಳೆಯುವುದು ಮಕ್ಕಳಿಗೆ ನೈತಿಕ ಬಲ ಕೊಡುತ್ತದೆ. ಮನುಷ್ಯ ಬದುಕಿನ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳುವ ಮನೋಭಾವವೂ, ತನ್ನನ್ನು ಇತರರನ್ನು ಸಹಾನುಭೂತಿಯಿಂದ ನೋಡುವ ಪರಿಪಾಠವೂ ಬೆಳೆಯುತ್ತದೆ. ನಮ್ಮ ಬೆಳವಣಿಗೆಯಲ್ಲೇ ನಮ್ಮ ಮಕ್ಕಳ ಬೆಳವಣಿಗೆಯೂ ಅಡಗಿದೆ ಎಂಬ ಅರಿವು ಪೋಷಕತ್ವಕ್ಕೆ ಅಗತ್ಯವಾಗಿ ಬೇಕಾದ ತಿಳಿವಳಿಕೆ.

ಯಾವುದು ಸರಿ ಯಾವುದು ತಪ್ಪು ಎನ್ನುವ ತೀರ್ಮಾನಕ್ಕೆ ನಾವು ಹೇಗೆ ಬರುತ್ತೇವೆ; ‘ನೈತಿಕ- ಅನೈತಿಕ’ಗಳ ನಡುವಿನ ವ್ಯತ್ಯಾಸವನ್ನು ನಾವೆಷ್ಟು ಸೂಕ್ಷ್ಮವಾಗಿ, ಸಾವಧಾನವಾಗಿ ಕಂಡುಕೊಳ್ಳುತ್ತೇವೆ ಎನ್ನುವುದಕ್ಕೆ ಮಕ್ಕಳೂ ಸಾಕ್ಷಿಯಾಗುತ್ತಿರುತ್ತಾರೆ. ನೈತಿಕ-ಅನೈತಿಕಗಳ ಜಿಜ್ಞಾಸೆಯಲ್ಲಿ ನಾವು ತೊಡಗುತ್ತೇವೋ ಇಲ್ಲವೋ; ಅಂತಹ ಜಿಜ್ಞಾಸೆಯಲ್ಲಿರುವಾಗ ನಾವು ಹೇಗೆ ಮಾತನಾಡುತ್ತೇವೆ, ಯಾರೊಂದಿಗೆ ನಮ್ಮ ಗೊಂದಲಗಳನ್ನು ಹಂಚಿಕೊಳ್ಳುತ್ತೇವೆ, ಕೊನೆಗೆ ಸರಿ ಅನಿಸಿದ್ದನ್ನು ಹೇಗೆ ಪಟ್ಟುಬಿಡದೇ ಸತ್ಯವಾದುದಕ್ಕೇ ಅಂಟಿಕೊಂಡಿರಬೇಕೆಂದು ಹೋರಾಡುತ್ತೇವೆ, ನಮ್ಮದೇ ತಪ್ಪಿದ್ದಾಗ ಹೇಗೆ ಪರಿತಪಿಸುತ್ತೇವೆ, ಅದನ್ನು ಸರಿಮಾಡಲು ಹೇಗೆಲ್ಲಾ ಕಷ್ಟಪಡುತ್ತೇವೆ – ಹೀಗೆ ನಮ್ಮ ಜೀವನದ ಒಳಪದರಗಳ ನಾಜೂಕು ವಿನ್ಯಾಸವನ್ನು ಮಕ್ಕಳು ಅಂತರ್ಗತಗೊಳಿಸಿಕೊಳ್ಳುತ್ತಿರುತ್ತಾರೆ. ‘ನೈತಿಕ-ಅನೈತಿಕ’ಗಳ ಪರಿಜ್ಞಾನವಿಲ್ಲದೆ ನಡೆಯುವ ಪೋಷಕರ ಮಕ್ಕಳು ಕೀಳರಿಮೆಯಿಂದ, ಅವಮಾನದಿಂದ ನರಳುತ್ತಿರುತ್ತಾರೆ, ಆತ್ಮಗೌರವವಿಲ್ಲದೆ ಸೊರಗುತ್ತಾರೆ.

ತಂದೆ ತಾಯಿ ಪ್ರಪಂಚವನ್ನು ಹೇಗೆ ನೋಡುತ್ತಾರೆ; ಒಂದು ವ್ಯಕ್ತಿಯಾಗಿ ತಮ್ಮನ್ನು ತಾವು ಹೇಗೆ ನೋಡಿಕೊಳ್ಳುತ್ತಾರೆ; ಮಕ್ಕಳನ್ನು ಹೇಗೆ ನೋಡುತ್ತಾರೆ – ಎನ್ನುವುದನ್ನು ಗಮನಿಸುತ್ತಾ, ಅದನ್ನು ಆಧರಿಸಿಯೇ ತಮ್ಮ ಒಳದನಿಯನ್ನು, ಸ್ವ-ಪ್ರತಿಮೆಯನ್ನು (self-image) ಮಕ್ಕಳು ರೂಪಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ, ಇನ್ನೊಂದು ಸಂಗತಿಯೂ ಮಕ್ಕಳ ಭಾವನಾತ್ಮಕ ಬೆಳವಣಿಗೆಯಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ, ಅದು: ತಂದೆ–ತಾಯಿ ಪರಸ್ಪರರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು.

ತಂದೆ–ತಾಯಿಯ ನಡುವಿನ ಬಾಂಧವ್ಯದ ಸ್ವರೂಪ ಮಕ್ಕಳನ್ನು ತುಂಬಾ ಪ್ರಭಾವಿಸುತ್ತದೆ. ಹಾಗೆಂದು ಮಕ್ಕಳ ಮುಂದೆ ಜಗಳವನ್ನೇ ಆಡದೇ ನಾವು ಸದಾ ಅನ್ಯೋನ್ಯವಾಗೇ ಇರುತ್ತೇವೆ ಎಂದು ಬಿಂಬಿಸುವುದು ಎಷ್ಟು ಸರಿ? ಜಗಳ ಜೀವನದ, ಸಂಬಂಧಗಳ ಅವಿಭಾಜ್ಯ ಅಂಗ; ಅದು ಸಾಮಾನ್ಯ ಮತ್ತು ಸರ್ವವ್ಯಾಪಿ; ಆತ್ಮೀಯತೆಯನ್ನು ಸಾಧಿಸುವ ಹಾದಿಯಲ್ಲಿ ಅದು ಅನಿವಾರ್ಯವೂ ಹೌದು. ಆದರೆ ಜಗಳ ವೈಯಕ್ತಿಕ ನಿಂದನೆ, ಹೀಯಾಳಿಸುವಿಕೆ, ಇನ್ನೊಬ್ಬರ ಆತ್ಮವಿಶ್ವಾಸವನ್ನು ಕುಂದಿಸುವ ಪ್ರಯತ್ನ - ಹೀಗಿರದೇ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪರಸ್ಪರ ಪ್ರೀತಿಸುವ ಇಬ್ಬರು ವ್ಯಕ್ತಿಗಳು ಮಾಡುವ ಮನಃಪೂರ್ವಕ ಪ್ರಯತ್ನವಾಗಿರಬೇಕು. ಇಬ್ಬರು ವಿಭಿನ್ನ ವ್ಯಕ್ತಿಗಳು ತಾವೇನು ಅನುಭವಿಸುತ್ತಿದ್ದಾರೆ; ಇನ್ನೊಬ್ಬರಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎನ್ನುವುದನ್ನು ಹೇಳಿಕೊಂಡು ಸಾಮರಸ್ಯದಿಂದ ಬಾಳುವ ಪ್ರಯಾಸವಾಗಿ ಜಗಳವಿದ್ದಾಗ ಸಂಘರ್ಷ ನಿರ್ವಹಣೆಯೆನ್ನುವುದು ಸಂಬಂಧದಲ್ಲಿ ಪ್ರಮುಖವಾದದ್ದು, ಜಟಿಲವಾದದ್ದು; ಹಾಗಾಗಿ ತಾಳ್ಮೆಯಿಂದ ಇರಬೇಕೆನ್ನುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ.

ಹಾಗಿಲ್ಲದೇ ತಮ್ಮ ಜಗಳದಲ್ಲಿ ಮಕ್ಕಳನ್ನು ಒಳಗೊಳ್ಳುವುದು; ತಂದೆ ತಾಯಿ ಇಬ್ಬರ ನಡುವೆ ಯಾರದಾದರೂ ಒಬ್ಬರ ಪಕ್ಷವನ್ನು ವಹಿಸುವಂತೆ ಒತ್ತಾಯಿಸುವುದು; ತಾನು ಮಾತ್ರ ಸರಿ – ಎಂದು ತೋರಿಸಿಕೊಂಡು ತನ್ನ ಸಂಗಾತಿಯ ದೋಷಗಳನ್ನು, ದುರ್ವರ್ತನೆಗಳನ್ನು ಮಕ್ಕಳ ಮುಂದೆ ಹೇಳಿಕೊಂಡು ಮಕ್ಕಳಿಂದಲೇ ಸಹಾನುಭೂತಿ, ಸಾಂತ್ವನ, ಭಾವನಾತ್ಮಕ ಆಸರೆ ಬಯಸುವುದು; ‘ನನ್ನ ಕಷ್ಟಗಳೆಲ್ಲಾ ತೀರಬೇಕಾದರೆ ನೀನು ಹೀಗಿರಬೇಕು, ಹಾಗಿರಬೇಕು’ ಎಂದು ಮಕ್ಕಳ ಮೇಲೆ ನಿರೀಕ್ಷೆಯ ಭಾರ ಹೇರುವುದು; ತಮ್ಮ ಸಂಗಾತಿಯ ಬಗೆಗಿನ ಸಿಟ್ಟನ್ನು, ಅತೃಪ್ತಿಯನ್ನು ಮಕ್ಕಳನ್ನು ಮುಂದಿಟ್ಟುಕೊಂಡು ತೋರ್ಪಡಿಸಿಕೊಳ್ಳುವುದು – ಮುಂತಾದ ಪ್ರವೃತ್ತಿಗಳು ಮಕ್ಕಳಲ್ಲಿ ಒಂಟಿತನ, ಅಭದ್ರತೆ, ಅನಾಥಪ್ರಜ್ಞೆ, ಸದಾ ಪೋಷಕರನ್ನು ಮೆಚ್ಚಿಸುವ ಪ್ರಯತ್ನದಿಂದಾಗಿ ತಮ್ಮತನವನ್ನು ಕಂಡುಕೊಳ್ಳದಿರುವುದು ಮುಂತಾದ ತೊಂದರೆಗಳಿಗೆ ದಾರಿಮಾಡಿಕೊಡುತ್ತವೆ.

ಮಕ್ಕಳಿಗೆ ತಂದೆ–ತಾಯಿಯ ಪ್ರೀತಿಗಿಂತ ಮಹತ್ತರ ರಕ್ಷೆ ಇನ್ನೊಂದಿಲ್ಲ. ತಮ್ಮ ಆಂತರ್ಯದ ದನಿಗೆ ಬೆಲೆಕೊಡುವ, ಆತ್ಮಾವಲೋಕನದ ಅಭ್ಯಾಸವುಳ್ಳ, ಪ್ರೀತಿಯನ್ನು ಅದರ ನಾನಾ ರೂಪಗಳನ್ನು, ಆಳವನ್ನು ಅರಿಯಲು ಬೇಕಾದ ಭಾವನಾತ್ಮಕ, ಬೌದ್ಧಿಕ ಮುಕ್ತತೆಯಿರುವ ಪೋಷಕರಿಗಿಂತ ಮಿಗಿಲಾದ ಭಾಗ್ಯ ಮಕ್ಕಳ ಜೀವನದಲ್ಲಿ ಬೇರೆ ಉಂಟೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT